ADVERTISEMENT

ವಿದೇಶಿ ಬಂಡವಾಳ ಒಳಹರಿವು: ಸೂಚ್ಯಂಕದ ನಾಗಾಲೋಟ

ತ್ರೈಮಾಸಿಕದ ಪ್ರಭಾವ

ಪಿಟಿಐ
Published 11 ಆಗಸ್ಟ್ 2018, 17:06 IST
Last Updated 11 ಆಗಸ್ಟ್ 2018, 17:06 IST
   

ಮುಂಬೈ : ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ವಾರವೂ ಸಕಾರಾತ್ಮಕ ಚಟುವಟಿಕೆ ಮುಂದುವರಿದಿದ್ದು, ಉತ್ತಮ ಗಳಿಕೆಯೊಂದಿಗೆ ವಾರದ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ವಹಿವಾಟು ಉತ್ತುಂಗದಲ್ಲಿದೆ. ಸಂವೇದಿ ಸೂಚ್ಯಂಕ ಇದೇ ಮೊದಲ ಬಾರಿಗೆ ಗುರುವಾರ 38 ಸಾವಿರದ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ, ಶುಕ್ರವಾರ ಮಾರಾಟದ ಒತ್ತಡಕ್ಕೆ ಒಳಗಾಗಿ 38 ಸಾವಿರದಿಂದ ಕೆಳಗಿಳಿಯಿತು. ವಾರದ ವಹಿವಾಟಿನಲ್ಲಿ 313 ಅಂಶ ಏರಿಕೆಯೊಂದಿಗೆ 37,879 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 11,495 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಒಟ್ಟಾರೆ ವಾರದಲ್ಲಿ 69 ಅಂಶ ಏರಿಕೆ ಕಂಡು 11,429 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ವಿದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ ಮತ್ತೆ ಆರಂಭವಾಗಿರುವುದರಿಂದ ವಹಿವಾಟು ಚೇತರಿಸಿಕೊಂಡಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಯೂ ಉತ್ತಮವಾಗಿರುವುದು ಸೂಚ್ಯಂಕದ ಏರಿಕೆಗೆ ಬಲ ನೀಡಿದೆ ಎಂದು ತಜ್ಞರು ಹೇಳಿದ್ದಾರೆ.

ಸಕಾರಾತ್ಮಕ ಅಂಶಗಳು:ಜೂನ್‌ ತಿಂಗಳ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ)ಶೇ 7 ರಷ್ಟು ಪ್ರಗತಿ ಕಂಡಿದ್ದು, ಐದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇನ್ನು ವಿದೇಶಿ ಬಂಡವಾಳ ಒಳಹರಿವು ಹೆಚ್ಚಾಗುತ್ತಿರುವುದರಿಂದ ಷೇರುಪೇಟೆಯಲ್ಲಿ ಇನ್ನೂ ಉತ್ತಮ ವಹಿವಾಟು ನಡೆಯುವ ನಿರೀಕ್ಷೆ ಮಾಡಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.