ಹೂಡಿಕೆ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ರಘುರಾಮ್, ಯಲಹಂಕ, ಪ್ರಶ್ನೆ: ಇತ್ತೀಚೆಗೆ ಥೀಮ್ಯಾಟಿಕ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಪ್ರಸ್ತುತವಾಗುತ್ತಿವೆ ಎಂಬುದು ನನ್ನ ಅಭಿಪ್ರಾಯ. ಇವುಗಳಲ್ಲಿ ಹೂಡಿಕೆ ಮಾಡುವುದು ಕೆಲವೊಮ್ಮೆ ಲಾಭದಾಯಕ ಹಾಗೂ ಇನ್ನು ಕೆಲವೊಮ್ಮೆ ಹೆಚ್ಚು ಆರ್ಥಿಕ ಅಪಾಯದಿಂದ ಕೂಡಿದೆ ಎಂದು ಅನ್ನಿಸುತ್ತದೆ. ಹೀಗಿರುವಾಗ ಇಂತಹ ಫಂಡ್‌ಗಳನ್ನು ಹೂಡಿಕೆಗೆ ಆಯ್ಕೆ ಮಾಡುವುದು ಸೂಕ್ತವೇ ಅಥವಾ ಸಾಮಾನ್ಯ ಈಕ್ವಿಟಿ ವಿಭಾಗದಲ್ಲಿ ಹೂಡಿಕೆ ಸೂಕ್ತವೇ?
ಉತ್ತರ: ಥೀಮ್ಯಾಟಿಕ್ ಫಂಡ್‌ಗಳು ನಿರ್ದಿಷ್ಟ ವಲಯ ಅಥವಾ ನಿರ್ದಿಷ್ಟ ಉದ್ದೇಶದ ಹೂಡಿಕೆ ಹಿನ್ನೆಲೆಯಲ್ಲಿ ರೂಪುಗೊಂಡ ಹೂಡಿಕೆ ಉತ್ಪನ್ನಗಳು. ಉದಾಹರಣೆಗೆ, ತಂತ್ರಜ್ಞಾನ, ಇಂಧನ, ಆರೋಗ್ಯಸೇವೆ, ಮೂಲಸೌಕರ್ಯ, ಸರಕು ಸಾಗಣೆ ಇತ್ಯಾದಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಆಯಾ ವಲಯದ ಮೇಲಿನ ಭರವಸೆಯ ಆಧಾರದಲ್ಲಿ ಹೂಡಿಕೆ ಮಾಡುವ ಅವಕಾಶ ಮಾಡಿ ಕೊಡುತ್ತದೆ. ಇವು ಸಾಮಾನ್ಯ ಈಕ್ವಿಟಿ ವಿಭಾಗದ ಫಂಡ್‌ಗಳಿಗಿಂತ, ಆಯಾ ವಲಯಕ್ಕೆ ಹೆಚ್ಚು ಒತ್ತು ನೀಡುವ ಕಾರಣ ಲಾಭ-ನಷ್ಟ ಎರಡೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಇವುಗಳಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ, ಯಾವುದೇ ಹೂಡಿಕೆಗೂ ಮುನ್ನ ಹೂಡಿಕೆದಾರ ತಾನು ಯಾವ ಕ್ಷೇತ್ರದ ಬಗ್ಗೆ ಹೆಚ್ಚು ಭರವಸೆ ಹೊಂದಿದ್ದೇನೆ ಎಂಬುದನ್ನು ಸ್ಪಷ್ಟ ಮಾಡಿಕೊಳ್ಳಬೇಕು. ಅದೇ ರೀತಿ ಯಾವುದೇ ಕ್ಷೇತ್ರದಲ್ಲಿ ಇಳಿಕೆ ಆರಂಭವಾದಂತೆ ಆ ಕ್ಷೇತ್ರದಿಂದ ಹೂಡಿಕೆಯನ್ನು ಹಿಂಪಡೆಯುವ ನಿರ್ಧಾರವೂ ಅಷ್ಟೇ ಮುಖ್ಯವಾಗುತ್ತದೆ.
ಇಂತಹ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಈ ಕೆಳಗಿನ ವಿಚಾರಗಳನ್ನು ಗಮನದಲ್ಲಿಡುವುದು ಸೂಕ್ತ.
1. ಥೀಮ್ಯಾಟಿಕ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಸಾಕಷ್ಟು ವಲಯಗಳ ಬಗ್ಗೆ ಮಾಹಿತಿ ಕಲೆಹಾಕಿ ಅದನ್ನು ಅಧ್ಯಯನ ಮಾಡಬೇಕು. ನಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಕ್ಷೇತ್ರವನ್ನೇ ಹೂಡಿಕೆಗೆ ಆಯ್ಕೆ ಮಾಡುವುದು ಸೂಕ್ತ.
2. ಹೂಡಿಕೆಗೆ ಆಯ್ಕೆ ಮಾಡಿದ ಕ್ಷೇತ್ರ ಎಷ್ಟು ಕಾಲ ಉತ್ತಮ ಸ್ಥಿತಿಯಲ್ಲಿ ಇರಬಹುದೆನ್ನುವ ನಿರೀಕ್ಷೆಯು ಆಯಾ ಥೀಮ್ಯಾಟಿಕ್ ಫಂಡ್‌ಗಳ ಹೂಡಿಕೆಗೆ ಆಯ್ಕೆಯಾದ ಕಂಪನಿಗಳ ಆದಾಯ, ಲಾಭ-ನಷ್ಟ ಇತ್ಯಾದಿ ವಿವರಗಳನ್ನು ಆಧರಿಸಿರುತ್ತದೆ. ಈ ಬಗ್ಗೆ ಪ್ರತಿ ತ್ರೈಮಾಸಿಕ ಅವಧಿಗೆ ಒಮ್ಮೆ ಪುನರ್ ವಿಮರ್ಶೆ ನಡೆಸಬೇಕು.
3. ನಾವು ನಿರೀಕ್ಷೆ ಮಾಡಿದ ಆದಾಯ ಬಂತೆಂದರೆ ಮತ್ತು ವಲಯ ಏರಿಳಿತದ ಚಕ್ರದಲ್ಲಿ ಸಾಕಷ್ಟು ವೃದ್ಧಿ ಕಂಡು ಇನ್ನೂ ಹೆಚ್ಚಿನ ಬೆಳವಣಿಗೆಯ ನಿರೀಕ್ಷೆ ಸಾಧ್ಯವಿಲ್ಲ ಎಂದು ಅನ್ನಿಸಿದರೆ, ಹೂಡಿಕೆಯಿಂದ ಹೊರಗುಳಿಯುವುದು ಉತ್ತಮ ಹಾಗೂ ಇತರ ಹೂಡಿಕೆಗಳಿಗೆ ಹಣವನ್ನು ವರ್ಗಾಯಿಸುವುದು ಸೂಕ್ತ.
4. ನಿರ್ದಿಷ್ಟ ಮೊತ್ತದ ಹಣವನ್ನು (ಉದಾಹರಣೆಗೆ - ಒಟ್ಟು ಮ್ಯೂಚುವಲ್ ಫಂಡ್ ಹೂಡಿಕೆಯ ಶೇ 20ರಿಂದ 25ರಷ್ಟು) ಮಾತ್ರ ಈ ಬಗೆಯ ಫಂಡ್‌ಗಳಲ್ಲಿ ತೊಡಗಿಸಿ. ಉಳಿದ ಮೊತ್ತವನ್ನು ಇತರ ಫಂಡ್‌ಗಳಲ್ಲಿ ತೊಡಗಿಸಿ.
ವಿಶ್ವವಿಜೇತ್, ಯಲಹಂಕ ಪ್ರಶ್ನೆ: ಹೂಡಿಕೆಯ ವಿಚಾರ ಬಂದಾಗ ಕೆಲವೆಲ್ಲ ‘ಥಂಬ್ ರೂಲ್’ಗಳ ಆಧಾರದಲ್ಲಿ ಹೂಡಿಕೆ ವಿಶ್ಲೇಷಕರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಉದಾಹರಣೆಗೆ ‘ರೂಲ್ ಆಫ್ 72’ ಅಥವಾ ‘ರೂಲ್ ಆಫ್ 70’ ಇತ್ಯಾದಿಗಳನ್ನು ಹೇಳಲಾಗುತ್ತದೆ. ನಿಜ ಅರ್ಥದಲ್ಲಿ ಇವೆಲ್ಲ ವಾಸ್ತವದಲ್ಲಿ ಇವೆಯೇ ಅಥವಾ ಕೇವಲ ಮಾತುಕತೆಗೆ ಸೀಮಿತವಾದ ವಿಚಾರಗಳೇ?
ಉತ್ತರ: ಹೂಡಿಕೆಯಲ್ಲಿ ಬಳಸುವ ಕೆಲವು ‘ಥಂಬ್ ರೂಲ್’ಗಳು ವಾಸ್ತವದಲ್ಲಿ ನಾವು ನಿತ್ಯದ ಬದುಕಿನಲ್ಲಿ ಬಳಸುವ ಕೈಬೆರಳ ಲೆಕ್ಕಾಚಾರದಂತೆ ನೆರವಾಗುವ ಮಾಹಿತಿಯಾಗಿದೆ. ಆದರೆ ಇವು ಅಂತಿಮ ನಿಯಮಗಳಲ್ಲ, ಕೇವಲ ಮಾರ್ಗದರ್ಶಕ ಸೂತ್ರಗಳು. ನೀವೇ ಹೇಳಿರುವ ಮಾಹಿತಿಯನ್ನು ಗಮನಿಸೋಣ ಹಾಗೂ ಕೆಲವು ಹೆಚ್ಚುವರಿ ಮಾಹಿತಿಯನ್ನು ನೋಡೋಣ.
1. ರೂಲ್ ಆಫ್ 72: ಇದು ಅತ್ಯಂತ ಜನಪ್ರಿಯ ನಿಯಮವಾಗಿದ್ದು, ಸಾಮಾನ್ಯವಾಗಿ ನಿರೀಕ್ಷಿತ ಬಡ್ಡಿ ದರದಲ್ಲಿ ಹೂಡಿಕೆಯ ಹಣ ದ್ವಿಗುಣವಾಗಲು ಬೇಕಾಗುವ ಸಮಯವನ್ನು ಅಂದಾಜಿಸಲು ಇದನ್ನು ಬಳಸಲಾಗುತ್ತದೆ. ಈ ಸೂತ್ರದಂತೆ 72ನ್ನು ಬಡ್ಡಿದರದಿಂದ ಭಾಗಿಸಿದಾಗ ಯಾವ ಸಂಖ್ಯೆ ಬರುತ್ತದೋ ಅಷ್ಟು ಅಂದಾಜು ವರ್ಷ ಅಥವಾ ಅವಧಿಯಲ್ಲಿ ಹಣ ದ್ವಿಗುಣವಾಗುತ್ತದೆ ಎನ್ನುವುದು ಈ ನಿಯಮ ಸಾಬೀತುಪಡಿಸಹೊರಟಿರುವ ವಿಚಾರ. ಉದಾ: ಶೇ 12ರಷ್ಟು ಬಡ್ಡಿದರ ಇದ್ದರೆ, 72ನ್ನು 12ರಿಂದ ಭಾಗಿಸಿದಾಗ 6ರಿಂದ 7 ವರ್ಷಗಳಲ್ಲಿ ಹಣ ದ್ವಿಗುಣ ಆಗುತ್ತದೆ ಎಂಬುದು ಸರಳ ಲೆಕ್ಕಾಚಾರ. ಇದೇ ವಿವರದ ಆಧಾರದಲ್ಲಿ ರೂಲ್ ಆಫ್ 70 ಕೂಡಾ ಪ್ರಸ್ತುತವಾಗುತ್ತದೆ.
2. ರೂಲ್ ಆಫ್ 114: ಈ ನಿಯಮವನ್ನು ಹೂಡಿಕೆ ಮಾಡುವ ಹಣ ಮೂರು ಪಾಲಾಗಲು ಬೇಕಾದ ಸಮಯ ಅಂದಾಜಿಸಲು ಬಳಸುತ್ತಾರೆ. ಉದಾಹರಣೆಗೆ, ಶೇ 12ರಷ್ಟು ಬಡ್ಡಿದರ ಇದ್ದರೆ 114ನ್ನು 12ರಿಂದ ಭಾಗಿಸಿದಾಗ, ಸುಮಾರು 9ರಿಂದ 10 ವರ್ಷಗಳಲ್ಲಿ ಹಣ ಮೂರು ಪಟ್ಟು ಆಗುತ್ತದೆ ಎಂಬ ಮಾಹಿತಿಯನ್ನು ಈ ನಿಯಮ ನೀಡುತ್ತದೆ. ಇದೇ ರೀತಿ ಹಣ ನಾಲ್ಕು ಪಟ್ಟು ಬೆಳೆಯಲು ರೂಲ್ ಆಫ್ 144ಅನ್ನು ಬಳಸಲಾಗುತ್ತದೆ.
ಈ ‘ಥಂಬ್ ರೂಲ್’ಗಳು ವಾಸ್ತವದಲ್ಲಿ ಗಣಿತ ಆಧಾರಿತ ಸರಳ ವಿಧಾನಗಳು. ಇವು ಕೇವಲ ಮಾತುಕತೆಗಾಗಿ ಮಾತ್ರವಲ್ಲ, ಹಣಕಾಸು ಯೋಜನೆಗಳನ್ನು ವೇಗವಾಗಿ ಅಂದಾಜು ಮಾಡಲು ಬಳಸುವ ವಿಧಾನವಾಗಿದೆ. ಆದರೆ ನಿಖರ ಹೂಡಿಕೆ ತೀರ್ಮಾನಕ್ಕೆ ಮಾರುಕಟ್ಟೆ ಸ್ಥಿತಿ, ತೆರಿಗೆ, ದುಬಾರಿ ದರ , ವೈಯಕ್ತಿಕ ಗುರಿ ಮುಂತಾದ ಅಂಶಗಳನ್ನೂ ಸಹ ಪರಿಗಣಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.