ಹಣ
ಪ್ರಶ್ನೆ: ವಿದ್ಯಾಸಾಗರ್, ಶಿರಸಿ
ನಾನು ಕಳೆದ ಕೆಲವು ತಿಂಗಳಿನಿಂದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಇದರಲ್ಲಿ ಅನೇಕ ಈಕ್ವಿಟಿ ವಿಭಾಗದ ಎಸ್‌ಐಪಿ ಹೂಡಿಕೆ ಮತ್ತು ಕೆಲವು ಏಕ ಕಂತಿನ ಹೂಡಿಕೆ ಮಾಡುತ್ತಿದ್ದೇನೆ. ಈ ಎಸ್‌ಐಪಿ ಹೂಡಿಕೆಗಳಿಗಿಂತ ಏಕ ಕಂತಿನ ಹೂಡಿಕೆಗಳಲ್ಲಿ ಅಧಿಕ ಲಾಭ ಬಂದಂತೆ ಕಂಡು ಬರುತ್ತಿದೆ. ನಾನು ಓದಿ ತಿಳಿದ ಪ್ರಕಾರ, ಬಹುತೇಕ ಮಂದಿ ಏಕ ಕಂತಿನ ಹೂಡಿಕೆಗಿಂತ ಎಸ್‌ಐಪಿ ಹೂಡಿಕೆಗಳನ್ನೇ ಹೆಚ್ಚಾಗಿ ಸೂಚಿಸುತ್ತಾರೆ. ಜೊತೆಗೆ, ಆ ವರ್ಗದ ಹೂಡಿಕೆಗಳನ್ನು ಇಷ್ಟಪಡುತ್ತಾರೆ. ಬಹುತೇಕ ಮಂದಿಯ ಅನುಭವಕ್ಕಿಂತ ನನ್ನ ವೈಯಕ್ತಿಕ ಅನುಭವ ಭಿನ್ನವಾಗಿದೆ. ಹೀಗಿರುವಾಗ, ಇನ್ನು ಮುಂದೆ ಎಸ್‌ಐಪಿ ನಿಲ್ಲಿಸಿ ಸಕಾಲದಲ್ಲಿ ಏಕ ಕಂತಿನ ಹೂಡಿಕೆ ಮಾಡುವುದೇ ಸೂಕ್ತ ಎನ್ನುವ ಅಭಿಪ್ರಾಯ ತಳೆದಿದ್ದೇನೆ. ನನ್ನ ಜೊತೆ ನನ್ನ ಕೆಲವು ಸ್ನೇಹಿತರು ಕೂಡ ಇದೇ ಗೊಂದಲದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಸಲಹೆ ಬಯಸುತ್ತೇನೆ.
ಉತ್ತರ: ಯಾವುದೇ ಹೂಡಿಕೆಗಳಾಗಿರಲಿ, ಅವು ಒಂದು ನಿರ್ದಿಷ್ಟ ವರ್ಗದ ಹೂಡಿಕೆದಾರರ ವಿವಿಧ ಆಕಾಂಕ್ಷೆ, ಹೂಡಿಕೆಯ ಸಮಯ ಹಾಗೂ ಅದರ ಅಧ್ಯಯನದ ಬಗ್ಗೆ ಅವರು ಕೊಡಬಹುದಾದ ಸಮಯವನ್ನು ಆಧರಿಸಿರುತ್ತದೆ. ಮ್ಯೂಚುವಲ್ ಫಂಡ್ ಹೂಡಿಕೆಗಳಿಗೂ ಈ ಮಾದರಿ ಅನ್ವಯಿಸುತ್ತದೆ. ಸಾಮಾನ್ಯವಾಗಿ ಎಸ್‌ಐಪಿ ಮಾಡುವುದರ ಮೂಲ ಉದ್ದೇಶ ಏನೆಂದು ಅವಲೋಕಿಸಿದರೆ ಮೊದಲನೆಯದು, ನಮ್ಮ ಗಳಿಕೆಯ ಒಂದಷ್ಟು ಭಾಗ ಉಳಿತಾಯವಾಗಬೇಕು. ಆ ಹೂಡಿಕೆ ನಿರಂತರವಾಗಿ ಹಾಗೂ ಶಿಸ್ತುಬದ್ಧವಾಗಿ ಇರಬೇಕು ಎಂಬುದಾಗಿದೆ.
ಇದು ನಮ್ಮ ಗಳಿಕೆಯನ್ನು ಅನಗತ್ಯ ಖರ್ಚುಗಳಿಗೆ ಎಡೆ ಮಾಡಿಕೊಡುವುದನ್ನು ಒಂದರ್ಥದಲ್ಲಿ ನಿಯಂತ್ರಿಸುತ್ತದೆ. ಎರಡನೆಯದು ಯಾರಿಗೆ ಹೂಡಿಕೆ ಕ್ಷೇತ್ರದಲ್ಲಿ ಅಷ್ಟೊಂದು ಪರಿಣತಿ ಇಲ್ಲವೋ ಅಂಥವರು, ಫಂಡ್ ಹೌಸ್ ನಿರ್ವಹಿಸುವ ವಿವಿಧ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದು ಹಾಗೂ ತಮಗಿಂತ ಅನುಭವಿಗಳು ನಮಗಾಗಿ ಲಾಭ ಮಾಡಿಕೊಡುವ ಆಕ್ಟಿವ್ ಫಂಡ್‌ಗಳನ್ನು ಖರೀದಿಸುವುದು ಇದರ ಭಾಗವಾಗಿದೆ.
ಈ ಹಂತದಲ್ಲಿ ನಮಗಿರುವ ಸಾಮಾನ್ಯ ಗೊಂದಲ ಏನೆಂದರೆ ಎನ್‌ಎವಿ ಬೆಲೆ ಕಡಿಮೆ ಇದ್ದಾಗ ಖರೀದಿಸಿದರೆ ಸಿಗುವ ಲಾಭದ ಪ್ರಮಾಣ ಪ್ರತಿಶತ ದರದಲ್ಲಿ ಹೆಚ್ಚಿರುತ್ತದೆ ಎಂಬುದಾಗಿದೆ. ಅದೇ ರೀತಿ ಎಸ್‌ಐಪಿ ಹೂಡಿಕೆಗಳ ಸರಾಸರಿ ಬೆಲೆ ಎನ್‌ಎವಿ ಮೌಲ್ಯ ವರ್ಧಿಸುತ್ತಿದ್ದಂತೆ ಏರುತ್ತಾ ಹೋಗಿ ಶೇಕಡಾವಾರು ಲಾಭ ಕಡಿಮೆಯಾಗುತ್ತದೆ. ಇದು ಹೊರ ನೋಟಕ್ಕೆ ಗಣನೀಯವಾಗಿ ಹೌದಾದರೂ, ವಾಸ್ತವದಲ್ಲಿ ಅನೇಕ ಬಾರಿ ಸಮಯಾವಕಾಶ ಹೊಂಚು ಹಾಕಿ ಅಥವಾ ನಿಖರವಾದ ಕನಿಷ್ಠ ಎನ್‌ಎವಿ ಇದುವೇ ಎಂದು ಊಹಿಸಿ ವ್ಯವಹರಿಸುವುದು ಪರಿಣತರಿಗೂ ಕಷ್ಟ. ಹೀಗಾಗಿ, ಇವೆರಡೂ ಹೂಡಿಕೆಯ ಪಥಗಳು ಬೇರೆ ಬೇರೆ ರೀತಿಯ ಹೂಡಿಕೆದಾರರಿಗೆ ಇರುವಂಥವು.
ನಿಮ್ಮಲ್ಲಿ ಸಾಕಷ್ಟು ಸಮಯ ಇದ್ದು ಎಲ್ಲ ಹಂತಗಳ ಆರ್ಥಿಕ ಅಪಾಯಗಳ ನಿರ್ವಹಣೆ ಹಾಗೂ ಹೂಡಿಕೆ ನಿರ್ವಹಣೆ ಮಾಡುವ ಅವಕಾಶ ಇದ್ದರೆ ಏಕ ಕಂತಿನ ಹೂಡಿಕೆ ಸೂಕ್ತ. ಆದರೆ, ಯಾರಿಗೆ ನಿಶ್ಚಿತ ಹಣದ ಗಳಿಕೆ ಇದೆಯೋ ಮತ್ತು ಉಳಿತಾಯವನ್ನೇ ಉದ್ದೇಶವಾಗಿಸಿ ದೀರ್ಘಾವಧಿಯಲ್ಲಿ ಒಂದು ಸಂಚಿತ ನಿಧಿ ಏಕೀಕರಿಸುವ ಉದ್ದೇಶ ಹೊಂದಿದ್ದರೆ ಎಸ್‌ಐಪಿಗಳು ಸೂಕ್ತ.
ಇನ್ನೂ ಒಂದು ವಿಚಾರ ಗಮನದಲ್ಲಿರಲಿ. ನಿಮ್ಮ ಯಾವುದೇ ಎಸ್‌ಐಪಿ ಹೂಡಿಕೆಗಳು ನಿರೀಕ್ಷಿತ ಲಾಭ ನೀಡುತ್ತಿಲ್ಲ ಎಂದಾದರೆ, ಅಲ್ಲಿಗೇ ಸುಮ್ಮನಿರದಿರಿ. ಅಂತಹ ಹೂಡಿಕೆಗಳನ್ನು ನೀವು ಪೋರ್ಟ್ ಫೋಲಿಯೊ ವಿಮರ್ಶೆಗೆ ಒಳಪಡಿಸಿ. ಈಗ ಇರುವ ಮೊತ್ತವನ್ನು ಉತ್ತಮ ಲಾಭ ನೀಡಬಹುದಾದ ಫಂಡ್‌ಗೆ ವರ್ಷಕ್ಕೊಮ್ಮೆ ಏಕ ಕಂತಿನಲ್ಲಿ, ಸೂಕ್ತ ಸಮಯದಲ್ಲಿ ವರ್ಗಾಯಿಸಿ ಮುಂದೆ ಅಧಿಕ ಲಾಭ ಪಡೆಯಿರಿ.
ಇದು ನಿಮ್ಮ ಪೋರ್ಟ್ ಫೋಲಿಯೊವನ್ನು ಇನ್ನಷ್ಟು ಸಶಕ್ತವನ್ನಾಗಿಸಲು ನೆರವಾಗುತ್ತದೆ. ಇಲ್ಲಿ ಯಾವುದು ಸರಿ, ತಪ್ಪು ಎನ್ನುವುದಕ್ಕಿಂತ ಹೆಚ್ಚಾಗಿ ನಷ್ಟದಿಂದ ಲಾಭದೆಡೆಗೆ, ಮುಂದೆ ಹೆಚ್ಚಿನ ಮೌಲ್ಯವರ್ಧನೆ ಕಡೆಗೆ ನಾವು ಮಾಡುವ ನಮ್ಮ ನಿರಂತರ ಹುಡುಕಾಟ ಹಾಗೂ ಸಮರ್ಪಕ ನಿರ್ಧಾರವು ಹೆಚ್ಚು ಫಲ ನೀಡಬಲ್ಲದು.
––––
ಪ್ರಶ್ನೆ: ಚಂದ್ರಶೇಖರ್, ತುಮಕೂರು
ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 60. ನಾನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಲೈಫ್ ಇನ್ಸೂರೆನ್ಸ್‌ಗೆ ಪ್ರತಿವರ್ಷ ₹1.25 ಲಕ್ಷ ಪಾವತಿಸುತ್ತಿದ್ದೇನೆ. ಇದರ ಲಾಭಾಂಶ ಕುರಿತು ವಿವರಿಸಲು ಮನವಿ. ಅಲ್ಲದೆ, ನನಗೆ ಒಂದು ರಾಷ್ಟ್ರೀಕೃತ ಬ್ಯಾಂಕ್‌ಗೆ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪರವಾಗಿ ಕನ್ಸಲ್ಟೆನ್ಸಿ ಕೆಲಸ ಮಾಡಲು ಸಲಹೆ ನೀಡಲಾಗಿದೆ. ಗ್ರಾಹಕರನ್ನು ಪರಿಚಯಿಸಿದರೆ ಒಂದು ಲಕ್ಷಕ್ಕೆ ಇಂತಿಷ್ಟು ಇನ್ಸೆಂಟಿವ್ ಹಣ ನೀಡುವುದಾಗಿ ನನಗೆ ಏಜೆನ್ಸಿಯವರು ಭರವಸೆ ನೀಡಿದ್ದಾರೆ. ನಿವೃತ್ತಿ ಅವಧಿಯಲ್ಲಿ ನನಗೂ ಹಣಕಾಸಿನ ಅಗತ್ಯವಿದೆ. ಇಂತಹ ಸೇವೆ ಮಾಡಲು ಇಚ್ಛಿಸಿರುತ್ತೇನೆ. ಈ ಕುರಿತು ಸಲಹೆ ನೀಡಲು ಮನವಿ.
ಉತ್ತರ: ನೀವು ವಾರ್ಷಿಕ ವಿಮಾ ಮೊತ್ತ ಪಾವತಿಸುತ್ತಿರುವ ಪಾಲಿಸಿಗಳ ಷರತ್ತು ಹಾಗೂ ನಿಯಮಗಳನ್ನು ಆಧರಿಸಿ ಲಾಭಾಂಶ ನಿರ್ಧಾರವಾಗುತ್ತದೆ. ಕೆಲವು ಪಾಲಿಸಿಗಳು ನಿಶ್ಚಿತ ಲಾಭ ಕೊಡುವ ಪಾಲಿಸಿಗಳಾಗಿದ್ದರೆ ಇನ್ನು ಕೆಲವು ಯಾವುದೇ ನಿಶ್ಚಿತ ಲಾಭ ಮೊದಲೇ ನೀಡುವ ಭರವಸೆ ಕೊಡುವುದಿಲ್ಲ. ಈ ವಿಚಾರವನ್ನು ನಿಮ್ಮ ಪಾಲಿಸಿ ಬಾಂಡ್‌ಗಳಲ್ಲಿ ಉಲ್ಲೇಖಿಸಿರುತ್ತಾರೆ.
ಸಾಮಾನ್ಯವಾಗಿ ನಿಶ್ಚಿತ ಲಾಭ ಅಥವಾ ಬೋನಸ್ ಸಿಗುವ ಪಾಲಿಸಿಗಳಾಗಿದ್ದರೆ ವಾರ್ಷಿಕವಾಗಿ ಶೇ 5ರಿಂದ ಶೇ 7ರಷ್ಟು ಲಾಭ ನೀಡಬಹುದು. ಈ ಬಗ್ಗೆ ನೀವು ಪಾಲಿಸಿ ದಾಖಲೆ ಪರಿಶೀಲಿಸಿಕೊಳ್ಳಿ ಅಥವಾ ಸಂಬಂಧಿತ ವಿಮಾ ಕಂಪನಿಗೆ ಇ–ಮೇಲ್ ಮೂಲಕ ಅಥವಾ ಸಂಬಂಧಿತ ಏಜೆಂಟ್‌ಗಳನ್ನು ಸಂಪರ್ಕಿಸುವ ಮೂಲಕ ನಿಖರ ಮಾಹಿತಿ ಪಡೆದುಕೊಳ್ಳಬಹುದು.
ಇನ್ನು ನಿಮಗೆ ರಾಷ್ಟ್ರೀಕೃತ ಬ್ಯಾಂಕ್‌ನ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಕಡೆಯಿಂದ ಗ್ರಾಹರನ್ನು ಪರಿಚಯಿಸುವುದಕ್ಕಾಗಿ ಆಹ್ವಾನ ಬಂದದ್ದು ಒಳ್ಳೆಯದು. ಅವರು ನಿಮಗೆ ಪಾವತಿಸುವ ಕಮಿಷನ್ ಅಥವಾ ಶುಲ್ಕಕ್ಕೆ ಸಂಬಂಧಿತ ಯಾವುದೇ ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 194ಡಿಎ ಅಡಿ ಶೇ 2ರ ತೆರಿಗೆ ಕಡಿತ ಇರುತ್ತದೆ. ನಿಮ್ಮ ಕಮಿಷನ್ ಮೊತ್ತ ಇತ್ಯಾದಿ ವಿವರವನ್ನು ಸಂಬಂಧಿತ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ವ್ಯವಹರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.