ADVERTISEMENT

ಜೊತೆಗಿದ್ದರೆ ಬಲ

ಡಾ. ಗುರುರಾಜ ಕರಜಗಿ
Published 15 ಅಕ್ಟೋಬರ್ 2018, 20:00 IST
Last Updated 15 ಅಕ್ಟೋಬರ್ 2018, 20:00 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಎಲ್ಲರೂ ಶಾಂತಿ ಸಂತೋಷಗಳಿಂದ ಬದುಕಿದ್ದರು. ದೇವತೆಗಳ ಕೃಪೆ ರಾಜನ ಮೇಲೆ ಹಾಗೂ ರಾಜ್ಯದ ಮೇಲೆ ಸದಾ ಇರುತ್ತಿತ್ತು. ದೇವತೆಗಳ ರಾಜ ವೃಕ್ಷದೇವತೆಗಳಿಗೆ ಒಂದು ಸಂದೇಶವನ್ನು ಕಳುಹಿಸಿದ. ಅದರಲ್ಲಿ ದೇವತೆಗಳು ತಮತಮಗೆ ಸರಿ ಎನ್ನಿಸಿದ ಮರದಲ್ಲಿ ವಾಸ ಮಾಡಬಹುದು ಎಂದು ತಿಳಿಸಿದ.

ಆ ಸಮಯದಲ್ಲಿ ಬೋಧಿಸತ್ವ ಹಿಮಾಲಯ ಪ್ರದೇಶದಲ್ಲಿದ್ದ ಶಾಲವನದಲ್ಲಿ ಒಂದು ವೃಕ್ಷದೇವತೆಯಾಗಿ ಜನಿಸಿದ್ದ. ಆತ ಅಲ್ಲಿದ್ದ ದೇವತೆಗಳಿಗೆಲ್ಲ ಮಾರ್ಗದರ್ಶಕನಾಗಿದ್ದ. ದೇವತೆಗಳ ರಾಜನ ಸಂದೇಶವನ್ನು ತಿಳಿದು ತನ್ನ ಜೊತೆಗಾರ ದೇವತೆಗಳನ್ನು ಕರೆದು ಬೋಧಿಸತ್ವ ಹೇಳಿದ, ‘ನಾವೆಲ್ಲ ವೃಕ್ಷದೇವತೆಗಳಾದ್ದರಿಂದ ವೃಕ್ಷಗಳಲ್ಲೇ ವಾಸಿಸಬೇಕು. ನೀವು ನಿಮ್ಮ ವಾಸಸ್ಥಾನಗಳನ್ನು ತುಂಬ ಎಚ್ಚರಿಕೆಯಿಂದ ಆರಿಸಿಕೊಳ್ಳಿ. ಬಯಲಿನಲ್ಲಿ ಒಂಟಿಯಾಗಿರುವ ಮರಗಳನ್ನು ಆಯ್ದುಕೊಳ್ಳಬೇಡಿ. ಆದಷ್ಟೂ ಒತ್ತೊತ್ತಾಗಿ ಬೆಳೆದ ಮರಗಳಲ್ಲಿ ಆಶ್ರಯ ಪಡೆಯಿರಿ. ನಿಮಗೆ ಅಭ್ಯಂತರವಿಲ್ಲದಿದ್ದರೆ ನಾನು ಈಗ ಆಶ್ರಯಿಸಿರುವ ಶಾಲವನದ ವೃಕ್ಷದ ಸುತ್ತಮುತ್ತಲಿರುವ ಮರಗಳನ್ನು ಆರಿಸಿಕೊಳ್ಳಬಹುದು”.

ಬೋಧಿಸತ್ವನ ಮಾತು ಕೇಳಿದ ಬುದ್ಧಿವಂತ ದೇವತೆಗಳು ಅವನ ವಾಸಸ್ಥಾನದ ಸುತ್ತಲಿದ್ದ ಮರಗಳಲ್ಲಿ ಆಶ್ರಯ ಪಡೆದರು. ದೇವತೆಗಳಲ್ಲಿಯೂ ಕೆಲವು ಮೂರ್ಖ ದೇವತೆಗಳಿದ್ದರಲ್ಲವೇ? ಅವರು ಬೋಧಿಸತ್ವನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹೋದರು. ಈ ಶಾಲವನದ ಕಾಡಿನಲ್ಲಿದ್ದ ಮರಗಳಲ್ಲಿದ್ದು ಪ್ರಯೋಜನವೇನು? ಇದರ ಬದಲು ಹೆಚ್ಚು ಜನರಿರುವ ಗ್ರಾಮ, ನಗರ, ರಾಜಧಾನಿಗಳ ಹತ್ತಿರ ಇರುವ ದೊಡ್ಡ ಮರಗಳನ್ನು ಆಶ್ರಯಿಸಿಕೊಂಡರೆ ಹೆಚ್ಚು ಪೂಜೆಗಳು ನಡೆಯುತ್ತವೆ ಮತ್ತು ಕೀರ್ತಿ ಬರುತ್ತದೆ ಎಂದು ಭಾವಿಸಿ ಅಲ್ಲಿ ಬಯಲಿನಲ್ಲಿ ಬೆಳೆದಿದ್ದ ಮಹಾವೃಕ್ಷಗಳನ್ನು ಹಿಡಿದು ನೆಲೆಸಿದರು.

ADVERTISEMENT

ಕೆಲಕಾಲ ಎಲ್ಲವೂ ಚೆನ್ನಾಗಿತ್ತು. ಮಳೆಗಾಲದ ಪ್ರಾರಂಭದಲ್ಲಿ ಭಾರೀ ಬಿರುಗಾಳಿ ಬೀಸತೊಡಗಿತು. ಬೇರು ಭದ್ರವಾಗಿರದಿದ್ದ ಮರಗಳು ಬುಡಸಹಿತ ಬಿದ್ದುಬಿಟ್ಟವು. ಬಯಲು ಪ್ರದೇಶಗಳಲ್ಲಿ ಒಂದೊಂದಾಗಿ ನಿಂತಿದ್ದ ಬ್ರಹತ್ ವೃಕ್ಷಗಳು ಅಲುಗಾಡಿ ಅಲುಗಾಡಿ ಕೊನೆಗೆ ಬಿರುಗಾಳಿಗೆ ಶರಣಾಗಿ ಉರುಳಿ ಬಿದ್ದವು. ಆದರೆ ಶಾಲವನದಲ್ಲಿ ಪರಸ್ಪರ ಹೊಂದಿಕೊಂಡಿದ್ದ ಮರಗಳು ಮಾತ್ರ ಭದ್ರವಾಗಿಯೇ ನಿಂತಿದ್ದವು. ಒಂದಕ್ಕೊಂದು ಆಧಾರವಾಗಿದ್ದರಿಂದ ಒಂದು ಮರವೂ ಉರುಳಿರಲಿಲ್ಲ.

ಈಗ ಆಶ್ರಯವನ್ನು ಕಳೆದುಕೊಂಡು ನಿರಾಶ್ರಿತರಾದ ದೇವತೆಗಳು ತಮ್ಮ ಮಕ್ಕಳನ್ನೆತ್ತಿಕೊಂಡು ಹಿಮಾಲಯದ ಶಾಲವನಕ್ಕೆ ಬಂದು ಬೋಧಿಸತ್ವನಿಗೆ ತಮ್ಮ ಕಷ್ಟವನ್ನು ಹೇಳಿಕೊಂಡರು. ಆಗ ಬೋಧಿಸತ್ವ ಹೇಳಿದ, ‘ದಾಯಾದಿಗಳು ಎಂದಿಗೂ ಜೊತೆಯಾಗಿರುವುದು ಒಳ್ಳೆಯದು. ಕಾಡಿನಲ್ಲಿರುವ ಮರಗಳು ಒಟ್ಟೊಟ್ಟಾಗಿ ಇದ್ದರೆ ಭದ್ರವಾಗಿರುತ್ತವೆ. ಏಕಾಂಗಿಯಾದ ಮಹಾವೃಕ್ಷವೂ ಬಿರುಗಾಳಿಯನ್ನು ಎದುರಿಸಿ ನಿಲ್ಲಲಾರದು’.

ಈ ಕಥೆಯನ್ನು ವಿವರಿಸಿ ಬುದ್ಧ ಹೇಳಿದ, ‘ವಿವೇಕಿಗಳ ಮಾತುಗಳನ್ನು ಕೇಳದೆಯೆ ವಿಶ್ವಾಸಾರ್ಹವಲ್ಲದ ಸ್ಥಳಕ್ಕೆ ಹೋಗುವವರ ಪರಿಸ್ಥಿತಿ ಹೀಗೆಯೇ ಆಗುತ್ತದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.