ADVERTISEMENT

ಪ್ರೇಮದ ಸೆಳೆತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:55 IST
Last Updated 26 ಜನವರಿ 2020, 19:55 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಕಾಶಿ ಪ್ರದೇಶದ ಒಬ್ಬ ಕಮ್ಮಾರನ ಮನೆಯಲ್ಲಿ ಜನಿಸಿದ್ದ. ಅವನು ಬೆಳೆದಂತೆ ತನ್ನ ಕೆಲಸದಲ್ಲಿ ಅತ್ಯಂತ ನಿಪುಣತೆಯನ್ನು ಪಡೆದ. ಅವನ ಊರಿನಿಂದ ಹತ್ತಾರು ಮೈಲಿ ದೂರದಲ್ಲಿ ಸಾವಿರ ಕಮ್ಮಾರರಿದ್ದ ಒಂದು ವಸತಿ ಇತ್ತು. ಅವರೆಲ್ಲರ ನಾಯಕ ಕಮ್ಮಾರನಿಗೊಬ್ಬ ಮಗಳು. ಅವಳು ಅಪರೂಪದ ಅಪ್ಸರೆಯಂಥ ಚೆಲುವೆ. ಆಕೆಯನ್ನು ಎಲ್ಲರೂ ಜನಪದ ಸುಂದರಿ ಎಂದು ಕರೆಯುತ್ತಿದ್ದರು. ಆಕೆಯ ವರ್ಣನೆಯನ್ನು ಕೇಳಿಯೇ ಬೋಧಿಸತ್ವ ಆಕೆಯನ್ನು ಮದುವೆಯಾಗಬೇಕೆಂದು ತೀರ್ಮಾನಿಸಿಕೊಂಡ. ಆದರೆ ಅದನ್ನು ಸಾಧಿಸುವುದು ಹೇಗೆ? ಆ ಊರಿನಲ್ಲಿ ಎಲ್ಲರೂ ಕುಶಲರಾದ ಕಮ್ಮಾರರು. ಸುತ್ತಮುತ್ತಲಿನ ಜನರೆಲ್ಲ ತಮ್ಮ ಕೃಷಿಗೆ ಬೇಕಾದ ಕೊಡಲಿ, ಸಲಿಕೆ, ಗುದ್ದಲಿ, ನೇಗಿಲಿನ ಗುಳಗಳನ್ನು ಮಾಡಿಸಿಕೊಳ್ಳಲು ಆ ಊರಿಗೇ ಹೋಗುತ್ತಿದ್ದರು. ತಾನು ಆಕೆಯನ್ನು ಪಡೆಯಬೇಕಾದರೆ ಅವರಾರಿಗೂ ಮಾಡಲಾಗದಂಥ ವಸ್ತುವೊಂದನ್ನು ಮಾಡಿ ಅಲ್ಲಿಗೆ ತೆಗೆದುಕೊಂಡು ಹೋಗಿ ಅವರನ್ನು ಮೆಚ್ಚಿಸುವುದೆಂದು ತೀರ್ಮಾನಿಸಿದ.

ಬಹಳ ಯೋಚಿಸಿ ಅತ್ಯಂತ ಒಳ್ಳೆಯ ಜಾತಿಯ ಕಬ್ಬಿಣವನ್ನು ತಯಾರಿಸಿ ತುಂಬ ಸೂಕ್ಷ್ಮವಾದ ಸೂಜಿಯೊಂದನ್ನು ಮಾಡಿದ. ಅದು ಕಣ್ಣಿಗೆ ಕಾಣಿಸುವುದೇ ಕಷ್ಟವೆನ್ನಿಸುವಂತಿತ್ತು. ಆ ಸೂಜಿಗೆ ಒಂದು ಕವಚವನ್ನು ಮಾಡಿದ. ಅದಕ್ಕೂ ಮೇಲೆ ಒಂದು ರಂಧ್ರವನ್ನಿಟ್ಟ. ಅದೂ ಕೆಳಗೆ ಚೂಪಾಗಿ ಸೂಜಿಯಂತೆಯೇ ಇತ್ತು. ಆದರೆ ಅದು ಒಳಗಿದ್ದ ಸೂಜಿಯ ಕವಚ ಮಾತ್ರ. ನಂತರ ಆ ಕವಚಕ್ಕೆ ಮತ್ತೊಂದು ಸೂಜಿಯಂಥ ಕವಚ, ಅದಕ್ಕೆ ಇನ್ನೊಂದು ಕವಚ. ಹೀಗೆ ಸೂಜಿಗೆ ಏಳು ಕವಚಗಳನ್ನು ಮಾಡಿದ. ಆಗ ಅದು ಸಾಮಾನ್ಯ ಸೂಜಿಯ ಗಾತ್ರದ್ದಾಗಿತ್ತು. ಅದು ಹೇಗೆ ಮಾಡಿದ ಎಂದು ಕೇಳಬಾರದು. ಯಾಕೆಂದರೆ ಪ್ರೇಮ ಎಂತಹ ಅಸಾಧ್ಯವಾದದ್ದನ್ನೂ ಮಾಡಿಸಿಬಿಡುತ್ತದೆ.

ಆತ ಆ ಸೂಜಿಯನ್ನು ಒಂದು ಡಬ್ಬಿಯಲ್ಲಿಟ್ಟುಕೊಂಡು, ಸೊಂಟಕ್ಕೆ ಸೇರಿಸಿ ಕಮ್ಮಾರರ ವಲಸೆಗೆ ಹೋದ. ತನ್ನ ಸೂಜಿಯನ್ನು ವರ್ಣಿಸುತ್ತ, ‘ಇಂತಹ ಅದ್ಭುತ ಸೂಜಿಯನ್ನು ಕೊಳ್ಳುವವರು ಯಾರಾದರೂ ಇದ್ದೀರಾ?’ ಎಂದು ಕೂಗುತ್ತ ಬಂದ. ಮಧ್ಯಾಹ್ನ ಊಟಮಾಡಿದ ಮೇಲೆ ವಿರಮಿಸುತ್ತಿದ್ದ ಕಮ್ಮಾರ ನಾಯಕನ ಮಗಳಿಗೆ ಈ ಧ್ವನಿ ಕೇಳಿಸಿತು, ಯಾಕೋ ಆ ಧ್ವನಿ ಆಕೆಯನ್ನು ಸೆಳೆಯಿತು. ಆಕೆ ಹೊರಗೆ ಬಂದು ಅವನನ್ನು ನೋಡಿ, ‘ಎಷ್ಟು ಹುಚ್ಚನಪ್ಪ ನೀನು. ಇಡೀ ದೇಶದ ಅತ್ಯಂತ ಕುಶಲ ಕಮ್ಮಾರರ ವಲಸೆಗೇ ಬಂದು ಸೂಜಿ ಮಾರುತ್ತೀಯಲ್ಲ. ಎಲ್ಲರಿಗೂ ಸೂಜಿ ಮಾಡಿ ಕೊಡುವವರೇ ನಾವು’ ಎಂದಳು. ಆಗ ಆತ, ‘ಸುಂದರಿ, ನಿನಗೆ ಈ ಸೂಜಿಯ ಬೆಲೆ ತಿಳಿದಿಲ್ಲ. ನಿಮ್ಮಲ್ಲಿ ಅತ್ಯಂತ ಕುಶಲಿಯಾದವನು ಮಾತ್ರ ಅದರ ಬೆಲೆಯನ್ನು ಅರಿಯಬಲ್ಲ, ಅಂಥವರನ್ನು ಕರೆ’ ಎಂದ. ಆಕೆ ತನ್ನ ತಂದೆ ಪ್ರಧಾನ ಕಮ್ಮಾರನನ್ನು ಕರೆದಳು. ಆತ ಬಂದಾಗ, ಬೋಧಿಸತ್ವ ಅವನಿಗೆ ಹೇಳಿ ಊರಿನ ಎಲ್ಲ ಕಮ್ಮಾರರನ್ನು ಕರೆಸಿದ. ಎಲ್ಲರೂ ಸುತ್ತ ನಿಂತಾಗ ತನ್ನ ಸೂಜಿಯನ್ನು ನಾಯಕನಿಗೆ ಕೊಟ್ಟ. ಆತ, ‘ಇದೊಂದು ಸುಂದರವಾದ ಸೂಜಿ, ವಿಶೇಷವೇನು?’ ಎಂದು ಕೇಳಿದ. ಆಗ ಬೋಧಿಸತ್ವ, ‘ಸ್ವಾಮಿ, ಇದು ಸೂಜಿಯಲ್ಲ, ಸೂಜಿಯ ಕವಚ’ ಎಂದ. ಪ್ರಧಾನ ಕಮ್ಮಾರನಿಗೆ ಅದನ್ನು ತೆರೆಯಲೇ ಆಗಲಿಲ್ಲ. ಬೋಧಿಸತ್ವ ತನ್ನ ಉಗುರಿನಿಂದ ಕುಶಲತೆಯಿಂದ ತೆಗೆದ. ಎಲ್ಲರಿಗೂ ಆಶ್ಚರ್ಯವಾಯಿತು. ‘ಸೂಜಿ ಚೆನ್ನಾಗಿದೆ’ ಎಂದ ಹಿರಿಯ ಕಮ್ಮಾರ. ಬೋಧಿಸತ್ವ ನಕ್ಕ, ‘ಸ್ವಾಮೀ, ಇದೂ ಸೂಜಿಯಲ್ಲ. ಇದು ಒಂದು ಕವಚ’ ಎಂದು ಆ ಕವಚವನ್ನು ತೆಗೆದ. ಹೀಗೆಯೇ ಉಳಿದ ಐದು ಕೋಶಗಳನ್ನು ಬಿಡಿಸಿ ಮೂಲ ಸೂಜಿಯನ್ನು ಹೊರತೆಗೆದು, ಒಂದು ನೀರು ತುಂಬಿದ ಕಬ್ಬಿಣದ ಪಾತ್ರೆಯ ಕೆಳಗೆ ಸೂಜಿಯನ್ನಿಟ್ಟು ಸುತ್ತಿಗೆಯಿಂದ ಫಟ್ಟನೇ ಹೊಡೆದ. ಅದು ಪಾತ್ರೆಯನ್ನು ತೂರಿ ಹೊರಗೆ ಬಂತು. ಅಷ್ಟು ನಾಜೂಕಾದ ಸೂಜಿ, ಅಷ್ಟು ಬಲಿಷ್ಠವಾದದ್ದನ್ನು ಕಂಡು ಎಲ್ಲರೂ ಬೆರಗಾದರು. ಹಿರಿಯ ಕಮ್ಮಾರ ತನ್ನ ಸುಂದರಿ ಮಗಳನ್ನು ಬೋಧಿಸತ್ವನಿಗೆ ಮದುವೆ ಮಾಡಿಕೊಟ್ಟ. ಬೋಧಿಸತ್ವನ ಆಸೆ ಪೂರೈಸಿತು.

ADVERTISEMENT

ಪ್ರೇಮದ ಸೆಳೆತ ಅಂತಹದ್ದು. ಕೋಟೆಗಳನ್ನು ಕಟ್ಟಿಸುತ್ತದೆ, ತಾರೆಗಳನ್ನು ಬೀಳಿಸುತ್ತದೆ, ಕಲ್ಪನಾತೀತವಾದ ಸಾಧನೆಗಳನ್ನು ಮಾಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.