ADVERTISEMENT

ಎಂಎಫ್ ಹೂಡಿಕೆಯಲ್ಲಿ ನಾಮಿನಿ ಮಹತ್ವ

ನರಸಿಂಹ ಬಿ
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST
ನರಸಿಂಹ ಬಿ
ನರಸಿಂಹ ಬಿ   

ಮ್ಯೂಚುವಲ್ ಫಂಡ್ (ಎಂಎಫ್‌) ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರುವ ವ್ಯಕ್ತಿಯು ಸಾವನ್ನಪ್ಪಿದರೆ ಅದರಲ್ಲಿನ ಹೂಡಿಕೆ ಹಣ ಏನಾಗುತ್ತದೆ. ಮ್ಯೂಚುವಲ್ ಫಂಡ್ ಬಗ್ಗೆ ಅವರ ಕುಟುಂಬಸ್ಥರಿಗೆ ತಿಳಿದಿರದಿದ್ದರೆ ಹೂಡಿಕೆ ಹಣ ನಷ್ಟವಾಗುವುದೇ. ನಾಮಿನಿ ಹೆಸರಿಸದೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಎದುರಾಗುವ ಸಮಸ್ಯೆ ಏನು. ಮ್ಯೂಚುವಲ್ ಫಂಡ್ ಜಂಟಿ ಖಾತೆ ಹೊಂದಿದ್ದರೆ ಅದರ ವರ್ಗಾವಣೆ ಸಾಧ್ಯವೆ. ಹೀಗೆ ಮ್ಯೂಚುವಲ್ ಫಂಡ್ ಹೂಡಿಕೆಯ ಮಾಲೀಕತ್ವದ ಸುತ್ತ ಇರುವ ಹತ್ತಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.

ಶ್ರೀನಾಥ್ (ಹೆಸರು ಬದಲಿಸಲಾಗಿದೆ) 15 ವರ್ಷಗಳ ಕಾಲ ನಿಯಮಿತವಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ₹ 20 ಲಕ್ಷ ಗಳಿಸಿದ್ದರು. ಆದರೆ, ವಿಧಿಯಾಟ ಎನ್ನುವಂತೆ ಶ್ರೀನಾಥ್ ಅಕಾಲಿಕ ಮರಣಕ್ಕೆ ತುತ್ತಾದರು. ಇದೀಗ ಎದುರಾಗುವ ಪ್ರಶ್ನೆ ಎಂದರೆ, ಆ ₹ 20 ಲಕ್ಷ ಯಾರ ಪಾಲಾಗುತ್ತದೆ ಎನ್ನುವುದು. ಈ ಪ್ರಶ್ನೆಗೆ ಉತ್ತರ ನೀಡಬೇಕಾದರೆ ವಿವಿಧ ಸಂದರ್ಭಗಳನ್ನು ವಿವರಿಸಬೇಕಾಗುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಉತ್ತರವೂ ಬೇರೆ ಬೇರೆ ಆಗುತ್ತದೆ.

ಸಂದರ್ಭ-1: ಶ್ರೀನಾಥ್ ಅವರು ಮ್ಯೂಚುವಲ್ ಫಂಡ್‌ನಲ್ಲಿ ₹ 20 ಲಕ್ಷ ಹೂಡಿಕೆಯ ಬಗ್ಗೆ ತಮ್ಮ ಪತ್ನಿಗೆ ಯಾವುದೇ ಮಾಹಿತಿ ನೀಡಿರದಿದ್ದರೆ ಸಂಕಷ್ಟದ ಸ್ಥಿತಿ ಬಂದೊದಗುತ್ತದೆ. ಮ್ಯೂಚುವಲ್ ಫಂಡ್‌ನಲ್ಲಿ ಹೂಡಿರುವ ಹಣವನ್ನು ಕ್ಲೇಮ್ ಮಾಡಬೇಕು ಎನ್ನುವ ಬಗ್ಗೆ ಕುಟುಂಬದವರಿಗೆ ಮಾಹಿತಿಯೇ ಇಲ್ಲದಿದ್ದರೆ ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಕುಟುಂಬಸ್ಥರಿಗೆ ಆರ್ಥಿಕ ನಷ್ಟವಾಗುತ್ತದೆ.

ADVERTISEMENT

ಸಂದರ್ಭ–2: ಶ್ರೀನಾಥ್ ಅವರು ತಮ್ಮ ಪತ್ನಿಯನ್ನು ಮ್ಯೂಚುವಲ್ ಫಂಡ್‌ನ ನಾಮಿನಿಯಾಗಿಸಿದ್ದರೆ ₹ 20 ಲಕ್ಷ ಹಣದ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮತಿ ಶ್ರೀನಾಥ್ ಅವರು ಪತಿ ಹೆಸರಿನಲ್ಲಿರುವ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು. ಮ್ಯೂಚುವಲ್ ಫಂಡ್ ನಿರ್ವಹಣೆ ತಿಳಿದಿಲ್ಲ ಎಂದಾದರೆ ಮ್ಯೂಚುವಲ್ ಫಂಡ್ ಹೂಡಿಕೆ ಸ್ಥಗಿತಗೊಳಿಸಿ ಲಾಭಾಂಶದ ಹಣವನ್ನು 3 ವಾರಗಳ ಒಳಗಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ಸಂದರ್ಭ-3: ಶ್ರೀನಾಥ್ ಅವರು ಮ್ಯೂಚುವಲ್ ಫಂಡ್ ಜಂಟಿ ಖಾತೆ ಮಾಡಿಸಿ ತಮ್ಮ ಪತ್ನಿಯನ್ನು ಭಾಗಿದಾರರಾಗಿಸಿದ್ದರೆ ₹ 20 ಲಕ್ಷ ಹಣದ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮತಿ ಶ್ರೀನಾಥ್ ಅವರು ಪತಿ ಹೆಸರಿನಲ್ಲಿರುವ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ತಮ್ಮ ಹೆಸರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸಿಕೊಳ್ಳಬಹುದು. ಮ್ಯೂಚುವಲ್ ಫಂಡ್ ನಿರ್ವಹಣೆ ತಿಳಿದಿಲ್ಲ ಎಂದಾದರೆ ಮ್ಯೂಚುವಲ್ ಫಂಡ್ ಹೂಡಿಕೆ ಸ್ಥಗಿತಗೊಳಿಸಿ ಲಾಭಾಂಶದ ಹಣವನ್ನು 3 ವಾರಗಳ ಒಳಗಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ಸಂದರ್ಭ-4: ಶ್ರೀನಾಥ್ ಅವರು ಮ್ಯೂಚುವಲ್ ಫಂಡ್‌ನಲ್ಲಿ ₹ 20 ಲಕ್ಷ ಹೂಡಿಕೆಯ ಬಗ್ಗೆ ತಮ್ಮ ಪತ್ನಿಗೆ ಮಾಹಿತಿ ನೀಡಿ, ಆದರೆ ನಾಮಿನಿಯಾಗಿ ಮಾಡದಿದ್ದರೂ ಸಮಸ್ಯೆಯಾಗುತ್ತದೆ. ₹ 20 ಲಕ್ಷವನ್ನು ಮ್ಯೂಚುವಲ್ ಫಂಡ್ ಕಂಪನಿಯಿಂದ ಪಡೆದುಕೊಳ್ಳಲು ಸಾಕಷ್ಟು ಅಲೆದಾಡಬೇಕಾಗುತ್ತದೆ. ಪತಿಯ ಮ್ಯೂಚುವಲ್ ಫಂಡ್ ಹಣಕ್ಕೆ ಕಾನೂನುಬದ್ಧ ಉತ್ತರಾಧಿಕಾರಿ ತಾವೇ ಎಂದು ಸಾಬೀತುಪಡೆಸಲು ಪತ್ನಿ ಹೆಣಗಾಡ ಬೇಕಾಗುತ್ತದೆ. ಮ್ಯೂಚುವಲ್ ಫಂಡ್ ಕಂಪನಿ ಕೇಳುವ ಎಲ್ಲ ಪೂರಕ ದಾಖಲೆಗಳನ್ನು ಒದಗಿಸಬೇ ಕಾಗುತ್ತದೆ. ಇದು ಪ್ರಯಾಸದ ಕೆಲಸ ಎನಿಸಿದರೂ ಹಣ ಪಡೆದುಕೊಳ್ಳಲು ಸಾಧ್ಯವಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.