ADVERTISEMENT

ಶಕ್ತಿಹೀನನ ಬಡಾಯಿ

ಬೆರಗಿನ ಬೆಳಕು

ಡಾ. ಗುರುರಾಜ ಕರಜಗಿ
Published 26 ಅಕ್ಟೋಬರ್ 2018, 3:55 IST
Last Updated 26 ಅಕ್ಟೋಬರ್ 2018, 3:55 IST
   

ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಜನಿಸಿ, ಬೆಳೆದು ತಕ್ಷಶಿಲೆಗೆ ಹೋಗಿ ಸರ್ವವಿದ್ಯಾಪಾರಂಗತನಾಗಿ ಮರಳಿದ. ಯುದ್ಧ ಕಲೆಯಲ್ಲಂತೂ ಅವನನ್ನು ಎದುರಿಸುವವರೇಇರಲಿಲ್ಲ. ಆದರೆ, ದೈಹಿಕವಾಗಿ ಕುಳ್ಳನೂ, ಗೂನನೂ ಆಗಿದ್ದರಿಂದ ಯಾವರಾಜನೂ ಅವನಿಗೆ ಕೆಲಸ ಕೊಡಲಿಲ್ಲ. ಬೋಧಿಸತ್ವ ಒಂದು ಊರಿನಲ್ಲಿ ಒಬ್ಬ ಅತ್ಯಂತ ದಷ್ಟಪುಷ್ಟ ದೇಹವನ್ನು ಹೊಂದಿದ ವ್ಯಕ್ತಿಯನ್ನು ಕಂಡ. ಅವನೊಬ್ಬ ಬಟ್ಟೆ ನೇಯುವವ. ಅವನ ಹೆಸರು ಭೀಮಸೇನ. ಅವನಿಗೆ ಹೇಳಿದ, “ನೋಡಪ್ಪ, ನಿನಗೆ ಬಲಿಷ್ಠವಾದ ದೇಹವಿದೆ, ನನ್ನ ಬಳಿ ಯುದ್ಧಕಲೆ ಇದೆ. ನೀನು ಹೋಗಿ ರಾಜನೊಬ್ಬನನ್ನು ಆಶ್ರಯಿಸು. ನೀನೊಬ್ಬ ಶ್ರೇಷ್ಠ ಧನುರ್ಧಾರಿ ಎಂದು ಹೇಳಿಕೋ. ಅವನು ನಿನಗೆ ಒಳ್ಳೆಯ ಸಂಬಳಕೊಟ್ಟು ಇಟ್ಟುಕೊಳ್ಳುತ್ತಾನೆ. ನಾನು ನಿನ್ನೊಂದಿಗೇ ಇದ್ದುರಾಜ ಹೇಳಿದ ಕೆಲಸಗಳನ್ನು ಮಾಡಿಕೊಡುತ್ತೇನೆ”.

ಭೀಮಸೇನ ವಾರಣಾಸಿಯ ರಾಜನನ್ನು ಭೆಟ್ಟಿಯಾಗಿ ಕೆಲಸ ಕೇಳಿದ. ಇವನ ಮಾತನ್ನು ನಂಬಿ ತಿಂಗಳಿಗೆ ಸಾವಿರ ನಾಣ್ಯಗಳ ಸಂಬಳದ ಮೇಲೆ ನೇಮಿಸಿಕೊಂಡ. ಹೆಸರಿಗೆ ಭೀಮಸೇನ ಮಹಾಯೋಧ ಆದರೆ ಪ್ರಸಂಗ ಬಂದಾಗ ಹೊರಾಡುವವನು ಬೋಧಿಸತ್ವನೇ ಆಗಿದ್ದ. ಒಂದು ಬಾರಿ ಭಾರೀ ಹುಲಿಯೊಂದು ಕಾಡಿನಿಂದ ಹೊರಬಂದು ಜಾನುವಾರುಗಳನ್ನು, ಜನರನ್ನುಕೊಂದು ಹೋಗುತ್ತಿತ್ತು. ಸೈನಿಕರು ಅದನ್ನು ಹಿಡಿಯಲು ಪ್ರಯತ್ನಿಸಿ ಸೋತು ಬಂದರು. ಕೊನೆಗೆ ರಾಜ ಈ ಜವಾಬ್ದಾರಿಯನ್ನು ಭೀಮಸೇನನಿಗೆ ನೀಡಿದ. ನೋಡುವುದಕ್ಕೆ ಈತ ಬಲಿಷ್ಠ ಆದರೆ ಒಳಗೆ ರಣಹೇಡಿ.

ಓಡಿ ಬೋಧಿಸತ್ವನ ಬಳಿಗೆ ಬಂದ. ಬೋಧಿಸತ್ವ ಒಂದುಉಪಾಯ ಹೇಳಿದ, “ನೀನು ಎರಡು ಸಾವಿರ ಬಿಲ್ಲುಗಳು, ಇಪ್ಪತ್ತು ಸಾವಿರ ಬಾಣಗಳನ್ನು ತೆಗೆದುಕೊಂಡು ಕಾಡಿನ ಪ್ರದೇಶಕ್ಕೆ ಹೋಗು. ಅಲ್ಲಿಯ ಜನರನ್ನೆಲ್ಲ ಒಟ್ಟಗೂಡಿಸಿ ಅವರಿಗೆ ಒಂದೊಂದು ಬಿಲ್ಲುಕೊಟ್ಟು. ನಗಾರಿ, ಭೇರಿ ಬಾರಿಸಿ ಹುಲಿಯನ್ನೆಬ್ಬಿಸಲು ಹೇಳು. ಹುಲಿ ಎದ್ದಾಗ ರೊಚ್ಚಿಗೆದ್ದ ಎರಡು ಸಾವಿರ ಜನರಲ್ಲಿ ಯಾರಾದರೂ ಅದನ್ನು ಕೊಂದೇಕೊಲ್ಲುತ್ತಾರೆ. ಅವರು ಕೊಂದರು ಎಂದು ಗೊತ್ತಾದ ತಕ್ಷಣ ಕೈಯಲ್ಲಿ ಒಂದು ಬಳ್ಳಿಯನ್ನು ಹಿಡಿದುಕೊಂಡು ಹೋಗಿ ಅವರನ್ನು ಚೆನ್ನಾಗಿ ಬೈದುಬಿಡು. ನಾನು ಆ ಹುಲಿಯನ್ನು ಈ ಬಳ್ಳಿಯಿಂದ ಕಟ್ಟಿ ನಾಯಿಯ ಹಾಗೆಯೇ ರಾಜರ ಬಳಿಗೆ ಎಳೆದೊಯ್ಯತ್ತಿದ್ದೆ. ನೀವೇಕೆ ಅದನ್ನು ಕೊಂದು ಹಾಕಿದಿರಿ ಎಂದು ಕೇಳು. ಅವರು ಗಾಬರಿಯಿಂದ ಒಂದಿಷ್ಟು ಹಣ ಸಂಗ್ರಹ ಮಾಡಿಕೊಡುತ್ತಾರೆ. ಅದನ್ನು ತೆಗೆದುಕೋ. ಸತ್ತ ಹುಲಿಯನ್ನು ತಂದು ರಾಜನಿಗೆ ತೋರಿಸಿದಾಗ ಅವನೂ ತುಂಬ ದುಡ್ಡು ಕೊಡುತ್ತಾನೆ”. ಭೀಮಸೇನ ಅದರಂತೆಯೇ ಮಾಡಿ ಅಪಾರ ದುಡ್ಡು ಗಳಿಸಿದ. ಮತ್ತೊಂದೆರಡು ಬಾರಿ ಇದೇರೀತಿ ನಡೆದು ಭೀಮಸೇನ ಶ್ರೀಮಂತನೇ ಆದ. ಅವನಿಗೆ ನಿಧಾನವಾಗಿ ತಾನೇ ನಿಜವಾದ ಶಕ್ತಿಶಾಲಿ, ಬೋಧಿಸತ್ವ ನಿಂದೇನು ಆದೀತು? ಅವನನ್ನು ನಾನೇಕೆ ಆಶ್ರಯಿಸಬೇಕು ಎಂದುಕೊಂಡು ತಿರಸ್ಕಾರ ಮಾಡತೊಡಗಿದ.

ADVERTISEMENT

ಕೆಲವು ದಿನಗಳ ನಂತರ ಶತ್ರು ರಾಜನೊಬ್ಬ ದೊಡ್ಡ ಸೇನೆಯೊಂದಿಗೆ ವಾರಣಾಸಿಯ ಮೇಲೆ ದಾಳಿ ಮಾಡಿದ. ರಾಜ ಭೀಮಸೇನನಿಗೆ ಯುದ್ಧಕ್ಕೆ ಆಜ್ಞೆ ಮಾಡಿದ. ಆನೆಯ ಮೇಲೆ ಕುಳಿತ ಭೀಮಸೇನನಿಗೆ ಭಯ, ಜೋರಾಗಿ ಅಳತೊಡಗಿದ. ಹಿಂದಿನ ಆನೆಯ ಮೇಲೆ ಕುಳಿತಿದ್ದ ಬೋಧಿಸತ್ವ ಭಯಂಕರವಾದ ಸಿಂಹನಾದ ಮಾಡಿ ಮುನ್ನುಗ್ಗಿ ವೈರಿ ಸೇನೆಯನ್ನು ಸೆದೆಬಡಿದು ರಾಜನನ್ನು ಸೆರೆಹಿಡಿದು ವಾರಣಾಸಿ ರಾಜನಿಗೆ ಒಪ್ಪಿಸಿದ. ಅಂದಿನಿಂದ ಅವನೇ ರಾಜನ ಸೇನಾನಿಯಾದ. ಭೀಮಸೇನ ತನ್ನ ಮೂಲ ವೃತ್ತಿಗೆ ತೆರಳಿದ.

ಅದಕ್ಕೆ ಬುದ್ಧ ಹೇಳಿದ, “ತಮ್ಮಲ್ಲಿ ಶಕ್ತಿ ಇಲ್ಲದೇ ತಾವೇ ಪರಾಕ್ರಮಶಾಲಿಗಳು ಎಂದು ಬಡಾಯಿಕೊಚ್ಚಿಕೊಳ್ಳುವವರು ಶೀಘ್ರದಲ್ಲಿಯೇ ಸೋತು ಅವಮಾನಿತರಾಗುವುದು ಖಂಡಿತ. ಅದಕ್ಕೇ ನಮ್ಮ ಶಕ್ತಿವರ್ಧನೆಯ ಕಡೆಗೇ ಗಮನವಿರಲಿ, ಬಡಾಯಿಬೇಕಿಲ್ಲ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.