ADVERTISEMENT

ಬ್ಯಾಂಕಿಂಗ್‌, ಐ.ಟಿ. ಷೇರು ಗಳಿಕೆ: ಸೆನ್ಸೆಕ್ಸ್‌ 1041 ಅಂಶ ಏರಿಕೆ

ಪಿಟಿಐ
Published 28 ಜುಲೈ 2022, 16:30 IST
Last Updated 28 ಜುಲೈ 2022, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಣಕಾಸು, ಬ್ಯಾಂಕಿಂಗ್‌ ಮತ್ತು ಐ.ಟಿ. ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ ಕಾರಣ ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರ ಉತ್ತಮ ಪ್ರಮಾಣದಲ್ಲಿ ಜಿಗಿತ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,041 ಅಂಶ ಏರಿಕೆ ಕಂಡು 56,858 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 288 ಅಂಶ ಹೆಚ್ಚಾಗಿ 16,929 ಅಂಶಗಳಿಗೆ ಏರಿಕೆ ಆಯಿತು.

ಅಮೆರಿಕದ ಫೆಡರಲ್‌ ರಿಸರ್ವ್ ಬಡ್ಡಿ ದರವನ್ನು 75 ಮೂಲಾಂಶದಷ್ಟು ಹೆಚ್ಚಳ ಮಾಡಿದ ಬಳಿಕವೂ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಂಡಿರುವುದು ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ನಿಧಾನ ಗತಿಯಲ್ಲಿ ಹಣಕಾಸು ನೀತಿಯನ್ನು ಬಿಗಿಗೊಳಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಫೆಡರಲ್‌ ರಿಸರ್ವ್ ಸುಳಿವು ನೀಡಿರುವುದರಿಂದಾಗಿ ನಿಫ್ಟಿ ಹೆಚ್ಚಿನ ಏರಿಕೆ ಕಂಡಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಮುಖ್ಯಸ್ಥ ದೀಪಕ್‌ ಜಸನಿ ಹೇಳಿದ್ದಾರೆ.

ಐ.ಟಿ. ಸೂಚ್ಯಂಕ ಶೇ 2.51ರಷ್ಟು ಗಳಿಕೆ ಕಂಡಿತು. ಹಣಕಾಸು (ಶೇ 2.21), ತಂತ್ರಜ್ಞಾನ (ಶೇ 2.19), ರಿಯಲ್‌ ಎಸ್ಟೇಟ್‌ (ಶೇ 2.03) ಮತ್ತು ಬ್ಯಾಂಕ್ (ಶೇ 1.72) ಸೂಚ್ಯಂಕಗಳೂ ಏರಿಕೆ ಕಂಡಿವೆ.

ಸರ್ಕಾರಿ ಸಾಲಪತ್ರಗಳ ಜುಲೈ ತಿಂಗಳ ಅವಧಿಯು ಗುರುವಾರ ಮುಕ್ತಾಯ ಆಗುವುದರಿಂದ ಷೇರುಪೇಟೆಗಳ ವಹಿವಾಟು ಏರಿಕೆ ಕಂಡಿತು. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಳವು ನಿರೀಕ್ಷಿತ ಆಗಿದ್ದರಿಂದ ಅಮೆರಿಕದ ಮಾರುಕಟ್ಟೆಯಲ್ಲಿ ಏರಿಕೆ ವಹಿವಾಟು ನಡೆಯಿತು. ಭಾರತದ ಷೇರುಪೇಟೆಯ ಮೇಲೆಯೂ ಅದರ ಪ್ರಭಾವ ಕಂಡುಬಂತು. ಐ.ಟಿ., ಲೋಹ ಮತ್ತು ರಿಯಲ್‌ ಎಸ್ಟೇಟ್ ವಲಯದ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾದವು ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲ ದರ ಶೇ 1.36ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 108.1 ಡಾಲರ್‌ಗೆ ತಲುಪಿತು.

ಷೇರುಗಳ ಮೌಲ್ಯ ವೃದ್ಧಿ (%)
ಬಜಾಜ್ ಫೈನಾನ್ಸ್‌;
10.68
ಬಜಾಜ್‌ ಫಿನ್‌ಸರ್ವ್‌; 10.14
ಟಾಟಾ ಸ್ಟೀಲ್‌; 4.59
ಕೋಟಕ್‌ ಬ್ಯಾಂಕ್‌; 4.25
ಇಂಡಸ್‌ಇಂಡ್‌ ಬ್ಯಾಂಕ್‌;3.90

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.