ADVERTISEMENT

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 16 ಮೇ 2023, 19:52 IST
Last Updated 16 ಮೇ 2023, 19:52 IST
ಹಣ
ಹಣ    

ವಸಂತ ಭಟ್, ಕಾರ್ಕಳ

ಪ್ರಶ್ನೆ: ನಾನು ಹಾಗೂ ನನ್ನ ಪತ್ನಿ ಖಾಸಗಿ ಕಂಪನಿಯ ಉದ್ಯೋಗದಲ್ಲಿದ್ದು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಂದಷ್ಟು ಮೊತ್ತವನ್ನು ಬ್ಯಾಂಕ್ ಎಫ್.ಡಿ. ಮಾಡಿದ್ದೇವೆ. ಬ್ಯಾಂಕಿನಲ್ಲಿ ನನ್ನ ಹಾಗೂ ನನ್ನ ಪತ್ನಿಯ ಪ್ಯಾನ್ ಸಂಖ್ಯೆಯನ್ನು ಮಕ್ಕಳ ಖಾತೆಗೆ ಜೋಡಿಸಲಾಗಿದೆ. ಬ್ಯಾಂಕಿನವರು ಈ ಸಂಬಂಧ ತೆರಿಗೆಯನ್ನೂ ಕಡಿತಗೊಳಿಸುವವರಿದ್ದಾರೆ. ನಾವು ತೆರಿಗೆ ವಿವರ ಸಲ್ಲಿಸುವಾಗ ಮಕ್ಕಳ ಹೆಸರಲ್ಲಿರುವ ಬಡ್ಡಿ ಆದಾಯಕ್ಕೆ ತೆರಿಗೆ ಕಟ್ಟಬೇಕೇ? ಹೌದಾಗಿದ್ದರೆ ನಮ್ಮಿಬ್ಬರಲ್ಲಿ ಯಾರು ತೆರಿಗೆ ಕಟ್ಟಬೇಕು? ಈ ತೆರಿಗೆ ಉಳಿತಾಯ ಮಾಡುವ ಉಪಾಯಗಳಿವೆಯೇ?

ಉತ್ತರ: 18 ವರ್ಷ ತುಂಬಿರದ ಮಕ್ಕಳ ಹೆಸರಲ್ಲಿ ಬರುವ ಯಾವುದೇ ಆದಾಯಕ್ಕೆ ಮಕ್ಕಳ ತಂದೆ ಅಥವಾ ತಾಯಿ ಆದಾಯ ತೆರಿಗೆ ಪಾವತಿಸಬೇಕು. ಇಲ್ಲಿರುವ ಒಂದು ಪ್ರಶ್ನೆ, ತಂದೆ-ತಾಯಿ ಪೈಕಿ ಯಾರು ನಿಜವಾಗಿ ತೆರಿಗೆ ಪಾವತಿಸಬೇಕು ಎನ್ನುವುದು. ಸೆಕ್ಷನ್ 64(1ಎ) ಅಡಿಯಲ್ಲಿ ಪೋಷಕರ ಆದಾಯಕ್ಕೆ ಮಕ್ಕಳ ಆದಾಯ ಸೇರಿಸಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ಉಲ್ಲೇಖಿಸಲಾದ ನಿಯಮದಂತೆ, ತಂದೆ ಅಥವಾ ತಾಯಿ ಪೈಕಿ ಯಾರ ಆದಾಯ ಅಧಿಕವೋ ಅವರ ಆದಾಯದಲ್ಲಿಯೇ ಮಕ್ಕಳ ಹೆಸರಲ್ಲಿ ಬರುವ ಆದಾಯಕ್ಕೂ ತೆರಿಗೆ ಅನ್ವಯವಾಗುತ್ತದೆ. ಪ್ರತೀ ವರ್ಷ ಇದನ್ನು ನೋಡುವ ಅಗತ್ಯವಿಲ್ಲ. ಮೊದಲ ಬಾರಿಗೆ ಈ ನಿಯಮ ಪಾಲನೆ ಮಾಡಿದರೆ, ಮುಂದಿನ ವರ್ಷ ಅದೇ ರೀತಿ ಮುಂದುವರಿಸಬಹುದು. ಒಂದು ವೇಳೆ ತೆರಿಗೆ ನಷ್ಟವಾಗುವ ಸಂದೇಹದಲ್ಲಿ ಈ ಪ್ರಕ್ರಿಯೆಯನ್ನು ತಂದೆ ಅಥವಾ ತಾಯಿಯ ಹೆಸರಲ್ಲಿ ಬದಲಿಸಬೇಕಾದರೆ, ಸಂಬಂಧಪಟ್ಟ ತೆರಿಗೆ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಪೋಷಕರಿಂದ ಪಡೆದು ಮುಂದುವರಿಯಬೇಕು.

ADVERTISEMENT

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು ‘ವಯಸ್ಕನಲ್ಲ’ ಎಂದು ಪರಿಗಣಿಸಲಾಗುತ್ತದೆ. ಸ್ವತಂತ್ರ ಗಳಿಕೆಯ ಆದಾಯ (ಉದಾಹರಣೆಗೆ: ಕ್ರೀಡಾಪಟು, ಸಂಗೀತ, ನಾಟ್ಯ, ಕಲೆ ಇತ್ಯಾದಿ ವೈಯಕ್ತಿಕ ಸಾಧನೆಯಿಂದ ಸಿಗುವ ಸಂಪಾದನೆ) ಇಲ್ಲದ ಹೊರತು ಇವರು ಪ್ರತ್ಯೇಕ ತೆರಿಗೆ ವಿವರ ಸಲ್ಲಿಸುವ ಪ್ರಶ್ನೆ ಬರುವುದಿಲ್ಲ. ಹೀಗಾಗಿ 18 ವರ್ಷ ತುಂಬಿರದವರ ಹೆಸರಲ್ಲಿ ಬ್ಯಾಂಕ್ ಉಳಿತಾಯ ಖಾತೆ, ಸ್ಥಿರ ಠೇವಣಿ ಇತ್ಯಾದಿಯನ್ನು ತೆರೆದರೆ ಅದರಿಂದ ಬರುವ ಆದಾಯವು ಪೋಷಕರ ಹೆಸರಲ್ಲೇ ತೆರಿಗೆಗೊಳಪಡುತ್ತದೆ. ಅಂತಹ ಆದಾಯ ಗಳಿಕೆಯ ಬಹುಪಾಲು ಹೂಡಿಕೆಯೂ ಪೋಷಕರದ್ದೇ ಆಗಿರುತ್ತದೆ ಎಂಬುದು ಗಮನಾರ್ಹ. ಮಕ್ಕಳಿಗೆ 18 ವರ್ಷ ವಯಸ್ಸು ಆದೊಡನೆ, ಪ್ಯಾನ್ ಪಡೆದು ತಮ್ಮದೇ ಹೆಸರಲ್ಲಿ ವಿವರ ಸಲ್ಲಿಸಬೇಕು.

ಮಕ್ಕಳ ಆದಾಯವು ₹1500ಕ್ಕಿಂತ ಕಡಿಮೆಯಿದ್ದರೆ, ಅವರ ಆದಾಯವನ್ನು ಪೋಷಕರ ಆದಾಯಕ್ಕೆ ಸೇರ್ಪಡೆ ಮಾಡಲಾಗುವುದಿಲ್ಲ. ಇದು ವಿನಾಯಿತಿ ಮೊತ್ತವಾಗಿದೆ. ಈ ಮೊತ್ತ ಮೀರಿ ಆದಾಯ ಗಳಿಸುತ್ತಿದ್ದರೆ, ₹1500ಕ್ಕೆ ವಿನಾಯಿತಿಯನ್ನು ಸೀಮಿತಗೊಳಿಸಲಾಗುತ್ತದೆ. ಈ ಮಾಹಿತಿ ಗಮನದಲ್ಲಿಟ್ಟುಕೊಂಡು ನೀವು ವ್ಯವಹರಿಸಬಹುದು. ಸಾಮಾನ್ಯವಾಗಿ ಯಾವುದೇ ಬ್ಯಾಂಕ್, ಮಿತಿಗಿಂತ ಅಧಿಕ ಬಡ್ಡಿ ಪಾವತಿ ಮಾಡಿದಾಗ ಯಾರ ಪ್ಯಾನ್ ಸಂಖ್ಯೆಗೆ ಖಾತೆ ಜೋಡಣೆಯಾಗಿದೆಯೋ ಅವರ ಹೆಸರಲ್ಲಿ ತೆರಿಗೆ ಕಡಿತ ಮಾಡುತ್ತದೆ. ವಾಸ್ತವ ಹೀಗಿದ್ದರೂ, ಪ್ಯಾನ್ ಜೋಡಣೆಗೂ ಮುನ್ನ ಮೇಲಿನ ಮಾಹಿತಿ ಗಮನದಲ್ಲಿಡುವುದು ಸೂಕ್ತ.

ನಾರಾಯಣಸ್ವಾಮಿ, ಕತ್ರಿಗುಪ್ಪೆ, ಬೆಂಗಳೂರು

ಪ್ರಶ್ನೆ: ನಾನು 65 ವರ್ಷ ವಯಸ್ಸಿನ ನಿವೃತ್ತ ಉದ್ಯೋಗಿ. ನನ್ನ ಪತ್ನಿ ಗೃಹಿಣಿ, ವಯಸ್ಸು 59 ವರ್ಷ. ಮುಂದಿನ 3-4 ತಿಂಗಳಲ್ಲಿ ನಾವು ವಿದೇಶದಲ್ಲಿರುವ ನನ್ನ ಮಗನ ಮನೆಗೆ ಸುಮಾರು ಐದರಿಂದ ಆರು ತಿಂಗಳ ಮಟ್ಟಿಗೆ ತೆರಳಲಿದ್ದೇವೆ. ಇದರ ಎಲ್ಲ ವೆಚ್ಚವನ್ನು ನಾನು ಭರಿಸಲಿದ್ದೇನೆ. ಇತ್ತೀಚಿಗೆ ನಾನು ತಿಳಿದುಕೊಂಡಂತೆ, ವಿದೇಶಕ್ಕೆ ಪ್ರಯಾಣ ಹೋಗುವವರು ಆದಾಯ ತೆರಿಗೆ ವಿವರ ಕಡ್ಡಾಯವಾಗಿ ಸಲ್ಲಿಸಬೇಕು. ನಾನು ಪಿಂಚಣಿ ಹಾಗೂ ಬಡ್ಡಿ ಆದಾಯದಿಂದ ಜೀವನ ನಡೆಸುತ್ತಿದ್ದೇನೆ, ತೆರಿಗೆ ವಿವರ ಸಲ್ಲಿಸುತ್ತಿದ್ದೇನೆ. ಆದರೆ ನನ್ನ ಪತ್ನಿಗೆ ಯಾವುದೇ ಆದಾಯ ಇಲ್ಲ. ಹಾಗಿದ್ದರೂ ವಿದೇಶಕ್ಕೆ ಪ್ರಯಾಣ ಮಾಡಿದ ವರ್ಷದಲ್ಲಿ ವಿವರ ಸಲ್ಲಿಸಬೇಕೇ?

ಉತ್ತರ: ಆದಾಯ ತೆರಿಗೆಗೆ ಸಂಬಂಧಿಸಿದ ಸಾಮಾನ್ಯ ನಿಯಮದಂತೆ, ಯಾವುದೇ ವ್ಯಕ್ತಿಯ ಒಟ್ಟು ಆದಾಯವು ಗರಿಷ್ಠ ವಿನಾಯಿತಿಯ ಮಿತಿಗಿಂತ ಅಧಿಕವಾಗಿದ್ದಾಗ, ಸಹಜವಾಗಿ ತೆರಿಗೆ ವಿವರ ಸಲ್ಲಿಸಬೇಕಾಗಿರುತ್ತದೆ. ಇದಲ್ಲದೆ ಕೆಲವೊಂದು ಬಾರಿ ಆದಾಯ ತೆರಿಗೆ ನಿಯಮದಂತೆ, ಕೇವಲ ಆದಾಯವನ್ನು ಮಾತ್ರ ಮಾನದಂಡವಾಗಿಡದೆ, ವ್ಯಕ್ತಿಯೊಬ್ಬ ಮಾಡುವ ವಾರ್ಷಿಕ ಆರ್ಥಿಕ ವ್ಯವಹಾರಗಳನ್ನು ಅವಲಂಬಿಸಿಯೂ ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಗೆ ಆದಾಯ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ.

ಸೆಕ್ಷನ್ 139(1)ರ ಕೆಲವು ನಿಬಂಧನೆಗಳ ಪ್ರಕಾರ, ವಿದೇಶ ಪ್ರಯಾಣಕ್ಕೆ ಸಂಬಂಧಿಸಿ ಯಾವುದೇ ವ್ಯಕ್ತಿ ವಾರ್ಷಿಕವಾಗಿ ₹2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ತನಗೆ ಅಥವಾ ಇತರಿಗಾಗಿ ವೆಚ್ಚ ಮಾಡಿದಾಗ ತೆರಿಗೆ ವಿವರ ಸಲ್ಲಿಸುವುದು ಕಡ್ಡಾಯ. ಇಲ್ಲಿ ಯಾವ ವ್ಯಕ್ತಿ ಖರ್ಚು ವೆಚ್ಚ ಭರಿಸುತ್ತಾನೋ ಆ ವ್ಯಕ್ತಿಯಷ್ಟೇ ತೆರಿಗೆ ವಿವರ ಸಲ್ಲಿಸಲು ಬಾಧ್ಯಸ್ಥ.

ಇನ್ನು ನಿಮ್ಮ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಯಲ್ಲಿ ತಿಳಿಸಿರುವಂತೆ, ನೀವು ಹಾಗೂ ನಿಮ್ಮ ಪತ್ನಿ ವಿದೇಶಕ್ಕೆ ಹೋಗುವ ಸಂಬಂಧ ಇರುವ ಎಲ್ಲಾ ಖರ್ಚು ವೆಚ್ಚಗಳನ್ನು ನಿಮ್ಮ ಖಾತೆಯಿಂದಲೇ ಭರಿಸಲಿದ್ದೀರಿ. ನಿಮ್ಮ ವಿದೇಶ ಪ್ರಯಾಣದ ಹೊರತಾಗಿಯೂ ನೀವು ಈಗಾಗಲೇ ಆದಾಯ ತೆರಿಗೆಯ ವಿವರ ಸಲ್ಲಿಸುತ್ತಿದ್ದೀರಿ. ಹೀಗಾಗಿ ನಿಮ್ಮ ಪತ್ನಿ ಸ್ವಂತ ಖರ್ಚು ಮಾಡುವ ಸಂದರ್ಭ ಇಲ್ಲದಿದ್ದಾಗ ಅವರು ವಿವರ ಸಲ್ಲಿಸುವ ಅಗತ್ಯವಿಲ್ಲ. ಮೇಲಿನ ನಿಯಮದಂತೆ ವಿದೇಶ ಪ್ರಯಾಣ ಮಾಡಿದ ಮಾತ್ರಕ್ಕೆ ತೆರಿಗೆ ವಿವರ ಸಲ್ಲಿಸುವುದು ಕಡ್ಡಾಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.