ADVERTISEMENT

ಬ್ಯಾಂಕಿಂಗ್, ಐ.ಟಿ. ಷೇರು ಗಳಿಕೆ: ಸೂಚ್ಯಂಕ ಏರಿಕೆ

ಪಿಟಿಐ
Published 27 ಡಿಸೆಂಬರ್ 2021, 15:37 IST
Last Updated 27 ಡಿಸೆಂಬರ್ 2021, 15:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಐ.ಟಿ., ಹಣಕಾಸು ಮತ್ತು ಔಷಧ ಕಂಪನಿಗಳ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 296 ಅಂಶ ಏರಿಕೆ ಕಂಡು 57,420 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 83 ಅಂಶ ಹೆಚ್ಚಾಗಿ 17,086 ಅಂಶಗಳಿಗೆ ತಲುಪಿದೆ.

ಸೆನ್ಸೆಕ್ಸ್‌ನಲ್ಲಿ ಟೆಕ್‌ ಮಹೀಂದ್ರ ಕಂಪನಿಯ ಷೇರು ಮೌಲ್ಯ ಶೇಕಡ 3ರಷ್ಟು ಹೆಚ್ಚಾಯಿತು. ಡಾ. ರೆಡ್ಡೀಸ್‌ ಷೇರು ಮೌಲ್ಯ ಶೇ 1.95ರಷ್ಟು, ಪವರ್‌ ಗ್ರಿಡ್‌ ಶೇ 1.6ರಷ್ಟು, ಕೋಟಕ್‌ ಬ್ಯಾಂಕ್ ಶೇ 1.56ರಷ್ಟು ಏರಿಕೆ ಕಂಡಿವೆ.

ADVERTISEMENT

ಏಷ್ಯಾದ ಮಾರುಕಟ್ಟೆಗಳಲ್ಲಿನ ಮಿಶ್ರ ವಹಿವಾಟಿನ ಪರಿಣಾಮದಿಂದಾಗಿ ದೇಶಿ ಷೇರುಪೇಟೆಗಳ ವಹಿವಾಟು ನಕಾರಾತ್ಮಕವಾಗಿ ಆರಂಭ ಆಯಿತು. ಆರೋಗ್ಯ ಸೇವೆ, ಕೈಗಾರಿಕೆ ಮತ್ತು ಬಂಡವಾಳ ಸರಕುಗಳ ಷೇರುಗಳ ಗಳಿಕೆಯಿಂದಾಗಿ ಮಧ್ಯಾಹ್ನದ ಬಳಿಕ ವಹಿವಾಟು ಸಕಾರಾತ್ಮಕ ಹಾದಿಗೆ ಮರಳಿತು ಎಂದು ಆನಂದ ರಾಠಿ ಕಂಪನಿಯ ಈಕ್ವಿಟಿ ಸಂಶೋಧನೆಯ ಮುಖ್ಯಸ್ಥ ನರೇಂದ್ರ ಸೋಲಂಕಿ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.44ರವರೆಗೂ ಏರಿಕೆ ಕಂಡಿವೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಸೋಮವಾರ 3 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 75ರಂತೆ ವಿನಿಮಯಗೊಂಡಿತು. ಇದು ನಾಲ್ಕು ವಾರಗಳ ಗರಿಷ್ಠ ಮಟ್ಟವಾಗಿದೆ. ಎಂಟು ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯ 132 ಪೈಸೆಗಳಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.