ADVERTISEMENT

ಷೇರು ಸೂಚ್ಯಂಕ ಏರುತ್ತಿದೆ: ಈಗಲೇ ಹಣ ಹಿಂಪಡೆಯಬೇಕೇ?

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 21:03 IST
Last Updated 5 ಆಗಸ್ಟ್ 2020, 21:03 IST
ಹಣ– ಸಾಂದರ್ಭಿಕ ಚಿತ್ರ
ಹಣ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯಾಗುವ ಹಣದ ಮೊತ್ತಕ್ಕಿಂತ, ಹಿಂತೆಗೆದುಕೊಳ್ಳುವ ಹಣದ ಮೊತ್ತನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಾಸ್ತಿ ಆಗಬಹುದು ಎಂಬ ಅಂದಾಜು ಇದೆ. ‘ವಿವಿಧ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವ ಈಕ್ವಿಟಿ ಫಂಡ್‌ಗಳಿಂದ ಹಿಂತೆಗೆದುಕೊಳ್ಳುವ ಹಣದ ಮೊತ್ತವು ಜುಲೈ ತಿಂಗಳಲ್ಲಿ ₹ 1,000 ಕೋಟಿಯನ್ನು ಮೀರುವ ಸಾಧ್ಯತೆ ಇದೆ’ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ಗಳ ಒಕ್ಕೂಟದ ಅಧ್ಯಕ್ಷ ನಿಲೇಶ್ ಶಾ ಅವರು ಹೇಳಿರುವುದಾಗಿ ವರದಿಯಾಗಿದೆ.

ಈ ವರ್ಷದ ಜನವರಿ, ಫೆಬ್ರುವರಿಯಲ್ಲಿ ದಾಖಲೆ ಮಟ್ಟ ತಲುಪಿದ್ದ ಬಿಎಸ್‌ಇ ಸಂವೇದಿ ಸೂಚ್ಯಂಕವು, ಮಾರ್ಚ್‌ನಲ್ಲಿ ತೀವ್ರ ಕುಸಿತ ದಾಖಲಿಸಿತು. ಮಾರ್ಚ್‌ 23ರ ಸುಮಾರಿಗೆ 25 ಸಾವಿರಕ್ಕೆ ಇಳಿಕೆ ಕಂಡಿತು. ಈ ಸಂದರ್ಭದಲ್ಲಿ ಈಕ್ವಿಟಿ ಮೇಲೆ ಹೂಡಿಕೆ ಮಾಡಿದ್ದವರ ಸಂಪತ್ತು ಕರಗಿತ್ತು. ಆದರೆ, ಅದಾದ ನಂತರ ಮಾರುಕಟ್ಟೆ ಏರುಗತಿಯಲ್ಲಿ ಸಾಗಿದೆ. ಮ್ಯೂಚುವಲ್‌ ಫಂಡ್‌ಗಳ ಮೂಲಕ ಈಕ್ವಿಟಿ ಮೇಲೆ ಹೂಡಿಕೆ ಮಾಡಿದವರು, ಮೂರು ತಿಂಗಳಲ್ಲಿ ಗರಿಷ್ಠ ಶೇಕಡ 28ರಷ್ಟು ಲಾಭ ಕಂಡಿರುವುದೂ ಇದೆ.

ಕ್ರಿಸಿಲ್‌ ಸಂಸ್ಥೆಯು ಉತ್ತಮ ರ್‍ಯಾಂಕ್‌ ನೀಡಿರುವ ಹಲವು ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಶೇ 12ರಿಂದ ಶೇ 17ರಷ್ಟು ಲಾಭ ತಂದುಕೊಟ್ಟಿವೆ. ಇಷ್ಟು ಲಾಭ ಬಂದಿರುವಾಗ, ಮಾರುಕಟ್ಟೆ ಏರುಗತಿಯಲ್ಲಿ ಇರುವಾಗ ಹೂಡಿದ ಹಣ ಹಿಂದಕ್ಕೆ ಪಡೆಯುವುದು ಯುಕ್ತವೇ? ‘ಹಣ ಹಿಂದಕ್ಕೆ ಪಡೆಯಬೇಕು ಎಂದಾದರೆ, ತುಸು ಜಾಣತನದಿಂದ ವರ್ತಿಸಿ’ ಎನ್ನುತ್ತಿದ್ದಾರೆ ವೈಯಕ್ತಿಕ ಹಣಕಾಸು ಸಲಹೆಗಾರರು.

ADVERTISEMENT

‘ಮಾರ್ಚ್‌ನಲ್ಲಿ ಕಂಡುಬಂದ ಕುಸಿತ ಹಾಗೂ ಈಗ ಕಾಣುತ್ತಿರುವ ಏರಿಕೆ ಸಾಮಾನ್ಯವಾದುದಲ್ಲ. ಈಗ ಮಾರುಕಟ್ಟೆ ಏರುಗತಿಯಲ್ಲಿ ಇದೆಯಾದರೂ, ಏರುವಿಕೆಗೆ ಪೂರಕವಾಗಿರುವ ಸ್ಥಿತಿ ಅರ್ಥವ್ಯವಸ್ಥೆಯಲ್ಲಿ ಇಲ್ಲ. ಹಾಗಾಗಿ, ಹೂಡಿದ ಹಣಕ್ಕೆ ನಿರೀಕ್ಷಿತ ಲಾಭ ಬಂದಿದೆ ಎಂದಾದರೆ ಆ ಹಣವನ್ನು ಹಿಂಪಡೆಯುವುದರಲ್ಲಿ ತಪ್ಪಿಲ್ಲ’ ಎಂದು ಚೆನ್ನೈನ ಪ್ರೈಮ್‌ ಇನ್ವೆಸ್ಟರ್‌ ಸಂಸ್ಥೆಯ ಸಹಸಂಸ್ಥಾಪಕಿ ವಿದ್ಯಾ ಬಾಲಾ ಹೇಳಿದರು.

ಸಂಬಳ ಪಡೆಯುವವರಲ್ಲಿ ಹಲವರು ವೇತನ ಕಡಿತದ ಸ್ಥಿತಿ ಎದುರಿಸುತ್ತಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಅಂಥವರಲ್ಲಿ ಹಲವರು ಮ್ಯೂಚುವಲ್‌ ಫಂಡ್‌ಗಳ ಮೇಲಿನ ಹೂಡಿಕೆಯನ್ನು ಹಿಂದಕ್ಕೆ ಪಡೆಯುವುದು ನಿರೀಕ್ಷಿತ. ಆದರೆ, ಹೆಚ್ಚಿನ ಹಣಕಾಸಿನ ಸಮಸ್ಯೆ ಇಲ್ಲದಿದ್ದರೆ ಹೂಡಿಕೆಯನ್ನು ಮುಂದುವರಿಸುವುದು ಒಳಿತು ಎಂದು ವಿದ್ಯಾ ಅವರು ಕಿವಿಮಾತು ಹೇಳಿದರು.

‘ತೀರಾ ಅನಿವಾರ್ಯವಲ್ಲ ಎಂದಾದರೆ, ಈ ಹಂತದಲ್ಲಿ ಹಣವನ್ನು ಹಿಂಪಡೆಯುವುದು ಬೇಡ’ ಎಂದು ವೈಯಕ್ತಿಕ ಹಣಕಾಸು ಮಾರ್ಗದರ್ಶಕಿ ಪ್ರೀತಾ ಹೇಳಿದರು. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರು ದೀರ್ಘಾವಧಿಗೆ (ಕನಿಷ್ಠ ಐದರಿಂದ ಏಳು ವರ್ಷಗಳ ಅವಧಿಗೆ) ಹೂಡಿಕೆ ಮಾಡಬೇಕು. ಷೇರು ಮಾರುಕಟ್ಟೆಯಲ್ಲಿ ಕಾಲಕಾಲಕ್ಕೆ ಎದುರಾಗುವ ಏರಿಳಿತಗಳಿಂದ ಪ್ರಭಾವಿತರಾಗಿ ಹಣ ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ.

‘ಬಹುತೇಕರು ಒಂದಲ್ಲ ಒಂದು ಉದ್ದೇಶ (ಮಕ್ಕಳ ವಿದ್ಯಾಭ್ಯಾಸ, ಮನೆ ಕಟ್ಟಿಸುವುದು, ಮದುವೆ ಇತ್ಯಾದಿ) ಇಟ್ಟುಕೊಂಡು ಮ್ಯೂಚುವಲ್‌ ಫಂಡ್‌ಗಳ ಮೂಲಕ ಈಕ್ವಿಟಿ ಮೇಲೆ ಹೂಡಿಕೆ ಮಾಡಿರುತ್ತಾರೆ. ಆ ಉದ್ದೇಶಕ್ಕಾಗಿ ಇನ್ನೊಂದು ವರ್ಷ ಅಥವಾ ಎರಡು ವರ್ಷಗಳಲ್ಲಿ ಹಣ ಬೇಕು ಎಂದಾದರೆ, ಈಗಲೇ ಅದನ್ನು ಮಾರುಕಟ್ಟೆಯಿಂದ ಹಿಂಪಡೆದು, ಸುರಕ್ಷಿತವಾದ ನಿಶ್ಚಿತ ಠೇವಣಿಗಳಲ್ಲಿ ಇರಿಸುವುದು ಉತ್ತಮ. ಮಾರುಕಟ್ಟೆಯಲ್ಲಿ ಕುಸಿತ ಯಾವಾಗ ಬೇಕಾದರೂ ಎದುರಾಗಬಹುದು ಎಂದು’ ಪ್ರೀತಾ ವಿವರಿಸಿದರು.

ಮೂರು ತಿಂಗಳಲ್ಲಿ ಹೆಚ್ಚು ಲಾಭ ತಂದ ಕೆಲವು ಫಂಡ್‌ಗಳು

* ಆದಿತ್ಯ ಬಿರ್ಲಾ ಸನ್‌ಲೈಫ್‌ ಡಿಜಿಟಲ್‌ ಇಂಡಿಯಾ ಫಂಡ್ – ರೆಗ್ಯುಲರ್ (ಗ್ರೋತ್); 28.76%

* ಪಿಜಿಐಎಂ ಇಂಡಿಯಾ ಡೈವರ್ಸ್ಡ್‌ ಈಕ್ವಿಟಿ ಫಂಡ್ (ಗ್ರೋತ್);20.62%

* ಐಸಿಐಸಿಐ ಫ್ರುಡೆನ್ಷಿಯಲ್ ಮಿಡ್‌ಕ್ಯಾಪ್‌ ಫಂಡ್‌ (ಗ್ರೋತ್);17.53%

* ಐಸಿಐಸಿಐ ಪ್ರುಡೆನ್ಷಿಯಲ್ ಫೋಕಸ್ಡ್‌ ಈಕ್ವಿಟಿ ಫಂಡ್ ರಿಟೇಲ್ (ಗ್ರೋತ್);15.67%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.