ADVERTISEMENT

ರವೀಂದ್ರ ಭಟ್ಟರ ಲೇಖನ: ಪ್ರತಿಜ್ಞೆ ಎಂಬ ಪಾಪದ ಪಾಪು!

ವಿಧಾನಸೌಧದ ಮೊಗಸಾಲೆಯಲ್ಲಿ ಕಾಣುತ್ತದೆ ಲಂಚದ ಹೊಸ ಹೊಸ ರೂಪ

ರವೀಂದ್ರ ಭಟ್ಟ
Published 28 ಅಕ್ಟೋಬರ್ 2021, 22:48 IST
Last Updated 28 ಅಕ್ಟೋಬರ್ 2021, 22:48 IST
   

ಅಯೋಧ್ಯೆಗೆ ರಾಜನಾದ ಶ್ರೀರಾಮ ಒಂದು ದಿನ ತನ್ನ ಅರಮನೆಯ ಅಂಗಳದಲ್ಲಿ ಓಡಾಡುತ್ತಿದ್ದನಂತೆ. ಆಗ ಅವನಿಗೆ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದ ಹನುಮಂತ ಕಾಣಿಸಿದನಂತೆ. ಅವನನ್ನು ನೋಡಿ ‘ಅರೆ, ನೀನು ಇನ್ನೂ ಯಾಕೆ ಇಲ್ಲಿಯೇ ಇದ್ದೀಯಾ? ವಾಪಸು ಕಿಷ್ಕಿಂಧೆಗೆ ಹೋಗಿಲ್ಲವೇ?’ ಎಂದು ಕೇಳಿದನಂತೆ. ಅದಕ್ಕೆ ಹನುಮಂತ ‘ಇಲ್ಲಾ ಸ್ವಾಮಿ, ನಾನು ಸಂಜೀವಿನಿ ತಂದುಕೊಟ್ಟ ಟಿಎ ಡಿಎ ಬಿಲ್ ಇನ್ನೂ ಸೆಟ್ಲ್‌ ಆಗಿಲ್ಲ’ ಎಂದನಂತೆ. ಅದಕ್ಕೆ ರಾಮನಿಗೆ ಸಿಟ್ಟು ಬಂತಂತೆ. ಹನುಮಂತನ ಬಿಲ್‌ ಸೆಟ್ಲ್‌ ಆಗಿಲ್ಲ ಎಂದರೆ ಇನ್ನು ಯಾರ ಬಿಲ್ ಸೆಟ್ಲ್ ಆಗುತ್ತದೆ ಎಂದು ಮಂತ್ರಿಯನ್ನು ಕರೆದು, ತಕ್ಷಣವೇ ಹನುಮಂತನ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ. ಮಂತ್ರಿ ‘ಆಯ್ತು, ತಕ್ಷಣವೇ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದ.

ನಂತರ ಸುಮಾರು 3–4 ತಿಂಗಳು ಕಳೆದ ನಂತರವೂ ಹನುಮಂತ ಅರಮನೆ ಆವರಣದಲ್ಲಿ ತಿರುಗಾಡುವುದು ನಿಲ್ಲಲಿಲ್ಲ. ಮತ್ತೆ ಅವನನ್ನು ಕಂಡ ರಾಮ ‘ಯಾಕೆ ಇನ್ನೂ ಇಲ್ಲೇ ಇದ್ದೀಯಾ?’ ಎಂದು ಕೇಳಿದಾಗ ಹನುಮಂತ ‘ಇಲ್ಲ, ಇನ್ನೂ ನನ್ನ ಬಿಲ್ ಬಂದಿಲ್ಲ’ ಎಂದನಂತೆ. ಈಗ ರಾಮನ ಸಿಟ್ಟು ಇನ್ನೂ ಹೆಚ್ಚಾಯಿತು. ಮತ್ತೆ ಮಂತ್ರಿಯನ್ನು ವಿಚಾರಿಸಿದ. ಅದಕ್ಕೆ ಮಂತ್ರಿ ‘ಇಲ್ಲಾ ಸ್ವಾಮಿ, ಕೇಸ್ ವರ್ಕರ್ ಕೆಲವು ತಕರಾರು ಎತ್ತಿದ್ದಾನೆ. ಅದಕ್ಕೆ ಬಿಲ್ ಇನ್ನೂ ಪಾಸ್ ಆಗಿಲ್ಲ’ ಎಂದನಂತೆ. ‘ಏನ್ ತಕರಾರು ಅವಂದು’ ಎಂದು ಕೇಳಿದ ರಾಮ.

‘ಕೇಸ್ ವರ್ಕರ್ ಮೂರು ಪ್ರಶ್ನೆ ಹಾಕಿ ಬಿಲ್ ಪೆಂಡಿಂಗ್ ಇಟ್ಟಿದ್ದಾನೆ. ಮೊದಲನೆ ಪ್ರಶ್ನೆ, ಸಂಜೀವಿನಿ ತರುವಂತೆ ಹನುಮಂತನಿಗೆ ಸೂಚಿಸಿದವನು ರಾಮ, ಆದರೆ ರಾಮ ಆಗ ಅಯೋಧ್ಯೆಯ ರಾಜ ಆಗಿರಲಿಲ್ಲ. ರಾಜನಲ್ಲದ ಯಾರೋ ವ್ಯಕ್ತಿ ಹೇಳಿದ ಕೆಲಸವನ್ನು ಮಾಡಿದರೆ ಅದಕ್ಕೆ ಬಿಲ್ ಕೊಡಲು ನಿಯಮದಲ್ಲಿ ಅವಕಾಶ ಇಲ್ಲ. ಅಲ್ಲದೆ ಹನುಮಂತ ‘ಡಿ’ ದರ್ಜೆ ನೌಕರ. ‘ಡಿ’ ದರ್ಜೆ ನೌಕರರಿಗೆ ವಾಯುಮಾರ್ಗದಲ್ಲಿ ಹೋಗಲು ಎಲಿಜಿಬಿಲಿಟಿ ಇಲ್ಲ. ಇದಲ್ಲದೆ ಹನುಮಂತನಿಗೆ ಸಂಜೀವಿನಿ ಮಾತ್ರ ತರಲು ಹೇಳಿದ್ದು. ಆದರೆ ಅವನು ಇಡೀ ಸಂಜೀವಿನಿ ಪರ್ವತವನ್ನೇ ತಂದಿದ್ದಾನೆ. ಇದು ಅನವಶ್ಯಕ ಖರ್ಚು. ಆದ್ದರಿಂದ ಬಿಲ್ ಪಾಸ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾನೆ’ ಎಂದ ಮಂತ್ರಿ. ಇದನ್ನು ಕೇಳಿದ ರಾಮ ತಲೆ ಮೇಲೆ ಕೈಹೊತ್ತು ‘ಏನಾದ್ರೂ ಮಾಡಿ ತಕ್ಷಣವೇ ಹನುಮಂತನ ಬಿಲ್ ಪಾಸ್ ಮಾಡಿಸಿ’ ಎಂದು ಸೂಚಿಸಿದನಂತೆ.

ADVERTISEMENT

ನಂತರ ಮಂತ್ರಿ ಹನುಮಂತನಿಗೆ ‘ನಿನ್ನ ಬಿಲ್ ಪಾಸಾಗಬೇಕು ಎಂದರೆ ಕೇಸ್ ವರ್ಕರ್ ಭೇಟಿ ಮಾಡಿ ಅವನನ್ನು ನೋಡಿಕೊ’ ಎಂದು ಸಲಹೆ ಮಾಡಿದನಂತೆ. ಅದರಂತೆ ಹನುಮಂತ ಕೇಸ್ ವರ್ಕರ್ ಭೇಟಿ ಮಾಡಿ ‘ಬಿಲ್ ಪಾಸಾದರೆ ಅದರ ಪರ್ಸೆಂಟೇಜ್ ಇಂತಿಷ್ಟು ಕೊಡುತ್ತೇನೆ’ ಎಂದಾಗ ಕೇಸ್ ವರ್ಕರ್‌ ‘ಸಂಜೆಯೇ ಬಂದು ಬಿಲ್ ತೆಗೆದುಕೊಂಡು ಹೋಗು’ ಎಂದನಂತೆ. ‘ಅರೇ ನೀವು ಅದೇನೋ ತಕರಾರು ಹಾಕಿದ್ದೀರಂತಲ್ಲ’ ಎಂದು ಕೇಳಿದಾಗ ಕೇಸ್ ವರ್ಕರ್ ‘ಅದೆಲ್ಲಾ ಏನೂ ಇಲ್ಲ. ನಿನಗೆ ಸಂಜೀವಿನಿ ತರಲು ಹೇಳಿದಾಗ ರಾಮ ಅಯೋಧ್ಯೆಯ ರಾಜನಾಗಿರಲಿಲ್ಲ ಎನ್ನುವುದು ತಾನೆ. ಆಗ ಅಯೋಧ್ಯೆಗೆ ರಾಜರೇ ಇರಲಿಲ್ಲ. ರಾಮನ ಪಾದುಕೆ ಸಿಂಹಾಸನದ ಮೇಲಿತ್ತು. ಅದಕ್ಕಾಗಿ ರಾಮನೇ ರಾಜ ಎಂದು ಪರಿಗಣಿಸಿ ರಾಮ ಹೇಳಿದ್ದನ್ನು ಮಾಡಬಹುದು. ಇನ್ನು ನೀನು ‘ಡಿ’ ದರ್ಜೆ ನೌಕರ. ನಿನಗೆ ವಾಯುಮಾರ್ಗ ದಲ್ಲಿ ಹೋಗುವುದಕ್ಕೆ ಅನುಮತಿ ಇಲ್ಲ ಎನ್ನುವುದು. ತುರ್ತು ಸಂದರ್ಭದಲ್ಲಿ ಯಾರನ್ನು ಬೇಕಾದರೂ ವಾಯುಮಾರ್ಗದಲ್ಲಿ ಕಳಿಸಬಹುದು. ಮೂರನೆಯದ್ದು, ನೀನು ಸಂಜೀವಿನಿ ಪರ್ವತವನ್ನೇ ಯಾಕೆ ತಂದೆ ಎನ್ನುವುದು ತಾನೆ, ನೀನೇನು ಸಸ್ಯಶಾಸ್ತ್ರಜ್ಞ ಅಲ್ಲವಲ್ಲ, ನಿನಗೆ ಸಂಜೀವಿನಿ ಸಸ್ಯ ಯಾವುದು ಎನ್ನುವುದು ಗೊತ್ತಿಲ್ಲ. ಆದರೆ ಲಕ್ಷ್ಮಣನ ಜೀವ ಮುಖ್ಯ ಎಂದು ನೀನು ಸಂಜೀವಿನಿ ಪರ್ವತವನ್ನೇ ತಂದೆ. ಅದಕ್ಕಾಗಿ ನಿನ್ನ ಬಿಲ್ ಪಾಸ್ ಮಾಡಬಹುದು’ ಎಂದನಂತೆ.

ಈ ಕತೆ ಈಗ ನೆನಪಾಗುವುದಕ್ಕೆ ಕಾರಣ, ಮೊನ್ನೆಮೊನ್ನೆಯಷ್ಟೆ ವಿಧಾನಸೌಧದಲ್ಲಿ ಒಂದು ಅಣಕು ಪ್ರದರ್ಶನ ನಡೆಯಿತು. ನಮ್ಮ ಮುಖ್ಯಕಾರ್ಯದರ್ಶಿಗಳು ವಿಧಾನಸೌಧದ ಸಿಬ್ಬಂದಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ಬೋಧಿಸಿದರು. ‘ಲಂಚವನ್ನು ಮುಟ್ಟಲ್ಲ,ಭ್ರಷ್ಟಾಚಾರದಲ್ಲಿ ಭಾಗಿಯಾಗಲ್ಲ’ ಎಂದು ಸಿಬ್ಬಂದಿ ಪ್ರತಿಜ್ಞೆ ಮಾಡಿದ್ದಾರಂತೆ. ಇದೇ ರೀತಿಯ ಪ್ರತಿಜ್ಞೆಯನ್ನು ಪೊಲೀಸರೂ ಮಾಡಿದ್ದಾರಂತೆ. ಇದಾಗಿ ಎರಡೇ ದಿನಗಳಲ್ಲಿ ಯಲ್ಲಾಪುರದಲ್ಲಿ ವ್ಯಕ್ತಿಯೊಬ್ಬ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಲಂಚ ಕೊಡಲು ಭಿಕ್ಷೆ ಬೇಡಿದ್ದಾನೆ!

‘ಲಂಚವಿನಾ ತೃಣಮಪಿ ನ ಚಲತಿ’ ಅಂದರೆ ಲಂಚವಿಲ್ಲದೆ ತೃಣವೂ ವಿಧಾನಸೌಧದಲ್ಲಿ ಅಲುಗಾಡುವು ದಿಲ್ಲ ಎಂಬ ಸ್ಥಿತಿ ಇರುವಾಗ, ಲಂಚ ಪಡೆಯುವುದಿಲ್ಲ ಎಂದು ಸಿಬ್ಬಂದಿ ಪ್ರತಿಜ್ಞೆ ಮಾಡುವುದನ್ನು ನೋಡಿ ನಗಬೇಕೋ ಅಳಬೇಕೋ ಎನ್ನುವ ಸ್ಥಿತಿ ಸಾಮಾನ್ಯ ಪ್ರಜೆಯದ್ದು. ನ್ಯಾಯಾಲಯದಲ್ಲಿ ಕಟಕಟೆಗೆ ಬಂದು ನಿಲ್ಲುವ ಸಾಕ್ಷಿದಾರನಿಂದ ಹಿಡಿದು ಶಾಸಕರು, ಸಚಿವರು, ನ್ಯಾಯಾಧೀಶರು ಎಲ್ಲರೂ ಇದೇ ರೀತಿ ಪ್ರತಿಜ್ಞೆ ಮಾಡು ತ್ತಾರೆ. ಮುಖ್ಯಮಂತ್ರಿ ಕೂಡಾ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿಯೇ ಅಧಿಕಾರಕ್ಕೆ ಬರುತ್ತಾರೆ. ಆದರೆ ಯಾರು ಕೂಡ ಪ್ರತಿಜ್ಞೆಯನ್ನು ಪಾಲಿಸುವ ಕುರುಹು ಸಹ ಸಿಗುವುದಿಲ್ಲ. ಪ್ರತಿಜ್ಞೆ ಎನ್ನುವುದು ಪಾಪದ ಪಾಪುವಾಗಿ ಬಿಟ್ಟಿದೆ.

ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಾದ ಹಾಗೆ ಸರ್ಕಾರಿ ಕಚೇರಿಗಳಲ್ಲಿ ಲಂಚದ ಮೊತ್ತವೂ ಏರಿಕೆಯಾಗುತ್ತಲೇ ಇದೆ. ಹಿಂದೆ ರಾಜೀವ್‌ ಗಾಂಧಿ ಒಮ್ಮೆ ಹೇಳಿದ್ದರು. ಯಾವುದೇ ಯೋಜನೆಗೆ ಹಣ ಮಂಜೂರಾದರೆ ಅದು ಐಸ್ ಗಡ್ಡೆಯಂತೆ ಕರಗುತ್ತಾ ಕರಗುತ್ತಾ ಸಾಗುತ್ತದೆ, ದೆಹಲಿಯಿಂದ ಹಳ್ಳಿಗೆ ಬಂದು ಸೇರುವವರೆಗೆ ಸೋರಿ ಸೋರಿ ಬರೀ ಕೈ ಉಳಿದಿರುತ್ತದೆ ಎಂದು. ಈಗಲೂ ಹಾಗೆಯೇ ಆಗಿದೆ. ವಿಧಾನಸೌಧದ ಮೊಗಸಾಲೆಯಲ್ಲಿ ಓಡಾಡಿ ಬಂದರೆ ಲಂಚದ ಹೊಸ ಹೊಸ ರೂಪಗಳು ಕಾಣಿಸುತ್ತವೆ.

ಮೊದಲೆಲ್ಲಾ ಅಧಿಕಾರಿಗಳು ಹಣ ಸಂಗ್ರಹಿಸಿ ಮಂತ್ರಿಗಳಿಗೆ ನೀಡುತ್ತಿದ್ದರಂತೆ. ಈಗ ಮಂತ್ರಿಗಳೇ ನೇರವಾಗಿ ಹಣ ಕೇಳುತ್ತಾರಂತೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಶೇ 10–15ರಷ್ಟಿದ್ದ ಲಂಚ ಈಗ ಶೇ 30ಕ್ಕೆ ಏರಿದೆಯಂತೆ. ಇನ್ನು ಕೆಲವರು ಕಾಮಗಾರಿ ಅಥವಾ ಖರೀದಿ ಅನುಮತಿಗೆ ಹಣದ ಪಾಲು ಕೊಡುವುದು ಬೇಡ, ನಿಮ್ಮ ಉದ್ದಿಮೆಯಲ್ಲಿಯೇ ಪಾಲುದಾರಿಕೆ ನೀಡಿ ಎಂದೂ ಕೇಳುತ್ತಾರಂತೆ. ಕೆಲವು ಸಚಿವರಂತೂ ಗುತ್ತಿಗೆ ದಾರರಿಗೆ ದೂರವಾಣಿ ಕರೆ ಮಾಡಿ ‘ನಾನು ಯಾವ ಏಜೆಂಟ್ ಇಟ್ಟಿಲ್ಲ. ಅಧಿಕಾರಿಗಳಿಗೂ ಸೂಚನೆ ನೀಡಿಲ್ಲ. ಏನ್ ಕೊಡಬೇಕೋ ಅದನ್ನು ನನಗೇ ಕೊಟ್ಟುಬಿಡಿ’ ಎಂದು ಕೇಳುತ್ತಿದ್ದಾರಂತೆ. ಕಳ್ಳನನ್ನು ಹಿಡಿದರೆ ಆತನಿಂದಲೇ ಕಳ್ಳತನದ ಟ್ರಿಕ್ ಕಲಿಯುವ ಪೊಲೀಸರೂ ಇದ್ದಾರಂತೆ. ವೆಬ್‌ಸೈಟ್ ಹ್ಯಾಕ್ ಮಾಡಿದ ಅಪರಾಧಕ್ಕೆ ವ್ಯಕ್ತಿಯೊಬ್ಬನನ್ನು ಬಂಧಿಸಿದರೆ ಆತನಿಂದಲೇ ಟೆಂಡರ್ ಸೈಟ್ ಹ್ಯಾಕ್ ಮಾಡಿಸಿ ತಮಗೆ ಬೇಕಾದವರಿಗೆ ಟೆಂಡರ್ ಸಿಗುವಂತೆ ಮಾಡುವ ಖದೀಮರೂ ಅಲ್ಲಿ ಕುಳಿತಿದ್ದಾರಂತೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಟ್ ಕಾಯಿನ್ ಹ್ಯಾಕ್ ಮಾಡಿದರೆ ಆತನಿಂದಲೇ ಲಂಚ ಪಡೆಯುವ ಶೂರರೂ ಇದ್ದಾರಂತೆ. ಪಾಪ, ಪ್ರಜೆಗಳು ಮಾತ್ರ ದಿನವೆಲ್ಲಾ ದುಡಿದು ಇವರ ಜೇಬು ತುಂಬುತ್ತಿದ್ದಾರೆ. ರೈತ ಮಾತ್ರ ಯಾವ ಪ್ರತಿಜ್ಞೆಯೂ ಇಲ್ಲದೆ ಎಲ್ಲರ ಖರ್ಚಿನ ನೊಗವನ್ನು ಹೊತ್ತಿದ್ದಾನೆ.

ಮಿಲಿಯನ್ ಡಾಲರ್ ಪ್ರಶ್ನೆ ಏನಪ್ಪಾ ಅಂದರೆ, ಅತ್ಯಂತ ಸರಳ, ಪ್ರಾಮಾಣಿಕ ಎಂದು ಬಿಂಬಿಸಿಕೊಂಡಿರುವ ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಮೇಲೆ ಪ್ರಬಲ ಹಿಡಿತ ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಇಲ್ಲಿ ನಡೆಯುತ್ತಿ ರುವ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ? ಬಹುಶಃ ಶ್ರೀರಾಮನೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.