ADVERTISEMENT

267 ಅಂಶ ಏರಿಕೆ ಕಂಡ ಸೂಚ್ಯಂಕ

ಪಿಟಿಐ
Published 4 ಜುಲೈ 2018, 19:36 IST
Last Updated 4 ಜುಲೈ 2018, 19:36 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಮುಂಬೈ: ವಹಿವಾಟಿನ ಅಂತ್ಯದಲ್ಲಿ ನಡೆದ ಖರೀದಿ ಭರಾಟೆ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 267 ಅಂಶಗಳಷ್ಟು ಚೇತರಿಕೆ ಕಂಡಿತು.

ಕೇಂದ್ರ ಸರ್ಕಾರವು ಬಹುತೇಕ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಹೆಚ್ಚಿಸಿದ್ದರಿಂದ ಬ್ಯಾಂಕ್‌ ಮತ್ತು ವಾಹನ ತಯಾರಿಕಾ ಸಂಸ್ಥೆಗಳ ಷೇರುಗಳಲ್ಲಿ ಖರೀದಿ ಆಸಕ್ತಿ ಹೆಚ್ಚಾಗಿ ಕಂಡು ಬಂದಿತು. ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಷೇರುಗಳೂ ಲಾಭ ಮಾಡಿಕೊಂಡವು. ಇದರಿಂದ ಸಂವೇದಿ ಸೂಚ್ಯಂಕವು ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತು.

‘ಗರಿಷ್ಠ ಪ್ರಮಾಣದ ‘ಎಂಎಸ್‌ಪಿ’ಯಿಂದಾಗಿ ಗ್ರಾಮೀಣ ಜನರ ಆದಾಯ ಮತ್ತು ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಳಗೊಳ್ಳಲಿದೆ. ದೇಶದಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ಗ್ರಾಹಕ ಬಳಕೆ ಸರಕುಗಳಿಗೆ ಸಂಬಂಧಿಸಿದ ತಯಾರಿಕಾ ಸಂಸ್ಥೆಗಳ ಷೇರುಗಳಿಗೆ ಬೇಡಿಕೆ ಹೆಚ್ಚಿದೆ’ ಎಂದು ಜಿಯೊಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ವಿಶ್ಲೇಷಿಸಿದ್ದಾರೆ.

ADVERTISEMENT

ಜಾಗತಿಕ ಪೇಟೆಗಳಲ್ಲಿನ ನಿರುತ್ಸಾಹದ ವಹಿವಾಟಿನಿಂದಾಗಿ ದಿನದ ಬಹುತೇಕ ಸಮಯದಲ್ಲಿ ಸೂಚ್ಯಂಕವು ಕೆಳಮಟ್ಟದಲ್ಲಿಯೇ ಇತ್ತು. ದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಖರೀದಿ ಆಸಕ್ತಿ ಮತ್ತು ಜೂನ್‌ ತಿಂಗಳ ಸೇವಾ ವಲಯದ ಚೇತರಿಕೆಯು ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿತು.

ದಿನದ ಅಂತ್ಯಕ್ಕೆ ಸೂಚ್ಯಂಕವು 267 ಅಂಶಗಳಷ್ಟು ಏರಿಕೆ ದಾಖಲಿಸಿ 35,645 ಅಂಶಗಳಿಗೆ ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) 70 ಅಂಶಗಳ ಏರಿಕೆ ಕಂಡು 10,769 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಕೃಷಿ ಸಂಸ್ಥೆಗಳ ಷೇರು ಗಳಿಕೆ
ಕೃಷಿ ಕ್ಷೇತ್ರದಲ್ಲಿನ ಸಂಸ್ಥೆಗಳ ಷೇರುಗಳು ಗರಿಷ್ಠ ಶೇ 13ರಷ್ಟು ಏರಿಕೆ ಕಂಡವು. ಕೊಹಿನೂರ್‌ ಫುಡ್ಸ್‌ (ಶೇ 12.96), ಎಲ್‌ಟಿ ಫುಡ್ಸ್‌ (ಶೇ 7.01) ಮತ್ತು ಚಮನ್‌ಲಾಲ್‌ ಸೇಟಿಯಾ ಎಕ್ಸ್‌ಪೋರ್ಟ್ಸ್‌ ಷೇರುಗಳ ಬೆಲೆ ಶೇ 2.27ರಷ್ಟು ಹೆಚ್ಚಳ ದಾಖಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.