ADVERTISEMENT

ಅನುಸಂಧಾನ ಅಂಕಣ: ಕೈಯಲ್ಲಿ ಬೆಣ್ಣೆ, ತುಪ್ಪಕ್ಕೆ ಹುಡುಕಾಟ!

ರವೀಂದ್ರ ಭಟ್ಟ
Published 27 ನವೆಂಬರ್ 2024, 23:33 IST
Last Updated 27 ನವೆಂಬರ್ 2024, 23:33 IST
   

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುಷಿಯಾಗಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷ ತಾಳತಪ್ಪಿದಂತೆಯೇ ಇದೆ. ಒಂದೂವರೆ ವರ್ಷದಿಂದ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಹೆಣೆಯುತ್ತಿರುವ ಬಲೆಯೊಳಗೆ ಕಾಂಗ್ರೆಸ್ ಪಕ್ಷ ತಾನಾಗಿಯೇ ಬೀಳುತ್ತಿರುವಂತೆ ಕಾಣುತ್ತಿದೆ.

ಆಡಳಿತ ಪಕ್ಷವೇ ಆಗಿದ್ದರೂ ತನ್ನನ್ನು ಸಮರ್ಥಿಸಿ ಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಚಾರ ಮಾಡುವ ಬಿಜೆಪಿಯ ಕಲೆಗಾರಿಕೆಯನ್ನು ಕಾಂಗ್ರೆಸ್‌ ಇನ್ನೂ ಕಲಿತಿಲ್ಲ; ವ್ಯವಸ್ಥಿತ ಅಪಪ್ರಚಾರವನ್ನು ಎದುರಿಸುವಷ್ಟು ಜಾಣ್ಮೆಯನ್ನೂ ರೂಢಿಸಿಕೊಂಡಿಲ್ಲ. ಚುನಾವಣೆ ಗೆಲ್ಲಲು ಬೇಕಾದ ತಂತ್ರವನ್ನು ಕಾಂಗ್ರೆಸ್ ಯಶಸ್ವಿಯಾಗಿ ಹೆಣೆದಿದ್ದರೂ ಜನಮಾನಸದಲ್ಲಿ ಬಿಜೆಪಿ ಬಿತ್ತುತ್ತಿರುವ ವಿಷಬೀಜವನ್ನು ಕಿತ್ತುಹಾಕಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ.ಅಮೆರಿಕದ ನ್ಯಾಯಾಲಯವೊಂದು ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಬಂಧನದ ವಾರಂಟ್ ಪ್ರಕಟಿಸುತ್ತಿದ್ದಂತೆ ಬಿಜೆಪಿಯ ದೆಹಲಿ ನಾಯಕರಿಂದ ಹಿಡಿದು ತಾಲ್ಲೂಕು ಮಟ್ಟದ ನಾಯಕರವರೆಗೆ ಒಂದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಅದು ಮಾಧ್ಯಮಗಳಲ್ಲಿ, ವಿಶೇಷವಾಗಿ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಳ್ಳುತ್ತಾರೆ. ಡಿಜಿಟಲ್ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸುತ್ತಾರೆ. ಬಿಜೆಪಿಯವರು ಹೇಳುವುದನ್ನು ಜನ ಹೌದೇ ಹೌದು ಎಂದು ನಂಬುವಂತೆ ಮಾಡುತ್ತಾರೆ. ಇಂತಹದ್ದೊಂದು ಸಂಪರ್ಕ ಜಾಲ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಜನ ನಂಬುವಂತೆ ಹೇಳುವ ಕಲೆಗಾರಿಕೆಯೂ ಅವರಿಗೆ ಸಿದ್ಧಿಸಿದಂತೆ ಕಾಂಗ್ರೆಸ್ ಮುಖಂಡರಿಗೆ ಸಿದ್ಧಿಸಿಲ್ಲ.

ಈಗ ಮುಡಾ ಹಗರಣವನ್ನೇ ತೆಗೆದುಕೊಳ್ಳಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಾಗ, ಸಿದ್ದರಾಮಯ್ಯ ಅವರನ್ನು ಭ್ರಷ್ಟಾತಿಭ್ರಷ್ಟ ಎಂದೇ ಬಿಂಬಿಸಲಾಯಿತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಚಾರ ಹೇಗಿತ್ತೆಂದರೆ, ಮುಡಾದಲ್ಲಿ ಪರ್ಯಾಯ ನಿವೇಶನಗಳನ್ನು ಪಡೆದವರು ಸಿದ್ದರಾಮಯ್ಯ ಅವರ ಪತ್ನಿ ಮಾತ್ರ ಎನ್ನುವಂತೆ ಇತ್ತು. ಆದರೆ ಎಲ್ಲರಿಗೂ ಗೊತ್ತಿರುವ ಸತ್ಯ ಏನು ಎಂದರೆ, ಮುಡಾದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಅನೇಕ ನಾಯಕರು ಪರ್ಯಾಯ ನಿವೇಶನಗಳನ್ನು ಪಡೆದುಕೊಂಡಿದ್ದರು. ಅದನ್ನು ಸರಿಯಾಗಿ ಹೇಳಲೂ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅಧಿಕಾರ ಇತ್ತು. ಮುಡಾದ ಎಲ್ಲ ದಾಖಲೆಗಳೂ ಅವರ ಬಳಿಯೇ ಇದ್ದವು. ಆದರೂ ಬಿಜೆಪಿಯ ಆರೋಪವನ್ನು ಹುಸಿಗೊಳಿಸಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ಆಪಾದನೆ ಬಂದಾಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಯಾರ್‍ಯಾರು ಎಷ್ಟೆಷ್ಟು ನಿವೇಶಗಳನ್ನು ಪಡೆದುಕೊಂಡಿದ್ದಾರೆ ಎನ್ನುವುದನ್ನು ಜನರಿಗೆ ಮನಮುಟ್ಟುವಂತೆವ್ಯವಸ್ಥಿತವಾಗಿ ಹೇಳಲು ಕಾಂಗ್ರೆಸ್ ನಾಯಕರು ವಿಫಲರಾದರು.

ADVERTISEMENT

ಬಿಪಿಎಲ್ ಕಾರ್ಡ್ ರದ್ದು ವಿಷಯದಲ್ಲಿಯೂ ಹೀಗೆಯೇ ಆಯಿತು. ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರವೇ ಕಾರ್ಡುಗಳನ್ನು ರದ್ದು ಮಾಡಲಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾದರು. ದೇಶದಲ್ಲಿ 5 ಕೋಟಿಗೂ ಹೆಚ್ಚು ಕಾರ್ಡ್‌ಗಳನ್ನು ರದ್ದು ಮಾಡಿರುವುದಾಗಿ ಕೇಂದ್ರ ಸರ್ಕಾರವೇ ಪ್ರಕಟ ಮಾಡಿದ ನಂತರ ನಮ್ಮ ಆಹಾರ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರದ ನಿಯಮಾ ವಳಿಗಳನ್ನು ಪ್ರಕಟಿಸಿದರು. ಇದು, ಎಲ್ಲಾ ದೋಚಿಯಾದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಎಂಬಂತೆ ಆಯಿತು. ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ, ಅಕ್ಕಿ ಕೊಡಲು ಸಾಧ್ಯವಾಗದೆ ಹೀಗೆಲ್ಲಾ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಹುಯಿಲೆಬ್ಬಿಸಿಯಾಗಿತ್ತು. ಬಿಪಿಎಲ್ ಕಾರ್ಡ್ ರದ್ದಾದವರ ಮನೆಗಳಿಗೆ ಭೇಟಿ ನೀಡಿದ ಬಿಜೆಪಿ ನಿಯೋಗ, ‘ನಿಮ್ಮ ಜೊತೆಗೆ ಬಿಜೆಪಿ ಇದೆ’ ಎಂಬ ಸಂದೇಶವನ್ನೂ ಸಾರಿಯಾಗಿತ್ತು. ಅಲ್ಲಿಗೆ ಚಿವುಟಿಯೂ ಆಗಿತ್ತು, ಮಗು ಅಳುವುದನ್ನು ಸುಮ್ಮನಿರಿಸಲು ತೊಟ್ಟಿಲು ತೂಗಿದ್ದೂ ಆಗಿತ್ತು.

ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆಯೂ ಹೀಗೆಯೇ ಆಯಿತು. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೇ ವಕ್ಫ್ ಆಸ್ತಿ ಉಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ಕುಮಾರ್‌ ಬಂಗಾರಪ್ಪ ಅಧ್ಯಕ್ಷತೆಯ ಸಮಿತಿಯು ವಕ್ಫ್ ಆಸ್ತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತ್ತು. ಆ ವರದಿಯು ವಿಧಾನಮಂಡಲದಲ್ಲಿ ಮಂಡನೆಯೂ ಆಗಿತ್ತು. ಅದನ್ನು ಅವಲೋಕಿಸಿದರೆ, ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡಿರುವ ನೋಟಿಸ್‌ಗಳಿಗಿಂತ ಬಿಜೆಪಿ ಆಡಳಿತದ ಅವಧಿಯಲ್ಲೇ ಹೆಚ್ಚಿನ ರೈತರಿಗೆ ನೋಟಿಸ್ ನೀಡಿರುವ ಮಾಹಿತಿ ಲಭ್ಯವಾಗುತ್ತದೆ. ವರದಿ ಸರ್ಕಾರದ ಕೈಯಲ್ಲಿಯೇ ಇತ್ತು. ಆದರೆ ಅದನ್ನು ಬಹಿರಂಗಪಡಿಸಿ ಬಿಜೆಪಿಯ ಬಾಯಿ ಮುಚ್ಚಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಕಡತಗಳಲ್ಲಿ ಇರುವುದನ್ನೇ ಹುಡುಕಿ ಹೇಳದಷ್ಟು ಸೋಮಾರಿಗಳಾಗಿದ್ದರು ಕಾಂಗ್ರೆಸ್ ನಾಯಕರು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಬಿಜೆಪಿ ನಾಯಕರು ‘ನಾವು ರೈತರಿಗೆ ನೋಟಿಸ್ ನೀಡಿಲ್ಲ. ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದ ದೊಡ್ಡ ದೊಡ್ಡ ಕುಳಗಳಿಗೆ ಮಾತ್ರ ನೋಟಿಸ್ ನೀಡಿದ್ದೆವು’ ಎಂದರು. ಈ ದೊಡ್ಡ ದೊಡ್ಡ ಕುಳಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರೂ ಇದ್ದಾರೆ ಎಂಬುದನ್ನು ಎತ್ತಿ ತೋರಿಸಲು ಕಾಂಗ್ರೆಸ್ ನಾಯಕರು ಇನ್ನೂ ತಿಣುಕಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಹೊತ್ತಿನಲ್ಲಿಯೇ ಯಾಕೆ ಈ ವಿವಾದ ಹುಟ್ಟುಹಾಕಲಾಯಿತು ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವ ಅವಕಾಶವನ್ನೂ ಕಾಂಗ್ರೆಸ್ ನಾಯಕರು ಕಳೆದುಕೊಂಡರು. ಸಮಾಜದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ ಚಟುವಟಿಕೆಯು ಮಿತಿಮೀರುತ್ತಿದ್ದರೂ ಅದಕ್ಕೆ ಕಡಿವಾಣ ಹಾಕುವ ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನೆ ಕುಳಿತರೆ ಮುಂದೊಂದು ದಿನ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದರೆ, ಅದನ್ನು ಸಮರ್ಥಿಸಿಕೊಳ್ಳಲೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಿಟ್ಟರೆ ಉಳಿದ ಸಚಿವರು ಪೂರ್ಣ ಪ್ರಮಾಣದಲ್ಲಿ ಮುಂದಾಗಲಿಲ್ಲ. ಮುಖ್ಯಮಂತ್ರಿ ಮೇಲೆ ಆರೋಪಗಳು ಬಂದಾಗ ಅವರ ಸಮರ್ಥನೆಗೆ ಒಂದಿಬ್ಬರು ಸಚಿವರನ್ನು ಬಿಟ್ಟರೆ ಉಳಿದ ಸಚಿವರು ಯಾರೂ ಮುಂದೆ ಬರಲಿಲ್ಲ. ಆರೋಪ ಬಂದಿದ್ದು ಮುಖ್ಯಮಂತ್ರಿ ಮೇಲೆ ತಾನೆ, ಅವರೇ ಬಗೆಹರಿಸಿಕೊಳ್ಳಲಿ ಎಂಬ ಧೋರಣೆ ಸರ್ಕಾರದ ಭಾಗವಾಗಿರುವ ನಾಯಕರಲ್ಲೂ ಪಕ್ಷದ ನಾಯಕರಲ್ಲೂ ಕಾಣಿಸಿಕೊಂಡಿದ್ದು ಸುಳ್ಳಲ್ಲ.

ಜಿಎಸ್‌ಟಿ ಪರಿಹಾರ, ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುವುದನ್ನು ರಾಜ್ಯದ ಜನರಲ್ಲಿ ಬಿಂಬಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಬಿಜೆಪಿ ನಾಯಕರಿಗೂ ಕಾಂಗ್ರೆಸ್ ನಾಯಕರಿಗೂ ಇರುವ ಪ್ರಮುಖ ವ್ಯತ್ಯಾಸ ಏನೆಂದರೆ, ಬಿಜೆಪಿ ನಾಯಕರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಅದನ್ನು ಜನ ನಂಬುವಂತೆ ಮಾಡುತ್ತಾರೆ. ಸಾಧ್ಯ ಇರುವ ಎಲ್ಲ ಪ್ರಚಾರ ಮಾರ್ಗಗಳನ್ನೂ ಬಳಸಿ ಜನರ ಭಾವನೆಯನ್ನು ಕೆರಳಿಸುತ್ತಾರೆ. ಕಾಂಗ್ರೆಸ್ ನಾಯಕರು ಎಲ್ಲವೂ ಕೈಯಲ್ಲಿ ಇದ್ದರೂ ಒಮ್ಮೆ ಹೇಳಿದ ಹಾಗೆ ಮಾಡಿ ಸುಮ್ಮನಾಗಿಬಿಡುತ್ತಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತು. ಸತ್ಯವಾದರೂ ಅದನ್ನೂ ನೂರು ಬಾರಿ ಹೇಳಿ ಇದೇ ಸತ್ಯ ಎಂದು ಸಾಬೀತು ಮಾಡಬೇಕಾದ ಕಾಲದಲ್ಲಿ ನಾವಿದ್ದೇವೆ ಎನ್ನುವುದು ಇನ್ನೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅರಿವಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಉತ್ತರರಾಮಯ್ಯ ಆಗಿಬಿಟ್ಟಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಮಾಡುವ ಆರೋಪಗಳಿಗೆ ಉತ್ತರ ಹೇಳುವುದೇ ಅವರ ಕೆಲಸವಾಗಿದೆ. ಈ ಎರಡೂ ಪಕ್ಷಗಳ ಮುಖಂಡರ ಹಗರಣಗಳನ್ನು ಬಯಲಿಗೆಳೆಯುವುದಾಗಿ ಅವರು ಹೇಳಿದ್ದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೋವಿಡ್ ಕಾಲದ ಹಗರಣಗಳೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಈ ಜಡತ್ವದಿಂದ ಕಾಂಗ್ರೆಸ್‌ ಹೊರಬರುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.