ADVERTISEMENT

ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 19:31 IST
Last Updated 24 ಜನವರಿ 2021, 19:31 IST
ಮುಂಬೈ ಶೇರು ಮಾರುಕಟ್ಟೆ
ಮುಂಬೈ ಶೇರು ಮಾರುಕಟ್ಟೆ   

ದಾಖಲೆ ಮಟ್ಟದ ಏರಿಕೆ ಕಂಡು ಇತಿಹಾಸ ಬರೆದಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಜನವರಿ 22ಕ್ಕೆ ಕೊನೆಗೊಂಡ ವಾರದಲ್ಲಿ ಮುಗ್ಗರಿಸಿವೆ. ಹೂಡಿಕೆದಾರರು ಲಾಭ ಗಳಿಕೆಗೆ ಮುಗಿಬಿದ್ದ ಕಾರಣ, ಸತತ 12 ವಾರಗಳ ಬಳಿಕ ಸೂಚ್ಯಂಕಗಳು ವಾರದ ವಹಿವಾಟಿನಲ್ಲಿ ಕುಸಿತ ಕಂಡಿವೆ. 48,878 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.32ರಷ್ಟು ತಗ್ಗಿದೆ. 14,371 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.43ರಷ್ಟು ಕುಸಿದಿದೆ.

ನಿಫ್ಟಿ ವಾಹನ ವಲಯ ಶೇ 4ರಷ್ಟು ಗಳಿಸಿದೆ. ನಿಫ್ಟಿ ಬ್ಯಾಂಕ್ ಶೇ 3ರಷ್ಟು, ಸ್ಮಾಲ್ ಕ್ಯಾಪ್ ಶೇ 0.5ರಷ್ಟು, ಮಿಡ್ ಕ್ಯಾಪ್ ಶೇ 1ರಷ್ಟು, ಲೋಹ ವಲಯ ಶೇ 6ರಷ್ಟು ಮತ್ತು ಫಾರ್ಮಾ ವಲಯ ಶೇ 3ರಷ್ಟು ಕುಸಿತ ದಾಖಲಿಸಿವೆ.

ಗಳಿಕೆ–ಇಳಿಕೆ

ADVERTISEMENT

ನಿಫ್ಟಿಯಲ್ಲಿ ಬಜಾಜ್ ಆಟೊ ಶೇ 14ರಷ್ಟು, ಟಾಟಾ ಮೋಟರ್ಸ್ ಶೇ 12ರಷ್ಟು, ಹೀರೊ ಮೋಟರ್ಸ್ ಶೇ 7ರಷ್ಟು ಮತ್ತು ರಿಲಯನ್ಸ್ ಶೇ 6ರಷ್ಟು ಗಳಿಸಿವೆ. ಬ್ರಾಡರ್ ಮಾರ್ಕೆಟ್‌ನಲ್ಲಿ ಅಪೋಲೊ ಟಯರ್ಸ್ ಶೇ 25ರಷ್ಟು, ಸಿಯೆಟ್ ಶೇ 21ರಷ್ಟು, ಹ್ಯಾವೇಲ್ಸ್ ಶೇ 15ರಷ್ಟು, ಟಾಟಾ ಎಲ್ಕ್ಸಿ ಶೇ 9ರಷ್ಟು ಮತ್ತು ಬಾಷ್ ಶೇ 9ರಷ್ಟು ಗಳಿಸಿವೆ. ಒಎನ್‌ಜಿಸಿ ಶೇ 8ರಷ್ಟು, ಟಾಟಾ ಸ್ಟೀಲ್ ಶೇ 8ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 7ರಷ್ಟು ಮತ್ತು ಕೋಲ್ ಇಂಡಿಯಾ ಶೇ 7ರಷ್ಟು ತಗ್ಗಿವೆ.

ಬ್ರಾಡರ್ ಮಾರ್ಕೆಟ್‌ನಲ್ಲಿ ಎಎಸ್‌ಎಐಎಲ್ ಶೇ 17ರಷ್ಟು, ಬಂಧನ್ ಬ್ಯಾಂಕ್ ಶೇ 15ರಷ್ಟು, ಬಯೋಕಾನ್ ಶೇ 13ರಷ್ಟು ಮತ್ತು ಆರ್‌ಬಿಎಲ್ ಬ್ಯಾಂಕ್ ಶೇ 9ರಷ್ಟು ಇಳಿಕೆ ಕಂಡಿವೆ.

ಐಪಿಒ

ಹೋಮ್ ಫಸ್ಟ್ ಐಪಿಒ ಜನವರಿ 25ರಂದು ಕೊನೆಗೊಳ್ಳಲಿದೆ. ಜನವರಿ 25ರಿಂದ 28ರವರೆಗೆ ಸ್ಟವ್ ಕ್ರಾಫ್ಟ್ ಐಪಿಒ ನಡೆಯಲಿದೆ.

ಮುನ್ನೋಟ: 2020ರ ಮಾರ್ಚ್‌ನಿಂದ ಈಚೆಗೆ ಷೇರುಪೇಟೆ ಶೇ 100ರಷ್ಟು ಜಿಗಿತ ಕಂಡಿದೆ. ಷೇರು ಮಾರುಕಟ್ಟೆ ಹೊಸ ದಾಖಲೆಗಳನ್ನು ಬರೆಯುತ್ತಿರುವುದರಿಂದ ಹೂಡಿಕೆದಾರರಲ್ಲಿ ಸಹಜ ಆತಂಕವಿದೆ, ಸೂಚ್ಯಂಕಗಳು ಏರಿಳಿತ ಕಾಣುತ್ತಿವೆ. ಅದರೆ ಪೇಟೆ ಗಣನೀಯ ಕುಸಿತ ಕಾಣಲು ಸದ್ಯ ಯಾವುದೇ ಬಲವಾದ ಕಾರಣಗಳು ಕಂಡುಬರುತ್ತಿಲ್ಲ.

ತ್ರೈಮಾಸಿಕ ಫಲಿತಾಂಶಗಳು ಸಹ ಬಹುತೇಕ ಆಶಾದಾಯಕವಾಗಿವೆ. ಈ ವಾರ ಕೋಟಕ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಹಿಂದೂಸ್ಥಾನ್ ಯುನಿಲಿವರ್, ಮಾರಿಕೋ, ಬ್ಯಾಂಕ್ ಆಫ್ ಬರೋಡಾ, ಮಾರುತಿ ಸುಜುಕಿ, ಯುನೈಟೆಡ್ ಸ್ಪಿರಿಟ್ಸ್, ಟಿವಿಎಸ್ ಮೋಟಾರ್ಸ್, ಲುಪಿನ್, ಜೆಕೆ ಪೇಪರ್, ಬಿಇಎಲ್, ಟಾಟಾ ಮೋಟರ್ಸ್, ಪಿಡಿಲೈಟ್, ಇಂಡಿಯಾ ಸಿಮೆಂಟ್ಸ್, ಸಿಪ್ಲಾ, ರೆಡ್ಡಿ ಲ್ಯಾಬ್ಸ್, ಡಾಬರ್ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಹೊರಬೀಳಲಿವೆ.

ಬ್ಯಾಂಕೇತರ (ಎನ್‌ಬಿಎಫ್‌ಸಿ) ಹಣಕಾಸು ಸಂಸ್ಥೆಗಳ ನಿರ್ವಹಣೆಗೆ ಹೊಸ ಕಾರ್ಯಸೂಚಿಯನ್ನು ಆರ್‌ಬಿಐ ಪ್ರಕಟಿಸಿದೆ. ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ ಬಡ್ಡಿ ದರದ ನಿರ್ಧಾರ ಕೈಗೊಳ್ಳಲಿದೆ. ಬಜೆಟ್‌ನಲ್ಲಿ ಗೃಹ ನಿರ್ಮಾಣ, ನೀರಾವರಿ, ಮೂಲಸೌಕರ್ಯ, ಕೃಷಿ, ಸೇರಿ ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನಿರೀಕ್ಷೆ ಇರುವುದರಿಂದ ಹೂಡಿಕೆದಾರರ ಗಮನ ಆ ಕ್ಷೇತ್ರದ ಷೇರುಗಳ ಮೇಲಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.