ADVERTISEMENT

ಷೇರು ಮಾತು: ಹೂಡಿಕೆಯಲ್ಲಿನ ಸಾಮಾನ್ಯ ತಪ್ಪುಗಳು

ಶರತ್ ಎಂ.ಎಸ್.
Published 10 ಜನವರಿ 2022, 19:39 IST
Last Updated 10 ಜನವರಿ 2022, 19:39 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಷೇರು ಹೂಡಿಕೆಯಲ್ಲಿ ಆಗುವ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಎರಡು ಮಾರ್ಗಗಳಿವೆ. ಒಂದನೆಯದ್ದು ನಾವೇ ತಪ್ಪು ಮಾಡಿ, ಹಣ ನಷ್ಟ ಮಾಡಿಕೊಂಡು ಅದರಿಂದ ಪಾಠ ಕಲಿಯುವುದು! ಎರಡನೆಯದ್ದು, ಬೇರೆಯವರು ಮಾಡಿದ ತಪ್ಪುಗಳಿಂದ ಪಾಠ ಕಲಿಯುವುದು. ಆದರೆ, ಷೇರು ಹೂಡಿಕೆಯಲ್ಲಿ ನಾವೇ ನಮ್ಮ ತಪ್ಪುಗಳಿಂದ ಪಾಠ ಕಲಿಯುತ್ತೇವೆ ಎಂದರೆ ಅದು ದುಬಾರಿಯಾಗುತ್ತದೆ. ಷೇರು ಹೂಡಿಕೆ ವೇಳೆ ಆಗುವ ಸಾಮಾನ್ಯ ತಪ್ಪುಗಳ ಬಗ್ಗೆ ಒಂದಿಷ್ಟು ಅರಿಯೋಣ.

1) ಅರ್ಥ ಮಾಡಿಕೊಳ್ಳದೆ ಹೂಡಿಕೆ ಮಾಡುವುದು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡೆ ಎಂದು ಹಲವರು ಹೇಳುತ್ತಾರೆ. ಅಂಥವರಿಗೆ ನಾನು, ‘ನೀವು ಯಾವ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿದ್ರಿ? ಅದರ ಬಗ್ಗೆ ಅಧ್ಯಯನ ಮಾಡಿದ್ರಾ? ಆ ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ? ಈ ಹಿಂದೆ ಕಂಪನಿ ಎಷ್ಟು ಲಾಭ ಗಳಿಸಿತ್ತು? ಕಂಪನಿ ಯಾವ ವಲಯಕ್ಕೆ ಸೇರಿದ್ದು ಮತ್ತು ಯಾವ ಉತ್ಪನ್ನ- ಸೇವೆ ಒದಗಿಸುತ್ತಿದೆ’ ಎಂದು ಪ್ರಶ್ನಿಸುತ್ತೇನೆ. ಬಹುತೇಕರಿಗೆ ಆ ಕಂಪನಿಯ ಹೆಸರು ಬಿಟ್ಟರೆ ಮತ್ತೇನೂ ಗೊತ್ತಿರುವುದಿಲ್ಲ. ಪೂರ್ವಾಪರ ಅರಿಯದೆ, ಯಾರೋ ಹೇಳಿದರು ಎಂಬ ಕಾರಣಕ್ಕೆ ಹೂಡಿಕೆ ಮಾಡಿದರೆ ಲಾಭ ಗಳಿಸುವುದಕ್ಕೆ ಹೇಗೆ ಸಾಧ್ಯ? ಹೂಡಿಕೆದಾರ ವಾರನ್ ಬಫೆಟ್ ಮತ್ತು ಭಾರತದ ವಾರನ್ ಬಫೆಟ್ ಎನಿಸಿಕೊಂಡಿರುವ ರಾಕೇಶ್ ಜುನ್‌ಜುನ್‌ವಾಲಾ ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಬಹಳಷ್ಟು ಅಧ್ಯಯನ ಮಾಡುತ್ತಾರೆ. ಅವರ ಹಿಂದೆ ತಜ್ಞರ ಒಂದು ತಂಡವೇ ಇರುತ್ತದೆ. ಅಷ್ಟೆಲ್ಲಾ ಪರಿಣತಿ ಹೊಂದಿರುವವರೇ ಲೆಕ್ಕಾಚಾರ ಮಾಡಿ ಹೂಡಿಕೆ ಮಾಡುತ್ತಾರೆ ಎಂದಾದರೆ ನಾವು ಅಧ್ಯಯನ ಮಾಡದೆ ಷೇರಿನಲ್ಲಿ ಹೂಡಿಕೆ ಮಾಡುವುದು ತಪ್ಪಲ್ಲವೇ?

2) ಸಾಲ ಮಾಡಿ ಷೇರುಗಳಲ್ಲಿ ಹೂಡಿಕೆ: ಇತ್ತೀಚೆಗೆ ಸ್ನೇಹಿತರೊಬ್ಬರು ಕರೆ ಮಾಡಿದ್ದರು. ‘ನನ್ನ ಹಣಕಾಸಿನ ಸ್ಥಿತಿ ಅಷ್ಟು ಚೆನ್ನಾಗಿಲ್ಲ. ಆದರೂ ನನಗೆ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ₹ 9 ಲಕ್ಷ ವೈಯಕ್ತಿಕ ಸಾಲ ಸಿಗುತ್ತಿದೆ. ಶೇಕಡ 14ರಷ್ಟು ಬಡ್ಡಿ ಕಟ್ಟಬೇಕಂತೆ. ಸಾಲ ತಗೊಂಡು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ’ ಎಂದು ಕೇಳಿದರು. ಕೂಡಲೇ ನಾನು ‘ಅಂತಹ ತಪ್ಪನ್ನು ಯಾವತ್ತಿಗೂ ಮಾಡಬೇಡಿ. ವೈಯಕ್ತಿಕ ಸಾಲವನ್ನು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ತೆಗೆದುಕೊಳ್ಳಬೇಕು’ ಎಂದು ಮನದಟ್ಟು ಮಾಡಿದೆ.

ADVERTISEMENT

‘ಷೇರು ಮಾರುಕಟ್ಟೆಯಂತಹ ಹೆಚ್ಚು ರಿಸ್ಕ್ ಇರುವ ಹೂಡಿಕೆಗೆ ವೈಯಕ್ತಿಕ ಸಾಲದ ಹಣ ತೊಡಗಿಸಿ ನಷ್ಟವಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತೀರಿ. ನೀವೇ ಯೋಚನೆ ಮಾಡಿ. ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯಲ್ಲಿ ಸರಾಸರಿ ಶೇ 14ರಿಂದ ಶೇ 16ರಷ್ಟು ಲಾಭ ಸಿಗಬಹುದು. ಅಂಥದ್ದರಲ್ಲಿ ಶೇ 14ರ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆದು ಹೊಡಿಕೆ ಮಾಡುವುದು ತಪ್ಪಲ್ಲವೇ’ ಎಂದು ಕೇಳಿದೆ. ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು.

3) ಹೂಡಿಕೆ ಮಾಡಿ ತಾಳ್ಮೆ ಕಳೆದುಕೊಳ್ಳುವುದು: ಶ್ರೀಮಂತಿಕೆಯತ್ತ ನಿಧಾನಗತಿಯ ನಡಿಗೆಯೇ ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಅನುಸರಿಸಿದ ಮಾರ್ಗ. ಸಂಪತ್ತು ವೃದ್ಧಿಗೆ ಸಮಯ ಬೇಕು ಎನ್ನುವ ಸರಳ ಸತ್ಯ ನಮಗೆ ಗೊತ್ತಿರಬೇಕು. ನೀವೇ ಒಂದು ಬಿಸಿನೆಸ್ಅನ್ನು ಇವತ್ತು ಆರಂಭ ಮಾಡಿದರೆ, ಅದು ಲಾಭ ಗಳಿಸಿ ಉತ್ತಮ ಸ್ಥಿತಿಗೆ ಬರಲು ಒಂದೆರಡು ವರ್ಷಗಳು ಬೇಕು. ಆದರೆ, ಷೇರು ಖರೀದಿ ಮಾಡುವವರು ಮಾತ್ರ ಇವತ್ತು ಖರೀದಿಸಿದ ಷೇರು ನಾಳೆಯೇ ಹೆಚ್ಚು ಲಾಭ ಕೊಡಬೇಕು ಎಂದು ಬಯಸುತ್ತಾರೆ. ದಿಢೀರ್ ಲಾಭ ಸಿಗದಿದ್ದಾಗ ಆ ಷೇರುಗಳನ್ನು ಕೊಂಡ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಿ ಕೈಸುಟ್ಟುಕೊಳ್ಳುತ್ತಾರೆ. ಶೇ 90ರಷ್ಟು ಸಣ್ಣ ಹೂಡಿಕೆದಾರರು ಷೇರು ಹೂಡಿಕೆಯಲ್ಲಿ ನಷ್ಟ ಮಾಡಿಕೊಳ್ಳುವುದು ಹೀಗಿಯೇ.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.