ADVERTISEMENT

ಬಾಹ್ಯ ವಿದ್ಯಮಾನಗಳ ಪ್ರಭಾವ

ಕೆ.ಜಿ ಕೃಪಾಲ್
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಷೇರುಪೇಟೆಯ ಸೂಚ್ಯಂಕಗಳು ವಾರ್ಷಿಕ ಗರಿಷ್ಠ ತಲುಪಿವೆ. ಆದರೆ,  ಪೇಟೆಯ ಬಂಡವಾಳೀಕರಣ ಮೌಲ್ಯ ಮಾತ್ರ ಸಾರ್ವಕಾಲೀನ ಗರಿಷ್ಠ ಮೊತ್ತ ದಾಖಲಿಸಿದೆ.  ಗುರುವಾರ ಮುಂಬೈ ಷೇರು ವಿನಿಮಯ ಕೇಂದ್ರದ ಬಂಡವಾಳೀಕರಣ ಮೌಲ್ಯವು ₹120.32 ಲಕ್ಷ ಕೋಟಿಗೆ ಜಿಗಿದು  ಹೊಸ ದಾಖಲೆ ಮಾಡಿದೆ. 
 
ಸಂವೇದಿ ಸೂಚ್ಯಂಕವು  2005ರ ಮಾರ್ಚ್ 4 ರಂದು 30,024.74 ಅಂಶಗಳಿಗೆ ತಲುಪಿ ಸಾರ್ವಕಾಲೀನ ಗರಿಷ್ಠದಾಖಲಿಸಿದಾಗಲೂ  ಪೇಟೆಯ ಬಂಡವಾಳೀಕರಣ ಮೌಲ್ಯವು ಕೇವಲ ₹105.39 ಲಕ್ಷ ಕೋಟಿಯಲ್ಲಿತ್ತು.  
 
ಸೋಮವಾರ ಹೋಳಿ ರಜೆಯ ನಂತರದಲ್ಲಿ    ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಪ್ರೇರಣೆಯಿಂದ ಮಂಗಳವಾರ ದಿನದ ಮಧ್ಯಂತರದಲ್ಲಿ 29,561.93 ರ ವಾರ್ಷಿಕ ಗರಿಷ್ಠದಾಖಲಿಸಿದ ಸೂಚ್ಯಂಕವು  496 ಅಂಶಗಳ ಭಾರಿ ಏರಿಕೆ ಪ್ರದರ್ಶಿಸಿತು. 
 
ಅಂದು ಅಗ್ರಮಾನ್ಯ ಕಂಪೆನಿಗಳಾದ ಐಸಿಐಸಿಐ ಬ್ಯಾಂಕ್ ಸುಮಾರು ಶೇ 6, ಹಿಂದೂಸ್ತಾನ್ ಯುನಿಲಿವರ್ ಶೇ4.54, ಲಾರ್ಸನ್ ಅಂಡ್ ಟೋಬ್ರೊ ಶೇ4.4, ಏಷಿಯನ್ ಪೇಂಟ್ಸ್ ಶೇ 3.81, ಎಚ್ ಡಿಎಫ್‌ಸಿ ಶೇ 3.68, ಸನ್ ಫಾರ್ಮಾ ಶೇ 3.61, ಮಾರುತಿ ಶೇ 3.02 ರಷ್ಟು ಹೆಚ್ಚಳ ದಾಖಲಿಸಿದ ಕಾರಣ ಭಾರಿ ಏರಿಕೆ ಕಂಡವು. ಆದರೆ, ನಂತರದ ದಿನ  ಹಿಂದೂಸ್ತಾನ್ ಯುನಿಲಿವರ್,  ಏಷಿಯನ್ ಪೇಂಟ್ಸ್ ಇಳಿಕೆಯಾದವು.    
 
ವಾರಾಂತ್ಯದ ದಿನ  ಐಟಿಸಿ ಷೇರಿನ ಬೆಲೆ ₹20ಕ್ಕೂ ಹೆಚ್ಚಿನ ಹೆಚ್ಚಳ ಕಂಡು ಅಂತ್ಯದಲ್ಲಿ ₹13 ಏರಿಕೆ ದಾಖಲಿಸಿತು.  ಭಾರ್ತಿ ಏರ್‌ಟೆಲ್  ಷೇರಿನ ಬೆಲೆ ₹361ರ ಗರಿಷ್ಠದಿಂದ ₹343ರವರೆಗೂ ಕುಸಿದಿರುವುದು ಮತ್ತೊಂದು ವಿಸ್ಮಯಕಾರಿ ಅಂಶ.   
 
ಪೇಟೆಯ ಸೂಚ್ಯಂಕಗಳು ಏರಿಕೆ ಕಾಣುತ್ತಿರುವುದಕ್ಕೆ ಮುಖ್ಯ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಹರಿದುಬರುತ್ತಿರುವ ಹಣದ ಪ್ರವಾಹವೇ ಆಗಿದೆ.

ವಿದೇಶಿ ವಿತ್ತೀಯ ಸಂಸ್ಥೆಗಳು  ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ ಷೇರು ಖರೀದಿಸಿವೆ.  ಇನ್ನು ಸ್ವದೇಶಿ ವಿತ್ತೀಯ ಸಂಸ್ಥೆಗಳು ಲಾಭದ ನಗದೀಕರಣಕ್ಕೆ ಮುಂದಾಗಿವೆ.  ಈ ಎರಡು ವಿತ್ತೀಯ ಸಂಸ್ಥೆಗಳ ಸಮೂಹಗಳ 'ಮ್ಯೂಸಿಕಲ್ ಚೇರ್' ಆಟವು ಹತ್ತಾರು ಹೂಡಿಕೆ ಅವಕಾಶ ಸೃಷ್ಟಿಸಿರುವುದು ಕಂಡು ಬರುತ್ತಿದೆ. 
 
ಷೇರಿನ  ಮುಖಬೆಲೆ ಸೀಳಿಕೆಯಾದಲ್ಲಿ ಲಾಭ ಗಳಿಕೆಗೆ ಅವಕಾಶ ಹೇಗೆ ಸೃಷ್ಟಿಯಾಗುತ್ತದೆ  ಎಂಬುದಕ್ಕೆ ಈ ವಾರ ಸರ್ಕಾರಿ ವಲಯದ ಭಾರತ್ ಎಲೆಕ್ ಟ್ರಾನಿಕ್ಸ್ ಲಿಮಿಟೆಡ್  ಷೇರಿನ ಮುಖಬೆಲೆಯನ್ನು ₹10 ರಿಂದ₹1 ಕ್ಕೆ ಸೀಳಲು ಮಾರ್ಚ್ 17 ನಿಗದಿತ ದಿನವಾಗಿತ್ತು.  
 
16 ರಿಂದ ಹೊಸ ಅವತಾರದಲ್ಲಿ ಅಂದರೆ₹1ರ ಮುಖಬೆಲೆಯ ಷೇರು ವಹಿವಾಟಿಗೆ ಆರಂಭವಾಯಿತು. ₹10ರ ಮುಖಬೆಲೆಯ ಷೇರು ₹1,570ರ ಸಮೀಪ ವಹಿವಾಟು ಆಗುತ್ತಿತ್ತು. ಗುರುವಾರ ₹1ರ ಮುಖಬೆಲೆ ಷೇರು₹165ಕ್ಕೆ ಜಿಗಿತ ಕಂಡಿತು ಅಂದರೆ ₹10ರ ಮುಖಬೆಲೆ ಷೇರು ₹1,650 ರಂತೆ ವಹಿವಾಟಾದಂತಾಯಿತು.

ಈ ಹೊಸ ಅವತಾರದ ಷೇರು ಪೇಟೆಯಲ್ಲಿ ಆಸಕ್ತಿಯನ್ನು ಕೆರಳಿಸಿ ಆಕರ್ಷಕ ಏರಿಕೆ ಪ್ರದರ್ಶಿಸಿತಾದರೂ ಇದು ಸ್ಥಿರತೆ ಕಾಣುವ ಸಾಧ್ಯತೆ ಕಡಿಮೆಯಾಗಿರಲಿದೆ.  ಈ ರೀತಿಯ ದಿಢೀರ್ ಏರಿಕೆಯು ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶವಾಗಿದೆ.
 
ಐಡಿಯಾ ಸೆಲ್ಯುಲರ್ ಕಂಪೆನಿಯ ಟವರ್ ವ್ಯವಹಾರವನ್ನು ಬೇರ್ಪಡಿಸಲಿದೆ ಎಂಬ ಸುದ್ದಿಯಿಂದ ಷೇರಿನ ಬೆಲೆಯು ₹104ರ ಸಮೀಪದಿಂದ ₹115 ರವರೆಗೂ ಜಿಗಿತ ಕಾಣುವಂತಾಯಿತು. ಆದರೆ, ಕಂಪೆನಿಯು ಈ ವಿಷಯವನ್ನು ಅಲ್ಲಗಳೆದ ಕಾರಣ ಷೇರಿನ ಬೆಲೆಯು ₹108ರ ಸಮೀಪಕ್ಕೆ ಕುಸಿಯಿತು.   ಬಾಹ್ಯ ವಿಚಾರಗಳು ಎಷ್ಟರ ಮಟ್ಟಿಗೆ ಪ್ರಭಾವಿಯಾಗಿರುತ್ತವೆ ಎಂಬುದಕ್ಕೆ ಇದು ನಿದರ್ಶನ. 
 
ಹಿಂದೂಸ್ತಾನ್ ಜಿಂಕ್ ಕಂಪೆನಿಯ ಷೇರಿನ ಬೆಲೆಯು ₹291ರ ಸಮೀಪ ವಹಿವಾಟಾಗುತ್ತಿದ್ದು, ಬುಧವಾರ ಸಂಜೆ ಕಂಪೆನಿಯು 20ರಂದು ಲಾಭಾಂಶ ಪ್ರಕಟಿಸಲಿದೆ ಎಂಬ ಸುದ್ದಿಯ ಕಾರಣ ಷೇರಿನ ಬೆಲೆಯು ರಭಸದ ಏರಿಕೆಯಿಂದ ₹316 ರವರೆಗೂ ಏರಿಕೆ ದಾಖಲಿಸಿ,  ₹310 ರ ಸಮೀಪ ವಾರಾಂತ್ಯ ಕಂಡಿತು. 
 
ಕಳೆದ ಡಿಸೆಂಬರ್‌ನಲ್ಲಿ  ಪ್ರತಿ ಷೇರಿಗೆ ಮೂರು ಷೇರಿನಂತೆ ಬೋನಸ್ ಷೇರುಗಳನ್ನು ವಿತರಿಸಿದ ನಂತರ ಸತತವಾಗಿ ಇಳಿಕೆಯಾಗಿದ್ದ ಬಾಲ್ಮರ್ ಲೌರಿ ಕಂಪೆನಿಯ ಷೇರಿಗೆ ಗುರುವಾರ ದಿಢೀರ್ ಬೇಡಿಕೆ ಬಂದು ಷೇರಿನ ಬೆಲೆ ₹215 ರ ಸಮೀಪದಿಂದ ₹239ರ ಸಮೀಪಕ್ಕೆ ಜಿಗಿಯಿತು. ಶುಕ್ರವಾರ ₹236 ರವರೆಗೂ ಏರಿಕೆ ಕಂಡಿತ್ತು. 
 
ಒಟ್ಟಾರೆ ಸಂವೇದಿ ಸೂಚ್ಯಂಕವು ಈ ವಾರ 702 ಅಂಶ ಏರಿಕೆ ಕಂಡರೆ ಮಧ್ಯಮ ಶ್ರೇಣಿಯ ಸೂಚ್ಯಂಕ 527 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿಯ ಸುಚಂಕವು 407 ಅಂಶಗಳ ಏರಿಕೆ ಕಂಡವು.
 
ಹೊಸ ಷೇರು: ಪ್ರತಿ ಷೇರಿಗೆ ₹333 ರಂತೆ ಸಾರ್ವಜನಿಕ ವಿತರಣೆ ಮಾಡಿದ  ಮ್ಯೂಸಿಕ್ ಬ್ರಾಡ್‌ಕಾಸ್ಟ್ ಲಿಮಿಟೆಡ್ ಕಂಪೆನಿಯು 17 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ₹415 ರಿಂದ ₹367 ರವರೆಗೂ ವಹಿವಾಟಾಗಿ₹373ರ ಸಮೀಪ ವಾರಾಂತ್ಯ ಕಂಡಿತು.
 
ಅಹಮದಾಬಾದ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಫಾರ್ಮ್ಯಾಕ್ಸ್ ಫಾರ್ಮಾ ಲಿಮಿಟೆಡ್ ಕಂಪೆನಿಯ ಷೇರುಗಳು ಮುಂಬೈ ಷೇರು ವಿನಿಮಯ  ಕೇಂದ್ರದ ಎಕ್ಸ್‌ಟಿ ವಿಭಾಗದಲ್ಲಿ ವಹಿವಾಟಿಗೆ 16 ರಿಂದ ಬಿಡುಗಡೆಯಾಗಿದೆ.
 
ಸಿಎಲ್ ಎಜುಕೇಟ್ ಲಿಮಿಟೆಡ್ ಕಂಪೆನಿಯು ₹10 ರ ಮುಖಬೆಲೆಯ ಷೇರುಗಳನ್ನು ಪ್ರತಿ ಷೇರಿಗೆ ₹500 ರಿಂದ ₹502 ರವರೆಗಿನ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. ಮಾರ್ಚ್ 20 ರಿಂದ 22 ರವರೆಗೂ ಮಾಡಲಿದೆ. ಅರ್ಜಿಯನ್ನು 29 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ. ರಿಟೇಲ್ ಹೂಡಿಕೆದಾರರಿಗೆ ರಿಯಾಯಿತಿ ಇರುವುದಿಲ್ಲ.  
 
ಲಾಭಾಂಶ:ಎಂಜಿನೀಯರ್‍್ಸ್‌ ಇಂಡಿಯಾ ಪ್ರತಿ ಷೇರಿಗೆ ₹2.50 (ಮುಖಬೆಲೆ ₹5), ಹಿಂದೂಸ್ತಾನ್ ಜಿಂಕ್ 20 ರಂದು ಮಧ್ಯಂತರ ಲಾಭಾಂಶ ಪರಿಶೀಲಿಸಲಿದೆ (ನಿಗದಿತ ದಿನಾಂಕ ಮಾರ್ಚ್‌ 28), ಕಾಲ್ಗೇಟ್ ಪಾಮೋಲಿವ್‌ 27 ರಂದು ಮಧ್ಯಂತರ ಲಾಭಾಂಶ ಪರಿಶೀಲಿಸಲಿದೆ.
 
ಬೋನಸ್ ಷೇರು: ಕಂಟೇನರ್ ಕಾರ್ಪೊರೇಷನ್ ಕಂಪೆನಿ ವಿತರಿಸಲಿರುವ 1:4 ರ ಅನುಪಾತದ ಬೋನಸ್ ಷೇರಿಗೆ ಏಪ್ರಿಲ್ 6 ನಿಗದಿತ ದಿನ. 
 
ಬೆರ್ಡ್ ಸೆಲ್ ಕಂಪೆನಿ 1:5ರ ಅನುಪಾತದ ಬೋನಸ್ ಪ್ರಕಟಿಸಿದೆ.  ಪಾಲಿಮೆಡಿಕ್ಯುರ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್‌ 28 ನಿಗದಿತ ದಿನವಾಗಿದೆ. 
 
ಮುಖಬೆಲೆ ಸೀಳಿಕೆ: ಬೆರ್ಡ್ ಸೆಲ್ ಕಂಪೆನಿ ಷೇರಿನ ಮುಖಬೆಲೆಯನ್ನು₹10 ರಿಂದ₹2 ಕ್ಕೆ ಸೀಳಲಿದೆ.
 
**
ಷೇರಿನ ಬೆಲೆಗಳು ಏರಿಕೆಯಲ್ಲಿ ಇರುವುದು ಮುಂದಿನ ದಿನಗಳಲ್ಲಿ ಇರಬಹುದಾದ ಟ್ರೆಂಡ್ ಎಂದು ಭಾವಿಸುವ ದಿನಗಳು ದೂರವಾಗಿವೆ.  ಇಂದು ಒಂದು ವರ್ಗ ಅಥವಾ ವಲಯದ ಷೇರುಗಳು ಏರಿಕೆ ಕಂಡರೆ ಅದು ಇಂದಿಗೆ ಮಾತ್ರ, ನಾಳೆಯ ದಿನದ ಚಟುವಟಿಕೆ ಬೇರೆ ಷೇರಿಗೆ, ವಲಯಕ್ಕೆ ಬದಲಾಗುತ್ತದೆ. 
 
ಇದಕ್ಕೆ ಮುಖ್ಯ ಕಾರಣ ಇಂದಿನ  ಷೇರಿನ ದರಗಳಲ್ಲಿ ಆಂತರಿಕ ಸಾಧನೆಗಿಂತ ಹೊರಗಿನ ಕಾರಣಗಳು ಹೆಚ್ಚು ಪ್ರಭಾವಿಯಾಗಿವೆ. ತ್ವರಿತವಾಗಿ ಹಣ ಮಾಡುವ ಒಂದೇ ಉದ್ದೇಶ ವಹಿವಾಟುಗಳಲ್ಲಿ ಎದ್ದು ಕಾಣುತ್ತದೆ.    ಅಮೆರಿಕದ ಎಫ್‌ಡಿಎ ಕ್ರಮ ಈ ಗುಣಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. 

ಫಾರ್ಮಾ ವಲಯದ ಕ್ಯಾಡಿಲ್ಲ ಹೆಲ್ತ್‌ಕೇರ್, ಆರು ತಿಂಗಳಲ್ಲಿ ಮೂರು ನಾಲ್ಕು ಬಾರಿ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ. ಇದರೊಂದಿಗೆ ಅಲೆಂಬಿಕ್ ಫಾರ್ಮಾ, ಸನ್ ಫಾರ್ಮಾ,  ಡಾಕ್ಟರ್ ರೆಡ್ಡಿಸ್ ಲ್ಯಾಬ್ ಏರಿಳಿತ ಕಂಡಿರುವುದು  ಈ ಗುಣಕ್ಕೆ ಉತ್ತಮ ಉದಾರಣೆ.  ಟೆಲಿಕಮ್ಯುನಿಕೇಷನ್ ವಿಭಾಗದ ಭಾರ್ತಿ ಈಗಿನ ಪೇಟೆಯ ಯಶಸ್ವಿ ಸೂತ್ರವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.