ADVERTISEMENT

ಅನುಸಂಧಾನ ಅಂಕಣ: ದೊಡ್ಡವರೆಲ್ಲಾ ಜಾಣರು, ಚಿಕ್ಕವರೆಲ್ಲಾ ಕೋಣರು!

ಅತಿಸಣ್ಣ ಜಾತಿಗಳಿಗೂ ಮಾನ್ಯತೆ ಸಿಗಲಿ, ದೊಡ್ಡಜಾತಿಗಳು ಮಾತೃಹೃದಯ ತೋರಲಿ

ರವೀಂದ್ರ ಭಟ್ಟ
Published 29 ಏಪ್ರಿಲ್ 2025, 0:16 IST
Last Updated 29 ಏಪ್ರಿಲ್ 2025, 0:16 IST
   

ಹಾಸ್ಯನಟ ದ್ವಾರಕೀಶ್ ಅಭಿನಯದ ‘ಗುರುಶಿಷ್ಯರು’ ಚಿತ್ರದಲ್ಲಿ ‘ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರೆಲ್ಲಾ ಕೋಣರಲ್ಲ’ ಎಂಬ ಪ್ರಸಿದ್ಧವಾದ ಹಾಡಿದೆ. ಆದರೆ ಸ್ವಾತಂತ್ರ್ಯಾನಂತರದ ರಾಜಕೀಯವನ್ನು ಗಮನಿಸಿದರೆ ಮತ್ತು ರಾಜ್ಯದಲ್ಲಿ ಇತ್ತೀಚೆಗೆ ಬಹಿರಂಗವಾದ ಜಾತಿ ಜನಗಣತಿ ಕುರಿತ ಪ್ರತಿಕ್ರಿಯೆಗಳನ್ನು ನೋಡಿದರೆ, ನಮ್ಮಲ್ಲಿ ದೊಡ್ಡವರೇ ಜಾಣರು ಮತ್ತು ಚಿಕ್ಕವರು ಕೋಣರು ಎನ್ನುವುದು ಸ್ಪಷ್ಟವಾಗುತ್ತದೆ.

ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಇದನ್ನೇ ಜಾತಿ ಜನಗಣತಿ ಎಂದು ಕರೆಯಲಾಗುತ್ತಿದೆ) ವರದಿಯ ದತ್ತಾಂಶ ಬಹಿರಂಗಗೊಂಡ ನಂತರ ಜೋರಾಗಿ ಕೂಗಾಡುತ್ತಿರುವವರು ದೊಡ್ಡ ದೊಡ್ಡ ಜಾತಿಗಳ ದೊಡ್ಡ ದೊಡ್ಡ ನಾಯಕರು. ಸಣ್ಣ, ಅತಿಸಣ್ಣ, ಲೆಕ್ಕಕ್ಕೇ ಸಿಗದ ಜಾತಿಗಳ ಕನವರಿಕೆಯೂ ಕೇಳಿಸುತ್ತಿಲ್ಲ. ಲಿಂಗಾಯತ, ಒಕ್ಕಲಿಗ, ಕುರುಬ, ಬ್ರಾಹ್ಮಣ ಮುಂತಾದ ಪ್ರಬಲ ಜಾತಿಗಳ ಆರ್ಭಟದಲ್ಲಿ ಚಿಕ್ಕ ಪುಟ್ಟ ಜಾತಿಗಳ ದನಿಗಳು ಅಡಗಿಹೋಗಿವೆ.

ಸ್ವಾತಂತ್ರ್ಯಾನಂತರ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಾತಿನಿಧ್ಯ ಪಡೆದ ಜಾತಿಗಳೇ ಈಗಲೂ ಕೂಗೆಬ್ಬಿಸಿವೆ. ಈ ಜಾತಿಗಳ ಮುಖಂಡರಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಿಜವಾಗಿಯೂ ಪ್ರೀತಿ ಇದ್ದರೆ, ಹೇಳಹೆಸರಿಲ್ಲದ ಜಾತಿಗಳ ಕಡೆಗೆ ಗಮನ ನೀಡಲು ಇದೊಂದು ಪರ್ವ ಕಾಲ. ‘ಹೌದು, ಇಷ್ಟು ದಿನ ನಾವು ಅನುಭವಿಸಿದ್ದೇವೆ. ಇನ್ನಾದರೂ ನಿಮಗೆ ಸೂಕ್ತ ಪಾಲು ಸಿಗಲಿ’ ಎಂದು ಹಾರೈಸುವ, ಅದಕ್ಕೆ ಅವಕಾಶ ಕಲ್ಪಿಸುವ ಕೆಲಸವನ್ನು ಪ್ರಬಲ ಜಾತಿಗಳು ಮಾಡಬೇಕಾಗಿದೆ. ದೊಡ್ಡ ಜನಸಂಖ್ಯೆಯ ಜಾತಿಗಳು ಸಣ್ಣ ಮತ್ತು ದುರ್ಬಲ ಜಾತಿಗಳ ಬಗ್ಗೆ ಮಾತೃಹೃದಯದ ಪ್ರೀತಿಯನ್ನು ತೋರಬೇಕಿದೆ. ಅವರನ್ನು ಕೈಹಿಡಿದು ಮೇಲೆತ್ತುವ ಔದಾರ್ಯ ಬೇಕಿದೆ ಮತ್ತು ಅದೇ ನಿಜವಾದ ಸಾಮಾಜಿಕ ನ್ಯಾಯದ ಪರಿ.

ADVERTISEMENT

ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ದನಿ ನೀಡಲು ಜಾತಿವಾರು ಜನಗಣತಿ ನಡೆಸಲಾಗಿದೆ. ಜನಸಂಖ್ಯೆಯ ಆಧಾರದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸಮೀಕ್ಷೆ ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ನಿಜ. ಆದರೆ ಈಗ ನಡೆಯುತ್ತಿರುವುದು ತಮ್ಮ ಜಾತಿಯ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಹುಯಿಲೇ ವಿನಾ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬ ಅಭಿಲಾಷೆ ಅಲ್ಲ. ಅಲ್ಲದೆ ಹಿಂದುಳಿದ ಜಾತಿಗಳಿಗೆ ಸೌಲಭ್ಯ ಕಲ್ಪಿಸಲು, ಅಧಿಕಾರ ನೀಡಲು ಬೇಕಾಗಿದ್ದು ಸಮೀಕ್ಷೆಯಲ್ಲ, ಮನಸ್ಸು ಮತ್ತು ಇಚ್ಛಾಶಕ್ತಿ. ಅತಿಸಣ್ಣ ಸಮುದಾಯದ ಜನ ತಮಗೆ ಸೌಲಭ್ಯ ನೀಡಿ ಎಂದು ಅತ್ತು ಕರೆದು ಗಲಾಟೆಯನ್ನು ಮಾಡಬೇಕಾಗಿಲ್ಲ ಎನ್ನುವುದನ್ನು ದೇವರಾಜ ಅರಸು ಅವರು ತೋರಿಸಿಕೊಟ್ಟಿದ್ದರು. ಅವರಿಗಿಂತಲೂ ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರಿಂದಲೇ ಪ್ರಬಲ ವಿರೋಧ ವ್ಯಕ್ತವಾಗಿದ್ದರೂ ಅದನ್ನು ಲೆಕ್ಕಿಸದೆ ಅವರು ಮೀಸಲಾತಿ ಜಾರಿಗೊಳಿಸಿದ್ದರು. ಅದೇ ಹಾದಿಯಲ್ಲಿ ದೇವರಾಜ ಅರಸು ನಡೆದಿದ್ದರು.

ಸ್ವಾತಂತ್ರ್ಯ ಗಳಿಸಿದ ನಂತರ ರಾಜಕೀಯ ಅಧಿಕಾರವು ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯವಾಗಿದ್ದ ವರ್ಗಗಳ ಪಾಲಾಯಿತು. ಇದು ಅರಸು ಅವರಿಗೆ ಗೊತ್ತಿತ್ತು. ಅಲ್ಲದೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಸ್ಥಾನಮಾನ, ಶೈಕ್ಷಣಿಕ ಅವಕಾಶ, ಆರ್ಥಿಕ ಸಬಲತೆ ಜೊತೆಗೆ ರಾಜಕೀಯ ಅಧಿಕಾರ ದೊರೆತಾಗ ಮಾತ್ರ ಸಾಮಾಜಿಕ ನ್ಯಾಯ ಸಿದ್ಧಾಂತದ ಪ್ರಕ್ರಿಯೆ ಪೂರ್ಣವಾಗುತ್ತದೆ ಎಂಬ ಅರಿವು ಅವರಿಗೆ ಇತ್ತು. ಪುರೋಹಿತಶಾಹಿಗಳು ಮತ್ತು ಯಜಮಾನಿಕೆ ಸಂಸ್ಕೃತಿಯ ವಾರಸುದಾರರ ಪ್ರಭುತ್ವಕ್ಕೆ ಕಡಿವಾಣ ಹಾಕಿ, ಶತಮಾನಗಳಿಂದ ಶೋಷಣೆಗೆ ಒಳಗಾದ ಮತ್ತು ಅಧಿಕಾರದಿಂದ ವಂಚಿತರಾಗಿದ್ದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಾಜಕೀಯ ಅಧಿಕಾರ ನೀಡಬೇಕು ಎಂದು ಅವರು ಸಂಕಲ್ಪಿಸಿದ್ದರು. ಅದರ ಪರಿಣಾಮವಾಗಿಯೇ ಅವರು 1972ರ ವಿಧಾನಸಭಾ ಚುನಾವಣೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 133 ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದರು.

ಮುಖ್ಯಮಂತ್ರಿ ಆಡಳಿತಾವಧಿಯ ದೃಷ್ಟಿಯಿಂದ ದೇವರಾಜ ಅರಸು ಅವರ ದಾಖಲೆಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಮುರಿಯುವುದಕ್ಕೆ ಸಿದ್ಧರಾಗಿರುವ ಸಿದ್ದರಾಮಯ್ಯ ಅವರಿಗೂ ಈಗ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯ ಸ್ಥಾಪನೆ ಮಾಡುವ ಸುವರ್ಣ ಅವಕಾಶ ದೊರಕಿದೆ. ‘ನಿಜ ಅಧಿಕಾರದ ನೆಲೆಯಲ್ಲಿ ಬಹುಸಂಖ್ಯಾತ ಸಮುದಾಯಗಳಿಗೆ ನ್ಯಾಯಯುತವಾದ ಪಾಲನ್ನು ನೀಡದ ಜನತಾಂತ್ರಿಕ ವ್ಯವಸ್ಥೆಗೆ ಅರ್ಥವೇ ಇಲ್ಲ’ ಎಂದು ಅಂಬೇಡ್ಕರ್ ಹೇಳಿದ್ದರು. ಈ ಮಾತನ್ನು ಪರಿಪಾಲಿಸುವ ಮತ್ತು ಜನತಾಂತ್ರಿಕ ವ್ಯವಸ್ಥೆಗೆ ನಿಜವಾದ ಅರ್ಥ ತಂದುಕೊಡುವ ಅವಕಾಶ ಸಿದ್ದರಾಮಯ್ಯ ಅವರಿಗೆ ಈಗ ದೊರಕಿದೆ.

ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದತ್ತಾಂಶದ ಅಧ್ಯಯನ ವರದಿ– 2024ರ ಪ್ರಕಾರ, ಈವರೆಗೂ ಗುರುತಿಸದೇ ಇರುವ 398 ಹೊಸ ಜಾತಿಗಳು ಪತ್ತೆಯಾಗಿವೆ. ಅಲ್ಲದೆ 200ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 47 ಜಾತಿಗಳು ಪತ್ತೆಯಾಗಿವೆ. ಒಂದು ಕೋಟಿ, 75 ಲಕ್ಷ, 50 ಲಕ್ಷ ಜನಸಂಖ್ಯೆ ಇರುವ ಮತ್ತು ಈಗಾಗಲೇ ಎಲ್ಲ ಸೌಲಭ್ಯ ಮತ್ತು ಅಧಿಕಾರವನ್ನು ಅನುಭವಿಸಿರುವ ಜಾತಿಗಳು ಕಡಿಮೆ ಜನಸಂಖ್ಯೆ ಇರುವ ಜಾತಿಗಳತ್ತ ಕರುಣಾದೃಷ್ಟಿ ಬೀರಬೇಕಲ್ಲವೇ? ಈಗ ಉದಾಹರಣೆಗೆ, ಪ್ರವರ್ಗ 1ಬಿಗೆ ಒಟ್ಟು 73,92,313 ಜನರನ್ನು ಸೇರಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ಇದರಲ್ಲಿ ಕುರುಬ ಮತ್ತು ಕುರುಬರ ಉಪಜಾತಿಗಳ ಜನಸಂಖ್ಯೆ 43,72,847 ಇದೆ. ಇದೇ ಗುಂಪಿನಲ್ಲಿ 33,355ರಷ್ಟು ಜನಸಂಖ್ಯೆ ಇರುವ ಸವಿತ ಸಮಾಜವೂ ಇದೆ. 1,01,728 ಜನಸಂಖ್ಯೆ ಇರುವ ಭಜಂತ್ರಿ ಸಮಾಜವೂ ಇದೆ. ಬಂಡಾರಿ, ಹಡಪದ, ಹೂಗಾರ್, ಮಾಲಿ, ಕುಲಾಲ, ಬೋವಿ, ಯಾದವ, ಚೆಟ್ಟಿಯಾರ್, ಸಾಧುಶೆಟ್ಟಿ, ಗ್ರಾಮ ಒಕ್ಕಲ್, ಹಾಲಕ್ಕಿ ಒಕ್ಕಲ್, ಕೆರೆ ಒಕ್ಕಲು, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಪರಿಶಿಷ್ಟ ಜಾತಿಯವರೂ ಇದ್ದಾರೆ. ಇವರ ಜೊತೆಗೆ ಐದು ಜನರನ್ನು ಹೊಂದಿರುವ ‘ಮುರುವತ್ತುವರ್’, 11 ಜನರನ್ನು ಹೊಂದಿರುವ ‘ರಾವಲ’ ಎಂಬ ಜಾತಿಗಳೂ ಸೇರಿದಂತೆ 200ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 16 ಜಾತಿಗಳಿವೆ.

ಪ್ರವರ್ಗ 1ಎಯಲ್ಲಿ 147, ಪ್ರವರ್ಗ 1ಬಿಯಲ್ಲಿ 386, ಪ್ರವರ್ಗ 2ಎಯಲ್ಲಿ 363, ಪ್ರವರ್ಗ 2ಬಿಯಲ್ಲಿ ಮುಸ್ಲಿಂ ಮತ್ತು ಉಪಜಾತಿಗಳು, ಪ್ರವರ್ಗ 3ಎಯಲ್ಲಿ 85, 3ಬಿಯಲ್ಲಿ 109 ಜಾತಿಗಳಿವೆ ಎಂದು ದತ್ತಾಂಶ ಅಧ್ಯಯನ ವರದಿ ಹೇಳಿದೆ. ಈ ಎಲ್ಲ ಪ್ರವರ್ಗಗಳಲ್ಲಿ 200 ಜನಸಂಖ್ಯೆಗಿಂತ ಕಡಿಮೆ ಇರುವ 47 ಜಾತಿಗಳಿವೆ. ಪ್ರವರ್ಗ 1ಎಯಲ್ಲಿ 200ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಮೂರು ಜಾತಿಗಳಿವೆ. ಪ್ರವರ್ಗ 2ಎಯಲ್ಲಿ ತಲಾ ನಾಲ್ಕು ಜನರಿರುವ ಶಿಲ್ಪಿ, ಒಸ್ತಾ, ಪಟ್ಟು ನಾಲ್ಕರ್, ಆರು ಜನರಿರುವ ನಂಬೀಶನ್, ಏಳು ಜನರಿರುವ ಕೊಟ್ಟಿಯಾ ಸೇರಿ 200ಕ್ಕೂ ಕಡಿಮೆ ಜನಸಂಖ್ಯೆ ಇರುವ 17 ಜಾತಿಗಳಿವೆ. ಪ್ರವರ್ಗ 3ಬಿಯಲ್ಲಿ ಲಿಂಗಾಯತ ಉಪಗುಂಪುಗಳಲ್ಲಿ ಬರುವ, ಬರೀ ಮೂರು ಜನ ಇರುವ ಲಿಂಗದಾರ್, ಒಂಬತ್ತು ಜನರಿರುವ ವೀರಶೈವ ಮುಲ್ಲಾವರ, 11 ಜನರಿರುವ ವೀರಶಿವ ಜಂಗಮ ಸೇರಿ 200ಕ್ಕೂ ಕಡಿಮೆ ಜನಸಂಖ್ಯೆ ಇರುವ ಎಂಟು ಜಾತಿಗಳಿವೆ. ಇವುಗಳನ್ನು ನೋಡಿದರೆ ನಮ್ಮ ಆದ್ಯತೆ ಏನಾಗಬೇಕು ಎನ್ನುವುದು ಸ್ಪಷ್ಟವಾಗುತ್ತದೆ.

‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದು ಬಸವಣ್ಣ ಹೇಳಿದ್ದಾರೆ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಸಿದ್ದರಾಮಯ್ಯ ಅವರನ್ನು ಸಣ್ಣಪುಟ್ಟ ಜಾತಿಯವರು ‘ಅಯ್ಯಾ’ ಎಂದರೆ ಅವರಿಗೆ ‘ಸ್ವರ್ಗ’ ಸಿಗಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.