ADVERTISEMENT

ಕುರುಡು ಅನುಕರಣೆಯಿಂದ ಅಪಾಯ: ಇದು ಕಂಬಳಿ ಹುಳು ಕಲಿಸಿದ ಪಾಠ!

ನಮ್ಮ ವಿವೇಚನೆಯನ್ನು ಬಳಸದೆ, ಮುಂದಿನವನನ್ನು ಅನುಸರಿಸಿದರೆ ಅಪಘಾತ ತಪ್ಪಿದ್ದಲ್ಲ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:12 IST
Last Updated 30 ಜನವರಿ 2020, 20:12 IST
   
""

ಮೊದಲೇ ಹೇಳಿಬಿಡುತ್ತೇನೆ. ಇವು ಅಪ್ಪಟ ವೈಜ್ಞಾನಿಕ ಸಂಶೋಧನೆಗಳು. ವಿಜ್ಞಾನಿಗಳು ಪ್ರಯೋಗಗಳ ಮೂಲಕ ಕಂಡುಕೊಂಡ ಸತ್ಯಗಳು. ಅವುಗಳಲ್ಲಿ ನಿಮಗೆ ಇಂದಿನ ರಾಜಕೀಯ ಬೆಳವಣಿಗೆ, ಆರ್ಥಿಕ ಕುಸಿತ, ಭಾರತೀಯ ಜನರ ಮನಃಸ್ಥಿತಿಗಳು ಕಂಡುಬಂದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಆಗಿನ ಇಂದಿರಾ ಗಾಂಧಿ ಅವರಿಗೆ, ಈಗಿನ ನರೇಂದ್ರ ಮೋದಿ ಅವರಿಗೆ ಇದನ್ನು ಹೋಲಿಸಿಕೊಂಡು ನೀವು ಏನಾದರೂ ವಿಶ್ಲೇಷಣೆ ಮಾಡಿದರೆ ಅದಕ್ಕೆ ನಾನು ಹೊಣೆಯಲ್ಲ. ಆದರೆ ಇವುಗಳನ್ನು ನೋಡಿದರೆ ನಿಮಗೆ ಅಂತಹ ಆಲೋಚನೆಗಳು ಬಂದೇ ಬರುತ್ತವೆ.

ಫ್ರಾನ್ಸ್ ದೇಶದ ಸಂಶೋಧಕ ಜೀನ್ ಹೆನ್ರಿ ಫಾಬ್ರೆ, ಕಂಬಳಿ ಹುಳುಗಳ ಮೇಲೆ ಪ್ರಯೋಗ ಮಾಡಿದ.
ಕಂಬಳಿ ಹುಳುಗಳು ಒಂದರ ಹಿಂದೆ ಒಂದು ಹೋಗುತ್ತವೆ. ಒಂದು ರೀತಿಯ ಸರಪಳಿಯ ಹಾಗೆ. ಸರಪಳಿಯಲ್ಲಿ ಒಂದು ಹುಳು ಸತ್ತುಹೋದರೆ ಎಲ್ಲ ಹುಳುಗಳೂ ಸತ್ತು ಹೋಗುತ್ತವೆ. ಒಂದು ಹುಳಕ್ಕೆ ಜ್ವರ ಬಂದರೆ ಎಲ್ಲ ಹುಳುಗಳೂ ಸಾಯುತ್ತವೆ. ಎಲ್ಲ ಹುಳುಗಳಿಗೂ ಜ್ವರ ಬರಲೇಬೇಕು ಎಂದೇನಿಲ್ಲ.

ಒಮ್ಮೆ ಫಾಬ್ರೆ ಒಂದು ದೊಡ್ಡದಾದ ಬಟ್ಟಲಿನ ಮಧ್ಯದಲ್ಲಿ ಸಾಕಷ್ಟು ಸಕ್ಕರೆ ಮತ್ತು ಹುಳುಗಳ ಆಹಾರವನ್ನು ಹಾಕಿದ. ನಂತರ ಹತ್ತಾರು ಕಂಬಳಿ ಹುಳುಗಳನ್ನು ಬಟ್ಟಲಿನ ಸುತ್ತಲೂ ಇಟ್ಟ. ಒಂದರ ಹಿಂದೆ ಒಂದು ಹುಳುವನ್ನು ಸರಪಳಿಯಂತೆ ಮಾಡಿದ. ಕೊನೆಯ ಹುಳು ಮೊದಲನೇ ಹುಳುವಿನ ಮುಂದೆ ಇರುವಂತೆ ನೋಡಿಕೊಂಡ.

ADVERTISEMENT

ಅಂದರೆ ವೃತ್ತಾಕಾರವನ್ನು ಸೃಷ್ಟಿಸಿದ. ಮೊದಲ ಹುಳು ಯಾವುದು, ಕೊನೆಯ ಹುಳು ಯಾವುದು ಎಂದು ಗೊತ್ತಾಗುತ್ತಿರಲಿಲ್ಲ. ಈ ಹುಳುಗಳು ಒಂದರ ಹಿಂದೆ ಒಂದು ನಿರಂತರ ಸಂಚರಿಸುತ್ತಲೇ ಇದ್ದವು. ಕಂಬಳಿ ಹುಳುಗಳ ಇನ್ನೊಂದು ವಿಶೇಷ ಎಂದರೆ, ಅವು ಕಣ್ಣುಗಳನ್ನು ಪೂರ್ತಿಯಾಗಿ ತೆರೆಯುವುದಿಲ್ಲ. ಅರೆತೆರೆದ ಕಣ್ಣುಗಳಿಂದ ಮುಂದಿನ ಹುಳುವಿನ ಹಿಂಭಾಗವನ್ನು ನೋಡುತ್ತಾ ಸಂಚರಿಸುತ್ತವೆ ಎನ್ನುವುದನ್ನು ಕಂಡುಕೊಂಡ.

ಈ ಹುಳುಗಳು ನಿರಂತರ ಏಳು ದಿನ ನಡೆಯುತ್ತಲೇ ಇದ್ದವು. ಕೊನೆಗೆ ಅವುಗಳ ನಡೆ ನಿಂತಿತು. ಒಂದು ಹುಳು ಆಹಾರವಿಲ್ಲದೆ, ನಿಶ್ಶಕ್ತಿಯಿಂದ ಸತ್ತುಹೋಯಿತು. ಕೆಲವೇ ನಿಮಿಷಗಳಲ್ಲಿ ಎಲ್ಲ ಹುಳುಗಳೂ ಸತ್ತುಬಿದ್ದವು. ವಿಚಿತ್ರ ಎಂದರೆ, ಆ ಬಟ್ಟಲಿನಲ್ಲಿ ಆ ಹುಳುಗಳಿಗೆ ಅತ್ಯಂತ ಪ್ರಿಯವಾದ ಆಹಾರ ಪಕ್ಕದಲ್ಲಿಯೇ ಇತ್ತು. ಒಂದು ಹುಳುವೂ ಚಲನೆಯನ್ನು ನಿಲ್ಲಿಸಿ ಬಟ್ಟಲಿನ ಮಧ್ಯಕ್ಕೆ ಸಾಗಿ ಆಹಾರ ತಿನ್ನುವ ಸಾಹಸ ಮಾಡಲಿಲ್ಲ. ಒಂದು ಹುಳು ಆಹಾರದ ಕಡೆ ಮುಖ ಮಾಡಿದ್ದರೆ ಉಳಿದವೂ ಆ ಕಡೆಗೆ ಹೋಗುತ್ತಿದ್ದವೋ ಏನೋ? ಆದರೆ ಎಲ್ಲ
ಹುಳುಗಳೂ ಕಣ್ಣು ತೆರೆಯದೆ ಇನ್ನೊಂದು ಹುಳುವಿನ ಹಿಂದಿನ ಭಾಗವನ್ನು ನೋಡಿ ಚಲನೆಯಲ್ಲಿ ತೊಡಗಿಕೊಂಡವು. ಆ ಹುಳ ಹೋಗುತ್ತಿದೆ ಎಂದು ಈ ಹುಳ ಹೋಗುತ್ತಿತ್ತು ಅಷ್ಟೆ. ಈ ಸಂಶೋಧನೆ ನಿಮಗೆ ಈಗಿನ ಸಿಎಎ ಪ್ರತಿಭಟನೆ, ಎನ್‌ಆರ್‌ಸಿ, ರಾಮಮಂದಿರ, ಕಾಶ್ಮೀರ ವಿದ್ಯಮಾನ ಎಲ್ಲವನ್ನೂ ನೆನಪಿಗೆ ತಂದರೆ ಅದಕ್ಕೆ ನಾನು ಹೊಣೆಯಲ್ಲ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ಕ್ರಮಗಳೂ ನಿಮಗೆ ನೆನಪಾಗಬಹುದು. ಈಗ ನರೇಂದ್ರ ಮೋದಿ, ಅಮಿತ್ ಶಾ ಅವರ ಕ್ರಮಗಳೂ ನಿಮ್ಮ ಮನಸ್ಸಿನಲ್ಲಿ ಬಂದು ಹೋಗಬಹುದು. ಈಗಲೂ ಭಾರತವೆಂಬ ಬಟ್ಟಲಿನಲ್ಲಿ ಸಕ್ಕರೆ ಇದೆ, ಬೇಕಾದಷ್ಟು ಆಹಾರ ಇದೆ. ಆದರೆ ನಾವು ಕೂಡ ಒಬ್ಬರ ಹಿಂದೆ ಒಬ್ಬರು ಹೋಗುತ್ತಿರುವಂತೆ ಭಾಸವಾಗುತ್ತಿದೆ. ಬಟ್ಟಲಿನ ಮಧ್ಯದಲ್ಲಿ ಸಮೃದ್ಧವಾಗಿ ತುಂಬಿರುವ
ಅವಕಾಶಗಳನ್ನು ಬಳಸಿಕೊಳ್ಳದೆ ಅರೆಗಣ್ಣು ಬಿಚ್ಚಿ ಮುಂದಿನ ವ್ಯಕ್ತಿಯನ್ನು ನೋಡಿ ನಂತರ ಕಣ್ಣು ಮುಚ್ಚಿ ಅವರನ್ನು ಅನುಸರಿಸುತ್ತಿರುವಂತೆ ಭಾಸವಾಗುತ್ತಿದೆಯಲ್ಲವೇ?

ಸಂಪನ್ಮೂಲ ಬೇಕಾದಷ್ಟಿದೆ. ಉದ್ಯೋಗಾವಕಾಶ ಸಾಕಷ್ಟಿದೆ. ಸೌಹಾರ್ದಕ್ಕೆ ದಾರಿಗಳಿವೆ. ಆದರೂ ನಮ್ಮ ಸುತ್ತಾಟ ಮಾತ್ರ ನಿಲ್ಲುತ್ತಲೇ ಇಲ್ಲ. ನಾವು ಸುತ್ತುತ್ತಲೇ ಇದ್ದೇವೆ. ನಾವು ಕಣ್ಣು ಬಿಡುವುದನ್ನು ಕಲಿಯಬೇಕಷ್ಟೆ.

ರಷ್ಯನ್ ಮನಃಶಾಸ್ತ್ರಜ್ಞ ಪಾವ್ಲೋವ್ ಒಂದು ಸಂಶೋಧನೆ ಮಾಡಿದ. ಮನೆಗೆ ಒಂದು ಪುಟ್ಟ ನಾಯಿ ಮರಿಯನ್ನು ತಂದ. ತಾನು ಕೈಯಲ್ಲಿ ಒಂದಿಷ್ಟು ಬಿಸ್ಕತ್‌ಗಳನ್ನು ಹಿಡಿದುಕೊಂಡು ನಾಯಿಯ ಮುಂದೆ ನಿಂತ. ನಾಯಿ ಅವನ ಮುಖವನ್ನೇ ನೋಡುತ್ತಿತ್ತು. ನಾಯಿ ತನ್ನ ಎರಡೂ ಕಾಲುಗಳನ್ನು ಮೇಲೆ ಎತ್ತಿ ಮುಖ ನೋಡಿ ಬೊಗಳಿದಾಗ ಅದಕ್ಕೆ ಬಿಸ್ಕತ್ ಹಾಕಬೇಕು ಎನ್ನುವುದು ಆತನ ಬಯಕೆ. ಆದರೆ ನಾಯಿ ಬೊಗಳಲಿಲ್ಲ.
ಸುಮ್ಮನೆ ಆತನ ಮುಖ ನೋಡುತ್ತಾ ನಿಲ್ಲುತ್ತಿತ್ತು. ಇದು ಚಿಕ್ಕ ನಾಯಿ, ಇದಕ್ಕೆ ಅಭ್ಯಾಸ ಮಾಡಬೇಕು ಎಂದು ತಾನೇ ನಾಯಿಯಂತೆ ಬೊಗಳಿ ಬಿಸ್ಕತ್ ಕೆಳಕ್ಕೆ ಹಾಕಿದ. ಆಗ ನಾಯಿ ಬಿಸ್ಕತ್ ತಿಂದಿತು.

ಈ ಪ್ರಯೋಗವನ್ನು 15 ದಿನ ಮುಂದುವರಿಸಿದ. ಆದರೆ ನಾಯಿ ಬೊಗಳುವುದನ್ನು ಕಲಿಯಲಿಲ್ಲ. ಪಾವ್ಲೋವ್ ನಾಯಿಯಂತೆ ಬೊಗಳಿ ಬಿಸ್ಕತ್ ಕೆಳಕ್ಕೆ ಹಾಕಿದಾಗಲೇ ನಾಯಿ ಅದನ್ನು ತಿನ್ನುತ್ತಿತ್ತು. ನಾಯಿಗೆ ಬೊಗಳುವುದು ಅಭ್ಯಾಸವಾಗಲಿ ಎನ್ನುವುದು ಇವನ ಉದ್ದೇಶವಾಗಿತ್ತು. ಆದರೆ ಬೊಗಳುವುದು ಇವನಿಗೆ ಅಭ್ಯಾಸವಾಯಿತು. ನಾಯಿ ಸುಮ್ಮನೆ ಇತ್ತು. ಈ ಸಂಶೋಧನೆಯೂ ನಿಮಗೆ ಯಾವ್ಯಾವ ವಿದ್ಯಮಾನಗಳನ್ನು ನೆನಪಿಸುತ್ತದೋ ಆ ದೇವರೇ ಬಲ್ಲ.

ಈಗಲೂ ದೇಶದಲ್ಲಿ ಬೊಗಳುವ ಅಭ್ಯಾಸ ಮಾಡಿಸುವ ಬಹಳಷ್ಟು ಪ್ರಯತ್ನಗಳು ನಡೆಯುತ್ತಿವೆ. ಯಾರು ಬೊಗಳಲಿ ಎಂದು ಬಯಸಿ ಬೊಗಳುವುದನ್ನು ಕಲಿಸಲಾಗುತ್ತಿದೆಯೋ ಅವರು ಬೊಗಳುವುದನ್ನು ಕಲಿಯುತ್ತಿಲ್ಲ. ಕಲಿಸುವವರಿಗೆ ಬೊಗಳುವುದು ಅಭ್ಯಾಸವಾಗಿಬಿಟ್ಟಿದೆ.

ಮತ್ತೊಂದು ಸಂಶೋಧನೆಯನ್ನು ನೋಡಿ. ಒಬ್ಬ ಫ್ರೆಂಚ್ ಎಂಜಿನಿಯರ್‌ ಒಂದು ರಥಕ್ಕೆ ಕುದುರೆಯನ್ನು ಕಟ್ಟಿ ಎಳೆಸಿದ. ಅದು ತನ್ನ ಎಲ್ಲ ಶಕ್ತಿಯನ್ನೂ ಹಾಕಿ ಎಳೆಯಿತು. ನಂತರ ಅದೇ ರಥಕ್ಕೆ ಎರಡು ಕುದುರೆಗಳನ್ನು ಕಟ್ಟಿ ಎಳೆಸಿದ. ಅಂದರೆ ಈಗ ರಥ ಎರಡು ಪಟ್ಟು ವೇಗದಲ್ಲಿ ಸಾಗುತ್ತದೆ ಎನ್ನುವುದು
ಅವನ ನಿರೀಕ್ಷೆಯಾಗಿತ್ತು. ಆದರೆ ಅವನ ನಿರೀಕ್ಷೆ ಸುಳ್ಳಾಯಿತು. ಎರಡೂ ಕುದುರೆಗಳು ತಮ್ಮ ಸಂಪೂರ್ಣ ಶಕ್ತಿಯನ್ನು ಹಾಕಿರಲಿಲ್ಲ. ನಂತರ ಇದನ್ನೇ ಮನುಷ್ಯರ ಮೇಲೂ ಪ್ರಯೋಗ ಮಾಡಿದ. ಅವರಿಗೆ ಹಗ್ಗ ಎಳೆಯುವ ಕೆಲಸ ಕೊಟ್ಟ. ಒಬ್ಬನೇ ಎಳೆದಾಗ ಶೇಕಡ ನೂರಕ್ಕೆ ನೂರರಷ್ಟು ಶಕ್ತಿ ಹಾಕಿ ಒಬ್ಬ ಎಳೆದ. ಇಬ್ಬರು ಹಗ್ಗ ಎಳೆದಾಗ ಶೇ 93ರಷ್ಟು ಶಕ್ತಿ ಮಾತ್ರ ಬಳಕೆಯಾಯಿತು. ಮೂವರು ಎಳೆದಾಗ ಈ ಶಕ್ತಿಯ ಪ್ರಮಾಣ ಶೇ 85ಕ್ಕೆ ಇಳಿಯಿತು. ನಾಲ್ವರು ಎಳೆದಾಗ ಅದು ಶೇ 42ಕ್ಕೆ ಇಳಿಯಿತು. ಗುಂಪಿನಲ್ಲಿ ಜನರು ಹೆಚ್ಚಾದಷ್ಟೂ ಅವರ ಪ್ರಯತ್ನ ಕಡಿಮೆಯಾಗುತ್ತಲೇ ಇತ್ತು. ಗುಂಪು ದೊಡ್ಡದಾದಷ್ಟೂ ಮನುಷ್ಯನ ಜವಾಬ್ದಾರಿ, ಪ್ರಯತ್ನ ಕಡಿಮೆಯಾಗುತ್ತದೆ ಎಂದು ಆತ ಷರಾ ಬರೆದ.

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಸುಳ್ಳು ಎಂದಲ್ಲ. ಆದರೆ ಎಲ್ಲರ ಮನಃಸ್ಥಿತಿ ಒಂದೇ ಆಗಿದ್ದಾಗ ಅದು ನಿಜ. ಆದರೆ ಗುಂಪಿನಲ್ಲಿ ಕೆಲಸ ಮಾಡುವಾಗ ಗುಂಪಿನಲ್ಲಿ ಗೋವಿಂದ ಎನ್ನುವುದೇ ಸತ್ಯ. ನಾವು ಈಗ ಗುಂಪಿನಲ್ಲಿ ಗೋವಿಂದ ಆಗದೆ ನಮ್ಮ ಶಕ್ತಿಯನ್ನು ನೂರಕ್ಕೆ ನೂರರಷ್ಟು ಬಳಸುವುದು ಅನಿವಾರ್ಯವಾಗಿದೆ. ಅರೆಗಣ್ಣಿನಿಂದ ನೋಡುತ್ತಾ ಮುಂದಿನವನನ್ನು ಅನುಸರಿಸಿದರೆ ಅಪಘಾತ ಗ್ಯಾರಂಟಿ. ನಮ್ಮ ಚಲನೆ ಆಗ ಮುಂದೆ ಸಾಗುವುದಿಲ್ಲ. ಹಿಂದಕ್ಕೆ ಚಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.