ADVERTISEMENT

ಯುಲಿಪ್‌ನಲ್ಲಿ ಹೂಡುವ ಮುನ್ನ

ನರಸಿಂಹ ಬಿ
Published 23 ಸೆಪ್ಟೆಂಬರ್ 2019, 3:26 IST
Last Updated 23 ಸೆಪ್ಟೆಂಬರ್ 2019, 3:26 IST
   

ವಿಮೆ ಮತ್ತು ಮಾರುಕಟ್ಟೆ ಹೂಡಿಕೆ ಈ ಎರಡನ್ನೂ ಒಳಗೊಂಡಿರುವುದೇ ಯುನಿಟ್ ಆಧಾರಿತ ವಿಮಾ ಯೋಜನೆ ಅಥವಾ ಯುಲಿಪ್. ಈ ಪ್ಲಾನ್‌ನಲ್ಲಿ ನಿಮ್ಮ ಹಣದ ಒಂದಿಷ್ಟು ಭಾಗವನ್ನು ವಿವಿಧ ಹಣಕಾಸು ಮಾರುಕಟ್ಟೆಗಳಲ್ಲಿ ಹೂಡುವ ಜತೆಗೆ ವಿಮಾ ಖಾತರಿ ಒದಗಿಸಲಾಗುತ್ತದೆ. ಹೆಸರೇ ಹೇಳುವಂತೆ ಯುಲಿಪ್ ಯೋಜನೆ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ.

ಯುಲಿಪ್‌ನಲ್ಲಿ 5 ವರ್ಷಗಳ ಹೂಡಿಕೆ ಅವಧಿ (ಲಾಕ್‌ಇನ್ ಪೀರಿಯಡ್) ಇರುತ್ತದೆ. ಲಾಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್- ಅಂದರೆ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶವಿರುತ್ತದೆ. ಹೂಡಿಕೆದಾರನಿಗೆ ಮಾರುಕಟ್ಟೆಯ ಏರಿಳಿತಗಳನ್ನು ತಡೆದುಕೊಳ್ಳುವ ಶಕ್ತಿ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ಮನಗಂಡು ಇದರಲ್ಲಿ ಹೂಡಿಕೆ ಬಗ್ಗೆ ತೀರ್ಮಾನಿಸಬೇಕಾಗುತ್ತದೆ.

ಯುಲಿಪ್ ವರ್ಗೀಕರಣ:ಯುಲಿಪ್ ಯೋಜನೆಗಳನ್ನು ಪ್ರಮುಖವಾಗಿ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಒಂದು ಪಿಂಚಣಿ (ಪೆನ್ಶನ್) ಮತ್ತೊಂದು ಎಂಡೋಮೆಂಟ್. ಪಿಂಚಣಿ ಯುಲಿಪ್‌ನಲ್ಲಿ ನಿಧಿ ಸಂಗ್ರಹ ಭಾಗವಿದೆ. ಮೆಚ್ಯೂರಿಟಿ ಮೊತ್ತವನ್ನು ಇಲ್ಲಿ ವರ್ಷಾಸನಗಳಲ್ಲಿ (ಆನುಯಿಟಿ) ಆಧಾರದಲ್ಲಿ ತೊಡಗಿಸಬೇಕಾಗುತ್ತದೆ. ಎಂಡೋಮೆಂಟ್ ಯುಲಿಪ್ ಸಹ ನಿಧಿ ಸಂಗ್ರಹ ಭಾಗ ಹೊಂದಿದೆ, ಆದರೆ ನಿಧಿಯ ಮೌಲ್ಯವನ್ನು 5 ವರ್ಷಗಳ ನಂತರ ಪಡೆದುಕೊಳ್ಳಲು ಅವಕಾಶವಿದೆ. ಒಟ್ಟಾರೆಯಾಗಿ ಯುಲಿಪ್‌ನಲ್ಲಿ ಹೂಡಿಕೆಯ ಭಾಗ ಮ್ಯೂಚುವಲ್ ಫಂಡ್ ರೀತಿಯಲ್ಲೇ ಇರುತ್ತದೆ.

ADVERTISEMENT

ಯುಲಿಪ್ ಶುಲ್ಕಗಳು: ಯುಲಿಪ್‌ನಲ್ಲಿ ಪ್ರಮುಖವಾಗಿ ನಾಲ್ಕು ಶುಲ್ಕಗಳಿವೆ. ಅವು ಹಂಚಿಕೆ, ನಿರ್ವಹಣೆ, ಪ್ರಾಣಹಾನಿ ಮತ್ತು ಫಂಡ್ ನಿರ್ವಹಣೆ ಶುಲ್ಕಗಳು. ಫಂಡ್ ನಿರ್ವಹಣೆ ಶುಲ್ಕವನ್ನು ಶೇ 1.35 ರಷ್ಟು ಇಡಲಾಗಿದೆ. ಯುಲಿಪ್‌ಗಳನ್ನು ಎಲ್‌ಟಿಸಿಜಿ ತೆರಿಗೆಯಿಂದ ಹೊರಗಿಡಲಾಗಿದೆ. ಈ ಹೂಡಿಕೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.

ನೀವು ಇದರಲ್ಲಿ ತೊಡಗಿಸಬೇಕೇ: ನೀವು ಯಾವ ಗುರಿ ಆಧರಿಸಿ ಯುಲಿಪ್‌ನಲ್ಲಿ ಹಣ ಹಾಕುತ್ತಿದ್ದೀರಿ ಎನ್ನುವುದರ ಮೇಲೆ
ಯುಲಿಪ್ ನ ಹೂಡಿಕೆ ಸೂಕ್ತವೇ ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಶಿಸ್ತುಬದ್ಧ ಹೂಡಿಕೆ ಮಾಡಿದರೆ ಯುಲಿಪ್‌ನಿಂದ ಅನುಕೂಲವಿದೆ. ಆದರೆ ಐದು ವರ್ಷಗಳ ಕಡ್ಡಾಯ ಹೂಡಿಕೆ ಅವಧಿ ಮತ್ತು ಹಲವು ಮಾದರಿಯ ಶುಲ್ಕಗಳು ಕೆಲ ಹೂಡಿಕೆದಾರರನ್ನು ಯುಲಿಪ್ ನಿಂದ ದೂರ ಉಳಿಯುವಂತೆ ಮಾಡುತ್ತವೆ.

ಯುಲಿಪ್ ಗಳನ್ನು ಸಂಪೂರ್ಣ ವಿಮಾ ಯೋಜನೆಗಳಾಗಿ ಪರಿಗಣಿಸುವುದು ತಪ್ಪಾಗುತ್ತದೆ. ಏಕೆಂದರೆ ಇದರಲ್ಲಿ ವಿಮೆ ಮೊತ್ತ, ಪ್ರೀಮಿಯಂನ 10 ರಿಂದ 12 ಪಟ್ಟು ಮಾತ್ರ ಇರುತ್ತದೆ. ಉದಾಹರಣೆಗೆ ನೀವು ಯುಲಿಪ್‌ನಲ್ಲಿ ₹ 1 ಕೋಟಿ ಕವರೇಜ್ ಪಡೆಯಬೇಕೆಂದರೆ ಸುಮಾರು ₹ 2 ಲಕ್ಷದಿಂದ ₹ 2.5 ಲಕ್ಷದವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರೆ ಟರ್ಮ್ ಲೈಫ್ ಇನ್ಶುರೆನ್ಸ್‌ ಕವರೇಜ್ ತೆಗೆದುಕೊಂಡರೆ ಸುಮಾರು 30 ವರ್ಷದ ವ್ಯಕ್ತಿಗೆ ಕೇವಲ ₹ 10 ರಿಂದ ₹ 13 ಸಾವಿರದಲ್ಲಿ ₹ 1 ಕೋಟಿ ಕವರೇಜ್ ಸಿಗುತ್ತದೆ. ಈ ಮೇಲಿನ ನಾನಾ ಕಾರಣಗಳಿಂದ ಹಲವರು ಯುಲಿಪ್‌ನಿಂದ ದೂರ ಉಳಿದಿದ್ದಾರೆ.

ಪೇಟೆಯಲ್ಲಿ ಉಳಿದೀತೆ ಹೂಡಿಕೆ ಉತ್ಸಾಹ?

ಆರ್ಥಿಕತೆಗೆ ಬಲ ತುಂಬಲು ಕಾರ್ಪೊರೇಟ್ ತೆರಿಗೆ ಕಡಿತ ಸೇರಿ ಹಲವು ಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಪರಿಣಾಮ ಷೇರುಪೇಟೆ ಸೂಚ್ಯಂಕಗಳು ಪುಟಿದೆದ್ದಿವೆ. ಶುಕ್ರವಾರದ ವಹಿವಾಟಿನಲ್ಲಿ ಒಂದೇ ದಿನ ಸೆನ್ಸೆಕ್ಸ್ 1,921 ಅಂಶಗಳ ಏರಿಕೆಯೊಂದಿಗೆ 38,015 ಅಂಶಗಳಲ್ಲಿ ದಿನದ ವಹಿವಾಟು ಮುಗಿಸಿದೆ. ನಿಫ್ಟಿ ಸಹ 569 ಅಂಶಗಳಷ್ಟು ಏರಿಕೆ ಕಂಡು ದಿನದ ಅಂತ್ಯಕ್ಕೆ 11,274 ರಲ್ಲಿ ವಹಿವಾಟು ಪೂರ್ಣಗೊಳಿಸಿದೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ ಶೇ 1.7 ಮತ್ತು ಶೇ 1.8 ರಷ್ಟು ಏರಿಕೆ ದಾಖಲಿಸಿವೆ.

ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತದಿಂದ ಹೂಡಿಕೆದಾರರ ಉತ್ಸಾಹ ಇಮ್ಮಡಿಯಾಗಿದ್ದು ಮುಂಬರುವ ತ್ರೈಮಾಸಿಕಗಳಲ್ಲಿ ಒಟ್ಟಾರೆ ಆರ್ಥಿಕ ಪ್ರಗತಿಯಲ್ಲಿ ಚೇತರಿಕೆ ಕಂಡುಬರುವ ನಿರೀಕ್ಷೆಯಿದೆ. ಕಾರ್ಪೊರೇಟ್ ತೆರಿಗೆ ಕಡಿತ ಘೋಷಣೆಗೂ ಮೊದಲು ನಿಫ್ಟಿ ಮತ್ತು ಸೆನ್ಸೆಕ್ಸ್ ಕಳೆದ ವಾರ ಸುಮಾರು ಶೇ 3 ರಷ್ಟು ಹಿನ್ನಡೆ ಅನುಭವಿಸಿದ್ದವು. ಆದರೆ ತೆರಿಗೆ ತಗ್ಗಿಸಿದ ಬಳಿಕ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹ 6.8 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ವಲಯವಾರು: ನಿಫ್ಟಿ ಎಫ್ಎಂಸಿಜಿ ಶೇ 4.3 ರಷ್ಟು ಜಿಗಿದಿದೆ. ನಿಫ್ಟಿ ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಕ್ರಮವಾಗಿ ಶೇ 3 ಮತ್ತು ಶೇ 3.3 ರಷ್ಟು ಏರಿಕೆಯಾಗಿವೆ. ಉಳಿದಂತೆ ಮಾಧ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಮಾರಾಟದ ಒತ್ತಡ ಕಂಡುಬಂದಿದೆ.

ಗಳಿಕೆ- ಇಳಿಕೆ: ಜಾಗತಿಕ ಸಂಶೋಧನಾ ಸಂಸ್ಥೆ ಮಾರ್ಗನ್ ಸ್ಟ್ಯಾನ್ಲಿ, ಟೈಟನ್ ಕಂಪನಿಯ ಷೇರುಗಳನ್ನು ಮೇಲ್ದರ್ಜೆಗೇರಿಸಿದ ಪರಿಣಾಮ ಕಂಪನಿಯ ಷೇರುಗಳು ಶೇ 12 ರಷ್ಟು ಏರಿಕೆ ಕಂಡಿವೆ. ಏಷ್ಯನ್‌ ಪೇಂಟ್ಸ್‌ ಶೇ 7.9 ರಷ್ಟು ಗಳಿಸಿದೆ. ಉಳಿದಂತೆ ಬಜಾಜ್ ಫೈನಾನ್ಸ್ , ಬ್ರಿಟಾನಿಯಾ, ಐಷರ್ ಮೋಟರ್ಸ್, ವೇದಾಂತ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 6 ರಿಂದ ಶೇ 8 ರಷ್ಟು ಗಳಿಸಿವೆ. ಯೆಸ್ ಬ್ಯಾಂಕ್ ಶೇ 19 ರಷ್ಟು ಕುಸಿದಿದೆ. ಜೀ, ಎನ್‌ಟಿಪಿಸಿ, ಟಿಸಿಎಸ್, ಪವರ್ ಗ್ರಿಡ್, ಇಂಡಿಯಾ ಬುಲ್ಸ್ ಶೇ 3 ರಿಂದ ಶೇ 14 ರಷ್ಟು ಹಿನ್ನಡೆ ಅನುಭವಿಸಿವೆ.

ಮುಂದೆ ಏನಾಗಬಹುದು: 2009 ಮೇ 18 ರಂದು ಪೇರುಪೇಟೆ 2,111 ಅಂಶಗಳಷ್ಟು ಏರಿಕೆ ದಾಖಲಿಸಿತ್ತು, ಅದಾದ ನಂತರದಲ್ಲಿ 2019 ಸೆಪ್ಟೆಂಬರ್ 20 ರಂದು ಪೇಟೆ 1921 ಅಂಶಗಳ ಏರಿಕೆ ಕಂಡಿರುವುದು ಎರಡನೇ ಅತಿ ಹೆಚ್ಚಿನ ಜಿಗಿತವಾಗಿದೆ. ಸದ್ಯ ಧುತ್ತೆಂದು ಮೇಲಕ್ಕೇರಿರುವ ಸೂಚ್ಯಂಕಗಳು ಮುಂದೆಯೂ ಸಕಾರಾತ್ಮಕವಾಗಿ ಇರಲಿವೆಯೇ ಎಂಬ ಪ್ರಶ್ನೆ ಹೂಡಿಕೆದಾರರ ಮನದಲ್ಲಿದೆ.

ಕಾರ್ಪೊರೇಟ್ ತೆರಿಗೆ ಕಡಿತದಿಂದ ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗಲಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಉದ್ಯಮಿಗಳು ಪೈಪೋಟಿ ನೀಡಲು ಈ ತೆರಿಗೆ ಕಡಿತ ಪೂರಕವಾಗಿದೆ. ಇದರ ಜತೆ ವಿದೇಶಿ ಹೂಡಿಕೆದಾರರು ಮತ್ತು ದೇಶಿ ಹೂಡಿಕೆದಾರರು ಸಹ ಬಂಡವಾಳ ಹೂಡಿಕೆಯತ್ತ ಗಮನಹರಿಸಲಿದ್ದಾರೆ. ಪರೋಕ್ಷವಾಗಿ ಉದ್ಯೋಗ ಸೃಷ್ಟಿಗೆ ಈ ಬೆಳವಣಿಗೆ ಕಾರಣವಾಗಲಿದೆ. ಮೇಲಿನ ವಿದ್ಯಮಾನಗಳಿಂದ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನಷ್ಟು ಸಕಾರಾತ್ಮಕ ಏರಿಕೆ ದಾಖಲಿಸುವ ನಿರೀಕ್ಷೆಯಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.