ADVERTISEMENT

ಪ್ರಶ್ನೋತ್ತರ: ವೈಯಕ್ತಿಕ ಸಾಲ ಅಥವಾ ಗೃಹಸಾಲ; ಯಾವುದು ಸೂಕ್ತ?

ಪ್ರಮೋದ ಶ್ರೀಕಾಂತ ದೈತೋಟ
Published 11 ನವೆಂಬರ್ 2025, 18:37 IST
Last Updated 11 ನವೆಂಬರ್ 2025, 18:37 IST
ಪ್ರಶ್ನೋತ್ತರ
ಪ್ರಶ್ನೋತ್ತರ   

– ನಾರಾಯಣ ರಾವ್, ಉಡುಪಿ

ನಾನು ಹೂಡಿಕೆಯ ಕ್ಷೇತ್ರಕ್ಕೆ ಹೊಸಬ. ಬಂಗಾರ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಲಾಭ ನೀಡುತ್ತಿದೆ. ಹಿಂದೆ ಗೋಲ್ಡ್ ಬಾಂಡ್ ಆರಂಭಿಸಿದ್ದಾಗ ನಾನು ಖರೀದಿಸಿದ್ದೆ. ಈ ಹೂಡಿಕೆಯಿಂದ ನನಗೆ ಸಾಕಷ್ಟು ಲಾಭ ಆಗಿದೆ. ಆದರೆ ಈತ್ತೀಚಿನ ಕೆಲವು ವರ್ಷಗಳಿಂದ ಇದನ್ನು ನಿಲ್ಲಿಸಲಾಗಿದೆ. ಹೀಗಾಗಿ, ನೇರ ಚಿನ್ನ ಖರೀದಿಗಿಂತ ಅದೇ ಕ್ಷೇತ್ರದ ಯಾವುದಾದರೂ ಕಂಪನಿಯ ಷೇರು, ಡಿಜಿಟಲ್ ಗೋಲ್ಡ್‌, ಗೋಲ್ಡ್ ಫಂಡ್, ಇಟಿಎಫ್ ಖರೀದಿ ಮಾಡಿ ಅದೇ ರೀತಿಯ ಲಾಭ ಗಳಿಸಬಹುದೇ?

ಉತ್ತರ: ಬಂಗಾರದ ಮೇಲಿನ ಹೂಡಿಕೆಯನ್ನು ದೀರ್ಘಕಾಲಿಕ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಯ ಸಾಧನವಾಗಿ ಪರಿಗಣಿಸಲಾಗಿದೆ. ನೀವು ಹಿಂದೆ ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ್ದೀರಿ. ಅದು ನಿಮಗೆ ಸರಿಯಾದ ನಿರ್ಣಯವಾಗಿತ್ತು. ಏಕೆಂದರೆ ಗೋಲ್ಡ್‌ ಬಾಂಡ್‌ಗಳು ಬಂಗಾರದ ಬೆಲೆಯ ಏರಿಕೆಗೆ ಸಮಾನವಾದ ಲಾಭ ನೀಡುವುದರ ಜೊತೆಗೆ ಪ್ರತಿವರ್ಷ ನಿಮ್ಮ ಹೂಡಿಕೆಗೆ ಬಡ್ಡಿ ಆದಾಯವನ್ನೂ ನೀಡುತ್ತವೆ. ಇತ್ತೀಚೆಗೆ ಹೊಸ ಗೋಲ್ಡ್‌ ಬಾಂಡ್‌ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವುದು ಸಮಂಜಸ.

ADVERTISEMENT

ನೇರ ಚಿನ್ನ ಖರೀದಿಸುವುದು ಭದ್ರತೆ, ಸಂಗ್ರಹ, ಸುರಕ್ಷತಾ ವೆಚ್ಚ ಮತ್ತು ಮಾರುಕಟ್ಟೆಯಲ್ಲಿ ಅದರ ಮರುಮಾರಾಟದ ಕುರಿತಾಗಿ ಅನಿಶ್ಚಿತತೆಗಳನ್ನು ಹೊಂದಿರುತ್ತದೆ. ಇದಕ್ಕಿಂತ ಡಿಜಿಟಲ್ ಗೋಲ್ಡ್‌ ಮತ್ತು ಗೋಲ್ಡ್ ಇಟಿಎಫ್‌ಗಳು ವ್ಯವಹಾರ ನಡೆಸುವುದನ್ನು ಸುಲಭ ಮಾಡಿಕೊಡುತ್ತವೆ ಮತ್ತು ಅವುಗಳನ್ನು ನಗದಾಗಿ ಪರಿವರ್ತಿಸಿಕೊಳ್ಳುವುದು ಕೂಡ ಸುಲಭ. ಗೋಲ್ಡ್ ಇಟಿಎಫ್‌ಗಳನ್ನು ಷೇರುಪೇಟೆಗಳ ಮೂಲಕ ಮಾರಾಟ, ಖರೀದಿ ಮಾಡುವುದರಿಂದ ಬೆಲೆಯಲ್ಲಿ ಪಾರದರ್ಶಕತೆ ಇರುತ್ತದೆ. ಇವುಗಳನ್ನು ಯಾವುದೇ ಸಮಯದಲ್ಲಿ ಮಾರಾಟ ಮಾಡುವ ಅಥವಾ ಖರೀದಿ ಮಾಡುವ ಸೌಲಭ್ಯ ಇರುತ್ತದೆ. ಭೌತಿಕವಾಗಿ ಚಿನ್ನವನ್ನು ಸಂಗ್ರಹಿಸಿ ಇಟ್ಟುಕೊಳ್ಳುವಾಗ ಎದುರಾಗುವ ಸಮಸ್ಯೆ ಇದರಲ್ಲಿ ಇಲ್ಲ.

ಡಿಜಿಟಲ್ ಗೋಲ್ಡ್ ಕೂಡ ಸುಲಭವಾಗಿ ಸಿಗುವುದಾದರೂ, ದೀರ್ಘಾವಧಿಯ ಭದ್ರತೆ ದೃಷ್ಟಿಯಿಂದ ಇಟಿಎಫ್‌ಗಳು ಮತ್ತಷ್ಟು ವಿಶ್ವಾಸಾರ್ಹ. ಇನ್ನು ಸ್ವರ್ಣಾಭರಣ ಮಾರುಕಟ್ಟೆ ಕಂಪನಿಗಳ ಷೇರುಗಳು ಬಂಗಾರದ ಬದಲು ಖರೀದಿಗೆ ಯೋಗ್ಯವೇ ಎಂಬ ಬಗ್ಗೆ ನಿಮ್ಮ ಪ್ರಶ್ನೆಯಿದೆ. ಆದರೆ ಈ ಕಂಪನಿಗಳ ಷೇರುಗಳು ಬಂಗಾರಕ್ಕೆ ಪರ್ಯಾಯವಲ್ಲ. ಬಂಗಾರದ ದರ ಏರಿಕೆಯ ವಾರ್ಷಿಕ ತುಲನೆ ಮಾಡಿದರೆ, ಅದರ ಇಳಿಮುಖ ಚಲನೆ ದರ ಯಾವತ್ತೂ ಅತ್ಯಲ್ಪವೆಂಬುದನ್ನು ಖಂಡಿತವಾಗಿ ಹೇಳಬಹುದು. ಆದರೆ, ಚಿನ್ನ ಮಾರಾಟ ಮಾಡುವ ಕಂಪನಿ ಷೇರುಗಳ ಮೌಲ್ಯವು ಇತರ ಅನೇಕ ಮಾರುಕಟ್ಟೆ ಹಾಗೂ ಕಂಪನಿ ಸಂಬಂಧಿತ ವ್ಯವಹಾರದ ಮೇಲೆ ನಿರ್ಧಾರ ಆಗುತ್ತದೆ. ಆದ್ದರಿಂದ ಅವು ಬಂಗಾರದ ಪ್ರತಿ ದಿನದ ಮೌಲ್ಯಕ್ಕೆ ಸಮರ್ಪಕ ತುಲನೆ ಆಗಲಾರದು. ನಿಮ್ಮ ಹೂಡಿಕೆಯ ಉದ್ದೇಶಕ್ಕೆ ಗೋಲ್ಡ್ ಇಟಿಎಫ್ ಅಥವಾ ಗೋಲ್ಡ್ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಸೂಕ್ತ.

– ರೂಪ ದೊಡಮನಿ

ನಾನು ಸರ್ಕಾರಿ ನೌಕರಳಾಗಿದ್ದು ನಿವೇಶನ ಕೊಂಡಿದ್ದೇನೆ. ಈಗ ಮನೆ ಕಟ್ಟಲು ನಿರ್ಧರಿಸಿದ್ದೇವೆ. ನನ್ನ ಹಿತೈಷಿಗಳು ಗೃಹಸಾಲ ಮಾಡುವುದಕ್ಕಿಂತ ವೈಯಕ್ತಿಕ ಸಾಲ ಮಾಡುವುದು ಸೂಕ್ತ ಎಂದು ಸಲಹೆ ನೀಡುತ್ತಿದ್ದಾರೆ. ಗೃಹಸಾಲ ತೀರಿಸುವವರೆಗೂ ದುಪ್ಪಟ್ಟು ಮೊತ್ತ ಕಟ್ಟಿದಂತಾಗುತ್ತದೆ ಎನ್ನುತ್ತಿದ್ದಾರೆ. ಆದ್ದರಿಂದ ನನಗೆ ಗೊಂದಲವಿದೆ. ವೈಯಕ್ತಿಕ ಸಾಲ ಅಥವಾ ಗೃಹಸಾಲ ಪೈಕಿ ಯಾವುದು ಸೂಕ್ತ?

ಉತ್ತರ: ಗೃಹ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಳ್ಳುವಾಗ ಗೃಹಸಾಲ ಮತ್ತು ವೈಯಕ್ತಿಕ ಸಾಲದ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ನಿಮ್ಮ ಹಿತೈಷಿಗಳು ಹೇಳಿರುವಂತೆ ಸಾಮಾನ್ಯ ಸಂದರ್ಭದಲ್ಲಿ ಒಟ್ಟು ಬಡ್ಡಿ ಲೆಕ್ಕ ಹಾಕಿದರೆ ಸಂಪೂರ್ಣ ಸಾಲ ಮರುಪಾವತಿ ಅವಧಿಯಲ್ಲಿ (20 ವರ್ಷಗಳ ಮರುಪಾವತಿ) ಬಡ್ಡಿ ಸಹಜವಾಗಿ ಅಸಲಿಗೆ ಸಮ ಆಗಿರುತ್ತದೆ. ಆದರೆ ಇಂತಹ ದ್ವಂದ್ವ ಇದ್ದಾಗ ಯಾವ ಸಾಲವನ್ನು ಆಯ್ಕೆ ಮಾಡಬೇಕು ಎಂಬುದು ಬಡ್ಡಿ, ತೆರಿಗೆ ಲಾಭ, ಇಎಂಐ ಹೊರೆ, ನಿಮ್ಮ ಉಳಿತಾಯ ಮತ್ತು ವೇತನದ ಸ್ಥಿರತೆ ಮೇಲೂ ಅವಲಂಬಿತವಾಗಿದೆ.

ಗೃಹಸಾಲದ ಬಡ್ಡಿದರ ಸಾಮಾನ್ಯವಾಗಿ ಶೇ 8ರಿಂದ ಶೇ 9ರಷ್ಟು ಇರುತ್ತದೆ. ಇದು ನಿಮ್ಮ ವಯಸ್ಸಿಗೆ ಅನುಗುಣವಾಗಿ 15ರಿಂದ 30 ವರ್ಷ ಅವಧಿಯ ಪಾವತಿ ಆಗಿರುತ್ತದೆ. ಈ ವರ್ಗದಲ್ಲಿ ನಿಮಗೆ ಸಿಗುವ ಸಾಲದ ಮೊತ್ತ ನಿಮ್ಮ ಆಸ್ತಿಯ ಅಡಮಾನದ ಮೇಲೆ ಇರುವುದರಿಂದ ಸಾಲದ ಮೊತ್ತ ಸಹಜವಾಗಿ ಹೆಚ್ಚಾಗಿರುತ್ತದೆ. ಅಂದರೆ ನಿಮ್ಮ ಮನೆಯ ನಿರ್ಮಾಣ ವೆಚ್ಚದ ಶೇ 70-80ರಷ್ಟು ಸಾಲ ಸಿಗುತ್ತದೆ. ಆದರೆ, ವೈಯಕ್ತಿಕ ಸಾಲ ಪಡೆದು ಅದೇ ಮೊತ್ತವನ್ನು ಮನೆ ನಿರ್ಮಾಣಕ್ಕೆ ಬಳಸುವುದಿದ್ದರೆ, ನಿಮ್ಮ ಸಾಲದ ಮೊತ್ತ ಕಡಿಮೆಯಾಗುತ್ತದೆ. ಹೀಗಾಗಿ ಕೊರತೆಯಾಗುವ ಮೊತ್ತವನ್ನು ನಿಮ್ಮ ಉಳಿತಾಯದಿಂದ ಭರಿಸಬೇಕು. ಸಾಲ ಮರುಪಾವತಿ ಅವಧಿಯೂ ಕಡಿಮೆ (3-5 ವರ್ಷ) ಇರುವುದರಿಂದ ಇಎಂಐ ಪ್ರತಿ ತಿಂಗಳು ಹೆಚ್ಚು ಇರುತ್ತದೆ. ಈ ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ನೀಡಲಾಗುವುದರಿಂದ ಬಡ್ಡಿ ದರ ಹೆಚ್ಚು– ಸಾಮಾನ್ಯವಾಗಿ ಶೇ 12ರಿಂದ ಶೇ 18ರಷ್ಟು ಅಥವಾ ಹೆಚ್ಚಿನ ಮಟ್ಟಕ್ಕೂ ಹೋಗಬಹುದು. ನಿಮ್ಮ ಆರ್ಥಿಕ ಕ್ಷಮತೆಗೆ ತಕ್ಕಂತೆ ಇದು ವ್ಯತ್ಯಾಸ ಆಗಬಹುದು. ಈ ಸಾಲಕ್ಕೆ ತೆರಿಗೆ ರಿಯಾಯಿತಿ ದೊರೆಯುವುದಿಲ್ಲ. ವೈಯಕ್ತಿಕ ಸಾಲವನ್ನು ಕಡಿಮೆ ಮೊತ್ತದ ಹೆಚ್ಚುವರಿ ವೆಚ್ಚಗಳಿಗಾಗಿ ಮಾತ್ರ ಪರಿಗಣಿಸಬಹುದು.

ನೀವು ಸರ್ಕಾರಿ ನೌಕರರಾಗಿರುವ ಕಾರಣ ನಿಮ್ಮ ಆದಾಯ ಸ್ಥಿರವಾಗಿದೆ. ಹೀಗಾಗಿ ಬ್ಯಾಂಕಿನಿಂದ ಸಿಗುವ ಗೃಹಸಾಲವನ್ನು ನೀವು ಪಡೆಯುವುದೊಳಿತು. ದೀರ್ಘಾವಧಿಯ ದೃಷ್ಟಿಯಿಂದ, ಕಡಿಮೆ ಬಡ್ಡಿದರ ಪರಿಗಣಿಸಿದರೆ ಬ್ಯಾಂಕ್ ಸಾಲವೇ ಸೂಕ್ತ. ಇನ್ನೂ ಮುಖ್ಯವಾಗಿ ನಿಮ್ಮ ಸಾಲದ ಬಡ್ಡಿ ಹೊರೆ ಇಳಿಸಲು ಉಳಿತಾಯದ ಹಣ ಹೆಚ್ಚುವರಿ ಸಂಗ್ರಹ ಆದಾಗ ಮುಂಗಡ ಅಸಲು ಪಾವತಿ ಮಾಡಿ ಬೇಗನೆ ಋಣ ಮುಕ್ತರಾಗುವ ಬಗ್ಗೆ ಯೋಚಿಸಿ. ಹೀಗಾಗಿ ಕಡಿಮೆ, ಅಗತ್ಯದಷ್ಟು ಸಾಲ ಪಡೆದು ಅವಧಿಗೂ ಮುನ್ನ ಪೂರ್ವಪಾವತಿ ಮಾಡುವ ಅವಕಾಶ ಇರುವ ಆಯ್ಕೆ ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.