ADVERTISEMENT

ಕಹಿಯಾಗಿರುವ ಸೂಚ್ಯಂಕದ ಕುಸಿತ

ಕೆ.ಜಿ ಕೃಪಾಲ್
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಕಹಿಯಾಗಿರುವ ಸೂಚ್ಯಂಕದ ಕುಸಿತ
ಕಹಿಯಾಗಿರುವ ಸೂಚ್ಯಂಕದ ಕುಸಿತ   

ಸದ್ಯದ ವಾತಾವರಣದಲ್ಲಿ ಕೇವಲ ಸ್ಥಳೀಯ ವಿಚಾರಗಳು ಮಾತ್ರ ಪ್ರಭಾವಿಯಾಗದೆ ಜಾಗತಿಕ ವಿಚಾರಗಳು, ಬೆಳವಣಿಗೆಗಳು ಸಹ ತಮ್ಮ ನಕಾರಾತ್ಮಕ ಪ್ರಭಾವ ಬೀರುತ್ತಿವೆ. ಹಿಂದಿನ ವರ್ಷ ಅಂದರೆ 24 ನೇ ಮಾರ್ಚ್ 2017 ರಂದು ಸಂವೇದಿ ಸೂಚ್ಯಂಕವು 29,421 ರಲ್ಲಿದ್ದು ಅದು ವಾರ್ಷಿಕ ಕನಿಷ್ಠದ ಸಮೀಪದಲ್ಲಿತ್ತು. ಹಾಗೆಯೇ 2016 ರ ಮಾರ್ಚ್‌ನಲ್ಲೂ ಸಹ ವಾರ್ಷಿಕ ಕನಿಷ್ಠ ಹಂತವಿತ್ತು.

ವರ್ಷದ ಜನವರಿ 23 ರಂದು ಷೇರುಪೇಟೆ ಬಂಡವಾಳೀಕರಣ ಮೌಲ್ಯವು ₹ 156.56 ಲಕ್ಷ ಕೋಟಿಯಲ್ಲಿತ್ತು. ಸರಿಯಾಗಿ ಎರಡು ತಿಂಗಳಲ್ಲಿ ಅದು ₹ 139.30 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ 2017ರ ಅಕ್ಟೋಬರ್ 17 ರಂದು
₹ 136.33 ಲಕ್ಷ ಕೋಟಿಯಲ್ಲಿದ್ದ ಪರಿಸ್ಥಿತಿಗೆ ಮರಳಿದೆ. ಮೂರು ತಿಂಗಳಲ್ಲಿ ಏರಿಕೆ ಕಂಡಿದ್ದು, ಎರಡೇ ತಿಂಗಳಲ್ಲಿ ಮರಳಿ ಬಂದಿದೆ. ತ್ವರಿತ ಏರಿಕೆಯ ರುಚಿ ಕಂಡಿರುವುದರಿಂದ ಇಳಿಕೆಯು ಹೆಚ್ಚು ಕಹಿಯಾಗಿದೆ.

ಕೇವಲ ಸೂಚ್ಯಂಕಗಳ ಚಲನೆಯನ್ನಾಧರಿಸಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ. ಹಿಂದಿನ ಅಂಕಣದಲ್ಲಿ ತಿಳಿಸಿದಂತೆ ಪೇಟೆಯಲ್ಲಿ ಹತ್ತಾರು ಅವಕಾಶಗಳು ಸೃಷ್ಟಿಯಾಗಿ ಮಾಯವಾಗುತ್ತಿವೆ.

ADVERTISEMENT

ಬಲರಾಂಪುರ್ ಚಿನ್ನಿ ಷೇರಿನ ಬೆಲೆಯು ಅಂದಿನ ₹ 84 ರ ಸಮೀಪದಿಂದ ₹ 94 ಕ್ಕೆ ಜಿಗಿದು ಹಿಂದಿರುಗಿರುವುದು ಎರಡು ಬಾರಿ ನಡೆದಿದೆ. ಅದೇ ರೀತಿ ಆಯಿಲ್ ಇಂಡಿಯಾ, ರಿಲಯನ್ಸ್ ಕ್ಯಾಪಿಟಲ್, ಸಿಪ್ಲಾ ದಂತಹ ಅಗ್ರಮಾನ್ಯ ಕಂಪನಿಗಳು ತ್ವರಿತವಾದ ಏರಿಕೆ - ಇಳಿಕೆ ಪ್ರದರ್ಶಿಸಿವೆ.

ಸಾಧನೆಯಾಧಾರಿತ ಅಗ್ರಮಾನ್ಯ ಕಂಪನಿಗಳು ಇಳಿಕೆಯಲ್ಲಿದ್ದು, ಕನಿಷ್ಠ ಬೆಲೆಯಲ್ಲಿ ಇರುವಾಗ ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿ
ಕೊಂಡರೆ ಉತ್ತಮ ಲಾಭ ಪಡೆಯಬಹುದಾಗಿದೆ. ಕುಸಿತದಲ್ಲಿದೆ ಎಂದು ಒಮ್ಮೆಯೇ ಭಾರಿ ಗಾತ್ರದ ಖರೀದಿ ಮಾಡದೆ, ಪ್ರತಿಯೊಂದು ಕುಸಿತದಲ್ಲೂ ಹಂತ ಹಂತವಾಗಿ ಖರೀದಿ ಮಾಡಿದಲ್ಲಿ ಫಲಿತಾಂಶ ಉತ್ತಮವಾಗಿರುತ್ತದೆ. ಎಸ್ ಐ ಪಿ ತರಹ ಹೂಡಿಕೆ ಆರಂಭಿಸಲು ಸಹ ಇಳಿಕೆಯಲ್ಲಿರುವ ಪೇಟೆಯು ಸೂಕ್ತವಾಗಿರುತ್ತದೆ.

ಎಂ ಎಂ ಟಿ ಸಿ ಲಿಮಿಟೆಡ್ ಷೇರಿನ ಬೆಲೆಯು ₹ 46 ರ ಸಮೀಪಕ್ಕೆ ಕುಸಿದು ₹ 50 ರ ಸಮೀಪದಲ್ಲಿದ್ದಾಗ ಕಂಪನಿ ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ ಎಂಬ ಸುದ್ದಿಯು ಚುರುಕು ಮೂಡಿಸಿ ಷೇರಿನ ಬೆಲೆಯನ್ನು ₹ 70 ರ ಸಮೀಪಕ್ಕೆ ಕೊಂಡೊಯ್ಯಿತು. ಆದರೆ 1:2 ರ ಅನುಪಾತದ ಬೋನಸ್ ಪ್ರಕಟಿಸಿದ ನಂತರ ₹ 54 ರ ಸಮೀಪಕ್ಕೆ ಹಿಂದಿರುಗಿದೆ. ಕೇವಲ ಹದಿನೈದು ದಿನಗಳಲ್ಲಿ
₹ 46 ರಿಂದ ₹ 70 ರವರೆಗೂ ಏರಿಕೆ ಕಂಡು ನಂತರ ₹ 54 ಕ್ಕೆ ಮರಳಿದೆ ಎಂಬುದು ಪೇಟೆಯಲ್ಲಿನ ಚಟುವಟಿಕೆಯ ವೇಗಕ್ಕೆ ಕನ್ನಡಿ ಹಿಡಿದಂತಾಗಿದೆ.

ಹಿಂದೂಸ್ಥಾನ್ ಕನ್‌ಸ್ಟ್ರಕ್ಷನ್ ಕಂಪನಿಯ ಅಂಗ ಸಂಸ್ಥೆಯಾಗಿರುವ ಲವಾಸ ಕಾರ್ಪ್ ಕಂಪನಿಯು ದಿವಾಳಿಯ ಅಂಚಿನಲ್ಲಿದೆ ಎಂಬ ಪತ್ರಿಕಾ ಸುದ್ದಿಯು ಷೇರಿನ ಬೆಲೆಯನ್ನು ₹ 32 ರ ಸಮೀಪದಿಂದ ₹ 21.80 ಕ್ಕೆ ಕುಸಿಯುವಂತೆ ಮಾಡಿ ₹ 25 ರ ಸಮೀಪ ವಾರಾಂತ್ಯ ಕಂಡಿದೆ. ಕಂಪನಿಗಳು ಘೋಷಿಸಿದ ಕಾರ್ಪೊರೇಟ್ ಫಲಗಳನ್ನು ವಿತರಿಸಿದ ನಂತರ ಇತ್ತೀಚಿನ ದಿನಗಳಲ್ಲಿ ಅತೀವ ಮಾರಾಟದ ಒತ್ತಡವನ್ನೆದುರಿಸುತ್ತಿವೆ. ಈ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ಕಂಪನಿಗಳು ಲಾಭಾಂಶ ಅಥವಾ ಬೋನಸ್ ಷೇರು ವಿತರಣೆಯನ್ನು ಪಡೆಯುವ ಅಭಿಲಾಷೆಯಿಂದ ಷೇರುಗಳನ್ನು ಕೊಳ್ಳುವುದು ಸರಿಯಲ್ಲ. ಕಾರ್ಪೊರೇಟ್ ಫಲ ವಿತರಣೆಯಾದ ನಂತರ ಅಸಹಜ ಕುಸಿತ ಉಂಟಾದಾಗ ಹಂತ ಹಂತವಾಗಿ ಖರೀದಿಸಬಹುದು.

ಕೋಲ್ ಇಂಡಿಯಾ ಪ್ರತಿ ಷೇರಿಗೆ ₹ 16.50 ಯಂತೆ ವಿತರಿಸಿದ ನಂತರ ಷೇರಿನ ಬೆಲೆ ಸುಮಾರು 30 ರೂಪಾಯಿಗಳಷ್ಟು ಇಳಿಕೆ ಪಡೆದಿದೆ. ವೇದಾಂತ ಕಂಪನಿ ಪ್ರತಿ ಷೇರಿಗೆ ₹ 21.20 ರ ಲಾಭಾಂಶದ ನಂತರ ₹ 30 ಕ್ಕೂ ಹೆಚ್ಚಿನ ಇಳಿಕೆಗೊಳಪಟ್ಟಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ 1:1 ರ ಅನುಪಾತದ ಬೋನಸ್ ಷೇರು ವಿತರಣೆ ನಂತರ ₹ 200 ರ ಸಮೀಪದಿಂದ ₹ 168 ರ ಸಮೀಪಕ್ಕೆ ಕುಸಿದಿದೆ.

ಮಂಗಳವಾರದಿಂದ ಆಯಿಲ್ ಇಂಡಿಯಾ ಮತ್ತು ಗೇಲ್ ಇಂಡಿಯಾ ಗಳು ಬೋನಸ್ ಷೇರಿನ ನಂತರದ ವಹಿವಾಟಿನಲ್ಲಿ ಹೇಗಿರುತ್ತದೆಂಬುದನ್ನು ಗಮನಿಸಬೇಕಾಗಿದೆ.
ಷೇರುಪೇಟೆಯಲ್ಲಿ ಕಾಣುತ್ತಿರುವ ಅನಿರೀಕ್ಷಿತ ಏರಿಳಿತಗಳನ್ನು ಗಮನಿಸಿ ಇಲ್ಲಿ ಯಶಸ್ಸು ಕಾಣಲು ಹೆಚ್ಚಿನವರು ವಿಫಲರಾಗುವುದಕ್ಕೆ ಕಾರಣವೇನಿರಬಹುದೆಂದು ಯೋಚಿಸಿದಾಗ ಕೃಷಿವಲಯದ ಬೆಳವಣಿಗೆಗಳು ನೆನಪಾಗುತ್ತವೆ.

ಕೃಷಿವಲಯದಲ್ಲಿ ರೈತರು ಸಾಮಾನ್ಯವಾಗಿ ಬಿತ್ತನೆ ಮಾಡುವಾಗ ಯಾವ ಉತ್ಪನ್ನಕ್ಕೆ ಹೆಚ್ಚು ಬೆಲೆಯಿರುತ್ತದೋ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಬೆಳೆ ಕೈಗೆ ಬರುವಷ್ಟರಲ್ಲಿ ಅದು ಕುಸಿದಿರುತ್ತದೆ. ಇದಕ್ಕೆ ಉದಾಹರಣೆಗಾಗಿ ಈರುಳ್ಳಿ, ಟೊಮೆಟೊ, ಕಬ್ಬು ಬೆಳೆಗಳಾಗಿವೆ. ಎಲ್ಲರೂ ಬೇಡಿಕೆ ಹೆಚ್ಚಿದೆ ಎಂದು ಬೆಳೆಯಲು ಮುಂದಾಗಿ ಫಸಲು ಕೈಗೆ ಬರುವಷ್ಟರಲ್ಲಿ ಪೇಟೆಯಲ್ಲಿ ಪೂರೈಕೆಯು ಬೇಡಿಕೆಗಿಂತ ಹೆಚ್ಚಾಗಿರುವ ಕಾರಣ ಉತ್ಪನ್ನದ ಬೆಲೆಯು ಕುಸಿದಿರುತ್ತದೆ.

ಷೇರುಗಳ ಬೆಲೆಗಳು ಗಗನದಲ್ಲಿದ್ದಾಗ ಮಾತ್ರ ದೀರ್ಘಕಾಲೀನ ಹೂಡಿಕೆಗೆ ಪ್ರಯತ್ನಿಸುತ್ತೇವೆ. ಬೆಲೆಗಳು ಕುಸಿತದಲ್ಲಿದ್ದಾಗ ಅದನ್ನು ನಿರ್ಲಕ್ಷಿಸುತ್ತೇವೆ. ಹೂಡಿಕೆ ಮಾಡುವಾಗ ಉತ್ತಮ ಕಂಪನಿಗಳ ಷೇರುಗಳು ಕಡಿಮೆ ಬೆಲೆಯಲ್ಲಿ ಇರುವಾಗ ಖರೀದಿಸಿದರೆ ಅಲ್ಪಕಾಲದಲ್ಲೇ ಹೆಚ್ಚು ಲಾಭ ಪಡೆಯಬಹುದು. ಗರಿಷ್ಠ ಮಟ್ಟದಲ್ಲಿದ್ದಾಗ ಹೂಡಿಕೆ ಮಾಡಿದಲ್ಲಿ ಅಲ್ಪಲಾಭಕ್ಕೆ ದೀರ್ಘಕಾಲ ಹೂಡಿಕೆ ಮಾಡಬೇಕಾಗುತ್ತದೆ.

ಬೋನಸ್ ಷೇರು: ಎಂಎಂಟಿಸಿ ಲಿ. ಕಂಪನಿಯು 1:2 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಆಯಿಲ್ ಇಂಡಿಯಾ ಕಂಪನಿ ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಮತ್ತು ಗೇಲ್ ಇಂಡಿಯಾ ವಿತರಿಸಲಿರುವ 1:3 ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 29 ನಿಗದಿತ ದಿನವಾಗಿದೆ. ಕೇಳ್ಟಾನ್ ಟೆಕ್ ಸೊಲ್ಯೂಷನ್ಸ್ ಕಂಪನಿಯು ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ 29 ನಿಗದಿತ ದಿನವಾಗಿದೆ.

ಹೊಸ ಷೇರು: ಲೇಮನ್ ಟ್ರೀ ಹೋಟೆಲ್ಸ್ ಕಂಪನಿಯು ಪ್ರತಿ ಷೇರಿಗೆ ₹ 54 ರಿಂದ ₹ 56 ರ ಅಂತರದಲ್ಲಿ ಮಾರ್ಚ್ 26 ರಿಂದ 28 ರ ವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 265 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಮುಖಬೆಲೆ ಸೀಳಿಕೆ: ಲುಮ್ಯಾಕ್ಸ್ ಆಟೊ ಟೆಕ್ನಾಲಜಿಸ್ ಕಂಪನಿ ಷೇರಿನ ಮುಖಬೆಲೆಯನ್ನು ₹ 10 ರಿಂದ ₹ 2 ಕ್ಕೆ ಸೀಳಲು ನಿರ್ಧರಿಸಿದೆ.

**
ವಾರದ ಮುನ್ನೋಟ

ಈ ವಾರವು ಅಲ್ಪಾವಧಿಯದಾಗಿದ್ದು, ಕೇವಲ 3 ದಿನಗಳ ವಹಿವಾಟು ಇರುತ್ತದೆ. ಅಲ್ಲದೆ ಬುಧವಾರವು ಮೂಲಾಧಾರಿತ ಪೇಟೆಯ ಚುಕ್ತಾದಿನದ ವಹಿವಾಟಿಗೆ ಕೊನೆ ದಿನವಾಗಿದೆ. ಇದು ಪೇಟೆಯಲ್ಲಿ ರಭಸದ ಏರಿಳಿತಗಳನ್ನು ಪ್ರದರ್ಶಿಸಬಲ್ಲ ವಾತಾವರಣಕ್ಕೆ ದಾರಿಯಾಗಿದೆ.

ಏಪ್ರಿಲ್ ತಿಂಗಳಿನಿಂದ ಹೊಸ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ನಿಯಮಗಳು ಜಾರಿಯಾಗಲಿವೆ. ಏಪ್ರಿಲ್ 5 ರಂದು ಆರ್‌ಬಿಐ ತನ್ನ ದ್ವೈಮಾಸಿಕ ಸಾಲ ನೀತಿ ಪ್ರಕಟಿಸುವ ಕಾರ್ಯ ಸೂಚಿಯಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಾಣಿಜ್ಯ ಸಮರದ ಬೆಳವಣಿಗೆಗಳು, ಸ್ಥಳೀಯವಾಗಿ ನಡೆಯುತ್ತಿರುವ ‘ಎನ್‌ಪಿಎ’ ಕಾರಣಕ್ಕೆ ರೋಗಗ್ರಸ್ತ ಕಂಪನಿಗಳ ಸ್ವಾಧೀನ ಪ್ರಕ್ರಿಯೆಗಳು, ಕಾನೂನಾತ್ಮಕ ಬೆಳವಣಿಗೆಗಳು, ಲೋಕಸಭೆಯಲ್ಲಿನ ಅವಿಶ್ವಾಸ ನಿರ್ಣಯದ ಬೆಳವಣಿಗೆಗಳು  ಪ್ರಭಾವಿಯಾಗಿರುವ ಸಾಧ್ಯತೆ ಇದೆ.

**

579 ಅಂಶ - ಸಂವೇದಿ ಸೂಚ್ಯಂಕದ ವಾರದ ಕುಸಿತ

525 ಅಂಶ - ಮಧ್ಯಮ ಶ್ರೇಣಿ ಸೂಚ್ಯಂಕದ ನಷ್ಟ

775 ಅಂಶ - ಕೆಳಮಧ್ಯಮ ಶ್ರೇಣಿ ಸೂಚ್ಯಂಕದ ನಷ್ಟ

₹ 2,524 ಕೋಟಿ - ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆ

₹ 211 ಕೋಟಿ - ಸ್ವದೇಶಿ ವಿತ್ತೀಯ ಸಂಸ್ಥೆಗಳ ಖರೀದಿ

₹ 139.30 ಲಕ್ಷ ಕೋಟಿ - ಪೇಟೆಯ ಬಂಡವಾಳೀಕರಣ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.