ADVERTISEMENT

ಸೆನ್ಸೆಕ್ಸ್ 1,400 ಅಂಶ ಕುಸಿತ

ಪಿಟಿಐ
Published 19 ಮೇ 2022, 16:09 IST
Last Updated 19 ಮೇ 2022, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದ ದೇಶಿ ಷೇರುಪೇಟೆಗಳಲ್ಲಿ ಗುರುವಾರ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಗಮನ ನೀಡಿರುವುದು ಮತ್ತು ರೂಪಾಯಿ ಮೌಲ್ಯವು ದಾಖಲೆ ಮಟ್ಟಕ್ಕೆ ಇಳಿಕೆ ಆಗಿರುವುದು ಸಹ ವಹಿವಾಟಿನ ಮೇಲೆ ಪರಿಣಾಮ ಉಂಟುಮಾಡಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,416 ಅಂಶ ಇಳಿಕೆ ಕಂಡು 52,792 ಅಂಶಗಳಿಗೆ ತಲುಪಿತು. ಎರಡು ತಿಂಗಳಿನಲ್ಲಿ ದಿನದ ವಹಿವಾಟಿನಲ್ಲಿ ಆಗಿರುವ ಸೂಚ್ಯಂಕದ ಅತಿ ದೊಡ್ಡ ಕುಸಿತ ಇದು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 431 ಅಂಶ ಇಳಿಕೆ ಕಂಡು 15,809 ಅಂಶಗಳಿಗೆ ತಲುಪಿತು. ಸೆನ್ಸೆಕ್ಸ್‌ನಲ್ಲಿ ವಿಪ್ರೊ ಕಂಪನಿ ಷೇರು ಶೇ 6.21ರಷ್ಟು ಗರಿಷ್ಠ ನಷ್ಟ ಕಂಡಿತು.

ADVERTISEMENT

ಮಾರುಕಟ್ಟೆಯು ಹೆಚ್ಚು ಚಂಚಲವಾಗಿದ್ದು, ಹೂಡಿಕೆದಾರರು ಎಫ್‌ಎಂಸಿಜಿ, ಔಷಧ, ಬಂಡವಾಳ ಸರಕುಗಳು ಮತ್ತು ತಯಾರಿಕಾ ವಲಯಗಳ ಬಗ್ಗೆ ಗಮನ ಹರಿಸುವುದು ಒಳಿತು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.29ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 107.7 ಡಾಲರ್‌ಗಳಿಗೆ ತಲುಪಿದೆ.

ಕರಗಿತು ₹ 6.71 ಲಕ್ಷ ಕೋಟಿ: ನಕಾರಾತ್ಮಕ ವಹಿವಾಟಿನಿಂದ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 6.71 ಲಕ್ಷ ಕೋಟಿಯಷ್ಟು ಕರಗಿತು. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 249.06 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ ಆಗಿದ್ದು, ಒಂದು ಡಾಲರ್‌ಗೆ ₹ 77.72 ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.