ADVERTISEMENT

ಪ್ರಶ್ನೋತ್ತರ: ನನಗೆ ಯಾವುದೇ ಬ್ಯಾಂಕ್ ಎಷ್ಟು ಸಾಲ ಕೊಡಬಹುದು?

ಪ್ರಮೋದ ಶ್ರೀಕಾಂತ ದೈತೋಟ
Published 14 ಮಾರ್ಚ್ 2023, 22:44 IST
Last Updated 14 ಮಾರ್ಚ್ 2023, 22:44 IST
ಪ್ರಮೋದ ಶ್ರೀಕಾಂತ ದೈತೋಟ
ಪ್ರಮೋದ ಶ್ರೀಕಾಂತ ದೈತೋಟ   

– ಜಗದೀಶ್, ಊರು ತಿಳಿಸಿಲ್ಲ
ಪ್ರಶ್ನೆ: ನಾನು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ. ನನಗೆ ಪಿಂಚಣಿಯಾಗಿ ₹ 8.50 ಲಕ್ಷ ವಾರ್ಷಿಕ ಆದಾಯ ಬರುತ್ತಿದೆ. ಹಿರಿಯ ನಾಗರಿಕರ ಉಳಿತಾಯ ಖಾತೆ, ಪ್ರಧಾನಮಂತ್ರಿ ವಯೋ ವಂದನ ಖಾತೆಯಿಂದ ₹ 2.50 ಲಕ್ಷ ಬಡ್ಡಿ ಬರುತ್ತಿದೆ. ಪಿಪಿಎಫ್ ಹಾಗೂ ಇತರ ಕೆಲವು ಹೂಡಿಕೆ ಉತ್ಪನ್ನಗಳಲ್ಲಿ ₹ 7 ಲಕ್ಷಕ್ಕೂ ಹೆಚ್ಚು ತೊಡಗಿಸುತ್ತಿದ್ದೇನೆ. ಬಜೆಟ್‌ನಲ್ಲಿ 2023-24ರ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ಘೋಷಣೆಯಲ್ಲಿ ಒಂದು ಕಡೆ ₹7 ಲಕ್ಷದವರೆಗೆ ತೆರಿಗೆ ಬರುವುದಿಲ್ಲ ಎಂದಿದ್ದಾರೆ. ಜೊತೆಗೆ ₹ 3 ಲಕ್ಷದವರೆಗೆ ಶೂನ್ಯ ತೆರಿಗೆ, ₹ 3 ಲಕ್ಷಕ್ಕೂ ಮೇಲ್ಪಟ್ಟು ₹ 6 ಲಕ್ಷದವರೆಗೆ ಶೇಕಡ 5ರಷ್ಟು ತೆರಿಗೆ ಎಂದು ಹೇಳಲಾಗಿದೆ. ನನ್ನ ಒಟ್ಟು ಆದಾಯ ₹ 11 ಲಕ್ಷ. ನನಗೆ ಆದಾಯ ತೆರಿಗೆ ಎಷ್ಟು ಬರುತ್ತದೆ ಎಂದು ತಿಳಿಸಿ. ಇದು ಇತರರಿಗೂ ಸಹಾಯವಾಗುತ್ತದೆ.

ಉತ್ತರ: ಬಜೆಟ್‌ನಲ್ಲಿ ಪ್ರಸ್ತಾವ ಆಗಿರುವ ಪ್ರಮುಖ ಅಂಶಗಳಲ್ಲಿ ಹೊಸ ತೆರಿಗೆ ಪದ್ದತಿ ಅನುಸರಿಸುವವರಿಗೆ ಮೂಲ ತೆರಿಗೆಯ ಮೇಲೆ ‘ಸೆಕ್ಷನ್ 87 ಎ’ ಪ್ರಕಾರ ರಿಬೇಟ್ ಸಹಿತ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಮೂಲ ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು ಈಗ ₹ 3 ಲಕ್ಷಕ್ಕೆ ಏರಿಸಲಾಗಿದೆಯೇ ಹೊರತು, ಅದನ್ನು ₹ 7 ಲಕ್ಷವೆಂದು ಭಾವಿಸಬಾರದು. ₹ 7 ಲಕ್ಷದೊಳಗೆ ತೆರಿಗೆಗೊಳಪಡುವ ಆದಾಯ ಇರುವ ತೆರಿಗೆದಾರರಿಗಷ್ಟೇ ತೆರಿಗೆ ಶೂನ್ಯ. ಈ ತೆರಿಗೆ ಮಿತಿಯನ್ನು ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಮಾಡಲಾಗಿದೆ. ಹೀಗಾಗಿ ₹ 7 ಲಕ್ಷ ತೆರಿಗೆಗೊಳಪಡುವ ಆದಾಯ ಗಳಿಸುವವರಿಗೆ ₹ 25,000 ತೆರಿಗೆ ಬರುವ ಕಾರಣ ಆ ಮೊತ್ತವನ್ನು ಗರಿಷ್ಠ ರಿಬೇಟ್ ಮೊತ್ತವೆಂದು ಪರಿಗಣಿಸಲಾಗಿದೆ. ಅದಕ್ಕಿಂತ ಆದಾಯ ತುಸು ಮೀರಿದರೂ, ವಿಶೇಷ ರಿಬೇಟ್ ಅಡಿ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಹೀಗಾಗಿ ಅನ್ವಯಿಸುವ ತೆರಿಗೆ ದರದ ಪ್ರಕಾರ ಪೂರ್ಣ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.

ನಿಮ್ಮ ವಿಚಾರಕ್ಕೆ ಸಂಬಂಧಿಸಿ ಹೇಳುವುದಾದರೆ, ಒಟ್ಟು ಆದಾಯ ₹ 11 ಲಕ್ಷ. ನಿಮಗೆ ಬರುವ ಪಿಂಚಣಿ ಮೊತ್ತಕ್ಕೆ ₹ 50,000ದ ಮೂಲ ಆದಾಯ ವಿನಾಯಿತಿ ಬಿಟ್ಟರೆ ಹೊಸ ತೆರಿಗೆ ವ್ಯವಸ್ಥೆಯ ಅಡಿ ಬೇರೇನೂ ವಿನಾಯಿತಿ ಇಲ್ಲ. ನೀವು ಈಗಾಗಲೇ ಪ್ರಶ್ನೆಯಲ್ಲಿ ಗೊತ್ತು ಮಾಡಿರುವ ತೆರಿಗೆ ದರವಲ್ಲದೆ, ₹ 6 ಲಕ್ಷಕ್ಕೆ ಮೇಲ್ಪಟ್ಟು ₹ 9 ಲಕ್ಷದವರೆಗಿನ ಆದಾಯಕ್ಕೆ ಶೇ 10ರಷ್ಟು, ₹ 9 ಲಕ್ಷಕ್ಕೆ ಮೇಲ್ಪಟ್ಟು ಹಾಗೂ ₹ 12 ಲಕ್ಷದವರೆಗಿನ ಆದಾಯಕ್ಕೆ ಶೇ 15ರಷ್ಟು ತೆರಿಗೆ ಇದೆ. ಅದರ ಮೇಲೆ ಶೇ 4ರಷ್ಟು ಸೆಸ್ ಇದೆ. ಹೀಗೆ ಆರ್ಥಿಕ ವರ್ಷ 2023-24ರಲ್ಲಿ ಸುಮಾರು ₹ 70,200 ತೆರಿಗೆ ಕಟ್ಟಬೇಕಾಗುತ್ತದೆ. ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ, ಯಾವುದೇ ಉಳಿತಾಯವನ್ನು ವಿನಾಯಿತಿಗೆ ಪರಿಗಣಿಸಲು ಅವಕಾಶವಿಲ್ಲ.

ADVERTISEMENT

***

ಪರಮಾನಂದ ಕೆ. ಮೇತ್ರಿ, ಬೆಂಗಳೂರು
ಪ್ರಶ್ನೆ: ನಾನು ಬೆಂಗಳೂರಿನಲ್ಲಿ ವಾಸವಾಗಿದ್ದು ಸರ್ಕಾರಿ ನೌಕರಿಯಲ್ಲಿದ್ದೇನೆ. ನನಗೆ ಪ್ರತಿ ತಿಂಗಳು ₹ 41,000 ಸಂಬಳ. ನನಗೆ ಯಾವುದೇ ಬ್ಯಾಂಕ್ ಎಷ್ಟು ಸಾಲ ಕೊಡಬಹುದು? ನಿವೇಶನದ ಅಂದಾಜು ಬೆಲೆ ಸುಮಾರು ₹ 37 ಲಕ್ಷದಿಂದ ₹ 40 ಲಕ್ಷದವರೆಗೆ (30*40 ಅಡಿ ಅಳತೆ) ಇರುವುದಾಗಿ ಗೆಳೆಯರು ತಿಳಿಸಿರುತ್ತಾರೆ. ನನಗೆ ಒಂದು ನಿವೇಶನ ಕೊಂಡು ಮನೆ ಕಟ್ಟಿಸಿ, ಸ್ವಂತ ಮನೆಯಲ್ಲಿ ಇರಬೇಕೆಂಬ ಆಸೆ ಇದೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕಾಗಿ ಕೋರಿಕೆ.

ಉತ್ತರ: ಯಾವುದೇ ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ಕೊಡುವಾಗ ಅಸಲು ಮೊತ್ತಕ್ಕೆ ಪೆಟ್ಟು ಬಾರದ ರೀತಿ ಒಂದಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ. ಗ್ರಾಹಕರ ವಿಶ್ವಾಸಾರ್ಹತೆ, ಸಾಲಕ್ಕೆ ಭದ್ರತೆ, ಜಾಮೀನು, ಭದ್ರತೆಗೆ ಒಪ್ಪಿಸಿದ ಆಸ್ತಿಯ ದಸ್ತಾವೇಜುಗಳ ಪರಾಮರ್ಶೆ, ಮರುಪಾವತಿ ಸಾಮರ್ಥ್ಯ ಇತ್ಯಾದಿಗಳನ್ನು ಮೊದಲ ಹಂತದಲ್ಲಿ ತುಲನೆ ಮಾಡುತ್ತದೆ. ಇದರೊಡನೆ ಕ್ರೆಡಿಟ್
ರೇಟಿಂಗ್ ಕೂಡ ಮುಖ್ಯ. ಸುಮಾರು 700 ಅಂಕಗಳಿಗಿಂತ ಅಧಿಕ ಕ್ರೆಡಿಟ್ ರೇಟಿಂಗ್ ಇದ್ದರೆ ಸಾಲ ತೆಗೆದುಕೊಳ್ಳುವುದು ಸುಲಭ. ಭದ್ರತೆಯ ರೂಪದಲ್ಲಿ ಅಡಮಾನ ಇಡುವ ಆಸ್ತಿಯ ಸುಮಾರು ಶೇ 70ರಿಂದ ಶೇ 75ರಷ್ಟು ಮಾತ್ರ ಸಾಲ ಕೊಡಲಾಗುತ್ತದೆ.

ಇದಲ್ಲದೆ, ಮರುಪಾವತಿ ಸಾಮರ್ಥ್ಯ ಲೆಕ್ಕ ಹಾಕುವಾಗ, ಸಾಲ ಕೋರಿರುವ ವ್ಯಕ್ತಿಯ ನಿವ್ವಳ ಸಂಬಳದ ಒಂದಷ್ಟು ಭಾಗವನ್ನು ಸ್ವಂತ ಖರ್ಚಿಗೆ ಬಿಟ್ಟು, ಉಳಿದ ಮೊತ್ತವನ್ನು ಸಾಲದ ಕಂತು ಪಾವತಿಗೆ ಸಿಗಬಹುದಾದ ಮೊತ್ತವೆಂದು ಪರಿಗಣಿಸಿ ಮಂಜೂರು ಮಾಡಬಹುದಾದ ಸಾಲದ ಮೊತ್ತ ತೀರ್ಮಾನಿಸುತ್ತಾರೆ. ಇದಲ್ಲದೆ, ನೀವು ಖರೀದಿಸುವ ನಿವೇಶನದ ಮಾರುಕಟ್ಟೆ ಮೌಲ್ಯಕ್ಕಿಂತ ಅದರ ಸರ್ಕಾರಿ ದರದ ಆಧಾರದಲ್ಲಿ ನಿಗದಿಯಾಗುವ ಮೌಲ್ಯ ಕಡಿಮೆ ಇರುತ್ತದೆ. ಆಸ್ತಿಯ ಮಾರುಕಟ್ಟೆ ಮೌಲ್ಯ ಎಷ್ಟೇ ಇದ್ದರೂ, ಮಂಜೂರು ಮಾಡುವ ಸಾಲದ ಮೊತ್ತವು ಸರ್ಕಾರಿ ದರದ ಮೇಲೆಯೂ ಅವಲಂಬಿತವಾಗಿ ಇರುತ್ತದೆ.

ನಿಮ್ಮ ಮಾಹಿತಿಯನ್ನು ಪರಿಗಣಿಸಿ ನೋಡುವುದಾದರೆ, ಒಂದು ವೇಳೆ ನಿಮಗೆ ₹ 30 ಲಕ್ಷ ಸಾಲ ಸಿಕ್ಕರೂ, ಶೇ 10ರ ಬಡ್ಡಿ ದರದಲ್ಲಿ ಹತ್ತು ವರ್ಷದ ಅವಧಿಗೆ ಬರುವ ಇಎಂಐ ಮೊತ್ತ ಸುಮಾರು ₹ 33,000 ಆಗಬಹುದು. ನಿಮ್ಮ ನಿವ್ವಳ ಆದಾಯ ಹಾಗೂ ಮನೆ ಖರ್ಚಿಗೆ ಕನಿಷ್ಠವೆಂದರೂ ₹ 15,000ದಿಂದ ₹ 20,000 ಕಳೆದು ಉಳಿದ ಮೊತ್ತವನ್ನಷ್ಟೇ ಇಎಂಐ ಪಾವತಿ ಸಾಮರ್ಥ್ಯ ಲೆಕ್ಕ ಹಾಕಲು ಪರಿಗಣಿಸುತ್ತಾರೆ. ಹೀಗಾಗಿ ಸಾಲ ಎಷ್ಟೇ ಮಂಜೂರು ಮಾಡಿದರೂ ₹ 20 ಲಕ್ಷಕ್ಕಿಂತ ಅಧಿಕ ಸಾಲವನ್ನು ಪಡೆಯುವುದು ಈಗಿನ ಹಂತದಲ್ಲಿ ಸೂಕ್ತವಲ್ಲ. ನಿವೇಶನದ ಖರೀದಿಗೆ ಕೊರತೆಯಾಗುವ ಮೊತ್ತವನ್ನು ನಿಮ್ಮ ಇತರ ಉಳಿತಾಯದಿಂದ ಭರಿಸಿಕೊಳ್ಳಿ. ನಾನು ಇಲ್ಲಿ ಹೇಳಿರುವುದನ್ನು ಮನನ ಮಾಡಿಕೊಂಡು, ನಿಮ್ಮ ಸ್ಥಳೀಯ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.