ADVERTISEMENT

ಸೆನ್ಸೆಕ್ಸ್, ನಿಫ್ಟಿ ಏರಿಕೆ

ಪಿಟಿಐ
Published 16 ಆಗಸ್ಟ್ 2022, 12:35 IST
Last Updated 16 ಆಗಸ್ಟ್ 2022, 12:35 IST
   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಲ್ಲಿ 379 ಅಂಶ ಏರಿಕೆ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 127 ಅಂಶ ಹೆಚ್ಚಾಗಿ 17,825 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ತೈಲ ಮತ್ತು ಅನಿಲ, ಬ್ಯಾಂಕಿಂಗ್, ಆಟೊಮೊಬೈಲ್‌ ವಲಯದ ಷೇರುಗಳ ಖರೀದಿ ಜೋರಾಗಿತ್ತು ಎಂದು ವರ್ತಕರು ತಿಳಿಸಿದ್ದಾರೆ. ಹಣದುಬ್ಬರ ಪ್ರಮಾಣವು ಇಳಿಕೆಯ ಹಾದಿಗೆ ತಿರುಗಿದ್ದು ಕೂಡ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

‘ಹಣದುಬ್ಬರ ಪ್ರಮಾಣ ತಗ್ಗಿರುವುದು ದೇಶಿ ಹೂಡಿಕೆದಾರರು ಆರ್ಥಿಕ ಚೇತರಿಕೆಯ ಬಗ್ಗೆ ಆಶಾವಾದ ಹೊಂದಲು ಕಾರಣವಾಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣ ಕಡಿಮೆ ಆಗಿರುವುದರಿಂದ ರೆಪೊ ದರ ಹೆಚ್ಚಳದ ಪ್ರಮಾಣವು ಜಾಸ್ತಿ ಇರಲಿಕ್ಕಿಲ್ಲ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

‘ಹಣದುಬ್ಬರ ಪ್ರಮಾಣ ಕಡಿಮೆ ಆಗಿರುವುದು ಮುಂದಿನ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಜಾಸ್ತಿ ಇರಲಿಕ್ಕಿಲ್ಲ ಎಂಬ ನಿರೀಕ್ಷೆ ಮೂಡಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಖರೀದಿಸುತ್ತಿರುವುದು ಕೂಡ ಉತ್ಸಾಹವನ್ನು ಹೆಚ್ಚಿಸಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನೆ (ಸಣ್ಣ ಹೂಡಿಕೆ) ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ತಲಾ ಶೇ 1.03ರಷ್ಟು ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇ 0.86ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 94.28 ಅಮೆರಿಕನ್‌ ಡಾಲರ್‌ಗೆ ತಲುಪಿದೆ.

ಬಿಎಸ್‌ಇ ವಲಯವಾರು ಏರಿಕೆ (%)

ಆಟೊ;2.57

ರಿಯಾಲ್ಟಿ;2.03

ತೈಲ ಮತ್ತು ಅನಿಲ;1.76

ಇಂಧನ;1.48

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.