ADVERTISEMENT

ಉತ್ತಮ ಗಳಿಕೆಗೆ ಹೆಚ್ಚು ಅವಕಾಶ

ಕೆ.ಜಿ ಕೃಪಾಲ್
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಉತ್ತಮ ಗಳಿಕೆಗೆ ಹೆಚ್ಚು ಅವಕಾಶ
ಉತ್ತಮ ಗಳಿಕೆಗೆ ಹೆಚ್ಚು ಅವಕಾಶ   

ಷೇರುಪೇಟೆಯಲ್ಲಿ ಬೆಳವಣಿಗೆಗಳಿಗೆ ಕಾರಣವೇ ಬೇಕಾಗಿಲ್ಲ. ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಕೇವಲ ಅಲಂಕಾರಿಕ ಅಂಶಗಳೇ ಹೆಚ್ಚು ಆದ್ಯತೆ ಪಡೆಯುತ್ತವೆ. ಷೇರಿನ ಬೆಲೆಗಳು ಬಾಹ್ಯ ಕಾರಣಗಳಿಗೆ, ವಿಶ್ಲೇಷಣೆಗಳಿಗೆ ಪ್ರಾಮುಖ್ಯ ನೀಡಿ ಅದಕ್ಕೆ ತಕ್ಕಂತೆ ಅನಿರೀಕ್ಷಿತ ಮಟ್ಟದ ಏರಿಳಿತಗಳನ್ನು ಪ್ರದರ್ಶಿಸುತ್ತವೆ. ಇಲ್ಲಿ ಕಂಪನಿಯ ಆಂತರಿಕ ಬೆಳವಣಿಗೆಗಳಾಗಲಿ, ಸಾಧನೆಗಳಿಗಾಗಲಿ ಮನ್ನಣೆಯಿಲ್ಲ.

ಈಗಿನ ಅನಿಶ್ಚಿತ ವಾತಾವರಣದಲ್ಲಿ ಷೇರಿನ ಬೆಲೆಗಳು ಪ್ರದರ್ಶಿಸುವ ಏರಿಳಿತಗಳಿಗೆ ಕಾರಣ ಹುಡುಕಿಕೊಳ್ಳುವಷ್ಟರಲ್ಲೇ ಅವಕಾಶಗಳು ಕೈ ಜಾರಿರುತ್ತವೆ. ಗುರುವಾರ ರೇಟಿಂಗ್ ಕಂಪನಿ ಕೇರ್ ರೇಟಿಂಗ್ಸ್ ಲಿಮಿಟೆಡ್ ಕಂಪನಿ ಷೇರಿನ ಬೆಲೆ ಮಧ್ಯಾಹ್ನ ಎರಡು ಗಂಟೆವರೆಗೂ ₹1,316  ರ ಸಮೀಪವಿದ್ದು  ನಂತರ ಯಾವುದೂ ಅಧಿಕೃತ ಕಾರಣವಿಲ್ಲದೆ   ₹1,238 ರ ಸಮೀಪಕ್ಕೆ ಕುಸಿಯಿತು. ನಂತರ ಅಲ್ಲಿಂದ ಸ್ವಲ್ಪ ಚೇತರಿಕೆ ಕಂಡು ₹1,287 ಕ್ಕೆ ಚಿಗುರಿಕೊಂಡಿತು. ಈ ಕಂಪನಿ ಮೇ 22 ರಂದು ತನ್ನ ವಾರ್ಷಿಕ ಸಾಧನೆ ಮತ್ತು ಲಾಭಾಂಶ ಪ್ರಕಟಿಸುವ ಕಾರ್ಯಸೂಚಿ ಪ್ರಕಟಿಸಿದೆ.

ತೈಲ ಮಾರಾಟದ ಕಂಪನಿಗಳು ಪ್ರತಿ ಲೀಟರ್‌ಗೆ ಒಂದು ರೂಪಾಯಿಯನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು, ತಾವೇ ಭರಿಸಿಕೊಳ್ಳಬೇಕೆಂಬ ನಿರ್ದೇಶನ ಸರ್ಕಾರ ಹೊರಡಿಸಿದೆ ಎಂದು  ಮಾಧ್ಯಮಗಳಲ್ಲಿ ಸುದ್ದಿ ಬಂದಿತು. ಇದರಿಂದ ತೈಲ ಮಾರಾಟ ಕಂಪನಿ ಷೇರುಗಳಲ್ಲಿ ಭಾರಿ ಕುಸಿತ ಉಂಟಾಯಿತು.

ADVERTISEMENT

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಷೇರಿನ ಬೆಲೆಯು ₹182 ರ ಗರಿಷ್ಠದಿಂದ ₹159 ರ ಸಮೀಪಕ್ಕೆ ಕುಸಿದು ನಂತರ ₹165 ರ ಸಮೀಪಕ್ಕೆ ಚೇತರಿಕೆ ಕಂಡಿತು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ₹455 ರ ಗರಿಷ್ಠದಿಂದ ₹402 ರ ಸಮೀಪದವರೆಗೂ ಕುಸಿದು ನಂತರ ₹405 ರ ಸಮೀಪ ವಾರಾಂತ್ಯ ಕಂಡಿದೆ.

ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ₹370 ರ ಗರಿಷ್ಠದಿಂದ ₹ 326 ರವರೆಗೂ ಕುಸಿದು ನಂತರ ಅಲ್ಪ ಚೇತರಿಕೆಯಿಂದ ₹333 ರ ಸಮೀಪ ವಾರಾಂತ್ಯ ಕಂಡಿದೆ. ಆರ್ಥಿಕ ವರ್ಷಾಂತ್ಯದ ಕಾರಣ ನೀರಸವಾಗಿದ್ದ ಪೇಟೆಯಲ್ಲಿ  ಹೊಸ ಹಣಕಾಸು ವರ್ಷದ ಆರಂಭಿಕ ದಿನಗಳಲ್ಲಿ ಅಲ್ಪ ಚೇತರಿಕೆಯಿಂದ ಏರಿಕೆ ಕಂಡಿದ್ದ ಈ ಕಂಪನಿ ಷೇರುಗಳು ಮತ್ತೆ ಕುಸಿತಕ್ಕೆ ಒಳಗಾಗುವಂತಾಯಿತು. ಇದು ಪೇಟೆಯಲ್ಲಿ ಪ್ರದರ್ಶಿತವಾಗುತ್ತಿರುವ ವೇಗದ, ಗೊಂದಲದ ಬದಲಾವಣೆಗಳಾಗಿವೆ.

ಶುಕ್ರವಾರ ಇನ್ಫೊಸಿಸ್‌ ಕಂಪನಿ ತನ್ನ ಫಲಿತಾಂಶ ಪ್ರಕಟಿಸಿದ್ದು, ಡಿಸೆಂಬರ್ ಅಂತ್ಯದ ಸಾಧನೆಗಿಂತ ಶೇ 28ರಷ್ಟು ಕಡಿಮೆ ಲಾಭವನ್ನು ಗಳಿಸಿದೆ. ಕಳೆದ ತ್ರೈಮಾಸಿಕದ ಸಮಯದಲ್ಲಿ ಹೆಚ್ಚು ಇಳಿಕೆಯಲ್ಲಿದ್ದ ಈ ಕಂಪನಿ ಷೇರಿಗೆ ಪುಷ್ಟಿ ನೀಡಿ ಏರಿಕೆ ಕಾಣುವಂತೆ ಮಾಡಿದ್ದು ಕಂಪನಿಯ ಷೇರು ಬೈ ಬ್ಯಾಕ್ ಯೋಜನೆ.

ಈಗ ಕಂಪನಿಯ ಲಾಭಗಳಿಕೆಯು ಡಿಸೆಂಬರ್ ತ್ರೈಮಾಸಿಕ ಸಾಧನೆಗಿಂತ ಕಡಿಮೆಯಿದ್ದರೂ ಷೇರಿನ ಬೆಲೆ ಕುಸಿತ ಕಾಣುವ ಸಾಧ್ಯತೆ ಕಡಿಮೆ ಇರುವ ಕಾರಣ ಕಂಪನಿಯು ಪ್ರತಿ  ಷೇರಿಗೆ ₹20.50 ರಂತೆ ಲಾಭಾಂಶವಲ್ಲದೆ ವಿಶೇಷ ಲಾಭಾಂಶವಾಗಿ ₹10 ನ್ನು ಸಹ ಪ್ರಕಟಿಸಿದೆ.  ಪ್ರತಿ ಷೇರಿಗೆ ₹30.50 ನ್ನು ವಿತರಿಸಲು ಜೂನ್ 14 ನಿಗದಿತ ದಿನವಾಗಿರುವುದರಿಂದ ಅಲ್ಲಿಯವರೆಗೂ ಷೇರಿನ ಬೆಲೆ ಸ್ಥಿರತೆ ಕಾಣಬಹುದು.

ನೆಸ್ಲೆ ಇಂಡಿಯಾ ಕಂಪನಿಯ ಷೇರಿನ ಬೆಲೆ ₹7,627 ರ ಸಮೀಪದಿಂದ ₹8,698 ರವರೆಗೂ ಒಂದು ತಿಂಗಳಲ್ಲಿ ಏರಿಕೆ ಪ್ರದರ್ಶಿಸಿದೆ. ಗುರುವಾರ ಷೇರಿನ ಬೆಲೆ ₹8,325 ರ ಸಮೀಪದಿಂದ ₹8,698 ರವರೆಗೂ ಜಿಗಿತ ಕಂಡಿದೆ. ನಂತರ ₹8,627 ರಲ್ಲಿ ಕೊನೆಗೊಂಡಿದೆ. ₹8,739 ರ ವಾರ್ಷಿಕ ಗರಿಷ್ಠವನ್ನು ಶುಕ್ರವಾರ ತಲುಪಿ ₹8,692 ರಲ್ಲಿ ವಾರಾಂತ್ಯ ಕಂಡಿದೆ. ಕಂಪನಿಯ ಎಜಿಎಂ ಮೇ ತಿಂಗಳ 10 ರಂದು ನಡೆಯಲಿದೆ.

ಮಿಲ್ಕ್ ಫುಡ್ ಲಿಮಿಟೆಡ್ ಕಂಪನಿಯು ಒಂದೇ ವಾರದಲ್ಲಿ  ₹465 ರ ಸಮೀಪದಿಂದ ₹678 ರವರೆಗೂ ಜಿಗಿತ ಕಂಡಿದೆ. ಇತ್ತೀಚೆಗಷ್ಟೇ ಹೆಚ್ಚು ರಭಸದ ಏರಿಕೆ ಪ್ರದರ್ಶಿಸಿದ ಈ ಕಂಪನಿ ಅತ್ಯಂತ ತ್ವರಿತವಾದ ಗರಿಷ್ಠ ಏರಿಕೆಯಿಂದ ₹ 640 ರ ಸಮೀಪದಲ್ಲಿ ವಾರಾಂತ್ಯ ಕಂಡಿದೆ.

ವಕ್ರಾಂಗಿ ಕಂಪನಿ ಮತ್ತೊಮ್ಮೆ ₹293 ರ ಗರಿಷ್ಠ ತಲುಪಿದ ನಂತರ ನಿರಂತರವಾದ ಕುಸಿತಕ್ಕೊಳಗಾಗಿದೆ. ಶುಕ್ರವಾರ ₹132 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ದಾಖಲೆ ಮಾಡಿದೆ. ಈ ರೀತಿಯ ಕುಸಿತಕ್ಕೆ ಕಾರಣ ಹೊರಬರದಿರುವುದು ಸೋಜಿಗದ ಸಂಗತಿಯಾಗಿದೆ.

ದೀರ್ಘಕಾಲೀನ ಹೂಡಿಕೆಗೆ ಅವಕಾಶ: ದೀರ್ಘ ಕಾಲೀನ ಉದ್ದೇಶದ ಹೂಡಿಕೆ ಮಾಡುವವರಿಗೆ ಸರ್ಕಾರಿ ವಲಯದ ಕಂಪನಿಗಳು ಹೆಚ್ಚಿನ ಅವಕಾಶ ಕಲ್ಪಿಸಿವೆ.  ಬಿಎಚ್‌ಇಎಲ್‌, ಪಿಎಫ್‌ಸಿ, ಆರ್‌ಇಸಿ, ಐಒಸಿ, ಎಚ್‌ಪಿಸಿಎಲ್, ಬಿಪಿಸಿಎಲ್,  ಆಯಿಲ್ ಇಂಡಿಯಾ, ಎಂಜಿನಿಯರ್ಸ್‌ ಇಂಡಿಯಾ, ಎನ್‌ಎಂಡಿಸಿ,  ಬಿಇಎಲ್, ನಂತಹ ಉತ್ತಮ ಕಂಪನಿಗಳು ನಾನಾ ಕಾರಣಗಳಿಂದಾಗಿ ಹೆಚ್ಚಿನ ಇಳಿಕೆಗೆ ಒಳಪಟ್ಟಿವೆ.  ಇವು ಸರ್ಕಾರಿ ಸ್ವಾಮ್ಯದ ಕಂಪನಿಗಳಾಗಿದ್ದು, ಕಂಪನಿಗಳು ಗಳಿಸಿದ ಲಾಭ ದಲ್ಲಿ ಹೆಚ್ಚಿನ ಅಂಶವನ್ನು ಷೇರುದಾರರಲ್ಲಿ ಹಂಚಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.  ಹೀಗಾಗಿ ಲಾಭದ ಇಳುವರಿ ಹೆಚ್ಚಾಗಿರುವುದರಿಂದ, ಷೇರಿನ ಬೆಲೆಗಳು ಇಳಿಕೆಯಲ್ಲಿ ಉತ್ತಮ ಅವಕಾಶಗಳಾಗಿ ಗೋಚರಿಸುತ್ತವೆ.

ಲಾಭಾಂಶ: ಗೋವಾ ಕಾರ್ಬನ್ ಪ್ರತಿ ಷೇರಿಗೆ ₹10, ರಿಲಯನ್ಸ್ ಇಂಡಸ್ಟ್ರಿಯಲ್ ಇನ್ಫ್ರಾ ₹3.50, ವಿಎಸ್‌ಟಿ ಇಂಡಸ್ಟ್ರೀಸ್ ₹77.50, ಇನ್ಫೊಸಿಸ್ ₹30.50,  ರಾಣೆ ಬ್ರೇಕ್ ಲೈನ್ನಿಂಗ್ಸ್ – ₹ 9 ಲಾಭಾಂಶ ನೀಡಿವೆ. ಕುಶಾಲ್ ಲಿಮಿಟೆಡ್  ₹2 ಮುಖಬೆಲೆಯ ಷೇರಿಗೆ ಎರಡು ಪೈಸೆಗಳ ಲಾಭಾಂಶ ಪ್ರಕಟಿಸಿದೆ. ಈ ರೀತಿಯ ಲಾಭಾಂಶ ಪ್ರಕಟಣೆಗಳು ಕೇವಲ ದಾಖಲೆಗಾಗಿ ಮಾತ್ರವಾಗಿರುತ್ತದೆ.

ವಾರದ ಮುನ್ನೋಟ
ಹೊಸ ವರ್ಷದ ಆರಂಭದಲ್ಲಿ ಕಾರ್ಪೊರೇಟ್ ಚಟುವಟಿಕೆಗಳು ಭರದಿಂದ ಸಾಗಿವೆ. ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ರಭಸದಿಂದ ನಡೆಯುತ್ತಿದೆ. ವಿಶೇಷವಾಗಿ ನಿಷ್ಕ್ರಿಯ ಸಾಲಗಳನ್ನು ಹೊಂದಿರುವ ಕಂಪನಿಗಳನ್ನು ವಹಿಸಿಕೊಳ್ಳುವ ಸ್ಪರ್ಧೆಯು ಜೋರಾಗಿದೆ. ಅಲ್ಲದೆ ಫೋರ್ಟಿಸ್ ಹೆಲ್ತ್‌ಕೇರ್ ಕಂಪನಿ ಪಡೆದುಕೊಳ್ಳಲು ಮುಂಜಾಲ್ ಮತ್ತು ಬರ್ಮನ್ ಸಮೂಹದವರು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಜೆಎಸ್‌ಡಬ್ಲ್ಯು ಸ್ಟೀಲ್‌ ಸಮೂಹ ಮೊನ್ನೆಟ್ ಇಸ್ಪಾಟ್ ಕಂಪನಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಬಿಡ್‌ ಅನ್ನು ಯಶಸ್ವಿಯಾಗಿ ಪಡೆದುಕೊಂಡಿದೆ. ಎಂಬಿಎಲ್ ಇನ್ಫ್ರಾ ಪ್ರವರ್ತಕರು ಬ್ಯಾಂಕ್ ಸಾಲವನ್ನು 9 ತಿಂಗಳಲ್ಲಿ ತೀರಿಸುವುದಕ್ಕೆ ಬ್ಯಾಂಕ್‌ಗಳು ಒಪ್ಪಿಕೊಂಡಿವೆ ಎನ್ನಲಾಗಿದೆ. ಎನ್‌ಪಿಎ ತೊಂದರೆಯಲ್ಲಿರುವ ಅಲೋಕ್ ಇಂಡಸ್ಟ್ರೀಸ್, ಎಲೆಕ್ಟ್ರೋ ಸ್ಟಿಲ್,  ಭೂಷಣ್ ಸ್ಟೀಲ್ ಮುಂತಾದ ಕಂಪನಿಗಳ ಸ್ವಾಧೀನ ಪ್ರಕ್ರಿಯೆಗಳು ಸಹ ಪೇಟೆಯ ವಾತಾವರಣದ ಮೇಲೆ ಪ್ರಭಾವ ಬೀರಲಿವೆ.

ಉಳಿದಂತೆ ಮುಂದಿನ ವಾರದಲ್ಲಿ ಎಸಿಸಿ, ಮೈಂಡ್ ಟ್ರೀ, ಮಾಸ್ಟೆಕ್, ಇಂಡಸ್ ಇಂಡ್ ಬ್ಯಾಂಕ್,  ಟಿಸಿಎಸ್, ಸಾಸ್ಕೆನ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್,  ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಕಂಪನಿಗಳು ತಮ್ಮ ಹಣಕಾಸು ಸಾಧನೆಯೊಂದಿಗೆ ಲಾಭಾಂಶಗಳನ್ನು ಪ್ರಕಟಿಸಲಿವೆ.  ಮಾರ್ಚ್ ತಿಂಗಳಲ್ಲಿ ಮ್ಯೂಚುವಲ್ ಫಂಡ್‌ಗಳಿಂದ ಹೊರಹೋದ ಹಣವು  ದಿಸೆ ಬದಲಿಸಿರುವ ಪೇಟೆಯತ್ತ ಹಿಂದಿರುಗಿ ಬರುವ ಕಾರಣ ಪೇಟೆಯು ಮತ್ತಷ್ಟು ಚುರುಕಾಗುವ ಸಾಧ್ಯತೆ ಹೆಚ್ಚಿದೆ.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.