ADVERTISEMENT

ತಗ್ಗಿದ ಓಮೈಕ್ರಾನ್ ಭೀತಿ: ಜಿಗಿದ ಷೇರುಪೇಟೆ

ಪಿಟಿಐ
Published 7 ಡಿಸೆಂಬರ್ 2021, 21:46 IST
Last Updated 7 ಡಿಸೆಂಬರ್ 2021, 21:46 IST
ಬಿಎಸ್‌ಇ
ಬಿಎಸ್‌ಇ   

ಮುಂಬೈ (ಪಿಟಿಐ): ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಭರ್ಜರಿ ಏರಿಕೆ ದಾಖಲಿಸಿದವು. ಕೊರೊನಾ ವೈರಾಣುವಿನ ಓಮೈಕ್ರಾನ್ ರೂಪಾಂತರಿ ತಳಿ ಕುರಿತ ಭಯ ತಗ್ಗಿದ ಕಾರಣ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ಸಾಹದ ವಹಿವಾಟು ನಡೆಯಿತು. ಇದರ ಪರಿಣಾಮವು ಭಾರತದ ಷೇರು ಮಾರುಕಟ್ಟೆಗಳ ಮೇಲೆಯೂ ಆಯಿತು.

ಓಮೈಕ್ರಾನ್ ತಳಿಯು ಬಹಳ ವೇಗವಾಗಿ ಹರಡಬಲ್ಲುದಾದರೂ ಅದರ‍ಪ್ರಭಾವವು ಡೆಲ್ಟಾ ತಳಿಯ ಪ್ರಭಾವಕ್ಕಿಂತ ಕಡಿಮೆ ಎಂದು ಆರಂಭಿಕ ಸಂಶೋಧನೆಗಳು ಕಂಡುಕೊಂಡಿರುವುದು ಮಾರುಕಟ್ಟೆ
ಗಳು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದವು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೋಹ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವ ಷೇರುಗಳ ಖರೀದಿಗೆ ಹೂಡಿಕೆದಾರರು ಮುಂದಾದರು. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ತುಸು ಚೇತರಿಕೆ ಕಂಡುಕೊಂಡಿದ್ದು ಕೂಡ ಷೇರು ಮಾರುಕಟ್ಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು. 886 ಅಂಶ ಏರಿಕೆ ಕಂಡ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 57,633 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರು‍ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 264 ಅಂಶ ಜಿಗಿತ ಕಂಡು, 17,176 ಅಂಶಗಳಲ್ಲಿ ವಹಿವಾಟು ಮುಗಿಸಿತು.

ADVERTISEMENT

‘ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ರೆಪೊ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಸಮಿತಿಯು ತನ್ನ ತೀರ್ಮಾನವನ್ನು ಬುಧವಾರ ಬೆಳಿಗ್ಗೆ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಷೇರು ಮಾರುಕಟ್ಟೆಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಳ ಕಂಡಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 2.26ರಷ್ಟು ಹೆಚ್ಚಳ ಆಗಿದ್ದುಪ್ರತಿ ಬ್ಯಾರೆಲ್‌ಗೆ 74.73 ಅಮೆರಿಕನ್ ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.