ADVERTISEMENT

ಷೇರುಪೇಟೆಯಲ್ಲಿ ಸಮೂಹ ಸನ್ನಿ ಪ್ರಭಾವ

ಕೆ.ಜಿ ಕೃಪಾಲ್
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಷೇರುಪೇಟೆಯಲ್ಲಿ  ಕಾಣುತ್ತಿರುವ ಏರಿಳಿತಗಳಿಗೆ ಯಾವ ರೀತಿಯ ಕಾರಣ ಪ್ರಭಾವಿಯಾಗಿರುತ್ತವೆ ಎಂದು ಪೂರ್ವಭಾವಿಯಾಗಿ  ನಿರ್ಧರಿಸುವುದು ಸಾಧ್ಯವಿಲ್ಲ. ಗುರುವಾರ ಜುವಾರಿ ಆಗ್ರೋ ಕೆಮಿಕಲ್ಸ್  ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯು ₹281 ರ ಸಮೀಪದಿಂದ ₹338.55 ರ ವಾರ್ಷಿಕ ಗರಿಷ್ಠಕ್ಕೆ ಜಿಗಿತ ಕಂಡಿತು. ಈ ಕಂಪೆನಿಯ ತ್ರೈಮಾಸಿಕ ಫಲಿತಾಂಶವು ಇದೇ 27 ರಂದು ಪ್ರಕಟವಾಗಲಿದ್ದು, ಇನ್ನು ಮುಂಚಿತವಾಗಿ ಈ ರೀತಿಯ ಬೃಹತ್ ಏರಿಕೆ ಪ್ರದರ್ಶಿಸಿರುವುದು ವಿಸ್ಮಯಕಾರಿ ಸಂಗತಿ.
 
ಪೇಟೆಯು ಸ್ಪಂದಿಸುವ ವೇಗವು ಸಹ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ.  ಗುರುವಾರ ಸಾರ್ವಜನಿಕ ವಲಯದ ಗೇಲ್ (ಇಂಡಿಯಾ) ಷೇರಿನ ಬೆಲೆಯು ₹438ರ ಸಮೀಪದಿಂದ ₹464 ರ ಸಮೀಪಕ್ಕೆ ಜಿಗಿತ ಕಂಡಿತು. ಇದಕ್ಕೆ ಪ್ರಮುಖ ಕಾರಣ ಈ ಕಂಪೆನಿಯು 25 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ ಎಂಬ ಪ್ರಕಟಣೆ.
 
ಪ್ರಮುಖ ತೈಲ ಮಾರಾಟ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್,  ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್  ಲಾಭಾಂಶ ಹೆಚ್ಚಾಗಿರಬೇಕು ಎಂದು ಸರ್ಕಾರ ಆದೇಶಿಸಿದೆ ಎಂಬ ಸುದ್ದಿ ಹರಡಿದೆ. ಇದು ಈ ಕಂಪೆನಿಗಳ ಷೇರಿನ ಬೆಲೆಗಳಲ್ಲಿ ಮಿಂಚು ಸಂಚರಿಸುವಂತೆ ಮಾಡಿತು.  
 
ಇದರೊಂದಿಗೆ  ಸಾರ್ವಜನಿಕ ವಲಯದ ಕಂಪೆನಿಗಳ ಮ್ಯುಚುಯಲ್ ಫಂಡ್ 'ಸಿಪಿಎಸ್ಇ-ಇಟಿಎಫ್' ನ ವಿತರಣೆ ಆರಂಭಗೊಂಡಿದ್ದು ಸಹ ಈ ರೀತಿಯ ಏರಿಕೆಗೆ ಪೂರಕ ವಾತಾವರಣ ನಿರ್ಮಿತವಾಯಿತು.  
 
ಸಮೂಹ ಸನ್ನಿ ರೀತಿಯ ಪ್ರಭಾವವನ್ನು ಕೆಲವು ಬಾರಿ ಪೇಟೆ ಪ್ರದರ್ಶಿಸುತ್ತದೆ. ಗುರುವಾರ ನಾರು ತಯಾರಿಕಾ ಕಂಪೆನಿಗಳಾದ  ಗ್ಲೊಸ್ಟರ್ ಲಿ,  ಚೇವಿಯಟ್‌ ಉತ್ತಮ ಬೆಲೆಯಲ್ಲಿ ವಹಿವಾಟಾಗುತ್ತಿದ್ದವು. ಅದೇ ವಲಯದ ಲಾಡ್ ಲೋ ಜೂಟ್ ಅಂಡ್ ಸ್ಪೆಶಾಲಿಟಿಸ್ ಕಂಪೆನಿಯ ಹಿಂದಿನ ತ್ರೈಮಾಸಿಕದ ಸಾಧನೆಯು ಕಳಪೆಯಾಗಿರುವ ಅಂಶ ಪ್ರಕಟವಾಗುತ್ತಿದಂತೆಯೇ ವಲಯದ  ಷೇರು ಭಾರಿ ಕುಸಿತಕ್ಕೊಳಗಾದವು.
 
ನ್ಯೂಟ್ರಾ ಪ್ಲಸ್ ಲಿಮಿಟೆಡ್ ತನ್ನ ಷೇರುದಾರರಿಗೆ ಪ್ರತಿ ಹತ್ತು ಷೇರಿಗೆ ಒಂದರಂತೆ ಬೋನಸ್ ಷೇರು ವಿತರಿಸಲು ಜ. 19 ನಿಗದಿತ ದಿನವಾಗಿತ್ತು.   ಹಿಂದಿನ ದಿನ 18 ರಂದು ಷೇರಿನ ಬೆಲೆಯು ₹82 ರ ಸಮೀಪವಿದ್ದು ಬೋನಸ್ ನಂತರದ ದಿನದಲ್ಲಿ ₹65 ರ ಸಮೀಪಕ್ಕೆ ಇಳಿಯಿತು. ಈ ಕಂಪೆನಿಯ ಷೇರಿನ ಬೆಲೆ ಕಳೆದ  ಒಂದು ತಿಂಗಳಲ್ಲಿ ₹49 ರಿಂದ ₹82 ರವರೆಗೂ ಪುಟಿದೆದ್ದಿರುವುದನ್ನು ಗಮನದಲ್ಲಿರಿಸಬೇಕು. 
 
ಅಲ್ಲದೆ  ಕಂಪೆನಿಯ ಪ್ರವರ್ತಕರು ಮತ್ತು ಇತರರಿಗೆ ಪ್ರತಿ ಷೇರಿಗೆ ₹54 ರಂತೆ ಆದ್ಯತೆ ಮೇಲೆ ಷೇರುಗಳನ್ನು ಕಳೆದ ಸೆಪ್ಟೆಂಬರ್‌ನಲ್ಲಿ ವಿತರಿಸಲಾಗಿದ್ದು, ಈ ಷೇರುಗಳು ವಹಿವಾಟಿಗೆ 19 ರಿಂದ ಬಿಡುಗಡೆಯಾಗಿರುವ ಅಂಶ  ಸಹ ಈ ರೀತಿಯ ತ್ವರಿತ ಏರಿಕೆಗೆ ಕಾರಣವಿರಬಹುದು.  ಒಂದು ಕಂಪೆನಿಯ ಷೇರಿನಲ್ಲಿ ಚಟುವಟಿಕೆ ನಡೆಸುವ ಮುನ್ನ ಅದರ ಹಿಂದಿನ ಏರಿಳಿತಗಳನ್ನು ಮತ್ತು ಬೆಳವಣಿಗೆಗಳನ್ನು ಪರಿಶೀಲಿಸಿ ನಿರ್ಧರಿಸಿದಲ್ಲಿ ಉತ್ತಮ ಫಲಿತಾಂಶ ಸಾಧ್ಯ.
 
ಹೊರಗುತ್ತಿಗೆಗೆ ಧಕ್ಕೆ?: ಸ್ವದೇಶಿ ಆಂದೋಲನಕ್ಕೆ ಅಮೆರಿಕ  ಹೊಸ ಅಧ್ಯಕ್ಷರು ಒಲವು ತೋರಿರುವುದು ರಫ್ತು ಆಧಾರಿತ ಕಂಪೆನಿಗಳು ಮತ್ತು ಹೊರಗುತ್ತಿಗೆ ವ್ಯವ್ಯಹಾರಗಳಿಗೆ ಧಕ್ಕೆಯಾಗಬಹುದು.ಆದರೂ ಭಾರತದ ಪೇಟೆಯ ಗಾತ್ರ ಹೆಚ್ಚಾಗಿರುವುದರಿಂದ ಒಳ ಬಳಕೆಗೆ ಹೆಚ್ಚು ಮಹತ್ವ ಬಂದು ಸ್ಪರ್ಧಾತ್ಮಕ ವಾತಾವರಣವು ಅಗತ್ಯ ವಸ್ತು ಮತ್ತು ಸೇವೆಗಳ ದರಗಳು ಹೆಚ್ಚಿನ ಇಳಿಕೆ ಕಾಣಬಹುದಾಗಿದೆ. ಇದು ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಿಸಿ ಆರ್ಥಿಕ ಚಟುವಟಿಕೆ ವೃದ್ಧಿಯಾಗುವಂತೆ ಮಾಡಬಹುದಾಗಿದೆ.
 
ಒಟ್ಟಾರೆ ವೈವಿಧ್ಯಮಯ ಬೆಳವಣಿಗೆಗಳ ಸಮೀಪವಿರುವ ಈ ಸಮಯದಲ್ಲಿ ಪೇಟೆ ಅನಿಶ್ಚಿತ ಹಾದಿಯಲ್ಲಿ ಸಾಗಿದೆ.  ಸಂವೇದಿ ಸೂಚ್ಯಂಕವು 203 ಅಂಶ ಇಳಿಕೆ ಕಂಡರೆ ಇದಕ್ಕೆ ಬೆಂಬಲವಾಗಿ ಮಧ್ಯಮ ಶ್ರೇಣಿಯ ಸೂಚ್ಯಂಕವು 55ಅಂಶ ಇಳಿಕೆ ಕಂಡಿದೆ. ಆದರೆ ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ ವಿಭಿನ್ನತೆಯಿಂದ 71 ಅಂಶ ಏರಿಕೆ ಪ್ರದರ್ಶಿಸಿದೆ. 
 
ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಮಿಶ್ರಿತ ಚಟುವಟಿಕೆಯಿಂದ ಕೇವಲ ₹44 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹45 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಪೇಟೆಯ ಬಂಡವಾಳೀಕರಣ ಮೌಲ್ಯ ₹110.41 ಲಕ್ಷ ಕೋಟಿಯಿಂದ ₹110.23 ಲಕ್ಷ ಕೋಟಿಯಲ್ಲಿ ಸ್ಥಿರತೆ ಕಂಡುಕೊಂಡಿದೆ.
 
ಬಿಎಸ್‌ಇ ಷೇರು: ೧೪೦ ವರ್ಷಗಳ ಇತಿಹಾಸ ಹೊಂದಿರುವ ಬಾಂಬೆ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ₹2 ರ ಮುಖಬೆಲೆಯ ಷೇರುಗಳು ಪ್ರತಿ ಷೇರಿಗೆ ₹805 ರಿಂದ ₹806 ಅಂತರದಲ್ಲಿ   ಜ.23ರಿಂದ 25 ರವರೆಗೂ ಸಾರ್ವಜನಿಕ ವಿತರಣೆಗೆ ಬಿಡುಗಡೆಯಾಗಲಿವೆ. 18 ಷೇರುಗಳ ಗುಣಕಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  
 
ಕುಸಿಯುತ್ತಿರುವ ಬ್ಯಾಂಕ್ ಬಡ್ಡಿ ದರ, ವ್ಯಾವಹಾರಿಕ ಲಾಭ, ಲಾಭಗಳಿಕೆಯಲ್ಲಿನ ಸ್ಪರ್ಧಾತ್ಮಕ ವಾತಾವರಣದ ಈ ದಿನಗಳಲ್ಲಿ ನಿಯಂತ್ರಿತ ವ್ಯವಸ್ಥೆಯೊಂದಿಗೆ ಜಾಗತಿಕ ಮಟ್ಟದಲ್ಲಿ ವಹಿವಾಟಿಗೆ ಅವಕಾಶಕೊಡುವ ಷೇರು ವಿನಿಮಯ ಕೇಂದ್ರಗಳ ಚಟುವಟಿಕೆ ಮುಂದಿನ ದಿನಗಳಲ್ಲಿ ಹೆಚ್ಚು  ಜನಸಾಮಾನ್ಯರನ್ನು ಆಕರ್ಷಿಸಲಿದೆ. ಕಾರಣ ಬಾಂಬೆ ಷೇರು ವಿನಿಮಯ ಕೇಂದ್ರದ ಈ ವಿತರಣೆ ಹೂಡಿಕೆಗೆ ಸೂಕ್ತವೆನಿಸುತ್ತದೆ.
 
ಅಹಮದಾಬಾದ್ ಷೇರು ವಿನಿಮಯಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಶಂಗಾರ್ ಡೆಕೋರೇಟಿವ್ ಲಿಮಿಟೆಡ್ ಕಂಪೆನಿಯ ಷೇರುಗಳು ಬಾಂಬೆ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ವಿಭಾಗದಲ್ಲಿ ಈ ತಿಂಗಳ 23 ರಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ. 
 
ಮೆಟ್ರೋಪಾಲಿಟನ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಗ್ಲೊಬ್ ಕಮರ್ಷಿಯಲ್ಸ್ ಲಿಮಿಟೆಡ್ ಕಂಪೆನಿಯ ಷೇರುಗಳು ಬಾಂಬೆ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ವಿಭಾಗದಲ್ಲಿ ಈ ತಿಂಗಳ 23 ರಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ.
 
ಬೋನಸ್ ಷೇರು: ಸಾರ್ವಜನಿಕ ವಲಯದ,  ಸಂವೇದಿ ಸೂಚ್ಯಂಕದ ಭಾಗವಾದ ಗೇಲ್ ಇಂಡಿಯಾ ಕಂಪೆನಿಯು 25 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
 
ಲಾಭಾಂಶ ವಿಚಾರ: ಹೆಚ್ಐಎಲ್  ಪ್ರತಿ ಷೇರಿಗೆ ₹10 ( ನಿಗದಿತ ದಿನ  ಜ. 27), ಡಿಬಿ ಕಾರ್ಪ್  ಪ್ರತಿ ಷೇರಿಗೆ ₹4,  ಮೈಂಡ್ ಟ್ರೀ ಪ್ರತಿ ಷೇರಿಗೆ ₹2, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಪ್ರತಿ ಷೇರಿಗೆ ₹9 (ಮುಖಬೆಲೆ₹2, ನಿಗದಿತ ದಿನ ಫೆ.10),  ರಾಣೆ ಬ್ರೇಕ್ ಲೈನ್ನಿಂಗ್ಸ್ ಪ್ರತಿ ಷೇರಿಗೆ ₹6. 
 
ಮುಖಬೆಲೆ ಸೀಳಿಕೆ: ಉಷ್‌ದೇವ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಿಕೆಗೆ ಈ ತಿಂಗಳ 31 ನಿಗದಿತ ದಿನವಾಗಿದೆ. ಖೆಮಾನಿ ಡಿಸ್ಟ್ರಿಬ್ಯೂಟರ್‍್ಸ್‌  ಅಂಡ್ ಮಾರ್ಕೆಟಿಂಗ್  ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಫೆಬ್ರವರಿ 3 ನಿಗದಿತ ದಿನವಾಗಿದೆ.ಕಲ್ಲಮ್ ಸ್ಪಿನ್ನಿಂಗ್ ಮಿಲ್ಸ್  ಕಂಪೆನಿಯ ಷೇರುಗಳ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಫೆಬ್ರವರಿ 3 ನಿಗದಿತ ದಿನವಾಗಿದೆ.
 
ಬದಲಾವಣೆ: ಅಸ್ಸಾಂ ಕಂಪೆನಿ, ಅಟ್ಲಾಸ್ ಸೈಕಲ್, ಐಪಿ ರಿಂಗ್ಸ್, ಕಿಲಿಚ್ ಡ್ರಗ್ಸ್, ಲಾಯ್ಡ್ಸ್ ಮೆಟಲ್ಸ್ ಅಂಡ್ ಎನರ್ಜಿ, ಮನಕ್ಸಿಯ ಇಂಡಸ್ಟ್ರೀಸ್, ರೋಹಿತ್ ಫೆರೋ ಟೆಕ್, ರೋಲಟೇನರ್ಸ್, ದಿಗ್ವಿಜಯ್ ಸಿಮೆಂಟ್ಸ್, ಟ್ರೀ ಹೌಸ್ ಎಜುಕೇಷನ್ ಅಂಡ್ ಅಕ್ಸೆಸ್ಸರಿಸ್ ಸೇರಿ  50 ಕಂಪೆನಿಗಳನ್ನು 19 ರಿಂದ ಟಿ ಗುಂಪಿಗೆ ವರ್ಗಾಯಿಸಲಾಗಿದೆ. 
 
ಎಬಿಜಿ ಶಿಪ್ ಯಾರ್ಡ್, ಮಂದನಾ ಇಂಡಸ್ಟ್ರೀಸ್, ಗಣೇಶ್ ಜೂಲ್ರಿ ಹೌಸ್, ಶ್ರೇನುಜ್ ಅಂಡ್ ಕಂಪೆನಿ ಷೇರುಗಳನ್ನು ಜ. 24 ರಿಂದ ಜಡ್ ಗುಂಪಿಗೆ ವರ್ಗಾಯಿಸಲಾಗುವುದು.
 
**
ವಾರದ ವಿಶೇಷ
ವ್ಯಾವಹಾರಿಕ ಶೈಲಿ ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎಂದರೆ ತೊಂಬತ್ತರ ದಶಕದಲ್ಲಿ ಗೃಹ ಸಾಲ, ವಾಹನಸಾಲ, ಕೈಸಾಲ ಸುಲಭವಾಗಿ ದೊರೆಯುತ್ತಿರಲಿಲ್ಲ.  ಆಗ ಸಿಬಿಲ್ ಸ್ಕೊರ್ ವ್ಯವಸ್ಥೆಯು ಇರಲಿಲ್ಲ ಆದರೆ ಸಾಲ ತೆಗೆದುಕೊಂಡವರಲ್ಲಿ ನೈತಿಕ ಮಟ್ಟ ಹೆಚ್ಚಿತ್ತು.ಸಾಲ ಹಿಂದಿರುಗಿಸುವ ಮನೋಭಾವವಿತ್ತು. ಆಗಿನ ಚಿಂತನೆಗಳು ಹೂಡಿಕೆ ಮಾಡಿದಲ್ಲಿ ಲಾಭಗಳಿಕೆಯತ್ತ ಕೇಂದ್ರೀಕೃತವಾಗುತ್ತಿತ್ತು.  ಈಗ ಚಿಂತನೆ, ಶೈಲಿ ಬದಲಾಗಿವೆ.   
 
ಸಾಲಕೊಡುವ ಸಂಸ್ಥೆಗಳು, ಬ್ಯಾಂಕ್‌ಗಳು ಸಾಲ ತೆಗೆದುಕೊಳ್ಳುವವರನ್ನು ಭೇಟೆಯಾಡುತ್ತಿವೆ. ಉತ್ತಮ ಗುಣಮಟ್ಟದ ಸಾಲಗಾರರನ್ನು ಹುಡುಕಲು ಸ್ಪರ್ಧಾತ್ಮಕವಾಗಿ ಪ್ರಯತ್ನಿಸುತ್ತಿವೆ. ಸಾಲ ತೆಗೆದುಕೊಳ್ಳುವವರಿಗೆ ಸಿಬಿಲ್ ಸಂಸ್ಥೆ ರೇಟಿಂಗ್ ಸ್ಕೊರ್ ನೀಡುತ್ತದೆ. ಅದರ ಆಧಾರದ ಮೇಲೆ ಈ ಲೇವಾದೇವಿ ಸಂಸ್ಥೆಗಳು ಸಾಲ ನೀಡಲು ಮುಂದಾಗುತ್ತವೆ.  ಸಾಲ ತೆಗೆದುಕೊಳ್ಳುವವರು ಸಂಸ್ಥೆಗಳೊಂದಿಗೆ ಬಡ್ಡಿ ದರವನ್ನು ಸಹ ಚೌಕಾಸಿ ಮಾಡಲು ಅವಕಾಶ ಈಗಿನ ದಿನಗಳಲ್ಲಿದೆ. 
 
ಈಗಿನ ವ್ಯವಹಾರವು ಲಾಭಗಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ 'ಬ್ರಾಂಡ್' ನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಆದ್ಯತೆಯಿದ್ದು, ಸಂಸ್ಥೆ ಲಾಭಗಳಿಸುತ್ತದೆಯೋ ಇಲ್ಲವೋ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. 
 
ಉತ್ತಮ ಬ್ರಾಂಡ್ ಹೊಂದಿದ್ದರೆ ಅಂತಹ ಕಂಪೆನಿಗಳಲ್ಲಿ 'ವೆಂಚರ್ ಕ್ಯಾಪಿಟಲ್' ರೂಪದಲ್ಲಿ ಹಣವು ದೇಶ ವಿದೇಶಗಳಿಂದ ಹರಿದುಬರುತ್ತದೆ. ಹಾಗಾಗಿ ಆನ್ ಲೈನ್ ವ್ಯಾವಹಾರಿಕ ಕಂಪೆನಿಗಳು ತಮ್ಮ ಬ್ರಾಂಡ್ ಹೆಚ್ಚಿಸಿಕೊಳ್ಳುವುದರಲ್ಲೇ ನಿರತರಾಗಿರುತ್ತಾರೆ.  ಈ ರೀತಿಯ ವ್ಯವಹಾರವನ್ನು ಷೇರುಪೇಟೆಯಲ್ಲಿ ನಡೆಸಲು ಮುಂದಾದರೆ ಅಂದರೆ  ವಹಿವಾಟಿನ ಗಾತ್ರ ಹೆಚ್ಚಿಸಿಕೊಳ್ಳುವತ್ತ ಮಾತ್ರ ಗಮನವಿತ್ತರೆ ಹೂಡಿಕೆ ಮಾಡಿದ ಹಣ ಕರಗುವ ವೇಗ ಕಲ್ಪನೆ ಮೀರಿರುತ್ತದೆ.
 
'ಭಾರಿ ಹೂಡಿಕೆ - ತ್ವರಿತ ಗಳಿಕೆ' ಎಂಬುದು ವಿತ್ತೀಯ ಸಂಸ್ಥೆಗಳ ನೀತಿಯಾದರೆ ಸಣ್ಣ ಹೂಡಿಕೆದಾರರು ಸಂಸ್ಥೆಗಳ ರೀತಿ ಅನುಸರಿಸದೆ ಹೂಡಿಕೆ ಮಾಡಿದ ಬಂಡವಾಳವನ್ನು ಸುರಕ್ಷಿತವಾಗಿ ಬೆಳೆಸಿಕೊಳ್ಳಬೇಕಾದಲ್ಲಿ' ಮೌಲ್ಯಾಧಾರಿತ ಕೊಳ್ಳುವಿಕೆ - ಲಾಭದ ನಗದೀಕರಣ'  ಶೈಲಿಯ ವಹಿವಾಟು ಅನುಸರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.