ADVERTISEMENT

ಪ್ರಶ್ನೋತ್ತರ: ಮಗಳ ಭವಿಷ್ಯಕ್ಕೆ ಸುಲಭವಾಗಿ ಅರ್ಥವಾಗುವ ಹೂಡಿಕೆಗಳ ಬಗ್ಗೆ ತಿಳಿಸಿ

ಪ್ರಮೋದ ಶ್ರೀಕಾಂತ ದೈತೋಟ
Published 26 ಫೆಬ್ರುವರಿ 2025, 0:17 IST
Last Updated 26 ಫೆಬ್ರುವರಿ 2025, 0:17 IST
<div class="paragraphs"><p>ಪ್ರಮೋದ ಶ್ರೀಕಾಂತ ದೈತೋಟ</p></div>

ಪ್ರಮೋದ ಶ್ರೀಕಾಂತ ದೈತೋಟ

   

‌‌ಅಶೋಕ್ ಎಂ.ಆರ್., ಯಲಹಂಕ, ಬೆಂಗಳೂರು.

ನನ್ನ ಪುತ್ರ ಕಳೆದ ಮೂರು ವರ್ಷದಿಂದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪ್ರಸ್ತುತ ಆತನಿಗೆ ಮಾಸಿಕ ₹75 ಸಾವಿರ ವೇತನವಿದೆ. ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾನೆ. ಇದರಡಿ ತೆರಿಗೆ ವಿನಾಯಿತಿಗೆ ಅವಕಾಶ ಇಲ್ಲದ ಕಾರಣ ಯಾವುದೇ ಹೂಡಿಕೆಗೂ ಅವಕಾಶ ಇಲ್ಲ. ಇಂತಹ ಸಂದರ್ಭದಲ್ಲಿ ಅತನಿಗೆ ಯಾವುದೇ ರೀತಿಯಲ್ಲಿ ಹೂಡಿಕೆಯ ಬದ್ಧತೆ ಇಲ್ಲದಂತಾಗಿದೆ. ಬಹುತೇಕ ಹಣವು ಖರ್ಚಾಗುತ್ತಿರುವ ಕಾರಣ ಉಳಿತಾಯಕ್ಕೆ ಅವಕಾಶ ಇಲ್ಲದಂತಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು?  

ADVERTISEMENT

ನಿಮ್ಮ ಪ್ರಶ್ನೆಯಲ್ಲಿ ಉಲ್ಲೇಖಿಸಿರುವ ವಿಚಾರ ಬಹುತೇಕ ಯುವಜನರ ಪಾಲಕರಿಗೆ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯೇ ಆಗಿದೆ. ಹೊಸ ತೆರಿಗೆ ಪದ್ಧತಿ ಆರಂಭವಾದ ಸಂದರ್ಭದಿಂದ ಯಾವುದೇ ಹೂಡಿಕೆಗೆ ತೆರಿಗೆ ವಿನಾಯಿತಿ ಇಲ್ಲ. ಹಾಗಾಗಿ, ಹೂಡಿಕೆ ಕ್ಷೇತ್ರವನ್ನು ಮೇಲ್ನೋಟಕ್ಕೆ ಹೆಚ್ಚು ಆಸಕ್ತಿಯಿಂದ ಪರಿಗಣಿಸುವ ಗೊಡವೆಗೆ ಯಾರೂ ಹೋಗುತ್ತಿಲ್ಲ.

ಆದರೆ, ಈ ಬಗ್ಗೆ ಹೆಚ್ಚಿನ ಒಲವು ಮೂಡಿಸಲು ಭವಿಷ್ಯದ ಅನಿಶ್ಚಿತತೆ, ಮುಂದಿನ ಒಟ್ಟಾರೆ ಗುರಿ- ಆಶಯದ ಜೊತೆಗೆ ಒಂದಷ್ಟು ಜವಾಬ್ದಾರಿ ಇತ್ಯಾದಿಯನ್ನು ಅವರವರೇ ನಿರ್ಧರಿಸಬೇಕು. ಇದಕ್ಕೆ ಪೂರಕವಾಗಿ ಆ ಅಗತ್ಯಕ್ಕಾಗಿ ನಾವು ಯಾವ ರೀತಿ ಮುಂದುವರಿಯಬೇಕು ಎನ್ನುವುದರ ಅರಿವು ಮೂಡಿಸಬೇಕು. ಇದಕ್ಕಾಗಿ ಒಟ್ಟಾರೆ ನಮ್ಮ ಬದುಕಿನ ಆರ್ಥಿಕ ಮುನ್ನೋಟ ಹೊಂದುವುದು ಅವಶ್ಯಕ.

ಉದ್ಯೋಗದಲ್ಲಿದ್ದು ನಿಶ್ಚಿತ ಆದಾಯ ಇರುವವರಿಗೆ ಈ ಬಗ್ಗೆ ಯೋಜಿಸುವುದು ಹೆಚ್ಚೇನೂ ಸಮಸ್ಯೆಯಲ್ಲ. ಕೇವಲ ಆ ಬಗ್ಗೆ ಗಂಭೀರ ಯೋಚನೆಯ ಕೊರತೆ ನೀಗಿಸುವ ಸಮಾಲೋಚನೆಯ ಅಗತ್ಯ ಇದ್ದೀತು. 
ತದನಂತರ ಗಂಭೀರವಾಗಿ ಪರಿಗಣಿಸುವವರಿಗೆ ಯಾವುದೇ ತೆರಿಗೆ ಪದ್ಧತಿ ಇರಲಿ ಅವಕಾಶಗಳು ಮುಕ್ತವಾಗಿವೆ. ಆರೋಗ್ಯದ ಬಗ್ಗೆ ನಾವು ಹೇಗೆ ಹೆಚ್ಚು ಗಂಭೀರವಾಗಿರುತ್ತೇವೋ ಆರ್ಥಿಕ ಶಿಸ್ತಿನ ಬಗ್ಗೆಯೂ ಅದೇ ರೀತಿ ಹೊಸ ತಲೆಮಾರಿನ ವರ್ಗ ಜಾಗರೂಕವಾಗಬೇಕಿದೆ. ಯಾವುದೇ ಆದಾಯ ಸೃಷ್ಟಿಸದ ಹಣದ ಹೊರಹರಿವು, ಅಗತ್ಯಕ್ಕಿಂತ ಅಧಿಕ ಖರ್ಚು, ಎಲ್ಲೆ ಮೀರಿದ ವಿಲಾಸಿ ವೆಚ್ಚಗಳನ್ನು ದೀರ್ಘಕಾಲದಲ್ಲಿ ಕಡಿತಗೊಳಿಸಬೇಕು. ಆ ಹಣವನ್ನು ಆದಾಯಗಳಿಸುವ ಹೂಡಿಕೆಗಳಲ್ಲಿ ತೊಡಗಿಸಿದಾಗ ನಿರೀಕ್ಷೆಗೂ ಮೀರಿದ ಆರ್ಥಿಕ ವೃದ್ಧಿ ಸಾಧ್ಯ. ಇದಕ್ಕೆ ಬದಲಾದ ಮನಃಸ್ಥಿತಿ ಬೇಕು. ಈ ಬಗ್ಗೆ ಸಾವಧಾನದ ಮನವರಿಕೆ ಮಾಡುವ ಹಾಗೂ ಮಾರ್ಗದರ್ಶನ ಬೇಕಿದೆ.

ಸುಧಾ ಪಿ., ಊರು ತಿಳಿಸಿಲ್ಲ.

ನನ್ನದೊಂದು ಅಂಗಡಿಯಿದ್ದು, ತಿಂಗಳಿಗೆ ₹30 ಸಾವಿರ ಸಂಪಾದನೆಯಿದೆ. ನನಗೆ ಒಂದೂವರೆ ವರ್ಷದ ಪುತ್ರಿ ಇದ್ದಾಳೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಮಾಸಿಕ ₹3 ಸಾವಿರ ಕಟ್ಟುತ್ತಿದ್ದೇನೆ. ಮಗಳ ಭವಿಷ್ಯಕ್ಕೆ ಸುಲಭವಾಗಿ ಅರ್ಥವಾಗುವ ಹೂಡಿಕೆಗಳ ಬಗ್ಗೆ ತಿಳಿಸಿ.

ನಿಮ್ಮ ಮಗಳ ಭವಿಷ್ಯಕ್ಕಾಗಿ ಹೂಡಿಕೆಗೆ ಯೋಜಿಸುವಾಗ ಆರ್ಥಿಕ ಅಪಾಯವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ದೀರ್ಘಾವಧಿಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡುವುದು ಸೂಕ್ತ. ಸುಕನ್ಯಾ ಸಮೃದ್ಧಿ ಯೋಜನೆಯ ಜೊತೆಗೆ ಇನ್ನಷ್ಟು ಸುಲಭ ಹಾಗೂ ಸಾಂಪ್ರದಾಯಿಕ ಆಯ್ಕೆಗಳನ್ನು ಅರಿತು ಹೂಡಿಕೆ ಮಾಡಬಹುದು. ಮೊದಲ ಹಂತದಲ್ಲಿ ನೀವು ನಿಮ್ಮ ಮನೆಯ ವೆಚ್ಚ ಇತ್ಯಾದಿ ಕಳೆದು ಇನ್ನೂ ಹೆಚ್ಚಿನ ಎಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು ಎಂಬುದನ್ನು ಅರಿತುಕೊಳ್ಳಿ. 

* ಅಂಚೆ ಕಚೇರಿ ಆರ್‌ಡಿ ಠೇವಣಿ: ಇದರಡಿ ಪ್ರತಿ ತ್ರೈಮಾಸಿಕ ಅವಧಿಗೆ ಶೇ 6.7ರಷ್ಟು ನಿಶ್ಚಿತ ಬಡ್ಡಿ ಲಭಿಸಲಿದೆ. ತಿಂಗಳಿಗೆ ಕನಿಷ್ಠ ₹100ಯಿಂದ ಹೂಡಿಕೆ ಮಾಡಬಹುದು. ಮಗುವಿಗೆ ಹತ್ತು ವರ್ಷ ಆಗುವ ತನಕ ಪೋಷಕರ ಹೆಸರಲ್ಲೇ ಖಾತೆ ತೆರೆದು ವ್ಯವಹರಿಸಬಹುದು. ಈ ಹೂಡಿಕೆಯ ಅವಧಿ 5 ವರ್ಷ. ನಂತರ ಬಡ್ಡಿಸಹಿತ ನಗದೀಕರಿಸಬಹುದು. ಅದೇ ಮೊತ್ತವನ್ನು ನಿಮ್ಮ ಮುಂದಿನ ಯೋಜನೆಯ ಉದ್ದೇಶಕ್ಕೆ ತಕ್ಕಂತೆ ಮರು ಹೂಡಿಕೆ ಮಾಡಬಹುದು.

* ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎ‌ಫ್‌): ಇದು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಹದಿನೈದು ವರ್ಷದ ಹೂಡಿಕೆಯಾಗಿದೆ. ಪ್ರತಿವರ್ಷ ಕನಿಷ್ಠ ₹500ರಿಂದ ₹1.50 ಲಕ್ಷದ ತನಕ ಹೂಡಿಕೆ ಮಾಡಲು ಅವಕಾಶ ಇದೆ. ಪ್ರತಿವರ್ಷ ಶೇ 7.1ರಷ್ಟು ಬಡ್ಡಿ ದೊರೆಯುತ್ತದೆ. ಈ ಖಾತೆಯನ್ನು ಮಕ್ಕಳ ಹೆಸರಲ್ಲಿಯೂ ತೆರೆಯಬಹುದು.

* ಬ್ಯಾಂಕ್ ಎಫ್‌ಡಿ: ಇದು ಕೂಡ ಭದ್ರವಾದ ಹೂಡಿಕೆ ಆಯ್ಕೆಯಾಗಿದೆ. ನಿಮ್ಮ ಹೂಡಿಕೆ ಅವಧಿ ಅನುಸರಿಸಿ ಶೇ 8ರ ತನಕವೂ ನಿಶ್ಚಿತ ಬಡ್ಡಿ ಗಳಿಸಬಹುದು. ಒಂದು ವೇಳೆ ಹಣದ ತುರ್ತು ಅಗತ್ಯ ಬಂದರೆ ಅವಧಿಗೂ ಮುನ್ನ ಅದನ್ನು ನಗದೀಕರಿಸುವ ಅವಕಾಶವಿದೆ.  

* ಈಕ್ವಿಟಿ ಲಿಂಕ್ಡ್ ಸೇವಿಂಗ್ ಯೋಜನೆ: ಇದು ಮ್ಯೂಚುವಲ್ ಫಂಡ್ ವರ್ಗಕ್ಕೆ ಸೇರಿದ ಹೂಡಿಕೆಯಾಗಿದೆ. ಸುಮಾರು ಮೂರು ವರ್ಷ ಅವಧಿಯ ಲಾಕ್-ಇನ್ ಅವಧಿ ಹೊಂದಿದೆ. ಷೇರು ಮಾರುಕಟ್ಟೆ ಆಧರಿತ ಹೂಡಿಕೆಗಳಾದ್ದರಿಂದ ಮಧ್ಯಮ ಮಟ್ಟದ ಅಪಾಯವನ್ನು ಹೊಂದಿದೆ. ಆದರೆ, ಐದರಿಂದ ಹತ್ತು ವರ್ಷದ ದೀರ್ಘಾವಧಿಯಲ್ಲಿ ಉತ್ತಮ ಮೌಲ್ಯ ಸೃಷ್ಟಿಸಿ ಕೊಡಲು ನೆರವಾಗುತ್ತದೆ.

* ಮಕ್ಕಳ ಶೈಕ್ಷಣಿಕ ಯೋಜನೆ: ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ರೂಪುಗೊಂಡ ಯೋಜನೆ ಇದಾಗಿದೆ. ಹೆಚ್ಚಿನ ವಿಮಾ ಕಂಪನಿಗಳು ಈ ರೀತಿಯ ಯೋಜನೆಗಳನ್ನು ನೀಡುತ್ತವೆ. ಇದರಿಂದ ಮಕ್ಕಳ ಶಿಕ್ಷಣಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ಹಣ ಸಂಗ್ರಹಿಸಲು ಅನುಕೂಲವಾಗುತ್ತದೆ. ಇದು ಸಾಂಪ್ರದಾಯಿಕವಾಗಿ ವಿಮೆಯ ಜೊತೆಗೆ ನಮ್ಮದೇ ಮೊತ್ತವನ್ನು ವಾರ್ಷಿಕವಾಗಿ ಬೋನಸ್ ಮೂಲಕ ಒದಗಿಸಿಕೊಡುತ್ತದೆ.

ಇದರ ಪ್ರಿಮಿಯಂ ಪಾವತಿ ಅವಧಿಯನ್ನು ನಮ್ಮ ಆಯ್ಕೆಯಂತೆ ಹತ್ತು ಅಥವಾ ಇಪ್ಪತ್ತು ವರ್ಷದ ತನಕ ವಿಸ್ತರಿಸಬಹುದು. ಕೆಲವೊಮ್ಮೆ ಪಾಲಕರ ಅನಿರೀಕ್ಷಿತ ಅಗಲಿಕೆಯಂತಹ ಸಂದರ್ಭದಲ್ಲಿ ಉಳಿದ ವರ್ಷಗಳ ಪ್ರಿಮಿಯಂ ಭರಿಸಿ ವಿಮಾ ಅವಧಿ ಪೂರ್ಣಗೊಂಡಾಗ ಸಂಪೂರ್ಣ ಹಣ ಒದಗಿಸಿಕೊಡುತ್ತವೆ.

ನೀವು ಕಡಿಮೆ ಅಪಾಯದ ಹೂಡಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಯೋಜನೆ ಬಿಟ್ಟು ಇನ್ನುಳಿದ ಆಯ್ಕೆಗಳು ಸೂಕ್ತವಾಗಿವೆ. ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭಕ್ಕೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಯೋಜನೆಯನ್ನು ಪರಿಗಣಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.