ADVERTISEMENT

ಸರಸಿ ಮಾಯೆ

ಡಾ. ಗುರುರಾಜ ಕರಜಗಿ
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST
   

ಮಾಯೆಯೇ ಸರಸಿ; ನಿರ್ಗುಣ ಸತ್ವದಿಂದೇನು ?|
ಮಾಯೆ ಬಿಡೆ ಜಗವೆತ್ತ? ಜೀವಕಥೆಯತ್ತ ?||
ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು|
ತಾಯವಳು ನೀಂ ಮಗುವು – ಮಂಕುತಿಮ್ಮ ||145||

ಪದ-ಅರ್ಥ: ಸರಸಿ= ವಿನೋದಪ್ರಿಯೆ, ಮೇಯವಿಲ್ಲದ=

ಅಳೆಯಲಾಗದ, ಛಾಯೆ= ನೆರಳು

ADVERTISEMENT

ವಾಚ್ಯಾರ್ಥ:ಮಾಯೆ ನಿಜವಾಗಿಯೂ ವಿನೋದಪ್ರಿಯೆ. ಬರೀ ನಿರ್ಗುಣಸತ್ವವಾದ ಬ್ರಹ್ಮ ಏನು ಮಾಡೀತು? ಮಾಯೆಯೇ ಇಲ್ಲದೆ ಹೋದರೆ ಜಗತ್ತು ಎಲ್ಲಿರುತ್ತಿತ್ತು? ಈ ಜೀವಕಥೆ ಇರುತ್ತಿತ್ತೇ? ಅಳೆಯಲಸಾಧ್ಯವಾದ ಮಾಯೆಯ ಮಹಿಮೆ, ಅದು ಪರಸತ್ಪದ ನೆರಳು. ಮಾಯೆಯೇ ತಾಯಿ, ಮನುಷ್ಯರೆಲ್ಲ ಅವಳ ಮಕ್ಕಳು.

ವಿವರಣೆ: ನಿರ್ಗುಣಸತ್ವ ದೊಡ್ಡದು, ಅದೇ ಎಲ್ಲದಕ್ಕೂ ಮೂಲ. ಅದು ಸರಿ, ಅದಕ್ಕೆ ಯಾವ ಗುಣವೂ ಇಲ್ಲವಲ್ಲ. ಅದನ್ನು ನೋಡುವ, ಅನುಭವಿಸುವ ಯಾವ ಉಪಕರಣವೂ ನಮಗಿಲ್ಲ. ನಮಗೆ ಕಾಣುವ ಅನುಭವಕ್ಕೆ ಸಿಕ್ಕುವ ಪ್ರಪಂಚ ಮಾಯೆಯ ಸೃಷ್ಟಿ. ನಮ್ಮ ಸಾಮಾನ್ಯ ಬದುಕಿಗೆ ಆಕರ್ಷಣೆಯಾಗಿರುವುದು ಈ ಮಾಯಾ ಪ್ರಪಂಚ. ಅದಕ್ಕೇ ಕಗ್ಗ ಅದನ್ನು ಸರಸಿ ಎನ್ನುತ್ತದೆ. ಎಲ್ಲ ರಸಗಳೂ ಅದರಲ್ಲಿವೆ. ಆ ರಸಗಳ ಆಕರ್ಷಣೆಯೇ ನಮ್ಮ ಬದುಕಿನ ಸುಖ-ದುಃಖಗಳಿಗೆ ಕಾರಣ. ಮಾನವ ಜನಾಂಗದ, ಅಷ್ಟೇ ಏಕೆ ಇಡೀ ಪ್ರಪಂಚದ ಸಾಧನೆಗಳಿಗೆ, ವೈಫಲ್ಯಗಳಿಗೆ ಈ ಮಾಯೆಯ ಆಕರ್ಷಣೆಯೇ ಪ್ರಚೋದಕ ಶಕ್ತಿ. ಆದ್ದರಿಂದ ಮಾಯೆಯ ಪ್ರಭಾವವಿಲ್ಲದೆ ಜೀವಕಥೆಯೇ ಸಾಧ್ಯವಾಗುತ್ತಿರಲಿಲ್ಲ.

ಇಂಥ ಮಾಯೆಯನ್ನು ಅಳೆಯುವುದು ಸಾಧ್ಯವಿಲ್ಲ. ಅದು ಅಮೇಯವಾದದ್ದು. ಜಗತ್ತೆಲ್ಲ ಅರಳುವುದು, ಬಳಲುವುದು ಈ ಮಾಯೆಯ ಬಲೆಯಲ್ಲಿಯೇ.

‘ತರಗೆಲೆಯ ಮೆದ್ದು ತಪವಿದ್ದರೂ ಬಿಡದು ಮಾಯೆ ಗಾಳಿಯನಾಹಾರವ ಕೊಂಡು, ಗುಹೆಯ ಹೊಕ್ಕಡೆಯೂ ಬಿಡದು ಮಾಯೆ.ತನುವಿನಲ್ಲಿ ವ್ಯಾಪಾರ, ಮನದಲ್ಲಿ ವ್ಯಾಕುಳವಾಗಿ ಕಾಡಿತ್ತು ಮಾಯೆ.ಆವಾವ ಪರಿಯಲ್ಲಿಯೂ ಘಾತಿಸಿ ಕೊಲ್ಲುತ್ತಿದೆ ಮಾಯೆ.ಈ ಪರಿಯ ಬಾಧೆಯಲ್ಲಿ ಬಳಲುತ್ತಿದೆ ಜಗವೆಲ್ಲ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ’ ಮಂಡ್ಯ ಜಿಲ್ಲೆಯ, ಹದಿನಾರನೇ ಶತಮಾನದ ವಚನಕಾರ ಸ್ವತಂತ್ರಸಿದ್ಧಲಿಂಗೇಶ್ವರರು ಹೇಳುವ ಪರಿ ಮಾಯೆಯ ವಿಸ್ತಾರವನ್ನು, ಅನೂಹ್ಯತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.

ಆದರೆ ಈ ಮಾಯೆಗೆ ಸ್ವಂತ ಅಸ್ತಿತ್ವವಿಲ್ಲ. ಅದು ಬರೀ ಛಾಯೆ, ನೆರಳು. ಯಾವುದರ ನೆರಳು? ಸ್ವಂತ ಹಾಗೂ ಸದಾಕಾಲದ ಅಸ್ತಿತ್ವವನ್ನು ಹೊಂದಿದ ಏಕಮಾತ್ರವಾದ ಬ್ರಹ್ಮವಸ್ತುವಿನ ನೆರಳು. ಅಂದರೆ ಬ್ರಹ್ಮವಸ್ತು ಹೇಗೆ ಇಡೀ ಪ್ರಪಂಚವನ್ನು ಆವರಿಸಿಕೊಂಡಿದೆಯೋ ಅದರಂತೆ ಅದರ ನೆರಳಾದ ಮಾಯೆ ಕೂಡ ಹಿಂಬಾಲಿಸಿ ಬಂದಿದೆ. ಅದು ನಮ್ಮನ್ನು ಕಾಡುವ ಶಕ್ತಿಯೂ ಹೌದು, ಕಾಪಿಡುವ ಶಕ್ತಿಯೂ ಹೌದು. ಅದಕ್ಕೇ ಕಗ್ಗ ಮಾಯೆಯನ್ನು ತಾಯಿ ಎಂದು ಕರೆಯುತ್ತದೆ. ಮಾಯೆಯೇ ತಾಯಿ, ಸಕಲ ಸೃಷ್ಟಿಯನ್ನು ನಿರ್ಮಿಸುವ ತಾಯಿ ಹಾಗೂ ಅದರ ಉತ್ಪನ್ನವಾದ ನಾವೆಲ್ಲರೂ ಅದರ ಮಕ್ಕಳು.

ನಮಗಿರುವ, ನಾವು ಪ್ರಯತ್ನಿಸಬಹುದಾದ ಒಂದೇ ದಾರಿಯೆಂದರೆ ನೆರಳನ್ನು ಹಿಡಿದು, ಅರ್ಥೈಸಿಕೊಂಡು ಅದರ ಮೂಲಕವೇ ಅದನ್ನು ದಾಟಿ ನೆರಳಿನ ಅಸ್ತಿತ್ವಕ್ಕೆ ಕಾರಣವಾದ ಮೂಲದ ದರ್ಶನವನ್ನು ಅಪೇಕ್ಷಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.