ADVERTISEMENT

ದಾಖಲೆ ಮಟ್ಟದ ವಹಿವಾಟು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 12:32 IST
Last Updated 21 ಆಗಸ್ಟ್ 2018, 12:32 IST

ಮುಂಬೈ (ಪಿಟಿಐ): ಸೂಚ್ಯಂಕಗಳು ಅಲ್ಪ ಏರಿಕೆ ಕಂಡರೂ ಷೇರುಪೇಟೆಗಳ ವಹಿವಾಟು ಹೊಸ ದಾಖಲೆ ಬರೆಯುವಂತಾಗಿದೆ.

ಸೋಮವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ತಲುಪಿದ್ದ ಷೇರುಪೇಟೆಗಳಲ್ಲಿ ಮಂಗಳವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.ಸತತ ಮೂರನೇ ವಹಿವಾಟು ಅವಧಿಯೂ ಸಕಾರಾತ್ಮಕವಾಗಿ ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ಮಂಗಳವಾರ 7 ಅಂಶ ಏರಿಕೆಯಾಗಿ ದಿನದ ವಹಿವಾಟು 38,285 ಅಂಶಗಳ ಹೊಸ ಎತ್ತರಕ್ಕೆ ತಲುಪಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 19 ಅಂಶ ಹೆಚ್ಚಾಗಿ ಹೊಸ ಎತ್ತರವಾದ 11,570ಕ್ಕೆ ಏರಿಕೆಯಾಯಿತು.

ದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರವಾದ ಖರೀದಿ ಪ್ರಕ್ರಿಯೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯು ಷೇರುಪೇಟೆಗಳನ್ನು ದಾಖಲೆ ಮಟ್ಟಕ್ಕೆ ತಲುಪುವಂತೆ ಮಾಡಿವೆ ಎಂದು ತಜ್ಞರು ಹೇಳಿದ್ದಾರೆ.

ಮಹತ್ವದ ಮಾತುಕತೆ:ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ, ತಮ್ಮ ಮಧ್ಯೆ ಮೂಡಿರುವ ವಾಣಿಜ್ಯ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿವೆ. ಈ ಸಂಬಂಧ ಬುಧವಾರ ಮತ್ತು ಗುರುವಾರ ಸಭೆ ನಡೆಸಲಿವೆ. ಮಾತುಕತೆಯಲ್ಲಿ ಸಕಾರಾತ್ಮಕ ಅಂಶಗಳು ಹೊರಬೀಳಲಿದೆ ಎನ್ನುವುದು ಹೂಡಿಕೆದಾರರ ನಿರೀಕ್ಷೆಯಾಗಿದೆ. ಇದು ನಿಜವಾದಲ್ಲಿ ಉಭಯ ದೇಶಗಳ ವಾಣಿಜ್ಯ ಬಿಕ್ಕಟ್ಟಿನಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಮೂಡಿರುವ ಅನಿಶ್ಚಿತ ವಾತಾವರಣ ತಗ್ಗಲಿದೆ.

ಕೋಲ್ ಇಂಡಿಯಾದಲ್ಲಿರುವ ಕೆಲವು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸುದ್ದಿಯಿಂದಕಂಪನಿಯ ಶೇ 2.59 ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿದೆ. ಇದರಿಂದ ಪ್ರತಿ ಷೇರಿನ ಬೆಲೆ ₹ 292ಕ್ಕೆ ತಲುಪಿತು. ಇನ್ನು, ಆ್ಯಕ್ಸಿಸ್‌ ಬ್ಯಾಂಕ್‌, ಎನ್‌ಟಿಪಿಸಿ, ಸನ್ ಫಾರ್ಮಾ, ವಿಪ್ರೊ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಒಎನ್‌ಜಿಸಿ, ಮಾರುತಿ ಸುಜುಕಿ, ಟಿಸಿಎಸ್‌, ಐಸಿಐಸಿಐ ಬ್ಯಾಂಕ್‌ ಮತ್ತು ಹೀರೊ ಮೊಟೊಕಾರ್ಪ್‌ ಶೇ 1.92ರವರೆಗೂ ಏರಿಕೆ ಕಂಡುಕೊಂಡಿವೆ.

ಇನ್ನೊಂದೆಡೆ, ಲಾಭ ಗಳಿಕೆಯ ವಹಿವಾಟಿಗೆ ಒಳಗಾಗಿ ಟಾಟಾ ಸ್ಟೀಲ್‌ ಷೇರುಗಳು ಶೇ 2.86ರಷ್ಟು ಇಳಿಕೆ ಕಂಡಿತು.ಎಚ್‌ಯುಎಲ್‌, ವೇದಾಂತ, ಮಹೀಂದ್ರಾ, ಭಾರ್ತಿ ಏರ್‌ಟೆಲ್‌, ಇಂಡಸ್‌ಇಂಡ್‌ ಬ್ಯಾಂಕ್, ಕೋಟಕ್ ಬ್ಯಾಂಕ್‌, ಏಷ್ಯನ್‌ ಪೇಂಟ್ಸ್‌, ಎಚ್‌ಡಿಎಫ್‌ಸಿ, ಬಜಾಜ್‌ ಆಟೊ ಮತ್ತು ಎಸ್‌ಬಿಐ ಶೇ 1.30ರವರೆಗೂ ಇಳಿಕೆ ಕಂಡಿವೆ.

ಏಷ್ಯಾ, ಯೂರೋಪ್‌ ಷೇರುಪೇಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ಹೂಡಿಕೆ ವಿವರ

₹ 593 ಕೋಟಿ

ಸೋಮವಾರದ ವಹಿವಾಟಿನಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿರುವ ಷೇರುಗಳ ಒಟ್ಟು ಮೌಲ್ಯ

₹ 483 ಕೋಟಿ

ಸೋಮವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ಮಾರಾಟ ಮಾಡಿರುವ ಷೇರುಗಳ ಒಟ್ಟು ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.