ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಶೇ 2ಕ್ಕೂ ಹೆಚ್ಚು ಗಳಿಕೆ

ಹಣಕಾಸು ಹಾಗೂ ಐ.ಟಿ. ವಲಯದ ಷೇರುಗಳ ಉತ್ತಮ ಗಳಿಕೆ

ಪಿಟಿಐ
Published 9 ಮಾರ್ಚ್ 2022, 15:26 IST
Last Updated 9 ಮಾರ್ಚ್ 2022, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತೈಲ ಮತ್ತು ಅನಿಲ, ಹಣಕಾಸು ಹಾಗೂ ಐ.ಟಿ. ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸೂಚ್ಯಂಕಗಳು ಏರಿಕೆ ಕಂಡವು.

ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ವರದಿಗಳಿಂದಾಗಿ ಬುಧವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,223 ಅಂಶಗಳ ಗಳಿಕೆಯೊಂದಿಗೆ 54,647 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಫೆಬ್ರುವರಿ 25ರ ನಂತರ ದಿನದ ವಹಿವಾಟಿನಲ್ಲಿ ಆಗಿರುವ ಗರಿಷ್ಠ ಏರಿಕೆ ಇದಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 332 ಅಂಶ ಹೆಚ್ಚಾಗಿ 16,345 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ದಿನದ ವಹಿವಾಟಿನಲ್ಲಿ ಏಷ್ಯನ್ ಪೇಂಟ್ಸ್‌ ಷೇರು ಮೌಲ್ಯ ಶೇ 5.56ರಷ್ಟು ಗರಿಷ್ಠ ಏರಿಕೆ ಕಂಡಿತು. ಐ.ಟಿ. ವಲಯದಲ್ಲಿ ಟೆಕ್‌ ಮಹೀಂದ್ರ ಷೇರು ಮೌಲ್ಯ ಶೇ 2.85ರಷ್ಟು ಹೆಚ್ಚಾಯಿತು.

ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡುವಂತೆ ಕೇಳುವುದಿಲ್ಲ ಎಂದು ಅದರ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿರುವುದು ದೇಶದ ಷೇರುಪೇಟೆಗಳ ಓಟಕ್ಕೆ ಕಾರಣವಾಯಿತು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್‌. ರಂಗನಾಥನ್‌ ಅಭಿಪ್ರಾಯಪಟ್ಟಿದ್ದಾರೆ.

ಮತದಾನೋತ್ತರ ಸಮೀಕ್ಷೆಗಳಿಗೆ ದೇಶಿ ಷೇರುಪೇಟೆಯು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಅದೇ ರೀತಿಯಲ್ಲಿ ಫಲತಾಂಶವೂ ಪ್ರಕಟವಾಗುವ ನಿರೀಕ್ಷೆಯಲ್ಲಿದೆ. ಅಲ್ಪಾವಧಿಯಲ್ಲಿ ಚುನಾವಣಾ ಫಲಿತಾಂಶ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಸಕಾರಾತ್ಮಕ ಅಥವಾ ನಕಾರಾತ್ಮಕ ವಹಿವಾಟು ನಡೆಯಲಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 44 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 76.56ರಂತೆ ವಿನಿಮಯಗೊಂಡಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 1.22ರಷ್ಟು ಇಳಿಕೆ ಆಗಿದ್ದು, ಒಂದು ಬ್ಯಾರಲ್‌ಗೆ 126.4 ಡಾಲರ್‌ಗಳಿಗೆ ತಲುಪಿದೆ.

ಮುಖ್ಯಾಂಶಗಳು

ಬಿಎಸ್‌ಇ ಮಿಡ್‌ ಕ್ಯಾಪ್‌ ಶೇ 2.37ರಷ್ಟು ಗಳಿಕೆ

ಮುಂದುವರಿದ ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.