ADVERTISEMENT

ಗರಿಷ್ಠ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದ ಸೆನ್ಸೆಕ್ಸ್‌

ಐ.ಟಿ., ಲೋಹ, ಹಣಕಾಸು ಕಂಪನಿಗಳ ಷೇರು ಗಳಿಕೆ

ಪಿಟಿಐ
Published 11 ನವೆಂಬರ್ 2022, 16:35 IST
Last Updated 11 ನವೆಂಬರ್ 2022, 16:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ : ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರದ ವಹಿವಾಟಿನಲ್ಲಿ 1,181 ಅಂಶ ಜಿಗಿತ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತು.

ಅಮೆರಿಕದ ಹಣದುಬ್ಬರ ಪ್ರಮಾಣವು ಇಳಿಕೆ ಕಂಡಿರುವುದರಿಂದ ಅಲ್ಲಿನ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡುವ ವೇಗವನ್ನು ತುಸು ತಗ್ಗಿಸುವ ನಿರೀಕ್ಷೆ ವ್ಯಕ್ತವಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದು, ಅದು ದೇಶಿ ಷೇರುಪೇಟೆಗಳ ಮೇಲೆಯೂ ಪ್ರಭಾವ ಬೀರಿತು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆ ಮತ್ತು ವಿದೇಶಿ ಬಂಡವಾಳ ಒಳಹರಿವು ವಹಿವಾಟಿನ ಮೇಲೆ ಪ್ರಭಾವ ಬೀರಿದವು ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 321 ಅಂಶ ಹೆಚ್ಚಾಗಿ 18,349 ಅಂಶಗಳಿಗೆ ತಲುಪಿತು. ಬಿಎಸ್‌ಇನಲ್ಲಿ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಮೌಲ್ಯ ಶೇ 5.84ರಷ್ಟು ಏರಿಕೆ ಕಂಡಿತು.

ಮಾರುಕಟ್ಟೆಗಳು ಸಕಾರಾತ್ಮಕ ಚಲನೆಯನ್ನು ಕಾಯ್ದುಕೊಂಡಿವೆ. ಅಮೆರಿಕದ ಮಾರುಕಟ್ಟೆಯಲ್ಲಿ ಕಂಡುಬಂದ ಚೇತರಿಕೆಯು ದೇಶಿ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದವು ಎಂದು ರೆಲಿಗೇರ್‌ ಬ್ರೋಕಿಂಗ್‌ ಲಿಮಿಟೆಡ್‌ನ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಹೇಳಿದ್ದಾರೆ.

ಐ.ಟಿ., ಲೋಹ, ಹಣಕಾಸು ಮತ್ತು ತಂತ್ರಜ್ಞಾನ ವಲಯಗಳು ಗಳಿಕೆ ಕಂಡರೆ, ಆಟೊ, ವಿದ್ಯುತ್‌ ಮತ್ತು ಎಫ್‌ಎಂಸಿಜಿ ವಲಯಗಳು ಹೆಚ್ಚು ನಷ್ಟ ಕಂಡವು.

ಅಮೆರಿಕದ ಗ್ರಾಹಕ ದರ ಸೂಚ್ಯಂಕ ಆಧರಿಸಿದ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 8.2ರಷ್ಟು ಇದ್ದಿದ್ದು ಅಕ್ಟೋಬರ್‌ನಲ್ಲಿ ಶೇ 7.4ಕ್ಕೆ ಇಳಿಕೆ ಕಂಡಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಹಣಕಾಸು ಮಾರುಕಟ್ಟೆಗಳಲ್ಲಿ ಉತ್ತಮ ಗಳಿಕೆ ಕಂಡುಬಂತು.

ಹಾಂಗ್‌ಕಾಂಗ್ ಷೇರುಪೇಟೆ ಶೇ 7.70ರಷ್ಟು ಗಳಿಕೆ ಕಂಡುಕೊಂಡಿತು. ಟೋಕಿಯೊ, ಸೋಲ್‌, ಶಾಂಘೈ ಷೇರುಪೇಟೆಗಳಲ್ಲಿ ಸಹ ವಹಿವಾಟು ಏರಿಕೆ ಕಂಡಿತು. ಯುರೋಪ್‌ ಮಾರುಕಟ್ಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 2.37ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 95.89 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.