ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 19 ಫೆಬ್ರುವರಿ 2019, 19:30 IST
Last Updated 19 ಫೆಬ್ರುವರಿ 2019, 19:30 IST
ಯು. ಪಿ. ಪುರಾಣಿಕ್‌
ಯು. ಪಿ. ಪುರಾಣಿಕ್‌   

*ನಾನು 20 ಗುಂಟೆ ಕೃಷಿ ಜಮೀನು ಮಾರಾಟ ಮಾಡಿ ₹ 2.47 ಲಕ್ಷ ಪಡೆದಿದ್ದೇನೆ. ನಾನು ಈ ಹಣವನ್ನು ಮನೆ ದುರಸ್ತಿ ಹಾಗೂ ಮಗಳ ಲಗ್ನಕ್ಕೆ ಖರ್ಚು ಮಾಡಿದ್ದೇನೆ. ನಾನು I.T. Return ತುಂಬಬೇಕೆ ಹಾಗೂ ತೆರಿಗೆ ಕೊಡಬೇಕೆ ತಿಳಿಸಿರಿ.

–ಶಾಂತಾ.ಎಸ್., ಬೆಂಗಳೂರು

ಉತ್ತರ: ಆದಾಯ ತೆರಿಗೆ ಹಾಗೂ ಕ್ಯಾಪಿಟಲ್ ಗೇನ್ ಟ್ಯಾಕ್ಸ್, ಕೃಷಿ ಜಮೀನು ಮಾರಾಟ ಮಾಡಿ ಬರುವ ಮೊತ್ತಕ್ಕೆ ಬರುವುದಿಲ್ಲ. ಈ ಹಣ ನೀವು ಹೇಗೆ ಬೇಕಾದರೂ ವಿನಿಯೋಗಿಸಬಹುದು. ನೀವು ತೆರಿಗೆ ಕೊಡುವುದಾಗಲಿ ಅಥವಾ I.T. Return ತುಂಬುವುದಾಗಲೀ ಅವಶ್ಯವಿಲ್ಲ.

ADVERTISEMENT

*ನಾನು ಅವಿಭಕ್ತ ಕುಟುಂಬದಲ್ಲಿದ್ದು ನಮಗೆ ಹಿರಿಯರಿಂದ ಬಂದ ಸ್ವಲ್ಪ ಜಮೀನಿದೆ. ನಾನು HUF ಖಾತೆ ಪ್ರಾರಂಭಿಸಲು ಏನು ಮಾಡಬೇಕು. HUFಗೆ ಆದಾಯ ಮಿತಿ ಎಷ್ಟು,I.T. Return ತುಂಬಬೇಕೇ ತಿಳಿಸಿರಿ.

–ವಸಂತಕುಮಾರ್, ಬೋಹೋರಾ, ಹಾಸನ

ಉತ್ತರ: ನೀವು HUF (Hindu Undivided Family) ವಿಚಾರದಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆಯಬಹುದು. ಮನೆಯ ಯಜಮಾನ ‘ಕರ್ತ’ನಾಗಿ, ಕುಟುಂಬದ ಪ್ರಾಪ್ತ ವಯಸ್ಕರ ಹೆಸರು, ವಿವರದೊಂದಿಗೆ ಬ್ಯಾಂಕಿನಲ್ಲಿ ಖಾತೆ ತೆರೆಯಬಹುದು. ಕರ್ತನಿಗೆ ಉಳಿದ ಸದಸ್ಯರು ಖಾತೆಯಲ್ಲಿ ಜಮಾ ಖರ್ಚು ಮಾಡಲು ಬರಹದಲ್ಲಿ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ. ವೈಯಕ್ತಿಕ ರೀತಿಯಲ್ಲಿಯೇ ಖಾತೆ ತೆರೆದು ವ್ಯವಹರಿಸಬಹುದು.HUFಗೆ ಆದಾಯ ಮಿತಿ, ವೈಯಕ್ತಿಕ ಮಿತಿಯಷ್ಟೇ ಇರುತ್ತದೆ. ಉದಾ: ಈ ಆರ್ಥಿಕ ವರ್ಷದಲ್ಲಿ ಆದಾಯದ ಮಿತಿ ₹ 2.50 ಲಕ್ಷ ಇದ್ದು, ಅದೇ ಮೊತ್ತ (₹ 2.50)HUF ಖಾತೆಗೂ ಅನ್ವಯಿಸುತ್ತದೆ. ಜಮೀನಿನ ಆದಾಯಕ್ಕೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ಐ.ಟಿ ರಿಟರ್ನ್‌ ಅನ್ನು ಆದಾಯದ ಮಿತಿ ದಾಟುವ ತನಕ ತುಂಬುವ ಅವಶ್ಯವಿಲ್ಲ.

* ನಾನು ಸರ್ಕಾರಿ ನೌಕರಳು. 80C ಕಡಿತ ₹ 1.50 ಲಕ್ಷ, ವೈದ್ಯಕೀಯ ವಿಮೆ ₹ 25,000, ರಾಷ್ಟ್ರೀಯ ಪಿಂಚಣಿ ಯೋಜನೆ ( NPS) ₹ 1.50 ಲಕ್ಷ ಮಾಡಿದ್ದೇನೆ. ಅಟಲ್‌ ಪೆನ್ಶನ್‌ ಸ್ಕೀಮ್ ಹಾಗೂ ಎಸ್‌ಬಿಐ ಪೆನ್ಷನ್ ಸ್ಕೀಮ್ 80 CCD (1B) ಯಲ್ಲಿ ತೋರಿಸಬಹುದೇ. ತೆರಿಗೆ ವಿಚಾರದಲ್ಲಿ ಮಾಹಿತಿ ನೀಡಿ.

–ಲಕ್ಷ್ಮೀದೇವಿ, ದಾವಣಗೆರೆ​

ಉತ್ತರ: ನಿಮ್ಮ ಒಟ್ಟು ಆದಾಯ ತಿಳಿಸಿಲ್ಲ. ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ, ಆರೋಗ್ಯ ವಿಮೆಯಲ್ಲಿ ಸೆಕ್ಷನ್ 80D ಆಧಾರದ ಮೇಲೆ ₹ 25,000 ಹಾಗೂ ಸೆಕ್ಷನ್80 CCD (1B) ಆಧಾರದ ಮೇಲೆ ಗರಿಷ್ಠ ₹ 50,000, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.80 CCD (1B) ನ್ಯಾಷನಲ್ ಪೆನ್ಶನ್ ಸ್ಕೀಮ್‌ಗೆ ಒಳಗಾಗಿದ್ದು, ಅಟಲ್ ಹಾಗೂ ಎಸ್‌ಬಿಐ ಪಿಂಚಣಿಗೆ ಸಂಬಂಧವಿರುವುದಿಲ್ಲ. ಇವೆರಡನ್ನೂ ಒಟ್ಟಿಗೆ ಸೇರಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.