ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌  ₹53,215 ಕೋಟಿ ಹಕ್ಕಿನ ಷೇರು: ಮೇ 20ರಿಂದ ವಿತರಣೆ

ಏಜೆನ್ಸೀಸ್
Published 16 ಮೇ 2020, 5:58 IST
Last Updated 16 ಮೇ 2020, 5:58 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌    

ಮುಂಬೈ: ಮುಕೇಶ್‌ ಅಂಬಾನಿ ನೇತೃತ್ವದ ದೇಶದ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀನ್‌ ಲಿಮಿಟೆಡ್‌ (ಆರ್‌ಐಎಲ್‌) ಹಕ್ಕಿನ ಷೇರು ವಿತರಣೆಗೆ ಸಜ್ಜಾಗಿದೆ. ಷೇರುಪೇಟೆಗೆ ನೀಡಿರುವ ಮಾಹಿತಿ ಪ್ರಕಾರ, ಮೇ 20ರಿಂದ ₹53,215 ಕೋಟಿ (7 ಬಿಲಿಯನ್‌ ಡಾಲರ್‌) ಮೌಲ್ಯದ ಹಕ್ಕಿನ ಷೇರುಗಳು ವಿತರಣೆಯಾಗಲಿವೆ.

ಹಕ್ಕಿನ ಷೇರು ವಿತರಣೆಯು ಜೂನ್‌ 3ರಂದು ಕೊನೆಯಾಗಲಿದೆ.

ಈಗಾಗಲೇ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಹೊಂದಿರುವ ಷೇರುದಾರರು ಹಕ್ಕಿನ ಷೇರು ಪಡೆಯಲು ಅರ್ಹರಾಗಿರುತ್ತಾರೆ. ಹಕ್ಕಿನ ಷೇರು ಪ್ರಕ್ರಿಯೆ ಮೂಲಕ ಒಂದು ಷೇರು ಪಡೆಯಲು ಹೂಡಿಕೆದಾರರು ಕನಿಷ್ಠ 15 ಷೇರು ಖರೀದಿಸಿರಬೇಕು. 15 ಷೇರುಗಳಿಗೆ ಒಂದು ಹಕ್ಕಿನ ಷೇರು ಲೆಕ್ಕದಲ್ಲಿ ಪ್ರತಿ ಷೇರಿಗೆ ₹1,257ರಲ್ಲಿ ವಿತರಣೆಯಾಗಲಿದೆ.

ADVERTISEMENT

ಕಳೆದ ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಿಲಯನ್ಸ್‌ ಹಕ್ಕಿನ ಷೇರು ವಿತರಣೆಯ ಮೂಲಕ ಹಣ ಸಂಗ್ರಹಿಸುತ್ತಿದೆ. ಸಾಲದ ಹೊರೆಯಿಂದ ಸಂಪೂರ್ಣ ಮುಕ್ತಗೊಳ್ಳುವ ನಿಟ್ಟಿನಲ್ಲಿ ಹಲವು ಕ್ರಮಗಳು, ಒಪ್ಪಂದಗಳನ್ನು ಕಂಪನಿ ನಡೆಸುತ್ತಿದೆ. 2021ರ ಮಾರ್ಚ್‌ ವೇಳೆಗೆ ಶೂನ್ಯ ಸಾಲದ ಕಂಪನಿಯಾಗುವ ಗುರಿ ಹೊಂದಿದೆ. ಕಳೆದ ವರ್ಷ ಡಿಸೆಂಬರ್‌ 31ಕ್ಕೆ ಕಂಪನಿಯ ಒಟ್ಟು ಸಾಲ ₹1.53 ಟ್ರಿಲಿಯನ್‌ನಷ್ಟಿದೆ.

ಹಕ್ಕಿನ ಷೇರುಗಳಿಗೆ ಮನವಿ ಸಲ್ಲಿಸಿದ ಷೇರುದಾರರು, ಅರ್ಜಿ ಸಲ್ಲಿಸುವ ಸಮಯದಲ್ಲಿ ಪ್ರತಿ ಷೇರಿಗೆ ₹314.25ರಂತೆ ಹಣ ಪಾವತಿಸಬೇಕು. ಉಳಿದ ₹942.75 ಕಂಪನಿ ಸೂಚಿಸಿದಂತೆ ಮತ್ತೊಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಪಾವತಿಸಬಹುದು.

ಹಕ್ಕಿನ ಷೇರು ವಿತರಣೆಗಾಗಿ 9 ಹೂಡಿಕೆ ಬ್ಯಾಂಕ್‌ಗಳೊಂದಿಗೆ ರಿಲಯನ್ಸ್ ಒಪ್ಪಂದ ಮಾಡಿಕೊಂಡಿದೆ. ಫಾರಿನ್‌ ಬ್ಯಾಂಕ್ಸ್‌ ಸಿಟಿ ಗ್ರೂಪ್‌, ಮಾರ್ಗನ್‌ ಸ್ಟ್ಯಾನ್ಲೇ, ಕೊಟ್ಯಾಕ್‌ ಮಹೀಂದ್ರಾ ಕ್ಯಾಪಿಟಲ್‌, ಜೆಎಂ ಫೈನಾನ್ಶಿಯಲ್‌ ಲಿಮಿಟೆಡ್‌, ಆ್ಯಕ್ಸಿಸ್‌ ಕ್ಯಾಪಿಟಲ್‌ ಹಾಗೂ ಐಸಿಐಸಿಐ ಸೆಕ್ಯುರಿಟೀಸ್‌ ಷೇರು ಮಾರಾಟ ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.