ADVERTISEMENT

ಎನ್‌ಎಸ್‌ಇ ಪ್ರಕರಣ: ಚಿತ್ರಾ ಅವರ ಮಾಜಿ ಸಲಹೆಗಾರ ಆನಂದ್ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2022, 7:50 IST
Last Updated 25 ಫೆಬ್ರುವರಿ 2022, 7:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಮೂಹ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರ ಮಾಜಿ ಸಲಹೆಗಾರ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಗುರುವಾರ ರಾತ್ರಿ ಚೆನ್ನೈನಲ್ಲಿ ಬಂಧಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಎನ್‌ಎಸ್‌ಇ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಅವರನ್ನು ಕೇಂದ್ರೀಯ ತನಿಖಾ ದಳವು (ಸಿಬಿಐ) ಶುಕ್ರವಾರ ವಿಚಾರಣೆಗೆ ಒಳಪಡಿಸಿತ್ತು. ಷೇರುಗಳನ್ನು ತ್ವರಿತವಾಗಿ ಖರೀದಿಸಲು ಹಾಗೂ ಮಾರಾಟ ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಆರೋಪದ ಅಡಿಯಲ್ಲಿ ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್‌ ಪ್ರೈ.ಲಿ. ಕಂಪನಿಯ ಮಾಲೀಕ ಸಂಜಯ್ ಗುಪ್ತಾ ಎನ್ನುವವರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ADVERTISEMENT

‘ಈ ಕಂಪನಿಯ ಮಾಲೀಕ ಎನ್‌ಎಸ್‌ಇಯ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಎನ್‌ಎಸ್‌ಇ ಸರ್ವರ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇದೆ. 2010ರಿಂದ 2012ರ ನಡುವೆ ಈ ಖಾಸಗಿ ಕಂಪನಿಗೆ ಷೇರುಪೇಟೆಯ ಸರ್ವರ್‌ಗೆ ಮೊದಲಿಗನಾಗಿ ಲಾಗಿನ್ ಆಗಲು ಎನ್‌ಎಸ್‌ಇಯ ಕೆಲವು ಅಧಿಕಾರಿಗಳು ಅಕ್ರಮವಾಗಿ ಅನುಕೂಲ ಮಾಡಿಕೊಡುತ್ತಿದ್ದರು. ಇದರಿಂದಾಗಿ ಈ ಕಂಪನಿಗೆ ಬೇರೆ ಯಾವುದೇ ಬ್ರೋಕರ್‌ಗಿಂತ ಮೊದಲು ಕೆಲವು ದತ್ತಾಂಶಗಳು ಸಿಗುತ್ತಿದ್ದವು’ ಎಂದು ಸಿಬಿಐ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್‌) ಹೇಳಿದೆ.

ಚಿತ್ರಾ ಅವರು ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಯೋಗಿಯೊಬ್ಬರ ಮಾತು ಕೇಳಿ ಆನಂದ್ ಸುಬ್ರಮಣಿಯನ್ ಅವರನ್ನು ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಹುದ್ದೆಗೆ ನೇಮಕ ಮಾಡಿದ್ದರು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈಚೆಗೆ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಿದೆ.

ಸುಬ್ರಮಣಿಯನ್ ನೇಮಕ ಪ್ರಕ್ರಿಯೆಯಲ್ಲಿ ನಿಯಮಗಳ ಪಾಲನೆ ಆಗಿಲ್ಲ ಎಂದು ಸೆಬಿ ಆರೋಪಿಸಿದೆ. ಚಿತ್ರಾ ಅವರಿಗೆ ಸೆಬಿ ₹ 3 ಕೋಟಿ ದಂಡ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.