ADVERTISEMENT

ಪ್ರಶ್ನೋತ್ತರ: ಆರ್‌ಬಿಐ ರಿಟೇಲ್‌, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಬಹುದೆ?

ಪ್ರಮೋದ ಶ್ರೀಕಾಂತ ದೈತೋಟ
Published 8 ಆಗಸ್ಟ್ 2023, 20:08 IST
Last Updated 8 ಆಗಸ್ಟ್ 2023, 20:08 IST
ಮ್ಯೂಚುವಲ್ ಫಂಡ್ ಹೂಡಿಕೆ
ಮ್ಯೂಚುವಲ್ ಫಂಡ್ ಹೂಡಿಕೆ    

ಶಿವರಾಯಪ್ಪ ಗುರುವಣ್ಣನವರ್, ಊರು ತಿಳಿಸಿಲ್ಲ

ಪ್ರಶ್ನೆ: ನಾನು ಮ್ಯೂಚುವಲ್ ಫಂಡ್ ಹೂಡಿಕೆದಾರ. ಯಾವ ಮ್ಯೂಚುವಲ್ ಫಂಡ್ ಹೂಡಿಕೆಯು ತೆರಿಗೆ ವಿನಾಯಿತಿ ಹೊಂದಿದೆ? ಯಾವುದು ಹೂಡಿಕೆಗೆ ಉತ್ತಮ?

ಉತ್ತರ: ಮ್ಯೂಚುವಲ್ ಫಂಡ್ ಹೂಡಿಕೆಯು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಗೆ ಪ್ರಮುಖವಾದ ಹಾಗೂ ಪರಿಣಾಮಕಾರಿ ವಿಧಾನ. ಮಾರುಕಟ್ಟೆಯು ವಿವಿಧ ಬಗೆಯ ಮ್ಯೂಚುವಲ್ ಫಂಡ್‌ಗಳಿಂದ ತುಂಬಿರುವಾಗ, ಯಾವ ಮ್ಯೂಚುವಲ್ ಫಂಡ್ ಉತ್ತಮ ಎಂಬ ಪ್ರಶ್ನೆಗೆ ನಿರ್ಣಾಯಕ ಉತ್ತರ ಹೇಳುವುದು ಸವಾಲಿನ ಕೆಲಸ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಫಂಡ್ ಹೌಸ್‌ಗಳ ವಿವಿಧ ವರ್ಗಗಳ ಮ್ಯೂಚುವಲ್ ಫಂಡ್ ಯೋಜನೆಗಳನ್ನು ನೋಡುವಾಗ ಯಾವುದೇ ಹೂಡಿಕೆದಾರ ಗೊಂದಲಕ್ಕೆ ಒಳಗಾಗಬಹುದಾದ ಸಾಧ್ಯತೆಗಳೇ ಹೆಚ್ಚು. ಇಂತಹ ಸನ್ನಿವೇಶದಲ್ಲಿ ಹೂಡಿಕೆ ಮಾಡಲು ಉತ್ತಮ ಮ್ಯೂಚುವಲ್ ಫಂಡ್‌ ಗುರುತಿಸಲು ಕೆಲವು ಸರಳ ವಿಧಾನ ಅಳವಡಿಸಿಕೊಳ್ಳಬಹುದು.

ADVERTISEMENT

1. ನಿಮ್ಮ ಗುರಿಗಳನ್ನು ಗುರುತಿಸಿ: ನೀವು ಇರಿಸಬೇಕಾದ ಮೊದಲ ಹೆಜ್ಜೆ, ನಿಮ್ಮ ಹಣಕಾಸಿನ ಗುರಿಗಳನ್ನು ಪಟ್ಟಿ ಮಾಡುವುದು. ನಂತರ ನಿಮ್ಮ ಗುರಿಗಳನ್ನು  ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಗುರಿಗಳನ್ನಾಗಿ ವರ್ಗೀಕರಿಸುವುದು. ಇದಕ್ಕಾಗಿ ಮುಂದಿನ ಹಣಕಾಸು ಅಗತ್ಯ ಹಾಗೂ ಹಣದುಬ್ಬರ ಪ್ರಮಾಣವನ್ನು ಕೂಡ ಪರಿಗಣಿಸಬೇಕು.

2. ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ ಗುರುತಿಸಿ: ವಿಭಿನ್ನ ಮ್ಯೂಚುವಲ್ ಫಂಡ್‌ಗಳು ವಿಭಿನ್ನ ಮಟ್ಟದ ರಿಸ್ಕ್‌ ಹೊಂದಿರುತ್ತವೆ. ಆದ್ದರಿಂದ, ನೀವು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳುವ (ಅಂದರೆ, ಹೂಡಿಕೆಯ ಹಣವು ನಷ್ಟವಾದರೂ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ) ಮನಸ್ಸು ಮಾಡಿದರೆ ನೀವು ಅದೇ ವರ್ಗದ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಆಯ್ಕೆ ಮಾಡಬಹುದು. ಹೀಗಾಗಿ, ನಿಮ್ಮ ಪೋರ್ಟ್‌ಫೋಲಿಯೊ ನೀವು ನಿರೀಕ್ಷಿಸುವ ರಿಸ್ಕ್-ರಿಟರ್ನ್‌ಗೆ ಅನುಗುಣವಾಗಿ ಹಣವನ್ನು ಹಂಚಿಕೆ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.

3. ನಿಮ್ಮ ಆಸ್ತಿ ಹಂಚಿಕೆಯನ್ನು ಸರಿಯಾಗಿ ಪಡೆದುಕೊಳ್ಳಿ : ಅಲ್ಪಾವಧಿಯ, ಮಧ್ಯಮ ಮತ್ತು ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ತಲುಪಲು ಯಾವ ರೀತಿಯ ಮ್ಯೂಚುಯಲ್ ಫಂಡ್‌ಗಳಿಗೆ ನೀವು ಎಷ್ಟು ಹಣವನ್ನು ನಿಯೋಜಿಸಬಹುದು ಎಂಬುದನ್ನು ನಿರ್ಣಯಿಸಿ. ಉದಾಹರಣೆಗೆ, ಡೆಟ್‌ ಫಂಡ್‌ಗಳು ಮತ್ತು ಆರ್ಬಿಟ್ರೇಜ್ ಫಂಡ್‌ಗಳು ಕಡಿಮೆ ಅಪಾಯದವು. ಇವು ಅಲ್ಪಾವಧಿಯ ಹಣಕಾಸಿನ ಗುರಿಗಳಿಗೆ ಸೂಕ್ತ. ತುರ್ತು ಉದ್ದೇಶಕ್ಕಾಗಿ ಲಿಕ್ವಿಡ್ ಫಂಡ್‌ಗಳಲ್ಲಿಯೂ ಹಣ ತೊಡಗಿಸಬಹುದು. ಅಲ್ಟ್ರಾ-ಶಾರ್ಟ್ ಅವಧಿಯ ನಿಧಿಗಳು ಮೂರು ತಿಂಗಳಿಂದ ಒಂದು ವರ್ಷದ ಅವಧಿಗೆ ಸೂಕ್ತ. ದೀರ್ಘಾವಧಿಯ ಡೆಟ್‌ ಫಂಡ್‌ಗಳು ಮತ್ತು ಆರ್ಬಿಟ್ರೇಜ್ ಫಂಡ್‌ಗಳು ಅಲ್ಪಾವಧಿಯ ಗುರಿಗಳಿಗೆ ಒಂದರಿಂದ ಮೂರು ವರ್ಷಗಳವರೆಗಿನ ಹೂಡಿಕೆಗೆ ಸೂಕ್ತ.

ನೀವು ಮಧ್ಯಮ ಮಟ್ಟದ ಆರ್ಥಿಕ ರಿಸ್ಕ್‌ ತೆಗೆದುಕೊಳ್ಳಲು ತಯಾರಾಗಿದ್ದರೆ, ಬ್ಯಾಲೆನ್ಸ್ಡ್‌ ಫಂಡ್‌ಗಳು ಉತ್ತಮ. ಇವು ಮಧ್ಯಮ ಅವಧಿಯ ಗುರಿಗಳಿಗೆ ಸೂಕ್ತ. ಹೈಬ್ರಿಡ್ ಫಂಡ್‌ಗಳು ನಿಮ್ಮ ರಿಸ್ಕ್‌ ಮಟ್ಟವನ್ನು ಕಡಿಮೆ ಮಾಡುವ ಶಕ್ತಿ ಹೊಂದಿವೆ. ಇನ್ನು ಈಕ್ವಿಟಿ ಆಧಾರಿತ ಫಂಡ್‌ಗಳು ನಿವೃತ್ತಿ ಯೋಜನೆಗಳಂತಹ ದೀರ್ಘಾವಧಿಯ ಗುರಿಗಳಿಗೆ ಸೂಕ್ತ. ಈ ಹೂಡಿಕೆ ಇತರ ಯೋಜನೆಗಳಿಗಿಂತ ಹೆಚ್ಚಿನ ರಿಸ್ಕ್‌ ಹೊಂದಿರುತ್ತವೆ.

ಫಂಡ್ ನಿರ್ವಹಣೆ ಮಾಡುವವರು ಹಿ೦ದೆ ನಿರ್ವಹಿಸಿದ ಮತ್ತು ಈಗ ನಿರ್ವಹಿಸುತ್ತಿರುವ ಯೋಜನೆಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿ ಅವರ ಹೂಡಿಕೆಯ ಗುಣಮಟ್ಟವನ್ನು ನಿರ್ಧರಿಸಬಹುದು. ಮಾರುಕಟ್ಟೆ ಕೆಳಹಂತದಲ್ಲಿದ್ದಾಗ ಅಥವಾ ಏರಿಕೆ ಹಂತದಲ್ಲಿದ್ದಾಗ, ಇತರ ಫಂಡ್‌ಗಳಿಗಿಂತ ಉತ್ತಮವಾಗಿ ಲಾಭ ನೀಡಿದ್ದರೆ ನಮ್ಮ ಆಯ್ಕೆ ಅಂತಹ ಫಂಡ್‌ ಆಗಿರಬೇಕು.

ಅಂತಿಮವಾಗಿ, ನೀವು ಯಾವಾಗಲೂ ವೃತ್ತಿಪರ ಹಣಕಾಸು ಸಲಹೆಗಾರರಿಂದ ವೈಯಕ್ತಿಕ ಸಲಹೆ ಪಡೆದುಕೊಳ್ಳಿ. ಹಾಗೂ ಇಂತಹ ಹೂಡಿಕೆಗಳು ವಿವಿಧ ರೀತಿಯ ಮಾರುಕಟ್ಟೆ ಅಪಾಯ ಹೊಂದಿರುವುದರಿಂದ ಆಯಾ ಹೂಡಿಕೆಯ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡುವ ದೀರ್ಘಾವಧಿ ಹೂಡಿಕೆಗೆ (12 ತಿಂಗಳ ಮೇಲ್ಪಟ್ಟು ಇರುವ ಹೂಡಿಕೆ) ಬರುವ ಲಾಭ ಒಂದು ಹಣಕಾಸು ವರ್ಷದಲ್ಲಿ ₹1 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಂತಹ ಮೊತ್ತಕ್ಕೆ ಬಂಡವಾಳ ಲಾಭ ತೆರಿಗೆ ಇರುವುದಿಲ್ಲ. ಇದಕ್ಕೂ ಮೇಲ್ಪಟ್ಟ ಲಾಭಕ್ಕೆ ಶೇ 10ರಷ್ಟು ತೆರಿಗೆ ಇದೆ. ಇದೇ ವರ್ಗದ ಅಲ್ಪಾವಧಿ ಹೂಡಿಕೆಗೆ ಶೇ 15ರಷ್ಟು ನಿಶ್ಚಿತ ತೆರಿಗೆ ಇದೆ. ಡೆಟ್‌ ಫಂಡ್‌ಗಳು ವೈಯಕ್ತಿಕ ತೆರಿಗೆ ದರಕ್ಕೆ ಅನುಗುಣವಾಗಿ ತೆರಿಗೆಗೆ ಒಳಪಡುತ್ತವೆ.

ಡಿ.ಎಂ. ಗಣೇಶ್, ಊರು ತಿಳಿಸಿಲ್ಲ

ಪ್ರಶ್ನೆ: ಆರ್‌ಬಿಐ ರಿಟೇಲ್‌ನಲ್ಲಿ ಹೂಡಿಕೆ ಮಾಡಲು ಇರುವ ನಿಯಮಗಳು ಮತ್ತು ಷರತ್ತುಗಳು ಏನು? ಇಲ್ಲಿರುವ ಲಾಭದ ಬಗ್ಗೆ, ತೆರಿಗೆಯ ಬಗ್ಗೆ ತಿಳಿಸಿ

ಪ್ರಶ್ನೆ: ಆರ್‌ಬಿಐ ರಿಟೇಲ್ ಹೂಡಿಕೆ ಯೋಜನೆ ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಬಾಂಡ್‌ಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಇಂತಹ ಹೂಡಿಕೆಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಭದ್ರತೆ ಇರುವುದರಿಂದ ಹೂಡಿಕೆಯ ಅಸಲು ಮರುಪಾವತಿ ಅಥವಾ ನಿಗದಿಪಡಿಸಿದ ಬಡ್ಡಿ ಪಾವತಿಯಲ್ಲಿ ಯಾವುದೇ ಸಂದೇಹ ಬೇಡ. ಇದು ಆರ್ಥಿಕ ಅಪಾಯದಿಂದ ದೂರವಿರಲು ಬಯಸುವ ಯಾವುದೇ ಹೂಡಿಕೆದಾರರಿಗೆ ಸೂಕ್ತ. ಇದರಲ್ಲಿ ಹೂಡಿಕೆ ಅವಧಿ ಭಿನ್ನವಾಗಿರುತ್ತದೆ. ಇದು ದೀರ್ಘಾವಧಿ ಹೂಡಿಕೆ. ಅವಧಿ ಪೂರ್ಣಗೊಳ್ಳುವವರೆಗೆ ಹೂಡಿಕೆಯನ್ನು ಉಳಿಸಿಕೊಂಡರೆ ನಿಗದಿತ ಅವಧಿಗೆ ಬಡ್ಡಿ ಸಿಗುತ್ತಿರುತ್ತದೆ. ಲಿಸ್ಟ್‌ ಆಗಿರುವ ಬಾಂಡ್‌ಗಳನ್ನು ನಮ್ಮ ಅವಕಾಶಕ್ಕೆ ತಕ್ಕಂತೆ ವಿಕ್ರಯಿಸಬಹುದು.

ಆರ್‌ಬಿಐ ರಿಟೇಲ್ ಮೂಲಕ ಹೂಡಿಕೆ ಮಾಡುವುದಾದರೆ, ಕನಿಷ್ಠ ಹೂಡಿಕೆ ಮೊತ್ತ ₹10 ಸಾವಿರ. ಈ ಪ್ರಕ್ರಿಯೆಯನ್ನು ಹೂಡಿಕೆದಾರ ಆರ್‌ಬಿಐ ರಿಟೇಲ್‌ ಡೈರೆಕ್ಟ್‌ ವೆಬ್‌ಸೈಟ್‌ ಮೂಲಕ ಮಾಡಬಹುದು. ಇದಕ್ಕಾಗಿ ಉಳಿತಾಯ ಖಾತೆ ಹೊಂದಿರಬೇಕು. ಆದಾಯ ತೆರಿಗೆ ಇಲಾಖೆ ನೀಡಿದ ಪ್ಯಾನ್, ಕೆವೈಸಿ ದಾಖಲೆ, ಇಮೇಲ್ ವಿಳಾಸ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಇದಕ್ಕೆ ಅಗತ್ಯವಿರುವ ದಾಖಲೆಗಳು. ಇಂತಹ ಅರ್ಹತಾ ಮಾನದಂಡಗಳನ್ನು ಪೂರೈಸುವ ಸಣ್ಣ ಹೂಡಿಕೆದಾರ ಖಾತೆ ತೆರೆಯಬಹುದು. ಈ ಯೋಜನೆಯ ಅಡಿಯಲ್ಲಿ, ವ್ಯಕ್ತಿಯು ‘ಎನ್‌ಡಿಎಸ್‌ ಒಎಂ’ ಎಂಬ ಆರ್‌ಬಿಐ ಪ್ಲಾಟ್‌ಫಾರಂ ವ್ಯವಸ್ಥೆಯ ಮೂಲಕ ಮಾರುಕಟ್ಟೆಯಲ್ಲಿ ನೇರ ಖರೀದಿ-ಮಾರಾಟದಲ್ಲಿ ಪಾಲ್ಗೊಳ್ಳಬಹುದು. ಆರ್‌ಬಿಐನಲ್ಲಿ ‘ರಿಟೇಲ್ ಡೈರೆಕ್ಟ್ ಗಿಲ್ಟ್ ಖಾತೆ’ ತೆರೆಯಲು ಮತ್ತು ನಿರ್ವಹಿಸಲು ಯಾವುದೇ ಶುಲ್ಕ ಇಲ್ಲ. ಇದಕ್ಕೆ ಬರುವ ಬಡ್ಡಿ ಇತರೆ ಆದಾಯವಾಗಿ ತೆರಿಗೆಗೊಳಪಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.