ADVERTISEMENT

ಬೆರಗಿನ ಬೆಳಕು | ಅಂಕಿತದಲ್ಲಿಲ್ಲದ ಆಕರ್ಷಣೆ

ಡಾ. ಗುರುರಾಜ ಕರಜಗಿ
Published 16 ಜುಲೈ 2020, 21:37 IST
Last Updated 16 ಜುಲೈ 2020, 21:37 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಅತ್ಯಂತ ಶ್ರೀಮಂತ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ್ದ. ಅವನ ಹೆಂಡತಿ ಒಬ್ಬ ಗಂಡುಮಗುವಿಗೆ ಜನ್ಮವಿತ್ತು ತೀರಿಹೋದಳು. ಹೆಂಡತಿಯನ್ನು ನಾಚಿಕೆಯಿಲ್ಲದೆ ಎಳೆದುಕೊಂಡು ಹೋದ ಸಾವು ತನ್ನನ್ನೂ ಯಾವ ಕ್ಷಣದಲ್ಲಾದರೂ ಕರೆದುಕೊಂಡು ಹೋಗಬಹುದೆಂಬುದನ್ನು ತಿಳಿದು ಬೋಧಿಸತ್ವ ತನ್ನೆಲ್ಲ ಸಂಪತ್ತನ್ನು ದಾನ ಮಾಡಿ, ತನ್ನ ಮಗನನ್ನು ಕರೆದುಕೊಂಡು ಹಿಮಾಲಯಕ್ಕೆ ಬಂದು ಪ್ರವ್ರಜಿತನಾದ. ಅಲ್ಲೊಂದು ಆಶ್ರಮ ಕಟ್ಟಿಕೊಂಡು ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಮಗನನ್ನು ಬೆಳೆಸುತ್ತಿದ್ದ.

ಆ ಸಮಯದಲ್ಲಿ ಕೆಲವರು ಗಡಿನಾಡಿನ ಕಳ್ಳರು ನಾಡಿನಲ್ಲಿ ನುಗ್ಗಿ, ಹಳ್ಳಿಗಳನ್ನು ಲೂಟಿ ಮಾಡಿ, ಜನರನ್ನು ದಾಸರನ್ನಾಗಿ ಮಾಡಿಕೊಂಡು ಹೊರಟರು. ಈ ಹಳ್ಳಿಗರ ಗುಂಪಿನಲ್ಲಿ ಒಬ್ಬ ತರುಣಿ ಇದ್ದಳು. ಆಕೆ ಸುಂದರಿ. ಅವಳಿಗೆ ಭಯವಾಯಿತು. ಈ ಕಳ್ಳರು ನನ್ನನ್ನು ದಾಸಿಯನ್ನಾಗಿ ಮಾಡಿಕೊಂಡು ಮೋಜು ಮಾಡಬಹುದು. ಇವರಿಂದ ಹೇಗಾದರೂ ಪಾರಾಗಿ ಹೋಗಬೇಕೆಂದು ಚಿಂತಿಸಿ, ‘ಶೌಚಕ್ಕೆ ಹೋಗಬೇಕು, ನೀವು ಮುಂದೆ ಸಾಗಿ, ಹಿಂದಿನಿಂದಲೇ ಬರುತ್ತೇನೆ’ ಎಂದು ಹೇಳಿ ಹಿಂದೆ ಉಳಿದಳು. ನಂತರ ಅಲ್ಲಿಂದ ಓಡಿ ಕಾಡಿನಲ್ಲಿ ಅಲೆಯುತ್ತ ಬೋಧಿಸತ್ವನ ಆಶ್ರಮ ಇದ್ದಲ್ಲಿಗೆ ಬಂದಳು. ಆಗ ಬೋಧಿಸತ್ವ ಹಣ್ಣು ಹಂಪಲುಗಳನ್ನು ತರಲು ಹೊರಗೆ ಹೋಗಿದ್ದ. ಆಶ್ರಮದಲ್ಲಿದ್ದ ಬೋಧಿಸತ್ವ ಕುಮಾರನನ್ನು ಕಂಡಳು. ನಂತರ ಕಾಮ-ರತಿಯಿಂದ ಅವನನ್ನು ಮೋಹಿಸಿ ತನ್ನ ವಶಮಾಡಿಕೊಂಡಳು. ‘ಈ ಕಾಡಿನಲ್ಲಿ ಏನು ಸುಖವಿದೆ? ನನ್ನೊಡನೆ ನಾಡಿಗೆ ಬಾ. ಅಲ್ಲಿ ಅನೇಕ ಸುಂದರ, ಆಕರ್ಷಕ ವಸ್ತುಗಳಿವೆ’ ಎಂದೆಲ್ಲ ಸರಸ ಮಾತುಗಳನ್ನಾಡಿ ಒಲಿಸಿದಳು. ಆತ, ‘ನನ್ನ ತಂದೆ ಕಾಡಿನಿಂದ ಬಂದ ಮೇಲೆ ಅವರ ಅಪ್ಪಣೆ ತೆಗೆದುಕೊಂಡು ಬರುತ್ತೇನೆ. ನೀನು ಮುಂದೆ ನಡೆದು ನನಗಾಗಿ ದಾರಿ ಕಾದಿರು’ ಎಂದು ಹೇಳಿ ಕಳುಹಿಸಿದ.

ಸ್ವಲ್ಪ ಹೊತ್ತಿನ ಮೇಲೆ ಬೋಧಿಸತ್ವ ಆಶ್ರಮಕ್ಕೆ ಬಂದ. ತನ್ನ ಮಗ ತಾನು ಹೇಳಿ ಹೋಗಿದ್ದ ಯಾವ ಕಾರ್ಯಗಳನ್ನೂ ಮಾಡದೆ ಸುಮ್ಮನೆ ಕುಳಿತದ್ದನ್ನು ಕಂಡು, ‘ಯಾಕಪ್ಪಾ, ಏನು ಸಮಾಚಾರ ನಿನ್ನದು?’ ಎಂದು ಕೇಳಿದ. ಕುಮಾರ ತಂದೆಗೆ ನಮಸ್ಕಾರ ಮಾಡಿ ಹೇಳಿದ, ‘ತಂದೆ, ನನಗೆ ಈ ಆಶ್ರಮವಾಸ ಸಾಕು. ನಾಡಿಗೆ ಹೋಗಿ ಸಂತೋಷದ ಬದುಕು ಜೀವಿಸಬೇಕೆಂದಿದ್ದೇನೆ. ಆದರೆ ಅಲ್ಲಿ ಬದುಕುವುದು ಹೇಗೆಂಬುದು ನನಗೆ ತಿಳಿದಿಲ್ಲ. ಅಲ್ಲಿ ಜೀವಿಸುವ ಸರಿಯಾದ ರೀತಿಯನ್ನು ತಿಳಿಸು’ ತಂದೆ ಮಗನಿಗೆ ತಿಳಿ ಹೇಳಿದ, ‘ಮಗನೆ ಯಾವುದನ್ನು ನೀನು ಆಕರ್ಷಕವೆಂದುಕೊಂಡಿದ್ದೀಯೋ, ಅದೊಂದು ನಿಧಾನ ವಿಷ. ಅದನ್ನು ಕಂಡುಬಿಟ್ಟೇ ನಾನಿಲ್ಲಿ ಬಂದದ್ದು. ಅಲ್ಲಿ ಸುರೆ ಇದೆ, ನಿನ್ನ ದಾರಿ ತಪ್ಪಿಸುವ ಹೆಂಗಸರಿದ್ದಾರೆ, ಲಾಭ, ಕೀರ್ತಿ, ಅಸತ್ಕಾರಗಳೆಂಬ ಸುಳಿಗಳಿವೆ. ಒಂದು ಮಾತನ್ನು ಎಂದಿಗೂ ಮರೆಯಬೇಡ. ಆಕರ್ಷಣೆಗಳು ನಿನ್ನ ಅಂಕಿತದಲ್ಲಿ ಇರಲಿ. ನೀನು ಆಕರ್ಷಣೆಗಳ ದಾಸನಾದರೆ ಬದುಕು ನಾಶವಾಗಿ ಹೋಗುತ್ತದೆ’. ಮಗನಿಗೆ ತಿಳುವಳಿಕೆ ಬಂದು ನಾಡಿಗೆ ಹೋಗುವುದನ್ನು ಬಿಟ್ಟು ತಂದೆಯೊಂದಿಗೇ ಉಳಿದ.

ADVERTISEMENT

ಅವನ ತಂದೆಯ ಮಾತು ಎಲ್ಲರಿಗೂ ಮಾರ್ಗದರ್ಶಿಯಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.