ADVERTISEMENT

ಕೊರೊನಾ ಆತಂಕ: ಷೇರುಪೇಟೆಗಳಲ್ಲಿ ತಲ್ಲಣ, ಸೆನ್ಸೆಕ್ಸ್‌ 795 ಅಂಶ ಕುಸಿತ

ಏಜೆನ್ಸೀಸ್
Published 12 ಜೂನ್ 2020, 5:10 IST
Last Updated 12 ಜೂನ್ 2020, 5:10 IST
ಷೇರುಪೇಟೆಗಳಲ್ಲಿ ಕರಡಿ ಹಿಡಿತ–ಸಾಂಕೇತಿಕ ಚಿತ್ರ
ಷೇರುಪೇಟೆಗಳಲ್ಲಿ ಕರಡಿ ಹಿಡಿತ–ಸಾಂಕೇತಿಕ ಚಿತ್ರ   

ಮುಂಬೈ: ಅಮೆರಿಕದಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ದೃಢಪಟ್ಟಿದ್ದು, ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ. ಶುಕ್ರವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಆರಂಭಿಕ ವಹಿವಾಟಿನಲ್ಲಿ 1,100 ಅಂಶ ಇಳಿಕೆಯಾಯಿತು.

ಬೆಳಿಗ್ಗೆ 10:15ಕ್ಕೆ ಸೆನ್ಸೆಕ್ಸ್‌ 795.83 ಅಂಶ (ಶೇ 2.37) ಕಡಿಮೆಯಾಗಿ 32,742.54 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 228.15 ಅಂಶ (ಶೇ 2.30) ಇಳಿಕೆಯಾಗಿ 9,673.85 ಅಂಶ ಮುಟ್ಟಿದೆ.

ಸೆನ್ಸೆಕ್ಸ್‌ ಷೇರುಗಳ ಪಟ್ಟಿಯಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 6.25ರಷ್ಟು ಕುಸಿದಿದೆ. ಇದರೊಂದಿಗೆ ಒಎನ್‌ಜಿಸಿ, ಕೊಟ್ಯಾಕ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಎನ್‌ಟಿಪಿಸಿ, ಬಜಾಜ್‌ ಫೈನಾನ್ಸ್‌ ಹಾಗೂ ಎಚ್‌ಡಿಎಫ್‌ಸಿ ಷೇರುಗಳು ಸಹ ಇಳಿಮುಖವಾಗಿವೆ.

ADVERTISEMENT

ಸನ್‌ ಫಾರ್ಮಾ ಷೇರು ಮಾತ್ರ ಸ್ವಲ್ಪ ಮಟ್ಟಿನ ಗಳಿಕೆ ದಾಖಲಿಸಿತ್ತು. ಆದರೆ,10 ಗಂಟೆ ನಂತರದ ವಹಿವಾಟಿನಲ್ಲಿ ನಷ್ಟ ಅನುಭವಿಸಿದೆ.

ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 708 ಅಂಶ ಕಡಿಮೆಯಾಗಿ 33,538 ಅಂಶ ಹಾಗೂ ನಿಫ್ಟಿ 214 ಅಂಶ ಇಳಿದು 9,902 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ₹805.14 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಅಮೆರಿಕದ ವಾಲ್‌ ಸ್ಟ್ರೀಟ್‌ ಶೇ 6ರಷ್ಟು ಕುಸಿದಿದೆ. ಇದೂ ಸಹ ದೇಶದ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಶಾಂಘೈ, ಹಾಂಕಾಂಗ್‌, ಟೋಕಿಯೊ, ಸೋಲ್‌ ಷೇರುಪೇಟೆಗಳು ಶೇ 2ರಷ್ಟು ಇಳಿಕೆ ಕಂಡಿವೆ. ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್‌ ಕಚ್ಚಾ ಫ್ಯೂಚರ್ಸ್ ಶೇ 1.53ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 37.96 ಅಮೆರಿಕನ್‌ ಡಾಲರ್‌ ತಲುಪಿದೆ.

ಜಾಗತಿಕವಾಗಿ ಒಟ್ಟು ಕೋವಿಡ್–19 ಪ್ರಕರಣಗಳು 75 ಲಕ್ಷ ದಾಟಿದ್ದು, ಸಾವಿಗೀಡಾದವರ ಸಂಖ್ಯೆ 4.21 ಲಕ್ಷ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.