ADVERTISEMENT

ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ, ಸೂಚ್ಯಂಕ 394 ಅಂಶ ಇಳಿಕೆ

ಪಿಟಿಐ
Published 20 ಆಗಸ್ಟ್ 2020, 16:00 IST
Last Updated 20 ಆಗಸ್ಟ್ 2020, 16:00 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶಿ ಷೇರುಪೇಟೆಗಳ ವಹಿವಾಟು ಗುರುವಾರ ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 394 ಅಂಶ ಇಳಿಕೆಯಾಗಿ 38,220 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಬಿಎಸ್‌ಇ ಮಧ್ಯಮ ಮತ್ತು ಸಣ್ಣ ಗಾತ್ರದ ಸೂಚ್ಯಂಕಗಳು ಶೇ 0.87ರಷ್ಟು ಏರಿಕೆ ಕಂಡಿವೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 96 ಅಂಶ ಇಳಿಕೆ ಕಂಡು 11,312 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ ಮತ್ತು ಲಾಭಗಳಿಕೆ ಉದ್ದೇಶದ ವಹಿವಾಟು ನಡೆದಿದ್ದು ಸಹ ನಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಗರಿಷ್ಠ ಇಳಿಕೆ: ದಿನದ ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ ಷೇರು ಶೇ 2.35ರಷ್ಟು ಗರಿಷ್ಠ ನಷ್ಟ ಕಂಡಿತು. ಆ್ಯಕ್ಸಿಸ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಮಹೀಂದ್ರಾ, ಟೈಟಾನ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳ ಮೌಲ್ಯದಲ್ಲಿಯೂ ಇಳಿಕೆಯಾಗಿದೆ.

ಅಮೆರಿಕದ ಆರ್ಥಿಕ ಮುನ್ನೋಟ ಮತ್ತು ಹಣಕಾಸು ವ್ಯವಸ್ಥೆಯ ಮೇಲೆ ಕೋವಿಡ್‌–19 ಪಿಡುಗು ಹಾನಿ ಉಂಟುಮಾಡಲಿದೆ ಎಂದು ಅಲ್ಲಿನ ಕೇಂದ್ರೀಯ ಬ್ಯಾಂಕ್ ಫೆಡರಲ್‌ ರಿಸರ್ವ್‌ನ ಫೆಡರಲ್‌ ಓಪನ್ ಮಾರ್ಕೇಟ್‌ ಕಮಿಟಿ ಹೇಳಿದೆ. ಇದು ಜಾಗತಿಕ ಷೇರುಪೇಟೆಗಳಲ್ಲಿ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು.

‘ಬ್ಯಾಂಕಿಂಗ್‌ ವಲಯದ ಸೂಚ್ಯಂಕ ಹೆಚ್ಚಿನ ನಷ್ಟ ಕಂಡಿದೆ. ಇದೇ ರೀತಿಯ ಇನ್ನೊಂದು ಸುತ್ತಿನ ನಷ್ಟವು ಎದುರಾಗಬಹುದಾಗಿದ್ದು, ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಹೂಡಿಕೆದಾರರಿಗೆ ಸಲಹೆ ನೀಡಲಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆ: ಡಾಲರ್ ಎದುರು ರೂಪಾಯಿ ಮೌಲ್ಯ 20 ‍‍ಪೈಸೆ ಇಳಿಕೆಯಾಗಿದ್ದು, ಒಂದು ಡಾಲರ್‌ಗೆ ₹ 75.02ರಂತೆ ವಿನಿಮಯಗೊಂಡಿತು.

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಾಗತಿಕ ಆರ್ಥಿಕ ಚೇತರಿಕೆಯ ಬಗ್ಗೆ ಅನಿಶ್ಚಿತತೆ ಮೂಡಿದೆ. ಇದು ಏಷ್ಯಾದ ಕರೆನ್ಸಿಗಳ ಮೌಲ್ಯ ಇಳಿಕೆಗೆ ಕಾರಣವಾಯಿತು. ಡಾಲರ್‌ ಮೌಲ್ಯ ವೃದ್ಧಿ, ದೇಶಿ ಷೇರುಪೇಟೆಗಳಲ್ಲಿನ ಇಳಿಮುಖ ವಹಿವಾಟು ಹಾಗೂ ಅಮೆರಿಕದ ಫೆಡರಲ್‌ ರಿಸರ್ವ್‌ನ ಹೇಳಿಕೆಯು ರೂಪಾಯಿ ಮೇಲೆ ಪರಿಣಾಮ ಬೀರಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.