ADVERTISEMENT

ಪ್ರಶ್ನೋತ್ತರ

ಪುರವಣಿ

ಯು.ಪಿ.ಪುರಾಣಿಕ್
Published 21 ಮೇ 2019, 19:43 IST
Last Updated 21 ಮೇ 2019, 19:43 IST
   

ನನ್ನ ವಾರ್ಷಿಕ ಪಿಂಚಣಿ ಮೊತ್ತ ₹ 7,15,932. ಎಸ್.ಬಿ.ಐ. ನಲ್ಲಿ ₹ 25 ಲಕ್ಷ ಒಂದು ವರ್ಷದ ಠೇವಣಿ, ಎಸ್.ಬಿ.ಐ.ನಲ್ಲಿ ₹ 1.50 ಲಕ್ಷ ತೆರಿಗೆಗೋಸ್ಕರ ಮಾಡಿದ 5 ವರ್ಷಗಳ ಠೇವಣಿ. ನನಗೆ ತೆರಿಗೆ ಲೆಕ್ಕಾಚಾರದ ಬಗ್ಗೆ ತಿಳಿಸಿ. ನಾನು ಹಿರಿಯ ನಾಗರಿಕ.

ಹೆಸರು ಊರು, ಬೇಡ

ಉತ್ತರ: ನೀವು ಪಿಂಚಣಿದಾರರಾಗಿದ್ದು, 1–4–2018 – 31–3–2019ರ ವರೆಗೆ ನಿಗದಿಪಡಿಸಿದ ಮಿತಿ ₹ 3 ಲಕ್ಷ, ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40,000, ಬ್ಯಾಂಕ್ ಬಡ್ಡಿಯಲ್ಲಿ ₹ 50,000 ಹೀಗೆ ಮೂರು ಆದಾಯವನ್ನು ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬೇಕು. 31–7–2019 ರೊಳಗೆ ರಿಟರ್ನ್ ಸಲ್ಲಿಸಬೇಕು. ತೆರಿಗೆ ದರ ₹ 3 ಲಕ್ಷದಿಂದ ₹ 5 ಲಕ್ಷಗಳ ತನಕ ಶೇ 5, ₹ 5 ಲಕ್ಷದಿಂದ ₹ 10 ಲಕ್ಷಗಳ ತನಕ ಶೇ 20, ಎಜ್ಯುಕೇಷನ್‌ ಸೆಸ್ ಮೇಲೆ ಶೇ 4. (ತಾ. 1–4–2019 – 31–3–2020 ಅವಧಿಗೆ ಆದಾಯದ ಗರಿಷ್ಠ ಮಿತಿ ₹ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40,000 ದಿಂದ ₹ 50,000ಕ್ಕೆ ಹೆಚ್ಚಿಸಲಾಗಿದೆ).

ADVERTISEMENT

ನಾನು ನನ್ನ ಪತ್ನಿ ಇಬ್ಬರೂ ಅರೆ ಸರ್ಕಾರಿ ನೌಕರರು. ಎಲ್ಲಾ ಖರ್ಚು ಕಳೆದು ₹ 30,000 ತಿಂಗಳಿಗೆ ಉಳಿಸಬಹುದು. ನಮಗೆ ಒಂದು ವರ್ಷದ ಹೆಣ್ಣು ಮಗು ಇದೆ. ನನ್ನ ಉಳಿತಾಯ ವಿವರ ಹೀಗಿದೆ– ಕೆ.ಜಿ.ಐ.ಡಿ. ₹ 6,000, ಎಲ್.ಐ.ಸಿ. ₹ 2,000, ಎನ್.ಪಿ.ಎಸ್. ₹ 1,000, ಆರ್‌.ಡಿ. ₹ 1,000. ಜಮಾ₹ 10,000. ಹೆಂಡತಿಯ ಉಳಿತಾಯ: ಎಲ್‌.ಐ.ಸಿ.₹ 1,000, ಪಿ.ಎಲ್.ಐ.₹ 2,500, ಎನ್.ಪಿ.ಎಸ್. ₹ 2,000. ಜಮಾ: ₹ 5,500. ನಾವು ಮ್ಯೂಚುವಲ್‌ ಫಂಡ್‌ನಲ್ಲಿ ತೊಡಗಿಸಲು, ಮಗಳ ಭವಿಷ್ಯ, ನಿವೇಶನಕೊಳ್ಳಲು ಸಲಹೆ ಮಾಡಿರಿ.

ಹೆಸರು: ಸತ್ಯ, ದಾವಣಗೆರೆ

ಉತ್ತರ: ಹೆಣ್ಣು ಮಗುವಿನ ಸಲುವಾಗಿ ಕನಿಷ್ಠ ₹ 5,000ಗಳನ್ನು ಪ್ರತಿ ತಿಂಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿರಿ. ಇದು ಸೆಕ್ಷನ್ 80c ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ನೆರವಾಗಬಹುದು. ಸಿಪ್ (sip) ಇದು ಆರ್.ಡಿ. ಮಾದರಿಯಲ್ಲಿದ್ದು ₹ 2,000 ತಿಂಗಳಿಗೆ ತುಂಬಿರಿ. ನಿಮಗಿರುವ ವಿಮೆ ಹೆಚ್ಚಿಸುವ ಅವಶ್ಯವಿಲ್ಲ. ಮಗಳ ವಿದ್ಯಾಭ್ಯಾಸ ಹಾಗೂ ಮದುವೆಯ ಸಲುವಾಗಿ, ಸುಕನ್ಯಾ ಯೋಜನೆ ಹೊರತುಪಡಿಸಿ, ₹ 5,000 ಆರ್.ಡಿ., 10 ವರ್ಷಗಳ ಅವಧಿಗೆ ಮಾಡಿರಿ. ನಿವೇಶನ ಕೊಳ್ಳಲು ಹೆಚ್ಚಿನ ಹಣ ಬೇಕಾಗುತ್ತದೆ. ನಿವೇಶನದ ಬೆಲೆ ದಿನೇ ದಿನೇ ಏರುತ್ತದೆ. ಇಬ್ಬರೂ ಸೇರಿ ಸಂಬಳ ಪಡೆಯುವ ಬ್ಯಾಂಕಿನಲ್ಲಿ ನಿವೇಶನ ಕೊಳ್ಳಲು ವೈಯಕ್ತಿಕ ಸಾಲ ಪಡೆಯಿರಿ.

ಸರ್ಕಾರಿ ನಿವೃತ್ತ ಅಧಿಕಾರಿ. ವಯಸ್ಸು 81. 2018–19 ರಲ್ಲಿ₹ 3.85 ಲಕ್ಷ ಪಿಂಚಣಿ ಬಂದಿದೆ. ಠೇವಣಿ ಬಡ್ಡಿ₹ 46,000 ಬಂದಿದೆ. ನನ್ನ ಪ್ರಶ್ನೆ 1. ಆದಾಯ ತೆರಿಗೆ ಎಲ್ಲಿಯವರೆಗೆ ಇರುವುದಿಲ್ಲ. 2. ಸೂಪರ್ ಸೀನಿಯರ್ ಆದವರಿಗೆ ಆದಾಯ ತೆರಿಗೆ ಇದೆಯೇ 3. ತೆರಿಗೆ ಎಲ್ಲಿಂದ ಎಷ್ಟರ ತನಕ ಎಷ್ಟು ಇರುತ್ತದೆ 4. ಮೆಡಿಕಲ್ ವೆಚ್ಚ ಎಷ್ಟು ಕಳೆಯಬಹುದು. 5. ಠೇವಣಿ ಮೇಲಿನ ಬಡ್ಡಿಗೆ ರಿಯಾಯ್ತಿ ಇದೆಯೇ?

ಆರ್.ಪಿ. ಜೋಶಿ ಧಾರವಾಡ

ಉತ್ತರ: ತಾ. 1–4–2018 ರಿಂದ 31–3–2019ರ ಅವಧಿಗೆ, 80 ವರ್ಷ ದಾಟಿದವರಿಗೆ₹ 5 ಲಕ್ಷಗಳ ತನಕದ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ. (1–4–2019 ರಿಂದ 31–3–2020) ಅವಧಿಗೆ ಎಲ್ಲಾ ವರ್ಗದವರಿಗೂ₹ 5 ಲಕ್ಷ ಆದಾಯದ ವರೆಗೆ ತೆರಿಗೆ ವಿನಾಯಿತಿ ಇದೆ) ಸೂಪರ್ ಸೀನಿಯರ್ ಆದರೂ, ₹ 5 ಲಕ್ಷ ಆದಾಯದ ಮಿತಿ ದಾಟಿದಲ್ಲಿ₹ 10 ಲಕ್ಷಗಳ ತನಕ ಶೇ 20 ಹಾಗೂ₹ 10 ಲಕ್ಷ ದಾಟಿದಲ್ಲಿ ಶೇ 30 ಆದಾಯ ತೆರಿಗೆ ಕೊಡಬೇಕಾಗುತ್ತದೆ. ಹೀಗೆ ಬಂದ ತೆರಿಗೆಯ ಮೇಲೆ ಶೇ 4 ಎಜುಕೇಷನ್ ಸೆಸ್ ಕೊಡಬೇಕಾಗುತ್ತದೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡಲ್ಲಿ ಗರಿಷ್ಠ₹ 5,000 ತನಕ ರಿಯಾಯ್ತಿ ಪಡೆಯಬಹುದು. ಠೇವಣಿ ಮೇಲಿನ ಬಡ್ಡಿಗೆ ಹಿರಿಯ ನಾಗರಿಕರಾದಲ್ಲಿ ಮಾತ್ರ ಸೆಕ್ಷನ್ 80TTB ಆಧಾರದ ಮೇಲೆ ಗರಿಷ್ಠ₹ 50,000 ವಿನಾಯ್ತಿ ಇದೆ (ಹಿರಿಯ ನಾಗರಿಕರಲ್ಲದವರಿಗೆ ಈ ಸೌಲಭ್ಯ ಇಲ್ಲ) ಸಂಬಳ ಹಾಗೂ ಪಿಂಚಣಿದಾರರು ಸ್ಟ್ಯಾಂಡರ್ಡ್ ಡಿಡಕ್ಷನ್₹ 40,000 (1–4–2019 ರಿಂದ 31–7–2019) ರೊಳಗೆ ರಿಟರ್ನ್ ಸಲ್ಲಿಸುವ ಅವಶ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.