ADVERTISEMENT

ತ್ವರಿತ ವಹಿವಾಟು, ಶೀಘ್ರ ಲಾಭ

ಕೆ.ಜಿ ಕೃಪಾಲ್
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST
ತ್ವರಿತ ವಹಿವಾಟು, ಶೀಘ್ರ ಲಾಭ
ತ್ವರಿತ ವಹಿವಾಟು, ಶೀಘ್ರ ಲಾಭ   

ಹಣಕಾಸು ವರ್ಷದ  ಕೊನೆಯ  ಹಂತದಲ್ಲಿರುವ ಈ ಸಂದರ್ಭದಲ್ಲಿ  ವಿತ್ತೀಯ ಸಂಸ್ಥೆಗಳು, ಶ್ರೀಮಂತರು, ತಮ್ಮ ವಾರ್ಷಿಕ ಹಣಕಾಸಿನ ಪರಿಸ್ಥಿತಿ ಸರಿಪಡಿಸಿಕೊಳ್ಳಲು ಹವಣಿಸುತ್ತಾರೆ. 

ಕೆಲವು ಕಂಪೆನಿಗಳ ವಹಿವಾಟು ನಡೆದ ಷೇರುಗಳ ಸಂಖ್ಯೆ  ದಿಢೀರ್ ಹೆಚ್ಚಾಗುವುದರೊಂದಿಗೆ ಬೆಲೆಯೂ  ಹೆಚ್ಚಾಗಲು ಇದೂ ಒಂದು ಕಾರಣ. ಇಂತಹ ಪರಿಸ್ಥಿತಿಗಳನ್ನು ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಳ್ಳುವುದು ಸೂಕ್ತ. ಹೊಸ ಹೂಡಿಕೆಗೆ ಹೆಚ್ಚಿನ ತುಲನಾತ್ಮಕ ನಿರ್ಧಾರ ಅಗತ್ಯ.  ಸೋಮವಾರ ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪ್ ಕಂಪೆನಿ  ತನ್ನದೇ ಸಮೂಹದ ಬಾಂಬೆ ಡೈಯಿಂಗ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯ 4.92  ಕೋಟಿ ಷೇರುಗಳನ್ನು ₹68.60 ರಲ್ಲಿ ಖರೀದಿಸಿದೆ.  ಈ ಕಾರಣ ಷೇರಿನ ಬೆಲೆಯು ₹80 ನ್ನು ದಾಟಿ ವಾರ್ಷಿಕ ಗರಿಷ್ಠ ದಾಖಲಿಸಿದೆ.
ಎಡಿಎಜಿ ಸಮೂಹದ ರಿಲಯನ್ಸ್ ಕಂಪೆನಿಯು  ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನವೂ  ರಿಲಯನ್ಸ್ ಪವರ್ ಕಂಪೆನಿಯ 6 ಕೋಟಿ ಷೇರುಗಳ ವಹಿವಾಟು  ದಾಖಲಿಸಿದೆ.

ಸೋಮವಾರದಿಂದ ಇದುವರೆಗೂ ಸತತ ಇಳಿಕೆ ಕಂಡಿದ್ದ ದಿವೀಸ್ ಲ್ಯಾಬ್, ಜೆ ಬಿ ಕೆಮಿಕಲ್ಸ್,  ಬಾಲ್ಮರ್ ಲೌರಿ,  ಸಿಂಜೀನ್ ಇಂಟರ್ ನ್ಯಾಷನಲ್‌ ಷೇರು   ಗಮನಾರ್ಹ ಏರಿಕೆ ಪ್ರದರ್ಶಿಸಿದರೆ,  ಮಂಗಳವಾರ ಅಮೆರಿಕದ ಎಫ್‌ಡಿಎ ಕ್ರಮದ ಕಾರಣ ದಿಢೀರ್ ಬದಲಾಗಿ ದಿವೀಸ್ ಲ್ಯಾಬ್ ಕುಸಿತ ಕಂಡಿತು.   ಈ ವಾತಾವರಣದಲ್ಲಿ ಸರ್ಕಾರಿ ವಲಯದ ಬಿ ಎಚ್ಇಎಲ್  ವಾರ್ಷಿಕ ಗರಿಷ್ಠ ದಾಖಲಿಸಿತು. ಅಂದರೆ, ಈಗಿನ ವಹಿವಾಟಿನ ರೀತಿಯು ಚಕ್ರಾಕಾರದಲ್ಲಿ ನಡೆಯುತ್ತಿದೆ ಎಂಬುದನ್ನು ದೃಢೀಕರಿಸುತ್ತದೆ.    ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಕಂಪೆನಿಗಳು ಅತ್ಯಲ್ಪಾವಧಿಯಲ್ಲೇ  ಎರಡನೇ ಮಧ್ಯಂತರ ಲಾಭಾಂಶ ಪ್ರಕಟಿಸಿರುವುದು ಮತ್ತು  ಕೋಲ್ ಇಂಡಿಯಾ  ಭಾನುವಾರ ಪ್ರಕಟಿಸುತ್ತಿರುವುದು ಸೋಜಿಗದ ಸಂಗತಿ. ಆದರೂ ಇದು ವರ್ಷಾಂತ್ಯದ ಹೊಂದಾಣಿಕೆ ಕ್ರಮವಾಗಿದ್ದು, ಸರ್ಕಾರದ ಖಜಾನೆಗೆ ಕಂಪೆನಿಯ ಖಾತೆಗಳಿಂದ ಹಣ ವರ್ಗಾವಣೆಯಾಗುವ ಈ ಪ್ರಕ್ರಿಯೆಯು ಹೂಡಿಕೆದಾರರನ್ನು ಸಂತೋಷಪಡಿಸುವಂತಹದ್ದು ಆಗಿದೆ.  ಈ ಕಂಪೆನಿಗಳು ಪ್ರಕಟಿಸಿದ ಲಾಭಾಂಶಗಳಿಗೆ ಅನುಗುಣವಾಗಿ ಪೇಟೆಯು ಸ್ಪಂದಿಸಲಿಲ್ಲ.

ADVERTISEMENT

ಸರ್ಕಾರ  ತನ್ನಲ್ಲಿರುವ ಆಕ್ಸಿಸ್ ಬ್ಯಾಂಕ್, ಲಾರ್ಸೆನ್ ಅಂಡ್ ಟೋಬ್ರೊ ಷೇರುಗಳನ್ನೂ ಮಾರಾಟಮಾಡಲಿದೆ ಎಂಬ ಸುದ್ದಿಯು ಈ ಕಂಪೆನಿಗಳ ಷೇರುಗಳಲ್ಲಿ ಸ್ವಲ್ಪ ಏರಿಳಿತ ಉಂಟುಮಾಡಿತು. ಆದರೆ, ಆ ಸುದ್ದಿಯು ದೃಢೀಕೃತವಾಗಿಲ್ಲ. ಷೇರುಪೇಟೆಯಲ್ಲಿ ಸಹಜತೆಗಿಂತ  ಸುದ್ದಿ ಸಮಾಚಾರಗಳಿಗೆ ಹೆಚ್ಚು ಮಾನ್ಯತೆ ಎಂಬುದಕ್ಕೆ ಹಿಂದುಸ್ತಾನ್ ಜಿಂಕ್ ಷೇರಿನ ಏರಿಳಿತಗಳು ಉತ್ತಮ ನಿದರ್ಶನವಾಗಿದೆ. 

ಕಂಪೆನಿಯು ಮಾರ್ಚ್‌ 22 ರಂದು ಮಧ್ಯಂತರ ಲಾಭಾಂಶ ಪರಿಶೀಲಿಸಲಿದೆ ಎಂಬ ಸುದ್ದಿಯು ಷೇರಿನ ಬೆಲೆಯನ್ನು ₹290 ರ ಸಮೀಪದಿಂದ ₹314ರ ವರೆಗೂ ಜಿಗಿತ ಕಾಣುವಂತೆ ಮಾಡಿತು.  ಈ ಕಂಪೆನಿಯು ಆಕರ್ಷಕ ಲಾಭಾಂಶ ಪ್ರಕಟಿಸಬಹುದೆಂಬ ನಿರೀಕ್ಷೆಯೇ ಈ ಭಾರಿ ಜಿಗಿತಕ್ಕೆ ಪ್ರೇರಣೆಯಾಗಿದೆ. ಆದರೆ, ಕಂಪೆನಿಯು ಪ್ರತಿ ಷೇರಿಗೆ ₹27.50  ರಂತೆ ಲಾಭಾಂಶ ಪ್ರಕಟಿಸಿದರೂ  ಷೇರಿನ ಬೆಲೆಯಲ್ಲಿ ಆ ಪ್ರಮಾಣದ ಏರಿಕೆ ಕಂಡುಬರಲಿಲ್ಲ. 
ಪೇಟೆಯಲ್ಲಿ ಚಟುವಟಿಕೆಗಳಿಗೆ ಹೆಚ್ಚು ಪ್ರಭಾವಿಯುತ ಅಂಶವೆಂದರೆ ಅಮೆರಿಕದ ಎಫ್‌ಡಿಎ ಕ್ರಮವೆಂಬುದು ಮತ್ತೊಮ್ಮೆ ದೃಢಪಟ್ಟಿದೆ.  ಫಾರ್ಮಾ ವಲಯದ  ಪ್ರಮುಖ ಕಂಪೆನಿ ದಿವೀಸ್ ಲ್ಯಾಬ್ ಸೋಮವಾರ ₹795 ತಲುಪಿ ₹791ರ ಸಮೀಪ ಕೊನೆಗೊಂಡಿತು.  ಆದರೆ,  ಕಂಪೆನಿಯ ವಿಶಾಖಪಟ್ಟಣದ ಘಟಕದ ಎಫ್‌ಡಿಎ ತನಿಖೆಯು 'ಇಂಪೋರ್ಟ್ ಅಲರ್ಟ್' ಗೊಳಗಾದ ಕಾರಣ ಮಂಗಳವಾರದ ಆರಂಭಿಕ ಕ್ಷಣದಲ್ಲೇ ಷೇರಿನ ಬೆಲೆಯು ಭಾರಿ ಕುಸಿತ ಕಂಡು ಸುಮಾರು ₹157 ರಷ್ಟು ಇಳಿಕೆಯೊಂದಿಗೆ ಕೊನೆಗೊಂಡಿತು. ಡಾ. ರೆಡ್ಡಿಸ್ ಲ್ಯಾಬ್‌ನ ತನಿಖೆಯಲ್ಲಿ 2015ರಲ್ಲಿನ ದೋಷಗಳೇ ಪುನಾರಾವರ್ತಿತವಾಗಿವೆ ಎಂಬ ಅಂಶವು  ಷೇರಿನ ಬೆಲೆಯನ್ನು  ₹120 ರಷ್ಟು ಕೆಳ ಜಗ್ಗಿತು. ಬುಧವಾರ ಈ 2 ಕಂಪೆನಿಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

ಈ ವಾರ ಸಂವೇದಿ ಸೂಚ್ಯಂಕವು 227 ಅಂಶಗಳ ಇಳಿಕೆ ಕಂಡರೆ,  ಮಧ್ಯಮ ಶ್ರೇಣಿಯ ಸೂಚ್ಯಂಕವು 43 ಅಂಶಗಳ ಇಳಿಕೆ ಕಂಡಿದೆ. ಆದರೆ, ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 64 ಅಂಶಗಳ ಏರಿಕೆ ಪ್ರದರ್ಶಿಸಿದೆ.  ವಿದೇಶಿ ವಿತ್ತೀಯ ಸಂಸ್ಥೆಗಳು ₹3,713 ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,588 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟಮಾಡಿವೆ.  ಪೇಟೆಯ ಬಂಡವಾಳೀಕರಣ ಮೌಲ್ಯವು ₹120.18ಲಕ್ಷ ಕೋಟಿಗೆ ಇಳಿದಿತ್ತು.
ಲಾಭಾಂಶ: ಬಿಇಎಲ್ ಕಂಪೆನಿಯು ₹1ರ ಮುಖಬೆಲೆಯ ಷೇರಿಗೆ ₹0.90ರ ಎರಡನೇ ಮಧ್ಯಂತರ ಲಾಭಾಂಶ ಪ್ರಕಟಿಸಿದೆ.  ಈ ತಿಂಗಳ 30 ನಿಗದಿತ ದಿನವಾಗಿದೆ. ಮೈಂಡ್ ಟ್ರೀ ಕಂಪೆನಿ 27ರಂದು  ಪ್ರಕಟಿಸಲಿರುವ  ಲಾಭಾಂಶಕ್ಕೆ ಏ.1 ನಿಗದಿತ  ದಿನವಾಗಿದೆ.

ಕೋಲ್ ಇಂಡಿಯಾ 26 ರಂದು ಎರಡನೇ ಮಧ್ಯಂತರ ಲಾಭಾಂಶ ಪರಿಶೀಲಿಸಲಿದೆ. ಇದಕ್ಕಾಗಿ ಮಾರ್ಚ್ 29 ನಿಗದಿತ ದಿನವಾಗಿದೆ. ಎನ್‌ಬಿಸಿಸಿ ಇಂಡಿಯಾ ಕಂಪೆನಿಯು 29 ರಂದು ಮಧ್ಯಂತರ ಲಾಭಾಂಶ ಪ್ರಕಟಿಸಲಿದೆ.

ಹೊಸ ಷೇರು : ಈಗಿನ ಪೇಟೆಗಳು ಎಷ್ಟು ತ್ವರಿತ - ಹರಿತ ಎಂದರೆ ಮಂಗಳವಾರ, ಇತ್ತೀಚಿಗೆ ಪ್ರತಿ ಷೇರಿಗೆ ₹299 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ ಕಂಪೆನಿ ಅವೆನ್ಯೂ ಸೂಪರ್ ಮಾರ್ಕೆಟ್ಸ್ ಲಿಮಿಟೆಡ್‌ ವಹಿವಾಟಿಗೆ ಬಿಡುಗಡೆಯಾಗಿ ಆರಂಭದಲ್ಲಿ ₹615 ರಿಂದ ₹558ರ ಸಮೀಪಕ್ಕೆ ಕುಸಿದು ನಂತರ ₹641 ರಲ್ಲಿ ಕೊನೆಗೊಂಡಿತು. 

ಐಪಿಒನಲ್ಲಿ ಷೇರುಪಡೆದವರ ಹಣ ದ್ವಿಗುಣಗೊಂಡಿತು.  ಕಂಪೆನಿಯ ಪ್ರವರ್ತಕರು ₹10ರ ಮುಖಬೆಲೆಯ ಷೇರನ್ನು ₹299ರಂತೆ ವಿತರಿಸಲು ಸುಮಾರು 16 ವರ್ಷ ಬೇಕಾಯಿತು.  ಆದರೆ ಐಪಿಒನಲ್ಲಿ ಷೇರು ಪಡೆದವರು ₹299 ನ್ನು ₹641ಕ್ಕೆ  ಬೆಳೆಸಲು ಕೇವಲ ಒಂದೇ ದಿನ ಸಾಕಾಯಿತು. ಇದೇ ಪೇಟೆಯ ವಿಸ್ಮಯಕಾರಿ ಗುಣ. ಇಲ್ಲಿ ಭಾವನಾತ್ಮಕ ಅಂಶವಿಲ್ಲದೆ ಲಾಭ ನಗದೀಕರಿಸಿಕೊಂಡಲ್ಲಿ ಸುರಕ್ಷಿತ ಲಾಭ ಗಟ್ಟಿ.

ಅಹ್ಮದಾಬಾದ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ  ₹1ರ ಮುಖಬೆಲೆಯ ಆಂಟಿಕ್ ಫಿನ್ ಸರ್ವ್ ಲಿಮಿಟೆಡ್ ಷೇರುಗಳು 24 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

ಕೋಲ್ಕತ್ತ ಮತ್ತು ದೆಹಲಿ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ  ವಿಶ್ವೇಶಂ  ಇನ್ವೆಸ್ಟಮೆಂಟ್ಸ್ ಆ್ಯಂಡ್ ಟ್ರೇಡಿಂಗ್  ಲಿಮಿಟೆಡ್‌ ಷೇರುಗಳು  24ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.
ಹಕ್ಕಿನ ಷೇರು : ಮಹೀಂದ್ರ ಲೈಫ್ ಸ್ಪೇಸ್ ಡೆವಲಪರ್ಸ್  ಲಿಮಿಟೆಡ್ 1:4ರ ಅನುಪಾತದಲ್ಲಿ ಪ್ರತಿ ಷೇರಿಗೆ ₹292ರಂತೆ ಹಕ್ಕಿನ ಷೇರು ವಿತರಿಸಲು  ಈ ತಿಂಗಳ 31ನಿಗದಿತ ದಿನವಾಗಿದೆ.

ಅಮಾನತು ತೆರವು: ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಮತ್ತು ಮಂಥನ ಇಂಡಸ್ಟ್ರೀಸ್ ಲಿಮಿಟೆಡ್‌ ಮಾರ್ಚ್ 27 ರಿಂದ ಲಿಸ್ಟಿಂಗ್ ನಿಯಮ ಪಾಲನೆಯಲ್ಲಿ ಲೋಪವಾಗಿದೆ ಎಂಬ ಕಾರಣಕ್ಕೆ  ಅಮಾನತುಗೊಳ್ಳುವುದೆಂದು ಈ ಹಿಂದೆ  ಪ್ರಕಟಿಸಲಾಗಿತ್ತು. 

ಈ ಕಂಪೆನಿಗಳು ತಮ್ಮ ಲೋಪ ಸರಿಪಡಿಸಿಕೊಂಡಿರುವ ಕಾರಣ ಅಮಾನತು ಹಿಂದಕ್ಕೆ ಪಡೆಯಲಾಗಿದೆ. ಎಸ್‌ಕೆಎಂ ಎಗ್ ಪ್ರಾಡಕ್ಟ್ಸ್  ಎಕ್ಸ್‌ಪೋರ್ಟ್ಸ್‌ (ಇಂಡಿಯಾ) ಲಿಮಿಟೆಡ್  ಕಂಪೆನಿಯ ಷೇರುಗಳು ಜುಲೈ  2012 ರಿಂದ ಅಮಾನತುಗೊಂಡಿದ್ದು,  ಈಗ ಅಮಾನತು ತೆರವುಗೊಂಡು ಈ ತಿಂಗಳ 30 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಷೇರುಪೇಟೆಯ ಎಲ್ಲ ವಲಯದ ಷೇರುಗಳು ಗರಿಷ್ಠ ಮಟ್ಟದಲ್ಲಿರುವ ಕಾರಣ ವಹಿವಾಟುದಾರರ ಆಸಕ್ತಿಯು ಒಂದರಿಂದ ಮತ್ತೊಂದಕ್ಕೆ ಜಿಗಿಯುತ್ತಿದೆ. ಅದು ಅಗ್ರಮಾನ್ಯ ವಲಯದ ಕಂಪೆನಿಯಾಗಿರಬಹುದು ಅಥವಾ ಮಧ್ಯಮ, ಕೆಳಮಧ್ಯಮ ಶ್ರೇಣಿಯ ವಲಯದ್ದು ಆಗಿರಬಹುದು. ಎಲ್ಲವನ್ನು ವ್ಯಾವಹಾರಿಕ ಲಾಭದ ದೃಷ್ಟಿಯಿಂದ  ಮಾತ್ರ ನೋಡಲಾಗುತ್ತಿದೆ. 

ಮೇಲಾಗಿ ವರ್ಷಾಂತ್ಯದ ಕಾರಣ ಕೆಲವು ಹಿತಾಸಕ್ತ ಚಟುವಟಿಕೆಯು ಷೇರಿನ ಬೆಲೆಗಳನ್ನು ಗಗನಕ್ಕೇರುವಂತೆ ಮಾಡಿರುವುದರಿಂದ ಈಗಿನ ಬೆಲೆಗಳಲ್ಲಿ ಹೂಡಿಕೆ ಮಾಡಲಿಚ್ಚಿಸುವವರು ಅತಿ ಹೆಚ್ಚಿನ ಎಚ್ಚರಿಕೆ ವಹಿಸಿ ನಿರ್ಧರಿಸಬೇಕು.  ಷೇರುಪೇಟೆಯನ್ನು ಚುರುಕಾಗಿರಿಸಲು ವಿನಿಮಯ ಕೇಂದ್ರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುತ್ತವೆ.

ಅಂತಹ ಕ್ರಮಗಳಲ್ಲಿ  ಹೊಸದಾಗಿ 15 ಕಂಪೆನಿಗಳನ್ನು ಮೂಲಾಧಾರಿತ ಪೇಟೆಯ ಪಟ್ಟಿಗೆ ಸೇರಿಸಲಾಗಿದ್ದು, ಮುಂದಿನ, ಅಂದರೆ ಮಾರ್ಚ್ 31 ರಿಂದ ಆರಂಭವಾಗುವ ಚುಕ್ತಾ ಚಕ್ರದಿಂದ ದಾಲ್ಮಿಯಾ ಭಾರತ್, ಪಿವಿಆರ್, ಸುಜುಲಾನ್ ಎನರ್ಜಿ, ಇಂಟರ್ ಗ್ಲೋಬಲ್ ಏವಿಯೇಷನ್, ಪಿರಾಮಲ್ ಇಂಟರ್ ಪ್ರೈಸಸ್, ಎಸ್ಕಾರ್ಟ್ಸ್, ಇಂಡಿಯನ್ ಬ್ಯಾಂಕ್, ಇಕ್ವಿಟಾಸ್ ಹೋಲ್ಡಿಂಗ್ಸ್,  ಉಜ್ಜೀವನ್ ಫೈನಾನ್ಸ್, ಮುಂತಾದವನ್ನು ಸೇರಿಸಲಾಗಿದೆ. 

ಆದರೂ, ಪೇಟೆಯಲ್ಲಿ ಸೀಮಿತವಾದ ಸ್ಪಂದನ ದೊರೆತಿದೆ.  ಈ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್  ಸರ್ಕಾರಿ ವಲಯದ 4 ಬ್ಯಾಂಕ್‌ಗಳನ್ನು  ಕಳಪೆ ಸಾಲಗಳ  ಕಾರಣ ‘ವಾಚ್ ಲಿಸ್ಟ್’ ನಲ್ಲಿರಿಸಿದೆ ಎಂಬ ಸುದ್ದಿಯು ಆತಂಕಕಾರಿಯಾಗಿದೆ.   ಅಂತರ ರಾಷ್ಟ್ರೀಯ ಹೂಡಿಕೆ ಕಂಪೆನಿ ಮಾರ್ಗನ್ ಸ್ಟಾನ್ಲಿ ಸಂಸ್ಥೆಯು ಖಾಸಗಿ ವಲಯದ ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ಗಳನ್ನು ಕೆಳ ದರ್ಜೆಗೆ ಇಳಿಸಿದ್ದು  ಪೇಟೆಯು ಇದಕ್ಕೆ ಸ್ಪಂದಿಸುವ ದಿನವಿನ್ನೂ ನಿಗದಿಯಾಗಿಲ್ಲ.  

ಸಂವೇದಿ ಸೂಚ್ಯಂಕವು ಏರಿಕೆಯಲ್ಲಿ ಒಂದು ದಿನ ಎಚ್‌ಡಿಎಫ್‌ಸಿ ಬ್ಯಾಂಕ್ ಕೊಡುಗೆ ನೀಡಿದರೆ, ಮತ್ತೊಂದು ಬಾರಿ ಮಾರುತಿ ಸುಜುಕಿ, ಇನ್ನೊಂದು ದಿನ ಆಕ್ಸಿಸ್ ಬ್ಯಾಂಕ್ ಆದರೆ ಇನ್ನೊಮ್ಮೆ ಲಾರ್ಸನ್ ಟೋಬ್ರೊ    ಕೊಡುಗೆ ನೀಡಿ ಸೂಚ್ಯಂಕವನ್ನು ಎತ್ತಿಹಿಡಿದಿದೆ. ಪೇಟೆಯಲ್ಲಿ ನಿರ್ಧಾರಗಳು ಭಾವನಾತ್ಮಕವಾಗಿರದೆ ಮೌಲ್ಯವರ್ಧಿತವಾಗಿರಬೇಕು.  ಆಗಲೇ ಫಲಿತಾಂಶ ಉತ್ತಮವಾಗಿರುತ್ತದೆ.

ಲಾಭಾಂಶ

ಹಿಂದುಸ್ತಾನ್ ಜಿಂಕ್ ಕಂಪೆನಿ
ಪ್ರತಿ ಷೇರಿಗೆ ₹27.50ರ ಲಾಭಾಂಶ ಪ್ರಕಟಿಸಿದೆ.(ಮುಖ ಬೆಲೆ: 2, ನಿಗದಿತ ದಿನ ಮಾರ್ಚ್‌ 28), 

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಪ್ರತಿ ಷೇರಿಗೆ ₹12, (ಮಾ. 27)

ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್  ₹.6.40  ( ಮಾ. 27 ),
 
ಇಂಡಿಯನ್ ಆಯಿಲ್ ಕಾರ್ಪೊರೇಷನ್   ₹.4.50 ( ಮಾ.27 ) 
 
ಭಾರತಿ ಇನ್ಫ್ರಾ ಟೆಲ್   ₹12 (ಏ. 3 )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.