ADVERTISEMENT

ಷೇರುಪೇಟೆಯಲ್ಲಿ ಹಣದ ಹೊಳೆ

ಕೆ.ಜಿ ಕೃಪಾಲ್
Published 30 ಜುಲೈ 2017, 20:15 IST
Last Updated 30 ಜುಲೈ 2017, 20:15 IST

ಷೇರುಪೇಟೆಯ ಹೆಗ್ಗುರುತಾದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಗುರುವಾರ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 32,672.66ನ್ನು ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ,  ಬಿಎಸ್‌ಇ ಇಂಡಿಯಾ ಇನ್ಫ್ರಾಸ್ಟ್ರಕ್ಚರ್‌,  ಮ್ಯಾನುಫ್ಯಾಕ್ಚರ್ , ಆಟೊ ಬ್ಯಾಂಕೆಕ್ಸ್, ಟೆಲಿಕಾಂ, ಬೇಸಿಕ್ ಮಟೀರಿಯಲ್ಸ್, ಎನರ್ಜಿ, ಫೈನಾನ್ಸ್, ಇಂಡಸ್ಟ್ರಿಯಲ್ಸ್,  ಮೆಟಲ್ಸ್, ರಿಯಾಲ್ಟಿ, ಸೂಚ್ಯಂಕಗಳು ಸಹ ಈ ವಾರ ವಾರ್ಷಿಕ ಗರಿಷ್ಠ ತಲುಪಿ ವಿಜೃಂಭಿಸಿವೆ.

ಕೇವಲ ಐ.ಟಿ , ಟೆಕ್, ಹೆಲ್ತ್ ಕೇರ್ ಸೂಚ್ಯಂಕಗಳು 2016 ರ ಗರಿಷ್ಟ ಮಟ್ಟದಲ್ಲೇ ಮುಂದುವರೆದಿವೆ. ಇಂದಿನ ದಿನಗಳ ವಹಿವಾಟಿನ ಶೈಲಿಯನ್ನು ಗಮನಿಸಿದರೆ ಐ ಟಿ , ಟೆಕ್, ಹೆಲ್ತ್ ಕೇರ್ ಸೂಚ್ಯಂಕಗಳ ಷೇರುಗಳಲ್ಲಿ ಅಗ್ರಮಾನ್ಯ ಕಂಪೆನಿಗಳ ಷೇರುಗಳಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಕಂಡು ಬರಬಹುದು.

ಒಂದು ಸಣ್ಣ ಸಕಾರಾತ್ಮಕ ಅಂಶವು ಹೆಚ್ಚಿನ ಬೆಂಬಲವನ್ನು ಸಂಪಾದಿಸಿ ಕೊಡುತ್ತಿರುವ ಈ ಸಮಯದಲ್ಲಿ ಸಂವೇದಿ ಸೂಚ್ಯಂಕದಲ್ಲಿ ಕೇವಲ 30 ಕಂಪೆನಿಗಳ ಷೇರುಗಳು ಬೇಡಿಕೆಯ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈಗಿನ 30 ಕಂಪೆನಿಗಳಿಂದ ಪ್ರಬಲ 300 ಕಂಪೆನಿಗಳಿಗಾದರೂ ವಿಸ್ತರಿಸುವುದರ  ಅಗತ್ಯ ಹೆಚ್ಚಿದೆ.

ADVERTISEMENT

ಕಳೆದ ಏಪ್ರಿಲ್ ಅಂತ್ಯದಲ್ಲಿ ಅಂದರೆ 28ನೇ ಏಪ್ರಿಲ್ 29,918ರಲ್ಲಿದ್ದ ಸಂವೇದಿ ಸೂಚ್ಯಂಕವು ಕೇವಲ ಮೂರು ತಿಂಗಳಲ್ಲಿ 32,672 ಅಂಶಗಳಿಗೆ ಜಿಗಿದಿರುವುದು ಕೇವಲ ಬಾಹ್ಯ ಕಾರಣಗಳಿಂದ ಮತ್ತು ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಪ್ರವಾಹವೇ ಕಾರಣವಾಗಿದೆ. ಈ ರೀತಿಯ ಹಣದ ಹೊಳೆ ಷೇರುಪೇಟೆಯ ಕಡೆ ತಿರುಗಿರುವುದಕ್ಕೆ ಪ್ರಮುಖ ಕಾರಣ ಪೇಟೆಯ ವಿಶೇಷವಾದ ದಿಢೀರ್ ನಗದೀಕರಣ ವ್ಯವಸ್ಥೆ. ಇಲ್ಲಿ ಹಣ ಬೇಕೆಂದಾಗ ಷೇರುಗಳನ್ನು ಪೇಟೆಯ ಬೆಲೆಯಲ್ಲಿ ಮಾರಾಟ ಮಾಡಿ ಕೇವಲ ಎರಡೇ ದಿನಗಳಲ್ಲಿ ಹಣ ಪಡೆಯಬಹುದಾಗಿದೆ.  ಆದರೆ ಇದಕ್ಕೆ ಅವರಣ ಮಿತಿಗಳು ಸಹಕರಿಸಬೇಕಾಗಿದೆ. ಅದೇ ಅಗ್ರಮಾನ್ಯ ಕಂಪೆನಿಗಳಲ್ಲಿ ಈ ಪರಿಸ್ಥಿತಿ ಉದ್ಭವಿಸದೆ ದಿಢೀರ್ ನಗದೀಕರಣಕ್ಕೆ ಸಹಕಾರಿಯಾಗಿವೆ.

ಒಂದು ದಿನ ಮಾರುತಿ ಸುಜುಕಿ ಏರಿಕೆ ಕಂಡರೆ ಮತ್ತೊಂದು ದಿನ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದುಸ್ತಾನ್ ಯುನಿ ಲಿವರ್ ನಂತಹ ಸಂವೇದಿ ಸೂಚ್ಯಂಕದಲ್ಲಿ ಹೆಚ್ಚು ತೂಕವುಳ್ಳ ಕಂಪೆನಿ  ಷೇರುಗಳು ಏರಿಕೆಯಿಂದ ಸೂಚ್ಯಂಕದ ಸ್ಥಿರತೆ, ಏರಿಕೆಗೆ ಕಾರಣವಾಗುವುದು ಸ್ವಾಭಾವಿಕವಾಗಿದೆ.

ಹಿಂದಿನ ವಾರದಲ್ಲಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯು ₹1,580 ರ ಸಮೀಪದಿಂದ ಗುರುವಾರ ₹1,631ರವರೆಗೂ ಜಿಗಿತ ಕಂಡು ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿ ಶುಕ್ರವಾರ ₹1,579 ರವರೆಗೂ ಕುಸಿಯಿತು. ಅಂದರೆ ಬೋನಸ್ ಷೇರಿನ ಸುದ್ದಿಯು ಅಲ್ಪಾಯುವಾಗಿದೆಯಷ್ಟೆ.

ಈ  ಗುರುವಾರ ಟಾಟಾ ಎಲಾಕ್ಸಿ ಸಹ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದ ಪರಿಣಾಮ ಷೇರಿನ ಬೆಲೆಯು ₹1,775 ರ ವಾರ್ಷಿಕ ಗರಿಷ್ಠ ದಾಖಲಿಸಿದೆ. ಕಳೆದ ಒಂದು ತಿಂಗಳಲ್ಲಿ ₹1,578 ರಿಂದ ₹1,775 ರವರೆಗೂ ಏರಿಕೆ ಕಂಡಿರುವ ಅಂಶವನ್ನು ಸದಾ ಗಮನದಲ್ಲಿರಿಸಿ ವಹಿವಾಟು ನಡೆಸುವುದು ಸೂಕ್ತ.

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿ ವಿತರಿಸಲಿರುವ ಪ್ರತಿ ಷೇರಿಗೆ ₹21 ರ ಲಾಭಾಂಶಕ್ಕೆ ಆಗಸ್ಟ್ 18ನಿಗದಿತ ದಿನವೆಂದು ಪ್ರಕಟಿಸುತ್ತಿದ್ದಂತೆಯೇ ಷೇರಿನ ಬೆಲೆಯು ₹380 ರ ಸಮೀಪದಿಂದ ₹400 ರ ಸಮೀಪಕ್ಕೆ ಶರ ವೇಗದಲ್ಲಿ ಚಿಮ್ಮಿತು. ನಂತರದ ದಿನಗಳಲ್ಲಿ ಇಳಿಕೆ ಕಂಡು ₹382  ರ ಸಮೀಪದಲ್ಲಿ ವಾರಾಂತ್ಯ ಕಂಡಿತು.

ಕಳೆದ ಒಂದು ತಿಂಗಳಲ್ಲಿ ಬಯೊಕಾನ್ ಕಂಪೆನಿಯ ಷೇರುಗಳಲ್ಲಿ ನಡೆದ ಏರಿಳಿತಗಳು ಸಹ ಅಲ್ಪಾವಧಿಯಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ ಅವಕಾಶ ಕಲ್ಪಿಸಿರುವುದನ್ನು ತಿಳಿಯಬಹುದಾಗಿದೆ. ಷೇರಿನ ಬೆಲೆಯು  2:1 ರ ಅನುಪಾತದ ಬೋನಸ್ ಷೇರಿನ ವಿತರಣೆ ನಂತರ ₹305 ರ ಸಮೀಪಕ್ಕೆ ಕುಸಿದು ಅಲ್ಲಿಂದ ನೇರವಾಗಿ ₹425 ರ ಸಮೀಪಕ್ಕೆ ಜಿಗಿಯಿತು. ಶುಕ್ರವಾರದ  ಮಧ್ಯಂತರದ ಚಟುವಟಿಕೆಯಲ್ಲಿ ₹370ರವರೆಗೂ ಇಳಿದು ಅಂತ್ಯದಲ್ಲಿ ₹390 ರಲ್ಲಿ ಕೊನೆಗೊಂಡಿದೆ. ಅಂದರೆ ಒಂದೇ ತಿಂಗಳಲ್ಲಿ ₹305 ರಿಂದ ₹425 ರವರೆಗೂ ಜಿಗಿತ ಕಂಡು ಶೇ 40 ರ ಸಮೀಪದ ಏರಿಳಿತ ಪ್ರದರ್ಶಿಸಿದೆ. ಇಂತಹ ಬೆಳವಣಿಗೆಗಳು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.

ಇದೇ ರೀತಿಯ ಚಲನೆಯನ್ನು ಕಳೆದ ಒಂದು ತಿಂಗಳಲ್ಲಿ ಮತ್ತೊಂದು ಪ್ರಮುಖ ಕಂಪೆನಿ ದಿವೀಸ್ ಲ್ಯಾಬೊರೇಟರೀಸ್ ₹635ರ ಸಮೀಪದಿಂದ ₹816ರವರೆಗೂ ಏರಿಕೆ ಕಂಡು ಶುಕ್ರವಾರ ₹651ರ ಸಮೀಪಕ್ಕೆ ದಿನದ ಮಧ್ಯಂತರದ ಚಟುವಟಿಕೆಯಲ್ಲಿ ಕುಸಿದಿದೆ. ಸುಮಾರು ಶೇ35 ರಷ್ಟು ಏರಿಕೆ ಪ್ರದರ್ಶಿಸಿ ಇಳಿಕೆ ಕಂಡು ಒಂದು ರೀತಿಯ ಕ್ಯಾಷ್‌ ಬ್ಯಾಕ್ ಯೋಜನೆಯ ಅವಕಾಶ ಕಲ್ಪಿಸಿದೆ.

ಇನ್ನು ಒಂದೇ ವಾರದಲ್ಲಿ ಗ್ಲೇನ್ ಮಾರ್ಕ್ ಫಾರ್ಮಾ, ಹ್ಯಾವೆಲ್ಸ್, ಸನ್ ಫಾರ್ಮಾ, ಕ್ಲಾರಿಸ್ ಲೈಫ್ ಸೈನ್ಸಸ್, ಸಿ ಡಿ ಎಸ್‌ಎಲ್  ಕಂಪೆನಿಗಳು ಅಗಾಧವಾದ  ಏರಿಳಿತ ಕಂಡಿವೆ. ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕ 281 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕ 144 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 78 ಅಂಶಗಳ ಏರಿಕೆ ಕಾಣುವಂತೆ ಮಾಡಿದೆ.

ವಿದೇಶಿ ಸಂಸ್ಥೆಗಳು ಈ ವಾರ ₹1,490 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₹897 ಕೋಟಿ ಹೂಡಿಕೆ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ₹131.98 ಲಕ್ಷ ಕೋಟಿಗೆ ಏರಿಕೆ ಕಂಡಿದ್ದಲ್ಲದೆ ಬುಧವಾರ ₹132.47ಲಕ್ಷ ಕೋಟಿ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

ಬೋನಸ್ ಷೇರು: ಟಾಟಾ ಎಲೆಕ್ಸಿ ಕಂಪೆನಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಹೊಸ ಷೇರು: ಕೇಂದ್ರ ಸರ್ಕಾರದ ಮಿನಿರತ್ನ ಕಂಪೆನಿ ಕೊಚ್ಚಿನ್ ಶಿಪ್ ಯಾರ್ಡ್ ಕಂಪೆನಿಯು ಆಗಸ್ಟ್ 1–3 ರವರೆಗೆ, ಪ್ರತಿ ಷೇರಿಗೆ ₹424 ರಿಂದ ₹432 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 30 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.  ರಿಟೇಲ್ ಹೂಡಿಕೆದಾರರಿಗೆ  ಪ್ರತಿ ಷೇರಿಗೆ ₹21 ರಂತೆ ರಿಯಾಯಿತಿ ದೊರೆಯುತ್ತದೆ.

ಲಾಭಾಂಶ: ಅಂಬುಜಾ ಸಿಮೆಂಟ್ ಪ್ರತಿ ಷೇರಿಗೆ ₹1.60 (ಮುಖ ಬೆಲೆ: ₹2, ನಿಗದಿತ ದಿನ: ಆಗಸ್ಟ್ 3 ),  ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ – ₹9 ( ಮು ಬೆ: ₹2, ನಿ ದಿ: ಆಗಸ್ಟ್ 3 ), ಐಆರ್ ಬಿ  ಇನ್‌ಫ್ರಾಸ್ಟ್ರಕ್ಚರ್‌   ₹2.50 (ಮು ಬೆ: ₹2, ನಿ ದಿ: ಆಗಸ್ಟ್ 1 ), ನೆಸ್ಲೆ ₹15, ಬ್ಲೂ ಚಿಪ್ ಟೆಕ್ಸ್ ಇಂಡಸ್ಟ್ರೀಸ್   ₹1.50, ಫೊಸೇಕೋ ಇಂಡಿಯಾ ₹6, ಎಚ್‌ಸಿ ಎಲ್‌ಟೆಕ್ ಪ್ರತಿ ಷೇರಿಗೆ ₹2 ( ಮು ಬೆ ₹2).

ಮುಖಬೆಲೆ ಸೀಳಿಕೆ: ಯೆಸ್ ಬ್ಯಾಂಕ್ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಸಿಯಾರಾಮ್ ಸಿಲ್ಕ್ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಎಲ್ ಪ್ರೊ  ಇಂಟರ್ ನ್ಯಾಷನಲ್ ಕಂಪೆನಿ ಷೇರಿನ ಮುಖಬೆಲೆಯನ್ನು ₹2 ರಿಂದ ₹1 ಕ್ಕೆ ಸೀಳಲಿದೆ.

ಹಕ್ಕಿನ ಷೇರು: ಎಲ್ ಪ್ರೊ  ಇಂಟರ್ ನ್ಯಾಷನಲ್ ಕಂಪೆನಿ ₹100 ಕೋಟಿ ಮೌಲ್ಯದ ಹಕ್ಕಿನ ಷೇರು ವಿತರಿಸಲಿದೆ. ವಿಂಟೆಕ್ ಕಂಪೆನಿ 2:3 ರ ಅನುಪಾತದಲ್ಲಿ ಪ್ರತಿ ಷೇರಿಗೆ ₹100 ರಂತೆ ಹಕ್ಕಿನ ಷೇರು ವಿತರಿಸಲಿದೆ.

**

ವಾರದ ವಿಶೇಷ: ಟೊಮೆಟೊ ಬೆಲೆ ಕೆಜಿಗೆ ₹100 ರಲ್ಲಿದೆ ಎಂಬುದು ಸುದ್ದಿಯಾಗಿದೆ.  ಈ ಕಾರಣದಿಂದ ರೈತರೆಲ್ಲಾ ಟೊಮೆಟೊ ಬೆಳೆಯಲು ಮುಂದಾಗುತ್ತಾರೆ. ಆ ಬೆಳೆ  ಸಮೃದ್ಧವಾಗಿ ಸರಬರಾಜು ಹೆಚ್ಚಾಗುವುದು. ಇದು ಬೇಡಿಕೆಯನ್ನು ಕುಗ್ಗಿಸುವ ಕಾರಣ ಟೊಮೆಟೊ ಬೆಲೆ ಕುಸಿಯುತ್ತದೆ ಆ ಸಂದರ್ಭದಲ್ಲಿ ತಮ್ಮ ಬೆಳೆ ಲಾಭ ತಂದುಕೊಡಲಿಲ್ಲವೆಂದು ರಸ್ತೆಗೆ ಚೆಲ್ಲುವುದನ್ನು ಆಗಾಗ್ಗೆ ಕಾಣುತ್ತೇವೆ.  ಅದೇ  ರೀತಿ ಷೇರಿನ ಬೆಲೆಗಳು ಹೆಚ್ಚಾದಾಗ ಹೂಡಿಕೆದಾರರು ಕೊಳ್ಳಲು ಮುಂದಾಗುವರು,  ಕುಸಿತದಲ್ಲಿದ್ದಾಗ ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಪ್ರತಿ ಬಾರಿಯೂ ಷೇರುಪೇಟೆ ಕುಸಿದಾಗ ನಿರಾಶೆಯಿಂದ ಕೈಲಿರುವ ಷೇರುಗಳನ್ನು ಮಾರಾಟಮಾಡಿ ಹಾನಿಗೊಳಾಗಿ ಪೇಟೆಯನ್ನು ದೂಷಿಸುವುದು ಸಹಜವಾಗಿದೆ.

ಪೇಟೆಗಳು ಸಾರ್ವಕಾಲಿಕ ಗರಿಷ್ಠದಲ್ಲಿರುವಾಗ ವಿಸ್ಮಯಕಾರಿ ಗುಣ ಮತ್ತಷ್ಟು ಹೆಚ್ಚಾಗುತ್ತಲಿದೆ. ಪೇಟೆಯ ಘಟನೆಗಳು ಘಟಿಸಿದ ನಂತರ ಕಾರಣಗಳು ಸೃಷ್ಟಿಯಾಗುತ್ತಿವೆ. ಘಟನೆಗೆ ಮುಂಚಿತವಾಗಿ ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲದಂತಿದೆ.ಈಸ್ಟರ್ನ್ ಸಿಲ್ಕ್ ಎಂಬ ಬಿ ಗುಂಪಿನ ಕಂಪೆನಿ ಒಂದು ತಿಂಗಳಲ್ಲಿ ₹2.66 ರಿಂದ ₹6.88 ರವರೆಗೂ ಏರಿಕೆ ಕಂಡಿದೆ. ಅಂದರೆ ಒಂದೇ ತಿಂಗಳಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಿದೆ.

ನ್ಯಾಷನಲ್ ಫರ್ಟಿಲೈಸರ್ಸ್ ಕಂಪೆನಿಯ ಷೇರುಗಳನ್ನು ಕೇಂದ್ರ ಸರ್ಕಾರ ಪ್ರತಿ ಷೇರಿಗೆ ₹72.80 ರಂತೆ ಆಫರ್ ಫಾರ್ ಸೇಲ್ ಮೂಲಕ ಮಾರಾಟಮಾಡಿತು.  ಈ ಷೇರಿನ ಬೆಲೆಯು ಮೇ  ತಿಂಗಳಲ್ಲಿ ₹89 ರ ವಾರ್ಷಿಕ ಗರಿಷ್ಠ ತಲುಪಿದಾಗ ಷೇರು ವಿಕ್ರಯಕ್ಕೆ ಮುಂದಾಗಿದೆ.

ಸೇವಾ ಕಾರ್ಯಗಳ ಸರ್ಕಾರಗಳು ಲಾಭ ಗಳಿಕೆಯತ್ತ ತಿರುಗಿರುವಾಗ,  ಲಾಭ ಗಳಿಕೆಗಾಗಿಯೇ  ಹೂಡಿಕೆ ಮಾಡುವ ನಾವು ಕಂಪೆನಿಗಳ ಬಗ್ಗೆ ಭಾವುಕರಾಗದೆ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಪೇಟೆಯು ಅಪಾರವಾದ ಅವಕಾಶಗಳನ್ನು ಕಲ್ಪಿಸುತ್ತಿದೆ.  ಹೂಡಿಕೆಯ ಯಶಸ್ಸಿಗೆ 'ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್'  ಸರಳ ಸಮೀಕರಣ ಉತ್ತಮ ಫಲಿತಾಂಶ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.