ADVERTISEMENT

ಷೇರುಪೇಟೆ: ವಾರವಿಡೀ ಗಳಿಕೆಯ ಓಟ

ಹೂಡಿಕೆದಾರರಿಂದ ಉತ್ತಮ ಖರೀದಿ ವಹಿವಾಟು

ಪಿಟಿಐ
Published 28 ಏಪ್ರಿಲ್ 2023, 15:57 IST
Last Updated 28 ಏಪ್ರಿಲ್ 2023, 15:57 IST
ಸಾಂದರ್ಭಿಕ ಚಿತ್ರ, ಪಿಟಿಐ
ಸಾಂದರ್ಭಿಕ ಚಿತ್ರ, ಪಿಟಿಐ   

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ. ಸತತ ಐದೂ ದಿನಗಳ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ.

ಕಾರ್ಪೊರೇಟ್‌ ವಲಯದ ತ್ರೈಮಾಸಿಕ ಫಲಿತಾಂಶವು ತಕ್ಕ ಮಟ್ಟಿಗೆ ಉತ್ತಮವಾಗಿ ಇರುವುದರ ಜೊತೆಗೆ ವಿದೇಶಿ ಬಂಡವಾಳದ ಒಳಹರಿವು ಕೂಡ ದೇಶದ ಷೇರುಪೇಟೆಗಳಲ್ಲಿ ಗೂಳಿ ಓಟ ಮುಂದುವರಿಯಲು ನೆರವಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ವಾರದ ವಹಿವಾಟಿನಲ್ಲಿ 1,457 ಅಂಶ ಏರಿಕೆ ಕಂಡು 61,112 ಅಂಶಗಳಿಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, ವಾರದ ವಹಿವಾಟಿನಲ್ಲಿ 441 ಅಂಶ ಹೆಚ್ಚಾಗಿ 18,065ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ADVERTISEMENT

ಒಟ್ಟಾರೆಯಾಗಿ ಮಾರುಕಟ್ಟೆಯ ವಹಿವಾಟು ಸಕಾರಾತ್ಮಕವಾಗಿ ಇತ್ತು. ಬಿಎಸ್‌ಇ ಮಿಡ್‌ಕ್ಯಾಪ್‌, ಸ್ಮಾಲ್‌ಕ್ಯಾಪ್‌ ಮತ್ತು ಬಹುತೇಕ ವಲಯವಾರು ಸೂಚ್ಯಂಕಗಳು ಗಳಿಕೆಯೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿದವು. ಬಿಎಸ್‌ಇ ರಿಯಾಲ್ಟಿ ಸೂಚ್ಯಂಕ ಈ ವಾರ ಉತ್ತಮ ಗಳಿಕೆ ಕಂಡುಕೊಂಡಿದೆ. ಕಳೆದ ವಾರ ಮಾರಾಟದ ಒತ್ತಡಕ್ಕೆ ಒಳಗಾಗಿದ್ದ ಬಿಎಸ್‌ಇ ಐ.ಟಿ. ಸೂಚ್ಯಂಕ ಮತ್ತೆ ಗಳಿಕೆ ಹಾದಿಗೆ ಮರಳಿದೆ ಎಂದು ಕೋಟಕ್ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್‌ ಹೇಳಿದ್ದಾರೆ.

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 463 ಅಂಶ ಹೆಚ್ಚಾದರೆ, ನಿಫ್ಟಿ 150 ಅಂಶ ಏರಿಕೆ ಕಂಡಿತು. ಸೆನ್ಸೆಕ್ಸ್‌ನಲ್ಲಿ ವಿಪ್ರೊ ಷೇರು ಮೌಲ್ಯ ಶೇ 2.89ರಷ್ಟು ಗಳಿಕೆ ಕಂಡಿತು. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ₹ 5,933 ಕೋಟಿ ಹೆಚ್ಚಾಗಿ ₹ 2.11 ಲಕ್ಷ ಕೋಟಿಗೆ ತಲುಪಿತು. ವಿಪ್ರೊ ಕಂಪನಿಯು ₹ 12 ಸಾವಿರ ಕೋಟಿ ಮೌಲ್ಯದ ಷೇರು ಮರುಖರೀದಿ ಯೋಜನೆಯನ್ನು ಗುರುವಾರ ಪ್ರಕಟಿಸಿದೆ.

ನೆಸ್ಲೆ, ಎಸ್‌ಬಿಐ, ಲಾರ್ಸನ್‌ ಆ್ಯಂಡ್‌ ಟೂಬ್ರೊ, ಐಟಿಸಿ, ಟೆಕ್‌ ಮಹೀಂದ್ರ, ರಿಲಯನ್ಸ್‌, ಕೋಟಕ್‌ ಮಹೀಂದ್ರ ಮತ್ತು ಬಜಾಜ್‌ ಫೈನಾನ್ಸ್ ಕಂಪನಿ ಷೇರುಗಳ ಮೌಲ್ಯವೂ ಹೆಚ್ಚಾಗಿದೆ. ದಿನದ ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.32ರಷ್ಟು ಮತ್ತು ಸ್ಮಾಲ್‌ ಕ್ಯಾಪ್‌ ಶೇ 0.91ರಷ್ಟು ಏರಿಕೆ ಕಂಡಿವೆ.

ಎಫ್‌ಐಐ ಒಳಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ವಾರದ ವಹಿವಾಟಿನಲ್ಲಿ ಸೋಮವಾರ ₹ 412 ಕೋಟಿ ಮತ್ತು ಮಂಗಳವಾರ ₹ 407 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಬುಧವಾರ ಮತ್ತು ಗುರುವಾರ ಕ್ರಮವಾಗಿ ₹ 1,257 ಕೋಟಿ ಮತ್ತು ₹ 1,653 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

Highlights - ವಿದೇಶಿ ಬಂಡವಾಳ ಒಳಹರಿವು ಹೆಚ್ಚಳ ಮುಂದುವರಿದ ಸಕಾರಾತ್ಮಕ ವಹಿವಾಟು ವಿಪ್ರೊ ಮಾರುಕಟ್ಟೆ ಮೌಲ್ಯ ವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.