ADVERTISEMENT

ಕರಡಿ ಹಿಡಿತದಲ್ಲಿ ಷೇರುಪೇಟೆ: ವಹಿವಾಟು ಆರಂಭದಲ್ಲೇ ಸೆನ್ಸೆಕ್ಸ್‌ ಕುಸಿತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 5:10 IST
Last Updated 30 ಮಾರ್ಚ್ 2020, 5:10 IST
ಕರಡಿ ಹಿಡಿತದಲ್ಲಿ ಷೇರುಪೇಟೆ
ಕರಡಿ ಹಿಡಿತದಲ್ಲಿ ಷೇರುಪೇಟೆ   

ಬೆಂಗಳೂರು: ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತದಲ್ಲಿ ಲಾಕ್‌ಡೌನ್‌ ಪರಿಣಾಮ ಷೇರುಪೇಟೆಗಳ ಮೇಲೆ ಮುಂದುವರಿದಿದೆ. ಸೋಮವಾರ ವಹಿವಾಟು ಆರಂಭದಿಂದಲೇ ಸೆನ್ಸೆಕ್ಸ್ ಶೇ 2.86ರಷ್ಟು ಇಳಿಕೆಯಾಗಿ 28,862.47 ಅಂಶ ತಲುಪಿತು.

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು 1,000 ದಾಟಿದ್ದು, 27 ಮಂದಿ ಸಾವಿಗೀಡಾಗಿದ್ದಾರೆ. ಸೋಂಕು ಪ್ರಕರಣ ಏರಿಕೆಯಾಗಿರುವುದು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ. ಷೇರುಗಳ ಮಾರಾಟಕ್ಕೆ ಮುಂದಾಗಿರುವುದರಿಂದ ನಿಫ್ಟಿ ಶೇ 2.76ರಷ್ಟು ಇಳಿಕೆಯಾಗಿ 8,421.05 ಅಂಶ ಮುಟ್ಟಿತು.

ಬಜಾಜ್‌ ಫೈನಾನ್ಸ್‌ ಷೇರು ಶೇ 8ರಷ್ಟು ಇಳಿಕೆ ಕಂಡಿತು. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟಾಟಾ ಸ್ಟೀಲ್‌, ಬಜಾಜ್‌ ಆಟೊ, ಒಎನ್‌ಜಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಕೊಟ್ಯಾಕ್‌ ಬ್ಯಾಂಕ್‌ ಷೇರುಗಳು ಸಹ ಕುಸಿದಿವೆ. ಟಿಸಿಎಸ್‌, ಟೆಕ್‌ ಮಹೀಂದ್ರಾ, ಆ್ಯಕ್ಸಿಸ್‌ ಬ್ಯಾಂಕ್‌, ಎಚ್‌ಯುಎಲ್‌, ಬಿಇಎಂಎಲ್‌ ಸೇರಿದಂತೆ ಕೆಲವು ಕಂಪನಿಗಳ ಷೇರುಗಳು ಸಕಾರಾತ್ಮಕ ವಹಿವಾಟು ಕಂಡಿದೆ.

ADVERTISEMENT

ಬೆಳಿಗ್ಗೆ 10:30ಕ್ಕೆ ಸೆನ್ಸೆಕ್ಸ್‌ 538.87 ಅಂಶ ಇಳಿಕೆಯೊಂದಿಗೆ 29,276.72 ಅಂಶ ಹಾಗೂ ನಿಫ್ಟಿ 126.50 ಕಡಿಮೆಯಾಗಿ 8533.75 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 32 ಪೈಸೆ ಇಳಿಕೆಯಾಗಿದ್ದು, ₹75.21ರಲ್ಲಿ ವಹಿವಾಟು ನಡೆದಿದೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,165 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 4,307 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮಾರ್ಚ್‌ನಲ್ಲಿ ಒಟ್ಟಾರೆಯಾಗಿ ₹ 58,408.15 ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.