ADVERTISEMENT

ಸಜ್ಜನರ ಲಕ್ಷಣ – ಕೃತಜ್ಞತೆ

ಡಾ. ಗುರುರಾಜ ಕರಜಗಿ
Published 18 ಫೆಬ್ರುವರಿ 2019, 9:49 IST
Last Updated 18 ಫೆಬ್ರುವರಿ 2019, 9:49 IST

ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ನಗರದ ಹತ್ತಿರವೇ ಕಾಡಿನ ಪಕ್ಕ ಮರಗೆಲಸದವರ ವಸತಿ ಇತ್ತು. ಐದುನೂರು ಬಡಗಿಗಳು ಕಾಡಿನಿಂದ ಮರಗಳನ್ನು ತಂದು ನಗರದ ಜನಕ್ಕೆ ಬೇಕಾದ ಮರದ ಸಾಮಾನುಗಳನ್ನು ಮಾಡಿಕೊಡುತ್ತಿದ್ದರು. ಹೀಗೆ ಕೆಲಸ ಮಾಡುತ್ತಿದ್ದಾಗ ಒಂದು ಆನೆ ನೀರು ಹುಡುಕಿಕೊಂಡು ಬರುತ್ತ, ನೋಡದೆ ಕತ್ತರಿಸಿದ ಬಿದಿರಿನ ಮೇಲೆ ಕಾಲಿಟ್ಟಿತು. ಹರಿತವಾದ ಕೂಳೆ ಕಾಲಿಗೆ ಚುಚ್ಚಿ ರಕ್ತ ಸುರಿಯಿತು, ಒಂದೆರಡು ದಿನಗಳಲ್ಲಿ ಕೀವು ತುಂಬಿ ನಡೆಯದಂತಾಯಿತು. ಹತ್ತಿರದಲ್ಲಿ ಬಡಗಿಗಳು ಕೆಲಸ ಮಾಡುವ ಸದ್ದು ಕೇಳಿ ಅವರು ತನಗೆ ಸಹಾಯ ಮಾಡಬಹುದೆಂದು ನಂಬಿ ಅಲ್ಲಿಗೆ ಬಂದಿತು. ಕುಂಟುತ್ತಿರುವ, ನೋವಿನಿಂದ ನರಳುತ್ತಿರುವ ಆನೆಯನ್ನು ಕರುಣೆಯಿಂದ ಕಂಡು, ಬಡಗಿಗಳು ನಿಧಾನವಾಗಿ ಕೂಳೆಯನ್ನು ಹೊರತೆಗೆದು, ಕೀವನ್ನು ಹೊರಹಾಕಿ, ಔಷಧಿಯ ಪಟ್ಟಿ ಹಾಕಿದರು. ಕೆಲದಿನಗಳಲ್ಲಿ ಆನೆಗೆ ಸಂಪೂರ್ಣ ಗುಣವಾಯಿತು.

ತನಗೆ ಬಡಗಿಗಳು ಮಾಡಿದ ಉಪಕಾರವನ್ನು ಸ್ಮರಿಸಿಕೊಂಡ ಆನೆ, ಅವರೊಂದಿಗೇ ಉಳಿದು ಅವರ ಸೇವೆ ಮಾಡತೊಡಗಿತು. ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹೊತ್ತುಕೊಂಡು ಬರುವುದು, ಮರ ಗಿಡಗಳನ್ನು ತಳ್ಳಿ ಬೀಳಿಸುವುದು ಇಂತಹ ಕೆಲಸಗಳನ್ನು ಪ್ರೀತಿಯಿಂದ ಮಾಡುತ್ತಿತ್ತು. ಪ್ರತಿಯೊಬ್ಬ ಬಡಗಿಯೂ ಅದಕ್ಕೆ ಒಂದು ಉಂಡೆ ಆಹಾರವನ್ನು ಕೊಡುತ್ತಿದ್ದರು. ಹೀಗಾಗಿ ಅದರ ಹೊಟ್ಟೆ ತುಂಬುತ್ತಿತ್ತು. ಆನೆಗೆ ತನಗೆ ವಯಸ್ಸಾಗುತ್ತಿದೆ ಎನ್ನಿಸಿದಾಗ ಬಡಗಿಗಳಿಗೆ ಸಹಾಯವಾಗಲಿ ಎಂದು ತಾನು ಕಾಡಿನಲ್ಲಿ ಬಿಟ್ಟು ಬಂದಿದ್ದ ತನ್ನ ಮರಿಯನ್ನು ಕರೆದುಕೊಂಡು ಬಂದಿತು. ಆ ಮರಿಯೋ ಅತ್ಯಂತ ಶುಭಲಕ್ಷಣಗಳನ್ನು ಹೊಂದಿದ ಅಚ್ಚ ಬಿಳಿಯ ಬಣ್ಣದ ಮಾಂಗಲಿಕ ಆನೆ. ತಾಯಿ ಆನೆ ಮಗುವಿಗೆ ಹೇಳಿತು, “ಮಗೂ, ಇವರು ನನಗೆ ತುಂಬ ಉಪಕಾರ ಮಾಡಿ ಜೀವ ಉಳಿಸಿದ್ದಾರೆ. ನನಗೀಗ ವಯಸ್ಸಾಯಿತು. ನಾನು ಇನ್ನು ಅವರಿಗೆ ಭಾರವಾಗದೆ ಹೊರಟುಬಿಡುತ್ತೇನೆ. ನೀನು ಅವರ ಸೇವೆ ಮಾಡಿಕೊಂಡಿರು”. ಇಷ್ಟು ಹೇಳಿ ತಿರುಗಿ ಕಾಡಿಗೆ ಹೋಗಿಬಿಟ್ಟಿತು.

ಮರಿಯಾನೆ ತಾಯಿ ಹೇಳಿದಂತೆ ಎಲ್ಲ ಕೆಲಸಗಳನ್ನು ಮಾಡುತ್ತಿತ್ತು. ಬಡಗಿಗಳಗೆ ಈ ಆನೆಯ ವಿಶೇಷತೆ ಗೊತ್ತಿರಲಿಲ್ಲ. ಆನೆಮರಿ ಕೆಲಸ ಮುಗಿದ ಮೇಲೆ ಸಾಯಂಕಾಲ ನದಿಗೆ ಹೋಗಿ ಸ್ನಾನ ಮಾಡಿ ಬರುತ್ತಿತ್ತು. ಶ್ರೇಷ್ಠ ಗುಣದ ಆನೆಗಳು, ಕುದುರೆಗಳು, ಮನುಷ್ಯರು ಎಂದೂ ನೀರಿನಲ್ಲಿ ಮಲಮೂತ್ರಗಳನ್ನು ಮಾಡುವುದಿಲ್ಲ. ಈ ಆನೆ ನದಿಯ ತೀರದಲ್ಲಿ ದೂರದಲ್ಲಿ ಲದ್ದಿ ಹಾಕಿ ಬರುತ್ತಿತ್ತು. ಒಂದು ದಿನ ಭಾರೀ ಮಳೆ ಬಂದಿತು. ಆಗ ದಂಡೆಯ ಮೇಲೆ ಒಣಗಿದ್ದ ಆನೆಯ ಲದ್ದಿ ನೀರಿನಲ್ಲಿ ನೆನೆದು ಕೊಚ್ಚಿಕೊಂಡು ಹರಿದು ವಾರಣಾಸಿ ನಗರದ ಒಂದು ಪೊದೆಯಲ್ಲಿ ಸಿಕ್ಕಿಕೊಂಡಿತು. ರಾಜನ ಸೇವಕರು ತಮ್ಮ ಆನೆಗಳನ್ನು ಸ್ನಾನಕ್ಕೆ ನದಿಗೆ ಕರೆತಂದರು. ಆನೆಗಳು ನೀರಿನಲ್ಲಿ ಲದ್ದಿಯ ವಾಸನೆಯನ್ನು ಗಮನಿಸಿ ಬಾಲ ಎತ್ತಿಕೊಂಡು ಮರಳಿ ನಗರದ ಕಡೆಗೆ ಓಡತೊಡಗಿದವು. ಆಗ ಸೇವಕರು ಲದ್ದಿಯನ್ನು ಹುಡುಕಿ ನೀರಿನಲ್ಲಿ ಕಲಸಿ ಆನೆಗಳ ಮೇಲೆ ಹಾಕಿದಾಗ ಅವುಗಳೂ ಸುಗಂಧದ ವಾಸನೆಯನ್ನು ಹೊಂದಿದವು. ಗಜಸೇವಕರು ಅರಮನೆಗೆ ಹೋಗಿ ರಾಜನಿಗೆ ಈ ಮಾಂಗಲಿಕ ಆನೆ ಇರುವುದನ್ನು ತಿಳಿಸಿ ಅದನ್ನು ಅರಮನೆಗೆ ತರುವಂತೆ ಭಿನ್ನವಿಸಿದರು. ಮರುದಿನ ರಾಜ, ಬಡಗಿಗಳು ಇರುವ ಸ್ಥಳಕ್ಕೆ ಹೋದ. ಬಡಗಿಗಳಿಗೆ ಆಶ್ಚರ್ಯ! ತಾವು ತಿಳಿಸಿದ್ದರೆ ನಾವೇ ಬಂದು ಯಾವ ಕೆಲಸವನ್ನಾದರೂ ಮಾಡಕೊಡುತ್ತಿದ್ದೆವು ಎಂದ ನಾಯಕ. ಆಗ ರಾಜ, “ನಾನು ಬಂದದ್ದು ಕೆಲಸಕ್ಕಲ್ಲ, ಈ ಆನೆಯನ್ನು ಪಡೆಯಲು” ಎಂದ. ಆದರೆ ಅನೆ ಹೊರಡಲು ಸಿದ್ಧವಾಗಲಿಲ್ಲ. ರಾಜ ಅದರ ಪ್ರತಿಯೊಂದು ಕಾಲಿನ ಹತ್ತಿರ ಒಂದೊಂದು ಲಕ್ಷ ಹೊನ್ನು ಇಟ್ಟ. ಆನೆ ಅಲುಗಾಡಲಿಲ್ಲ. ಅದು ಹೇಳಿತು, “ರಾಜಾ ಇವರು ನನ್ನ ತಾಯಿಯನ್ನು ಕಾಪಾಡಿದವರು. ಅವರ ಪರಿವಾರಕ್ಕೆ ಯಾವ ತೊಂದರೆಯೂ ಆಗದ ಹಾಗೆ ನೋಡಿಕೊಳ್ಳುವ ಭರವಸೆ ಕೊಟ್ಟರೆ ಬರುತ್ತೇನೆ” ಎಂದಿತು. ರಾಜ ಹಾಗೆಯೇ ಮಾಡಿ ಆನೆಯನ್ನು ಕರೆದೊಯ್ದ.

ADVERTISEMENT

ಇದು ಸಜ್ಜನರ ಲಕ್ಷಣ. ಎಂದೋ ಯಾರೋ ಮಾಡಿದ ಉಪಕಾರವನ್ನು ತಲೆಯ ಮೇಲೆ ಹೊತ್ತು ಸ್ಮರಿಸಿ ಕೃತಜ್ಞತೆ ತೋರುತ್ತಾರೆ. ಕೃತಜ್ಞತೆ ಮನುಷ್ಯತೆಯ ಲಕ್ಷಣ, ಕೃತಘ್ಞತೆ ಒಂದು ಶಾಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.