ADVERTISEMENT

ಜಾಗತಿಕ ವಿದ್ಯಮಾನಗಳ ಸಕಾರಾತ್ಮಕ ಪ್ರಭಾವ: 36 ಸಾವಿರ ದಾಟಿದ ಸೂಚ್ಯಂಕ

ಪಿಟಿಐ
Published 9 ಜನವರಿ 2019, 20:00 IST
Last Updated 9 ಜನವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ವಹಿವಾಟು ಮುಂದುವರೆದಿದೆ. ಬುಧವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮತ್ತೆ 36 ಸಾವಿರದ ಗಡಿ ತಲುಪಿತು.

ಪರಸ್ಪರ ವಾಣಿಜ್ಯ ಸಮರ ಕೈಬಿಡುವ ನಿಟ್ಟಿನಲ್ಲಿ ಅಮೆರಿಕ ಮತ್ತು ಚೀನಾ ಒಪ್ಪಂದಕ್ಕೆ ಬರುವ ವಿಶ್ವಾಸ ವ್ಯಕ್ತವಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಏರಿಕೆಯಾಗಿದ್ದು, ದೇಶಿ ಷೇರುಪೇಟೆಗಳ ಮೇಲೆಯೂ ಪ್ರಭಾವ ಬೀರಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 232 ಅಂಶ ಏರಿಕೆ ಕಂಡು 36,212 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಹಿಂದಿನ ಮೂರು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ 467 ಅಂಶಗಳಷ್ಟು ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 53 ಅಂಶ ಹೆಚ್ಚಾಗಿ 10,855 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಇನ್ಫೊಸಿಸ್‌: ಇದೇ 11 ರಂದು ಷೇರು ಮರು ಖರೀದಿ ನಿರ್ಧಾರ ಪ್ರಕಟಿಸುವುದಾಗಿ ಇನ್ಫೊಸಿಸ್ ಹೇಳಿದೆ. ಇದರಿಂದ ಕಂಪನಿ ಷೇರುಗಳು
ಶೇ 0.90ರಷ್ಟು ಏರಿಕೆ ಕಂಡಿವೆ.

ರೂಪಾಯಿ ಮೌಲ್ಯ 25 ಪೈಸೆ ಇಳಿಕೆ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 25 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹70.46ಕ್ಕೆ ತಲುಪಿದೆ.

ಕಚ್ಚಾ ತೈಲ ದರ ಏರಿಕೆ ಮತ್ತು ಡಾಲರ್‌ಗೆ ಬೇಡಿಕೆ ಹೆಚ್ಚಾಗಿರುವುದರಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ವಹಿವಾಟುದಾರರು ಹೇಳಿದ್ದಾರೆ.

ಕಚ್ಚಾ ತೈಲ ದರ ಏರಿಕೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಮತ್ತೆ ಏರಿಕೆ ಹಾದಿ ಹಿಡಿದಿದೆ. ಬುಧವಾರ ಒಂದು ಬ್ಯಾರೆಲ್‌ಗೆ 60 ಡಾಲ್‌ಗಳಿಗೆ ಏರಿಕೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.