
ಪ್ರಶ್ನೆ: ನಾನು ಮತ್ತು ನನ್ನ ತಮ್ಮ ಒಂದು ಮನೆಯನ್ನು ಹೊಂದಿದ್ದೇವೆ. ಇದನ್ನು ಬಾಡಿಗೆಗೆ ನೀಡಿದ್ದೇವೆ. ಈ ಮನೆಯ ಬಾಡಿಗೆಯನ್ನು ನಾವು ಸಮಾನವಾಗಿ ಹಂಚಿಕೊಂಡು ಬರುತ್ತಿದ್ದೇವೆ. ಇದಕ್ಕೆ ನಾವು ಮನೆ ತೆರಿಗೆ ಕಟ್ಟುತ್ತಿದ್ದು ಇದನ್ನೂ ನಾನೇ ತೆರುತ್ತಿದ್ದೇನೆ. ಬಾಡಿಗೆದಾರರು, ಬಾಡಿಗೆ ಹಣವನ್ನು ನನ್ನ ಹಾಗೂ ನನ್ನ ತಮ್ಮನ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದಾರೆ. ಅವರು ಬ್ಯಾಂಕ್ ಉದ್ಯೋಗಿ ಆಗಿರುವುದರಿಂದ ಅವರಿಗೆ ನಾವು ಬಾಡಿಗೆ ರಸೀದಿ ಕೊಡಬೇಕಾಗುತ್ತದೆ. ನನ್ನ ಪ್ರಶ್ನೆ ಏನೆಂದರೆ, ನಾವು ಯಾವ ರೀತಿ ಈ ಬಾಡಿಗೆ ಆದಾಯವನ್ನು ತೋರಿಸಿಕೊಳ್ಳಬೇಕು. ನಮಗೆ ನಮ್ಮದೇ ಆದ ವೈಯಕ್ತಿಕ ಆದಾಯವೂ ಇದೆ. ಈ ಬಗ್ಗೆ ಸಲಹೆ ನೀಡಿ – ರಾಜೇಂದ್ರ, ತುಮಕೂರು
ಉತ್ತರ: ಜಂಟಿ ಹೆಸರಿನಲ್ಲಿ ಇರುವ ಆಸ್ತಿಯಿಂದ ಬರುವ ಬಾಡಿಗೆ ಆದಾಯವನ್ನು ಸರಿಯಾಗಿ ತೋರಿಸುವುದು ಆದಾಯ ತೆರಿಗೆ ಕಾಯ್ದೆಯ ನಿಯಮಗಳಿಗೆ ಒಳಪಡುತ್ತದೆ. ಒಂದು ಮನೆ ಇಬ್ಬರು ವ್ಯಕ್ತಿಗಳ ಒಡೆತನದಲ್ಲಿದ್ದರೆ, ಕಾನೂನು ಪ್ರಕಾರ ಅವರ ಮಾಲಿಕತ್ವದ ಪ್ರಮಾಣಕ್ಕೆ ಅನುಗುಣವಾಗಿ ಬಾಡಿಗೆ ಆದಾಯವನ್ನು ಪ್ರತ್ಯೇಕವಾಗಿ ತೋರಿಸಿಕೊಳ್ಳಬೇಕಾಗುತ್ತದೆ. ನೀವು ಹಾಗೂ ನಿಮ್ಮ ತಮ್ಮ, ಮನೆಯಲ್ಲಿ 50:50 ಹಂಚಿಕೆ ಹೊಂದಿದ್ದರೆ, ಬಾಡಿಗೆಯಲ್ಲಿನ ಒಟ್ಟು ವಾರ್ಷಿಕ ಮೌಲ್ಯವನ್ನು ಸಮಾನವಾಗಿ ಇಬ್ಬರ ಪ್ರತ್ಯೇಕ ಆದಾಯವಾಗಿ ಪರಿಗಣಿಸಲಾಗುತ್ತದೆ.
ಬಾಡಿಗೆದಾರರು ಬಾಡಿಗೆ ಮೊತ್ತವನ್ನು ಇಬ್ಬರ ಖಾತೆಗೆ ಪ್ರತ್ಯೇಕವಾಗಿ ಜಮಾ ಮಾಡುತ್ತಿರುವುದು ತೆರಿಗೆ ದೃಷ್ಟಿಯಿಂದಲೂ ಸರಿಯೆ. ಏಕೆಂದರೆ ಇದು ಕೂಡಾ ಆದಾಯದ ಸಮಾನ ಹಂಚಿಕೆಯನ್ನು ದೃಢಪಡಿಸುವ ದಾಖಲೆಯಾಗುತ್ತದೆ. ಜೊತೆಗೆ, ನಿಮ್ಮ ಹೆಸರಿನಲ್ಲಿ ಪಾವತಿಸಿದ ಮನೆ ತೆರಿಗೆಯನ್ನು ನಿಮ್ಮಿಬ್ಬರ ಆದಾಯ ಹಂಚಿಕೆಯ ಅನುಪಾತದಲ್ಲಿ ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ. ಬಾಡಿಗೆ ರಸೀದಿ ನೀಡುವಾಗಲೂ ನೀವು ಮತ್ತು ನಿಮ್ಮ ತಮ್ಮನ ಹೆಸರು, ಮನೆಯಲ್ಲಿ ನಿಮ್ಮ ಒಡೆತನ, ನಿಮ್ಮ ಪಾನ್ ಕಾರ್ಡ್ ಸಂಖ್ಯೆ ಮತ್ತು ಬಾಡಿಗೆ ವಿವರಗಳನ್ನು ಸಹ ಸೇರಿಸುವುದು ಉತ್ತಮ.
ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ, ಇಬ್ಬರೂ ತಮ್ಮ ತಮ್ಮ ಆದಾಯದ ಪ್ರಮಾಣವನ್ನು ಇತರ ವರ್ಗದ ಆದಾಯದೊಂದಿಗೆ ತೋರಿಸಿಕೊಳ್ಳಬೇಕು. ಬಾಡಿಗೆಯಿಂದ ಬರುವ ವಾರ್ಷಿಕ ಮೌಲ್ಯದಿಂದ ಶೇಕಡ 30ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ನಿಮ್ಮ ತೆರಿಗೆ ಪದ್ಧತಿಯ ಆಯ್ಕೆಯನ್ನು ಅನುಸರಿಸಿ. ಗೃಹಸಾಲ ಬಡ್ಡಿ ಇದ್ದರೆ ಅದನ್ನು ಕಡಿತಗೊಳಿಸುವ ಅವಕಾಶ ಇದೆ. ನಂತರ ಉಳಿದ ಆದಾಯವು ನಿಮ್ಮ ವೈಯಕ್ತಿಕ ಆದಾಯದೊಂದಿಗೆ ಸೇರಿಸಿ ಒಟ್ಟು ತೆರಿಗೆಗೊಳಪಡುವ ಆದಾಯವೆಂದು ಪರಿಗಣಿಸಲಾಗುತ್ತದೆ. ಜಂಟಿ ಬಾಡಿಗೆ ಆದಾಯದ ಸರಿಯಾದ ದಾಖಲೆಗಳಾಗಿ ನಿಮ್ಮ ಆಸ್ತಿ ದಾಖಲೆ, ಮನೆಯ ಖಾತಾ, ಬಾಡಿಗೆ ಒಪ್ಪಂದ, ಬಾಡಿಗೆ ಜಮಾ ಆದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಹಾಗೂ ತೆರಿಗೆ ರಸೀದಿಗಳನ್ನು ಕಾಪಾಡಿಟ್ಟುಕೊಳ್ಳುವುದು ಬಹಳ ಮುಖ್ಯ.
ಪ್ರಶ್ನೆ: ನಮ್ಮ ತಾಯಿಯು ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಅವರು ಕಳೆದ ನಾಲ್ಕು ವರ್ಷಗಳಲ್ಲಿ ಸಂಪಾದನೆ ಮಾಡಿದ ಉಳಿತಾಯದ ₹2 ಲಕ್ಷ ಮೊತ್ತವನ್ನು ಬ್ಯಾಂಕ್ ಆಫ್ ಬರೋಡಾದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದೇವೆ. ಪ್ರಶ್ನೆ ಏನೆಂದರೆ, ಈ ಹಣವು ಎರಡು ಪಟ್ಟು ಆಗುತ್ತೆ ಅಂತ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ಆದರೆ ಇದಕ್ಕೆ ಎಷ್ಟು ವರ್ಷ ಸಮಯ ಬೇಕಾಗಬಹುದು? ಹೂಡಿಕೆಯ ಅವಧಿಯಲ್ಲಿ, ಸ್ವಲ್ಪ ಪ್ರಮಾಣದಲ್ಲಿ ರಿಸ್ಕ್ ಇದೆ ಎಂದು ಸಹ ಹೇಳಿದ್ದಾರೆ. ಆದರೆ ದೀರ್ಘ ಕಾಲ ಹೂಡಿಕೆ ಮಾಡುವುದಿದ್ದರೆ, ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ – ಆದರ್ಶ್ ಗಿಣಿಮುಗೆ, ಊರು ತಿಳಿಸಿಲ್ಲ
ಉತ್ತರ: ನಿಮ್ಮ ತಾಯಿಯವರು ತಮ್ಮ ಪರಿಶ್ರಮದ ಮೂಲಕ ಸಂಗ್ರಹಿಸಿದ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿರುವುದು ಅತ್ಯಂತ ಉತ್ತಮ ಆರ್ಥಿಕ ನಿರ್ಧಾರ. ಆದರೆ ಹೆಚ್ಚಿನ ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆ ಆಧಾರಿತ ಹೂಡಿಕೆ ಆಗಿರುವುದರಿಂದ, ಇದರ ಲಾಭವು ಬ್ಯಾಂಕ್ ಬಡ್ಡಿದರದಂತೆ ನಿಗದಿ ಆಗುವುದಿಲ್ಲ. ಹೀಗಾಗಿ ನಿಮ್ಮ ಹಣ ದುಪ್ಪಟ್ಟು ಆಗುತ್ತದೆ ಎಂಬ ಮಾತು ಸಾಧ್ಯವಾದರೂ, ಅದಕ್ಕೆ ಬೇಕಾಗುವ ಸಮಯ ನಿಖರವಾಗಿರದು ಮತ್ತು ಅದು ಆಯ್ಕೆ ಮಾಡಿದ ಫಂಡ್‌ನ ಪ್ರಕಾರ ಹಾಗೂ ಅದರ ರಿಸ್ಕ್ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ನೀವು ನೀಡಿದ ಮಾಹಿತಿಯಲ್ಲಿ ಯಾವ ವರ್ಗ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಉದಾಹರಣೆಗೆ, ಈಕ್ವಿಟಿ, ಬ್ಯಾಲೆನ್ಸ್ಡ್, ಡೆಬ್ಟ್, ಸೇವಿಂಗ್ಸ್, ಕಾಂಟ್ರಾ ಫಂಡ್ ಇತ್ಯಾದಿ ಯಾವುದೂ ಆಗಿರಬಹುದು. ಆದರೆ ಈ ಬಗ್ಗೆ ಕೆಲವು ವಿಚಾರಗಳನ್ನು ಈ ಕೆಳಗಿನಂತೆ ಅವಲೋಕಿಸಬೇಕಾಗುತ್ತದೆ.
ಸಾಮಾನ್ಯವಾಗಿ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ರಿಸ್ಕ್ ಹೊಂದಿದ್ದರೂ, ದೀರ್ಘಾವಧಿಯಲ್ಲಿ ಹೆಚ್ಚು ಲಾಭ ನೀಡುವ ಸಾಮರ್ಥ್ಯ ಹೊಂದಿರುತ್ತವೆ. ಈ ಹಣ ಎರಡು ಪಟ್ಟು ಆಗುತ್ತದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆಂದರೆ, ಅವರು ಸಾಧ್ಯತೆಯ ಬಗ್ಗೆ ಮಾತನಾಡಿರಬಹುದು; ಆದರೆ ಎಷ್ಟು ವರ್ಷಗಳಲ್ಲಿ ಎಂಬುದನ್ನು ಸ್ಪಷ್ಟಪಡಿಸಿಲ್ಲ ಅಥವಾ ನಿಖರ ಠೇವಣಿ ಹೊರತುಪಡಿಸಿ ಅದನ್ನು ಹೇಳುವುದು ಯಾರಿಂದಲೂ ಅಸಾಧ್ಯ ಕೂಡಾ. ಉದಾಹರಣೆಗೆ, ₹2 ಲಕ್ಷ ಮೊತ್ತವು 5 ವರ್ಷಗಳಲ್ಲಿ ಎರಡು ಪಟ್ಟು ಆಗುತ್ತದೆ ಎಂದರೆ, ವರ್ಷಕ್ಕೆ ಸರಾಸರಿ ಲಾಭ ಸುಮಾರು ಶೇ 14.87ರಷ್ಟು ಹಣ ವೃದ್ಧಿ ಆಗಿರಬೇಕು ಎಂದರ್ಥ. ಈ ಮಟ್ಟದ ಲಾಭವು ಕೆಲವು ಉತ್ತಮ ಈಕ್ವಿಟಿ ಫಂಡ್‌ಗಳಲ್ಲಿ ಸಾಧ್ಯವಾದರೂ, ಅದು ಯಾವತ್ತೂ ಖಚಿತ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ. ಕಾರಣ, ಇದು ನಾವು ವಿಮರ್ಶಿಸುವ ಸಮಯದ ಮಾರುಕಟ್ಟೆಯನ್ನು ಅವಲಂಬಿಸಿದೆ. ಹೀಗಾಗಿ ನೀವು ಯಾವ ವರ್ಗದ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದನ್ನು ಆಧರಿಸಿ ಇದು ನಿರ್ಣಯವಾಗುತ್ತದೆ.
ಹೂಡಿಕೆ ಜಗತ್ತಿನ ಒಂದು ಮೂಲಭೂತ ನಿಯಮ ಎಂದರೆ—ರಿಸ್ಕ್ ಹೆಚ್ಚಿದಷ್ಟೂ ಲಾಭದ ಸಾಧ್ಯತೆ ಹೆಚ್ಚುವುದು. ಮಾರ್ಕೆಟ್ ಆಧಾರಿತ ಫಂಡ್‌ಗಳಲ್ಲಿ ಏರಿಳಿತಗಳು ಸಹಜ. ಆದ್ದರಿಂದ ದೀರ್ಘಾವಧಿ ಹೂಡಿಕೆ (5 ವರ್ಷದಿಂದ 10 ವರ್ಷ) ಮಾಡಿದರೆ ಮಾತ್ರ ಉತ್ತಮ ಲಾಭ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. ಆದರೆ ಹಣವನ್ನು ದೀರ್ಘಕಾಲ ನಿರ್ವಹಣೆ ಮಾಡಬೇಕು.
ಸ್ಥಿರ ಬಡ್ಡಿ ನೀಡುವ ಠೇವಣಿ ತರಹದ ಕಡಿಮೆ ರಿಸ್ಕ್ ಇರುವ ಹೂಡಿಕೆಗಳಲ್ಲಿ ಶೇಕಡ 6-7ರ ದರದಲ್ಲಿ ಹಣ ಎರಡು ಪಟ್ಟು ಆಗಲು ಸಾಮಾನ್ಯವಾಗಿ 10ರಿಂದ 12 ವರ್ಷಗಳಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಸುರಕ್ಷಿತವಾಗಿ ಅಥವಾ ಬೇಗನೆ ಎರಡು ಪಟ್ಟು ಹಣ ಆಗಲು ಸಾಕಷ್ಟು ಕಾಯಬೇಕಾಗುತ್ತದೆ ಮತ್ತು ಅನಿಶ್ಚಿತತೆ ಇದ್ದಾಗ ಮಾಹಿತಿ ಪರಾಮರ್ಶಿಸಬೇಕಾಗುತ್ತದೆ. ನಿಮ್ಮ ತಾಯಿಯ ಹೂಡಿಕೆ ದೀರ್ಘಾವಧಿಗೆ ಆಗಿರುವುದರಿಂದ, ಸರಿಯಾದ ಈಕ್ವಿಟಿ ಫಂಡ್ ಆಯ್ಕೆ ಮಾಡಿ ಹಾಗೂ ಒಂದೇ ಬಾರಿ ಹೂಡಿಕೆ ಮಾಡುವುದಕ್ಕಿಂತ ಹಲವು ಹಂತಗಳಲ್ಲಿ ಮುಂದಿನ ಹೂಡಿಕೆಗಳನ್ನು ಮಾಡುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.