ADVERTISEMENT

ವಾರದ ವಹಿವಾಟು: ತ್ರೈಮಾಸಿಕ ಫಲಿತಾಂಶ, ಕೋವಿಡ್‌ ಮೇಲೆ ನಿರ್ಧಾರ

ಪಿಟಿಐ
Published 19 ಜುಲೈ 2020, 11:52 IST
Last Updated 19 ಜುಲೈ 2020, 11:52 IST
ಷೇರುಪೇಟೆ
ಷೇರುಪೇಟೆ   

ನವದೆಹಲಿ: ಭಾರತದ ಷೇರುಪೇಟೆಗಳ ವಾರದ ವಹಿವಾಟು ಕಂಪನಿಗಳ ತ್ರೈಮಾಸಿಕ ಫಲಿತಾಂಶ, ಕೋವಿಡ್‌ ಪ್ರಕರಣಗಳು ಮತ್ತು ರಾಜಕೀಯ ವಿದ್ಯಮಾನಗಳ ಮೇಲೆ ಅವಲಂಬಿತವಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂಗಾರು ಯಾವ ರೀತಿ ಚುರುಕು ಪಡೆದುಕೊಳ್ಳುತ್ತಿದೆ ಎನ್ನುವುದನ್ನೂ ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೊರೊನಾ ಹೊಡೆತಕ್ಕೆ ಸಿಲುಕಿರುವ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಕೃಷಿ ವಲಯದ ಚೇತರಿಕೆಯು ಬಹಳ ಮುಖ್ಯವಾದ ಪಾತ್ರ ವಹಿಸಲಿದೆ ಎನ್ನುವುದು ಅವರ ಅಭಿಪ್ರಾಯ.

ಜಾಗತಿಕ ಮಟ್ಟದ ಗಡಿ ವಿವಾದಗಳಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಆರ್ಥಿಕ ಬೆಳವಣಿಗೆಯು ಅನಿಶ್ಚಿತವಾಗಿದೆ. ಮುಖ್ಯವಾಗಿ, ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಹಾಗೂ ರಾಜಕೀಯ ವಿದ್ಯಮಾನಗಳು ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ.

ADVERTISEMENT

‘ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಆಧಾರದ ಮೇಲೆ ಷೇರುಗಳ ಮೌಲ್ಯದಲ್ಲಿಯೂ ಏರಿಳಿತ ಆಗಲಿದೆ. ಅದು ಸೂಚ್ಯಂಕದ ಮೇಲೆ ಪರಿಣಾಮ ಬೀರಲಿದೆ. ಅಲ್ಪಾವಧಿಗೆ ವಹಿವಾಟು ಸಕಾರಾತ್ಮಕವಾಗಿ ಇದ್ದಂತೆ ಕಂಡರೂ, ಅಮೆರಿಕ–ಚೀನಾ ವಾಣಿಜ್ಯ ಬಾಂಧವ್ಯ, ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದು, ದೇಶದಲ್ಲಿ ಕೆಲವೆಡೆ ಹೊಸದಾಗಿ ಲಾಕ್‌ಡೌನ್‌ ವಿಧಿಸುತ್ತಿರುವುದರಿಂದ ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ವರ್ತಕರಿಗೆ ಸಲಹೆ ನೀಡುತ್ತಿದೇವೆ’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ನಿವ್ವಳ ಲಾಭ ಜೂನ್‌ ತ್ರೈಮಾಸಿಕದಲ್ಲಿ ಶೇಕಡ 20ರಷ್ಟು ಹೆಚ್ಚಾಗಿದೆ. ಹೀಗಾಗಿ ಸೋಮವಾರದ ವಹಿವಾಟಿನಲ್ಲಿ ಅದರ ಮೇಲೆ ಎಲ್ಲರ ಗಮನ ಇರಲಿದೆ.

ಆ್ಯಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಹಿಂದೂಸ್ತಾನ್‌ ಯೂನಿಲಿವರ್‌, ಬಜಾಜ್‌ ಆಟೊ ಮತ್ತು ಐಟಿಸಿ ಕಂಪನಿಗಳು ಈ ವಾರ ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ.

ಹಿಂದಿನ ವಾರದ ವಹಿವಾಟು

425 ಅಂಶ

ಬಿಎಸ್‌ಇ ಏರಿಕೆ

133 ಅಂಶ

ನಿಫ್ಟಿ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.