ADVERTISEMENT

ಬೆರಗಿನ ಬೆಳಕು: ತೆರೆಯಬೇಕಾದ ಕಿಟಕಿ

ಡಾ. ಗುರುರಾಜ ಕರಜಗಿ
Published 6 ಫೆಬ್ರುವರಿ 2022, 20:30 IST
Last Updated 6 ಫೆಬ್ರುವರಿ 2022, 20:30 IST
ಬೆರಗಿನ ಬೆಳಕು
ಬೆರಗಿನ ಬೆಳಕು   

ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ |
ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ||

ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಕಿಯುಂ|
ಸಂತತದಪೇಕ್ಷಿತವೊ – ಮಂಕುತಿಮ್ಮ || 557 ||

ಪದ-ಅರ್ಥ: ಗವಾಕ್ಷ=ಕಿಟಕಿ, ತೆರೆದಿಡಲಲ್ಲಿ=ತೆರೆದಿಡಲು+ಅಲ್ಲಿ, ಕುಮುಲದು=ಹೊಗೆ ತುಂಬಿಕೊಳ್ಳದು, ಹೊಗೆಗಳೊತ್ತವಾತ್ಮವನು=ಹೊಗೆಗಳು+ಒತ್ತವು+ಆತ್ಮವನು, ಬೇಳ್ಪೊಡೆ=ಬೇಕಾದರೆ, ಗೋಡೆವೊಲೆ=ಗೋಡೆಯಂತೆ, ಸಂತತದಪೇಕ್ಷಿತವೊ=ಸಂತತದ(ನಿರಂತರವಾದ)+ಅಪೇಕ್ಷಿತವೊ.

ADVERTISEMENT

ವಾಚ್ಯಾರ್ಥ: ನಮ್ಮ ಅಂತರಂಗದ ಕಿಟಕಿಗಳನ್ನು ತೆರೆದಿಟ್ಟಾಗ ಚಿಂತೆಗಳ ಹೊಗೆಸುತ್ತು ಕವಿಯದು, ಚಿಂತೆಯ ಹೊಗೆಗಳು ಆತ್ಮವನ್ನು ಗಾಸಿ ಮಾಡುವುದಿಲ್ಲ, ಶಾಂತಿ ಬೇಕಾದರೆ, ಮನೆಗೆ ಗೋಡೆಗಳು ಹೇಗೋ, ಕಿಟಕಿಗಳೂ ಬೇಕು. ನಿರಂತರವಾದ ಅಪೇಕ್ಷೆ ಸಫಲವಾಗಲು ಆ ಕಿಟಕಿಗಳು ಬೇಕು.

ವಿವರಣೆ: ವಿಜಯದಾಸರ ಒಂದು ಅದ್ಭುತ ರಚನೆ ಹೀಗಿದೆ.
ಅಂತರಂಗದ ಕದವು ತೆರೆಯಿತಿಂದು |
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |
ವಾಸವಾಗಿದ್ದರೊ ದುರುಳರಿಲ್ಲಿ ||
ಮೋಸವಾಯಿತು ಇಂದಿನ ತನಕ ತಮಸಿನ |
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ || ........

ವಿಜಯದಾಸರು ಮನೆಯ ಬಾಗಿಲಿನ ಬಗ್ಗೆ ಮಾತನಾಡುತ್ತಿಲ್ಲ, ತಮ್ಮ ಅಂತರಂಗದ ಬಾಗಿಲು ತೆರೆದದ್ದರ ಬಗ್ಗೆ ಬೆರಗಾಗಿ ಹೇಳುತ್ತಾರೆ. ಅದು ಪುಣ್ಯದ ಫಲದಿಂದಲೇ ತೆರೆದ ಬಾಗಿಲು. ಮುಂದಿನ ನಾಲ್ಕು ಸಾಲು ಏನನ್ನೋ ಧ್ವನಿಸುತ್ತವೆ. ಮನೆಯ ಬಾಗಿಲಿಗೆ ಬೀಗವನ್ನು ಜಡಿದು ಅದೆಷ್ಟು ಕಾಲವಾಯಿತೋ? ಯಾರೂ ಅದನ್ನು ಗಮನಿಸಿಯೇ ಇಲ್ಲ. ಹಾಗೆ ಯಾರೂ ಗಮನಿಸದೆ ಇದ್ದಾಗ ಇನ್ನೇನಾಗುತ್ತದೆ? ದುರುಳರು ಬಂದು ಒಳಗೆ ನಿರಾಳವಾಗಿ ಸೇರಿಕೊಂಡಿದ್ದಾರೆ. ಇಂದಿನ ತನಕ, ಎಂದರೆ ಬಾಗಿಲು ತೆರೆಯುವ ತನಕ ತಮಸಿನ, ಅಂಧಕಾರದ, ಅಜ್ಞಾನದ ರಾಶಿಯೊಳಗೆ ಬೆಳಕೇ ಕಾಣುತ್ತಿರಲಿಲ್ಲ. ಬಾಗಿಲು ತೆರೆದು ಪರಮಾತ್ಮ ತತ್ವದ ಹೊಸಗಾಳಿ ನುಗ್ಗಿದಾಗ ದುರುಳರೆಲ್ಲ ಪಲಾಯನಮಾಡಿದರು. ಇದೊಂದು ಸಂಕೇತದ ಮಾತು.

ಭೌತಿಕದ ಮನೆಯನ್ನೇ ಬಾಗಿಲು ಹಾಕಿ ಕೆಲವರ್ಷವಿದ್ದರೆ ಹಾಳು ಬಿದ್ದು ಹೋಗುತ್ತದೆ. ಹಾಗಿದ್ದಾಗ ಅಂತರಂಗದ ಬಾಗಿಲನ್ನು ಮುಚ್ಚಿ ಕುಳಿತರೆ ಹೊಸ ಯೋಚನೆಗಳು ಬರದೆ ಹಳೆಯ ಚಿಂತೆಗಳು ತುಂಬಿಕೊಂಡು, ಕಮಟು ವಾಸನೆಯನ್ನು ಹುಟ್ಟಿಸುತ್ತವೆ. ಅವು ಹೊಗೆಗಳಂತೆ ತುಂಬಿಕೊಂಡು ಆತ್ಮಪ್ರಜ್ಞೆಯನ್ನು ಮುಸುಕು ಮಾಡುತ್ತವೆ. ನಮಗೆ ಅಂತರಂಗದ ಸ್ವಚ್ಛತೆ ಮತ್ತು ಶಾಂತಿ ಬೇಕಾದರೆ ಮನಸ್ಸಿನ ಕಿಟಕಿಗಳನ್ನು ತೆರೆದಿಟ್ಟು ಹೊಸ ಚಿಂತನೆಯ ಗಾಳಿ ಒಳಗೆ ಬರುವಂತೆ ಮಾಡಬೇಕು.

ವಸಂತಮಾಸ ಬಂದಾಗ ಪ್ರಕೃತಿ ಹೊಸತನದಿಂದ ನಲಿಯುತ್ತದೆ. ಭರದಿಂದ ಬೀಸುವ ಗಾಳಿ ಪ್ರಕೃತಿಯ ಮೇಲಿನ ಧೂಳನ್ನು ಓಡಿಸುತ್ತದೆ. ಭೂಮಿ ಹೊಸತನವನ್ನು ಪಡೆಯುತ್ತದೆ. ಪ್ರಕೃತಿಯ ಈ ಚೈತ್ರಜೀವನ ಮನುಷ್ಯನಿಗೊಂದು ಅಪೂರ್ವವಾದ ಪಾಠವನ್ನು ಹೇಳುತ್ತದೆ. ಪ್ರಕೃತಿಯಂತೆ ಮನುಷ್ಯನೂ ತನ್ನ ಮನಸ್ಸಿನ ಕಿಟಕಿಯನ್ನು ನಿತ್ಯವೂ ತೆರೆದಿಟ್ಟು ನಾವೀನ್ಯತೆಯನ್ನು ಪಡೆಯುವುದು ನಿರಂತರದ ಅಪೇಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.